ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆಯ ಆರ್ಭಟ: ಹಾನಿ

Last Updated 13 ಜೂನ್ 2017, 10:51 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನಲ್ಲಿ ಮುಂಗಾರು ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದ್ದು ಮಳೆಗೆ ನೂರಾರು ಎಕರೆ ಕೃಷಿಭೂಮಿಗಳು ಜಲಾವೃತಗೊಂಡರೆ, ಹಲವೆಡೆ ಮನೆಗಳಿಗೆ ನೀರು ನುಗ್ಗಿ ಮನೆಯೊಂದರ ಕಾಂಪೌಂಡ್ ಗೋಡೆ ಕುಸಿದಿದೆ.

ಧಾರಾಕಾರ ಮಳೆಯಿಂದ ನದಿ, ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಗ್ರಾಮೀಣ ಭಾಗದಲ್ಲಷ್ಟೇ ಅಲ್ಲ, ಪಟ್ಟಣದಲ್ಲೂ ಅಸಮರ್ಪಕ ಗಟಾರ ವ್ಯವಸ್ಥೆಯಿಂದ ನೀರು ಉಕ್ಕಿ ರಸ್ತೆಯ ಮೇಲೆ ಹರಿದು ಅಂಗಡಿ, ಮನೆಗಳಿಗೆ ನುಗ್ಗಿದೆ.

ತಾಲ್ಲೂಕಿನ ಹೆಬಳೆ, ಜನತಾ ಕಾಲೊನಿ, ಮೂಸಾನಗರ, ತಗ್ಗರ ಗೋಡ್, ತೆಂಗಿನಗುಂಡಿ ಕ್ರಾಸ್ ಮುಂತಾದೆಡೆ ಮನೆಯೊಳಗೆ ನುಗ್ಗಿದ ಮಳೆ ನೀರನ್ನು ಜನರು ಹೊರಗೆ ಹಾಕುವಲ್ಲಿ ನಿರತರಾಗಿದ್ದು ಕಂಡುಬಂತು.

ಪಟ್ಟಣದ ಶಂಸುದ್ದೀನ್ ವೃತ್ತ, ಮುಖ್ಯರಸ್ತೆ, ರಂಗೀಕಟ್ಟೆ, ಮುರ್ಡೇಶ್ವರದ ಮುಖ್ಯರಸ್ತೆಯಲ್ಲಿ ಕಾರಿಹಳ್ಳ ಉಕ್ಕಿ ರಸ್ತೆಯ ಮೇಲೆ ಹೊಳೆಯಂತೆ ನೀರು ಹರಿದು ಜನರು ಪರದಾಡಿದರು. ಪಟ್ಟಣದ ಮೂಸಾ ನಗರದಲ್ಲಿ ಮನೆಯೊಂದರ ಕಾಂಪೌಂಡ್ ಗೋಡೆ ಕುಸಿದು ಹಾನಿಯಾಗಿದೆ.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ: ಗಾಳಿ, ಗುಡುಗು, ಮಿಂಚು ಇಲ್ಲದಿದ್ದರೂ ವ್ಯಾಪಕ ಮಳೆಯಿಂದ ತಾಲ್ಲೂಕಿನಲ್ಲಿ ಪದೇ ಪದೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ಕೆಲವು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹೋಗಿದ್ದ ವಿದ್ಯುತ್ ಬೆಳಿಗ್ಗೆವರೆಗೂ ಇರಲಿಲ್ಲ. ಇನ್ನು ಕೆಲವೆಡೆ ಗಂಟೆಗೆ ಇಪ್ಪತ್ತು ಬಾರಿ ವಿದ್ಯುತ್ ಹೋಗುವುದು, ಬರುವುದು ಆಗುತ್ತಿತ್ತು.

ಪರಿಸ್ಥಿತಿ ಎದುರಿಸಲು ತಾಲ್ಲೂಕಾಡಳಿತ ಸಜ್ಜು:  ಮಳೆಯಿಂದ ಹಾನಿ ಉಂಟಾಗುವ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಎಂ. ಎನ್ ಮಂಜುನಾಥ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಮಳೆಯಿಂದ ನೆರೆಯುಂಟಾಗುವ ತಾಲ್ಲೂಕಿನ ಅಳ್ವೆಕೋಡಿ, ಪುರವರ್ಗ, ಬೆಳಕೆ, ಯಲ್ವಡಿಕವೂರ್, ಬೇಂಗ್ರೆ, ಶಿರಾಲಿ, ಹೆಬಳೆ ಮುಂತಾದೆಡೆ ಗಂಜಿಕೇಂದ್ರ ತೆರೆಯಲು ಸಿದ್ಧತೆ  ನಡೆಸಲಾಗಿದೆ.

ಎರಡು ಸ್ಪೀಡ್ ಬೋಟ್‌ಗಳನ್ನು ಅಣಿಗೊಳಿಸಲಾಗಿದೆ. ಮೀನುಗಾರಿಕೆ ಇಲಾಖೆಯೊಂದಿಗೆ ಮಾತನಾಡಿ ಈಜು ಪರಿಣಿತರು, ದೋಣಿಗಳನ್ನು ಸಜ್ಜುಗೊಳಿಸಲಾಗಿದೆ. ಅತಿವೃಷ್ಟಿ ಎದುರಾದಲ್ಲಿ ಅದನ್ನು ನಿಭಾಯಿಸಲು ತಾಲ್ಲೂಕಾಡಳಿತ ಎಲ್ಲ ರೀತಿಯಿಂದ ಸಜ್ಜಾಗಿದೆ ಎಂದು ತಹಶೀಲ್ದಾರ್ ವಿ. ಎನ್. ಬಾಡಕರ್ ತಿಳಿಸಿದ್ದಾರೆ.

ಮಳೆಯಿಂದ ಮನೆಗೆ ಹಾನಿ
ಭಟ್ಕಳ: ವ್ಯಾಪಕವಾಗಿ ಸುರಿದ ಮಳೆಗೆ ತಾಲ್ಲೂಕಿನ ಬಿಳಲಖಂಡದಲ್ಲಿ ಮೆಹಬೂಬ್ ಬಾಶಾ ಮುಕಂದರ್ ಎಂಬುವರ ಮನೆಯ ಗೋಡೆ ಕುಸಿದು ಸುಮಾರು ₹ 30ಸಾವಿರಕ್ಕೂ ಹೆಚ್ಚು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮಳೆ ಪ್ರಮಾಣ
ಕಾರವಾರ: ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 925.2 ಮಿ.ಮೀ. ಮಳೆಯಾಗಿದ್ದು, ಸರಾಸರಿ 84.1 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.

ಈ ಅವಧಿಯಲ್ಲಿ ಅಂಕೋಲಾದಲ್ಲಿ 82 ಮಿ.ಮೀ., ಭಟ್ಕಳ 154 ಮಿ.ಮೀ., ಹಳಿಯಾಳ 16.2 ಮಿ.ಮೀ., ಹೊನ್ನಾವರ 137.5 ಮಿ.ಮೀ., ಕಾರವಾರ 97 ಮಿ.ಮೀ., ಕುಮಟಾ 163.4 ಮಿ.ಮೀ., ಮುಂಡಗೋಡ 23.2 ಮಿ.ಮೀ., ಸಿದ್ದಾಪುರ 113.8 ಮಿ.ಮೀ., ಶಿರಸಿ 43.5 ಮಿ.ಮೀ., ಜೊಯಿಡಾ 37.4 ಮಿ.ಮೀ., ಯಲ್ಲಾಪುರದಲ್ಲಿ 57.2  ಮಿ.ಮೀ ಮಳೆ ದಾಖಲಾಗಿದೆ.

ಬಿಡುವು ನೀಡುತ್ತ ಸುರಿದ ಮಳೆ
ಸಿದ್ದಾಪುರ:  ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಸೋಮವಾರ ಕೊಂಚ  ಕಡಿಮೆಯಾಗಿದೆ. ಭಾನುವಾರ ಸುರಿದ ಧಾರಾಕಾರ ಮಳೆಗೆ ಹೋಲಿಸಿದರೆ, ಸೋಮವಾರ ಮಳೆ ಆಗಾಗ ಬಿಡುವು ನೀಡುತ್ತ ಸುರಿ ಯಿತು. ಸೋಮವಾರ ಬೆಳಗಿನ ಅವಧಿ ಯಲ್ಲಿ  ಮಳೆ ಭಾರಿ ರಭಸವಿತ್ತಾದರೂ ನಂತರ ಅದರ ಬಿರುಸು ಕಡಿಮೆ ಯಾಯಿತು.   ಇದುವರೆಗೆ ಒಟ್ಟು  298.8 ಮಿ.ಮೀ ಮಳೆ ಸುರಿದಿದೆ.

ಭಾನುವಾರ ವಿದ್ಯುತ್ ಕಂಬ ಬಿದ್ದಿದ್ದ ಹಂದಿಮನೆಯ ಯಂಕಿ ನಾರಾಯಣ ದೇವಾಡಿಗ ಅವರ ಮನೆಗೆ ಸುಮಾರು ₹ 10 ಸಾವಿರ ಹಾನಿ ಆಗಿದೆ. ಸೋಮವಾರ ಮಳೆಯಿಂದ ಯಾವುದೇ ಹಾನಿ ಉಂಟಾಗಿರುವ  ವರದಿ ಬಂದಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಗರಿಗೆದರಿದ ಕೃಷಿ ಚಟುವಟಿಕೆ
ಶಿರಸಿ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೆ ಗರಿಗೆದರಿದೆ. ಬನವಾಸಿ ಹೋಬಳಿಯಲ್ಲಿ ಭತ್ತ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿದೆ.

ಸೋಮವಾರ ಬೆಳಿಗೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಶಿರಸಿ ಹೋಬಳಿಯಲ್ಲಿ 73 ಮಿ.ಮೀ, ಬನವಾಸಿ ಹೋಬಳಿಯಲ್ಲಿ 49 ಮಿ.ಮೀ, ಹುಲೇಕಲ್ ಹೋಬಳಿಯಲ್ಲಿ 63 ಮಿ.ಮೀ ಹಾಗೂ ಸಂಪಖಂಡ ಹೋಬಳಿಯಲ್ಲಿ 113 ಮಿ.ಮೀ ಮಳೆ ದಾಖಲಾಗಿದೆ. ತಾಲ್ಲೂಕಿನಲ್ಲಿ ಈವರೆಗೆ 221 ಮಿ.ಮೀ ಮಳೆಯಾಗಿದೆ.

ಸಮುದಾಯ ಭವನಕ್ಕೆ ಹಾನಿ: ಭಾನುವಾರ ರಾತ್ರಿ ಸುರಿದ ಮಳೆಗೆ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಪ್ಪನಳ್ಳಿಯ ಸಾರ್ವಜನಿಕ ಸಭಾ ಭವನದ ಮೇಲೆ ಮಾವಿನ ಮರವೊಂದು ಬುಡಸಮೇತ ಕಿತ್ತು ಬಿದ್ದಿದೆ. ಇದರಿಂದ ಸಮುದಾಯ ಭವನದ ಮೇಲ್ಚಾವಣಿಯ ಶೀಟ್‌ಗಳು ಒಡೆದಿವೆ. ಅಂದಾಜು ₹ 15,000 ನಷ್ಟವಾಗಿದೆ. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ನಾಯ್ಕ, ಪಂಚಾಯ್ತಿ ಕಾರ್ಯದರ್ಶಿ ಪಿ.ಎಂ. ಹೆಗಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT