ಮುಂಗಾರು ಮಳೆ ಬಂತು,ಕಳೆ ತಂತು

7

ಮುಂಗಾರು ಮಳೆ ಬಂತು,ಕಳೆ ತಂತು

Published:
Updated:
ಮುಂಗಾರು ಮಳೆ ಬಂತು,ಕಳೆ ತಂತು

ಹೊಸಪೇಟೆ: ಈ ಬಾರಿ ಸಕಾಲಕ್ಕೆ ಮುಂಗಾರು ಮಳೆ ಬಂದಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಅಷ್ಟೇ ಅಲ್ಲ, ಸುತ್ತಮುತ್ತಲಿನ ಪರಿಸರ ಹಸಿರಾಗಿದೆ.

ಬೇಸಿಗೆಯಲ್ಲಿ ಕೆಂಡದಂತಹ ಬಿಸಿಲಿನಿಂದ ಗಿಡ, ಮರಗಳು ಒಣಗಿ ನಿರ್ಜೀವವಾಗಿದ್ದವು. ಕೆರೆ, ಕಟ್ಟೆಗಳು ಬತ್ತು ಹೋಗಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿತ್ತು.

ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೃಷ್ಟಿಯಾಗಿತ್ತು. ಆದರೆ, ಸಮಯಕ್ಕೆ ಸರಿಯಾಗಿ ವರುಣ ಬಂದಿರುವುದರಿಂದ ಗಿಡ, ಮರಗಳಿಗೆ ಜೀವ ಬಂದಂತಾಗಿದೆ. ಎಲ್ಲೆಡೆ ಹುಲುಸಾಗಿ ಹುಲ್ಲು ಬೆಳೆದಿದ್ದು, ತಾತ್ಕಾಲಿಕವಾಗಿ ಮೇವಿನ ಸಮಸ್ಯೆ ದೂರವಾಗಿದೆ. ಅಷ್ಟೇ ಅಲ್ಲ, ಬೆಂಗಾಡಿನಂತೆ ಕೆಂಪಗಾಗಿದ್ದ ಬೆಟ್ಟ, ಗುಡ್ಡಗಳಿಗೆ ಹಸಿರಿನ ಹೊದಿಕೆ ಹಾಸಿದಂತಾಗಿದೆ.

ನಗರದ ಜೋಳದರಾಶಿ ಬೆಟ್ಟ, ತುಂಗಭದ್ರಾ ಜಲಾಶಯ ಸಮೀಪದ ವೈಕುಂಠ, ಗುಂಡಾ ಅರಣ್ಯ, ಸಂಡೂರು ರಸ್ತೆಯಲ್ಲಿರುವ ಬೆಟ್ಟ, ಗುಡ್ಡಗಳು ಸಂಪೂರ್ಣ ಹಚ್ಚ ಹಸಿರಾಗಿವೆ. ಹಂಪಿ, ಕನ್ನಡ ವಿಶ್ವವಿದ್ಯಾಲಯದ ಪರಿಸರ ಕೂಡ ಹಸಿರಿನಿಂದ ಕಂಗೊಳಿಸುತ್ತಿದೆ. ಹಸಿರ ಸಿರಿಯಿಂದ ಬೆಟ್ಟ, ಗುಡ್ಡಗಳು ದಾರಿ ಹೋಕರನ್ನು ತನ್ನತ್ತ ಆಕರ್ಷಿಸುತ್ತಿವೆ.

ಒಳ್ಳೆಯ ಮುನ್ಸೂಚನೆ: ಸತತ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬರದ ವಾತಾ ವರಣ ಇತ್ತು. ಬರದಿಂದ ತುಂಗಭದ್ರಾ ಜಲಾಶಯ ಮೇ ತಿಂಗಳ ಮೊದಲ ವಾರ ದಲ್ಲಿಯೇ ಬತ್ತುವ ಹಂತಕ್ಕೆ ಬಂದಿತ್ತು. ಕಾಲುವೆಗಳು ನೀರಿಲ್ಲದೇ ಬಿಕೋ ಎನ್ನುತ್ತಿದ್ದವು.

ಕೆರೆ, ಕಟ್ಟೆಗಳು ನೀರಿಲ್ಲದೇ ಬರಿದಾಗಿದ್ದವು.  ಅಣೆಕಟ್ಟೆಯ ನೀರನ್ನೇ ಅವಲಂಬಿಸಿದ ರೈತರು ಎರಡನೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ ಸಮಯಕ್ಕೆ ಮುಂಗಾರು ಜಿಲ್ಲೆ ಪ್ರವೇಶ ಮಾಡಿದೆ. ಜೂ.4ರಿಂದ 8ರ ವರೆಗೆ ಸತತವಾಗಿ ನಾಲ್ಕು ದಿನಗಳವರೆಗೆ ಮಳೆ ಸುರಿದಿದೆ. ಅಷ್ಟೇ ಅಲ್ಲ, ನಾಲ್ಕೈದು ದಿನಗಳಿಂದ ದಿನವಿಡೀ ಮೋಡ ಮುಸುಕಿದ ವಾತಾವರಣ ಇರುತ್ತಿದ್ದು, ಆಗೊಮ್ಮೆ, ಈಗೊಮ್ಮೆ ಜಿಟಿಜಿಟಿ ಮಳೆಯಾಗುತ್ತಿದೆ.

ಮಳೆ ಒಳ್ಳೆಯ ಮುನ್ಸೂಚನೆ ಕೊಟ್ಟಿ ರುವುದರಿಂದ ರೈತರ ಮೊಗದಲ್ಲಿ ಮಂದ ಹಾಸ ಮೂಡಿಸಿದೆ. ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಒಂದೆರಡು ಸಲ ಉತ್ತಮ ಮಳೆಯಾದರೆ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಬಿತ್ತನೆ ಚುರುಕು ಗೊಳ್ಳಲಿದೆ. ರೈತರಿಗೆ ಅಗತ್ಯ ಬಿತ್ತನೆ ಬೀಜ, ಗೊಬ್ಬರ ಪೂರೈಸಲು ಕೃಷಿ ಇಲಾಖೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

‘ಈ ಬಾರಿ ಮಳಿ ಛಲೋ ಆಗ್ತಾದ ಅಂತ ಎಲ್ರೂ ಹೇಳ್ತಾರ. ಅದಕ್ಕ ತಕ್ಕಂತ ಈಗ ಮಳಿ ಬರ್ಲಿಕ್ಕೈತ್ತೈತಿ. ನೋಡಾಣ ಮುಂದ್‌ ಏನ್‌ ಆಗ್ತದ. ಮಳಿ ಬಂದುರ್‌ ರೈತರ ಉಳಕೋತಾರ. ಇಲ್ಲದದ್ರ ದೇವರೇ ಕಾಪಾಡಬೇಕ ನೋಡ’ ಎನ್ನುತ್ತಾರೆ ಇಲ್ಲಿನ ಹೊಸೂರಿನ ರೈತ ಲಕ್ಷ್ಮಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry