ಬಂದ್‌: ಪ್ರತಿಭಟನೆಗೆ ಸೀಮಿತ; ನೀರಸ ಪ್ರತಿಕ್ರಿಯೆ

7

ಬಂದ್‌: ಪ್ರತಿಭಟನೆಗೆ ಸೀಮಿತ; ನೀರಸ ಪ್ರತಿಕ್ರಿಯೆ

Published:
Updated:
ಬಂದ್‌: ಪ್ರತಿಭಟನೆಗೆ ಸೀಮಿತ; ನೀರಸ ಪ್ರತಿಕ್ರಿಯೆ

ವಿಜಯಪುರ: ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ  ಕರ್ನಾಟಕ ಬಂದ್‌ಗೆ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಲ್ಲೆಡೆ ಜನಜೀವನ ಸಹಜವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಎಂದಿನಂತೆ ವಹಿವಾಟು ನಿರಾತಂಕವಾಗಿ ನಡೆದವು. ಕೆಲವೆಡೆ ಬಲವಂತವಾಗಿ ಅಂಗಡಿ ಬಾಗಿಲು ಹಾಕಿಸುವ ಘಟನೆ ನಡೆದರೂ, ಕೆಲ ಹೊತ್ತಿನಲ್ಲೇ ಮತ್ತೆ ತೆರೆಯಲಾಯಿತು.ಸಿಂದಗಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಆಲಮೇಲ, ತಾಳಿಕೋಟೆ ಪಟ್ಟಣಗಳಲ್ಲೂ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿಜಯಪುರ ನಗರದಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ಹಾಗೂ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಕೆಲಕಾಲ ಬಸ್ ತಡೆದು, ಅಂಗಡಿಗಳನ್ನು ಮುಚ್ಚಿಸಿ ಪ್ರತಿಭಟನೆ ನಡೆಸಿದರು.

ಕೆಲ ಕನ್ನಡ ಪರ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸಿದವು. ವಿದ್ಯಾರ್ಥಿಗಳು ಎಂದಿನಂತೆ ಶಾಲೆ–-ಕಾಲೇಜಿಗೆ ತೆರಳಿದರು. ಅಂಗಡಿಗಳು ತೆರೆದಿದ್ದವು. ಸಾರಿಗೆ ಸಂಚಾರ ಎಂದಿನಂತಿತ್ತು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಬೈಕ್ ರ್‌್ಯಾಲಿ ನಡೆಸಿದರು. ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ಕೆಲಕಾಲ ಬಸ್ ಸಂಚಾರಕ್ಕೆ ತಡೆಯೊಡ್ಡಿದರು. ನಂತರ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ, ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರವೇ ಮುಖಂಡ ಸೋಮಯ್ಯ ಗಣಾಚಾರಿ ಮಾತನಾಡಿ ತುಂಗಭದ್ರಾ ಹೂಳು ತೆಗೆಯುವ ಬಗ್ಗೆ, ಮಹಾದಾಯಿ ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ವಿವೇಕ ಹರಕಾರಿ, ಶಬ್ಬೀರ ಪಟೇಲ, ಸಂಗರಾಜ ದೇಶಮುಖ, ಅಶೋಕ ರಾಠೋಡ, ಸಂದೀಪ ಗಾಯಕವಾಡ, ಸಚಿನ್ ಉಪಾಧ್ಯ, ರಫೀಕ ಹೊನ್ನುಟಗಿ, ಗೋವಿಂದ ಪವಾರ, ರೋಹಿತ ಪಾಟೀಲ, ಗಣೇಶ ಕುಂಬಾರ, ಸಾಗರ ಕನ್ನಾಳ, ಭಾಗಪ್ಪ ಕನ್ನೊಳ್ಳಿ, ಸದಾನಂದ ನಿಂಬರಗಿ, ವಿಶ್ವನಾಥ ಹಿರೇಮಠ, ಸಂತೋಷ ಹಡಪದ, ಭಾಷಾ ಇನಾಮದಾರ, ಬಾಬಾ ಇನಾಮದಾರ ರ್‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಶೇಷರಾವ್ ಮಾನೆ ನೇತೃತ್ವದಲ್ಲಿ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಮಹಾತ್ಮಗಾಂಧಿ ವೃತ್ತ ದಲ್ಲಿ ಪ್ರತಿಭಟನೆ ನಡೆಸಿ ಕುಡಿಯುವ ನೀರಿನ ಯೋಜನೆಗಳನ್ನು ಸರ್ಕಾರ ತಕ್ಷಣ ಅನುಷ್ಠಾನಗೊಳಿಸಬೇಕು ಎಂದರು.

ಅಂಗಡಿಗಳ ಬಂದ್‌: ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ಬಂದ್‌ಗೆ, ಜಿಲ್ಲಾ ಜನ ಬೆಂಬಲ ವೇದಿಕೆ ಕಾರ್ಯಕರ್ತರು ಬೆಂಬಲ ವ್ಯಕ್ತ ಪಡಿಸಿ, ನಗರದ ಸಿದ್ಧೇಶ್ವರ ದೇವಸ್ಥಾನ ದಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಿ, ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ ಮಾತನಾಡಿ ಉತ್ತರ ಕರ್ನಾಟಕ ಭಾಗದ ಮಹತ್ತರ ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ ನಾಲಾ ಅನುಷ್ಠಾನ, ಮಹಾದಾಯಿ ನದಿ ಜೋಡಣೆ ಸಮಸ್ಯೆ ನಿವಾರಿಸಲು ಕೇಂದ್ರ–ರಾಜ್ಯ ಸರ್ಕಾರಗಳು ಮುತುವರ್ಜಿ ವಹಿಸುತ್ತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಖಂಡೇಕರ, ಸುನೀಲ ಹತ್ತಿ, ಗಜಾನಂದ ವಂಬಾಷೆ, ಹರೀಶ ಇಂಡಿ, ಜಗದೀಶ ಲಚ್ಯಾಣ, ಆಸೀಫ್‌ ತಾಳಿಕೋಟಿ, ಪ್ರಕಾಶ ಕೋಳಿ, ರಾಜು ಪವಾರ, ಹಣಮಂತ ಬಿರಾದಾರ, ಮಾರುತಿ ಬೂದ್ಯಾಳ, ಸಲೀಂ ಕೊಲ್ಹಾರ, ಮಂತನ ಭಾಷಿ, ವಶಿಮ, ಹಣಮಂತ ನಾಗಠಾಣ, ಸಂತೋಷ ಕದಡಿ ಉಪಸ್ಥಿತರಿದ್ದರು.

* * 

ರಾಜ್ಯದ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಪರಿಹಾರ ಕಂಡುಕೊಳ್ಳುವ ಬದಲು ಕೇವಲ ಭರವಸೆ ನೀಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ

ಮಲ್ಲಿಕಾರ್ಜುನ ಕುಂಬಾರ, ಜಿಲ್ಲಾ ಅಧ್ಯಕ್ಷ, ಕನ್ನಡಪರ ಸಂಘಟನೆಗಳ ಒಕ್ಕುಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry