ಶ್ರದ್ಧಾ ಮೇಲೆ ಶ್ರುತಿಗೆ ಕ್ರಶ್‌!

7

ಶ್ರದ್ಧಾ ಮೇಲೆ ಶ್ರುತಿಗೆ ಕ್ರಶ್‌!

Published:
Updated:
ಶ್ರದ್ಧಾ ಮೇಲೆ ಶ್ರುತಿಗೆ ಕ್ರಶ್‌!

‘ಶ್ರದ್ಧಾ ಶ್ರೀನಾಥ್‌, ನಂಗೆ ನಿನ್ನ ಮೇಲೆ ಅಗಾಧವಾದ, ಎವರೆಸ್ಟ್‌ನಷ್ಟು ಅಪರಿಮಿತವಾಗಿ ಕ್ರಶ್‌ ಆಗಿದೆ’

ಸಿನಿಮಾ ನಟಿಯರ ಮುದ್ದು ಮುಖವನ್ನು ತೆರೆಯ ಮೇಲೆ ನೋಡಿ ಅಭಿಮಾನಿಗಳಿಗೆ ಹೀಗೆಲ್ಲ ಅನಿಸುವುದು ಸಹಜ ಎಂದು ಮೂಗು ಮುರಿಯಬೇಡಿ.  ಹೀಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ‘ಅಧಿಕೃತವಾಗಿ’ ಘೋಷಿಸಿರುವುದು ಶ್ರದ್ಧಾ ಶ್ರೀನಾಥ್‌ ಅವರ ಮಾಮೂಲಿ ಅಭಿಮಾನಿ ಅಲ್ಲವೇ ಅಲ್ಲ; ಬದಲಿಗೆ ಕನ್ನಡದ ಇನ್ನೋರ್ವ ಜನಪ್ರಿಯ ನಟಿ ಶ್ರುತಿ ಹರಿಹರನ್‌!

ಅವರ ಪ್ರೇಮ ನಿವೇದನೆ ಇಷ್ಟಕ್ಕೆ ಕೊನೆಗೊಂಡಿಲ್ಲ. ‘ಶ್ರದ್ಧಾ ನಾನು ನಿನ್ನ ಪರ್ಸನಲ್‌ ... (ಏನು ಬೇಕಾದರೂ) ಆಗಲಿಕ್ಕೆ ಅರ್ಜಿ ಕಳಿಸುತ್ತಿದ್ದೇನೆ. ನಾನು ಚೆನ್ನಾಗಿ ಅಡುಗೆ ಮಾಡಬಲ್ಲೆ. ತುಂಬ ಅದ್ಭುತವಾಗಿ ಮಾತನಾಡಬಲ್ಲೆ. ಮನಮೋಹಕವಾಗಿ ನಿನ್ನ ಫೋಟೊ ತೆಗೆಯಬಲ್ಲೆ. ಅಷ್ಟೇ ಅಲ್ಲ, ಯಾವ ಗಂಡಸಿನ ಮುಖದ ಮೇಲೆ ಬೇಕಾದರೂ ಮುಷ್ಟಿಪ್ರಹಾರ ಮಾಡಬಲ್ಲೆ... ನೀನೊಮ್ಮೆ ಹೂ ಅನ್ನು ಸಾಕು’ ಎಂದೂ ಬರೆದುಕೊಂಡಿದ್ದಾರೆ!

ಎಷ್ಟು ಒಳ್ಳೆಯ ನಟಿ, ಇವರಿಗೇನಾಯ್ತು ಎಂದು ಹುಬ್ಬೇರಿಸಬೇಡಿ. ಶ್ರುತಿ ಅವರಿಗೆ ಶ್ರದ್ಧಾ ಮೇಲೆ ಹೀಗೆ ಒಮ್ಮಿಂದೊಮ್ಮೆಲೆ ಲವ್ವಾಗಲಿಕ್ಕೂ ಬಲವಾದ ಕಾರಣವಿದೆ. ಆ ಕಾರಣ ಇತ್ತಿಚೆಗೆ ತಮಿಳಿನ ‘ವಿಕ್ರಮ್‌ ವೇದಾ’ ಚಿತ್ರದ ಲಿರಿಕಲ್‌ ವಿಡಿಯೊ. ಆ ವಿಡಿಯೊಗೂ ಶ್ರುತಿಗೂ, ಈ ಪರಿಯ ಪ್ರೇಮಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಎಂದು ತಲೆಕೆರೆದುಕೊಳ್ಳಬೇಡಿ.

ಇನ್ನು ಗೊಂದಲ ಬೇಡ. ವಿಷಯ ಹೀಗಿದೆ: ಶ್ರದ್ಧಾ ಶ್ರೀನಾಥ್‌ ತಮಿಳಿನ ‘ವಿಕ್ರಮ್‌ ವೇದಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅವರು ಮತ್ತು ಮಾಧವನ್‌ ಜತೆಗಿನ ‘ಯಾಂಜಿ ಯಾಂಜಿ’ ಎಂಬ ರೊಮ್ಯಾನ್ಸ್‌ ಗೀತೆಯೊಂದರ ಲಿರಿಕಲ್‌ ವಿಡಿಯೊ ಬಿಡುಗಡೆ ಮಾಡಲಾಗಿದೆ. ಆ ವಿಡಿಯೊದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ  ಶ್ರದ್ಧಾ ಅವರನ್ನು ನೋಡಿ ಶ್ರುತಿ ಹರಿಹರನ್‌ ಫಿದಾ ಆಗಿದ್ದಾರೆ. ಅದೇ ಖುಷಿಯಲ್ಲಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿರುವ ಶ್ರುತಿ, ಶ್ರದ್ಧಾ ಅವರನ್ನು ಹಾಡಿ ಹೊಗಳಿರುವುದಷ್ಟೇ ಅಲ್ಲದೆ ‘ಪರ್ಸನಲ್‌ ಪಾರ್ಟ್ನರ್‌’ ಆಗುವ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ! 

ಇದೇ ಸ್ಟೇಟಸ್‌ನಲ್ಲಿ ಅವರು ಈ ಹಾಡಿನ ಗಾಯಕಿ ಶಕ್ತಿಶ್ರೀ ಗೋಪಾಲನ್‌ ಅವರ ಧ್ವನಿಯನ್ನೂ ಮೆಚ್ಚಿಕೊಂಡಿದ್ದಾರೆ.

ಈ ಫೇಸ್‌ಬುಕ್‌ ಸ್ಟೇಟಸ್‌ಗೆ ಬಂದಿರುವ ಪ್ರತಿಕ್ರಿಯೆಗಳೂ ಅಷ್ಟೇ ರಸವತ್ತಾಗಿದೆ!

ಶ್ರುತಿ ಅವರ ಈ ನಿವೇದನೆಯನ್ನು ಶ್ರದ್ಧಾ ಮಾನ್ಯ ಮಾಡುತ್ತಾರೆಯೇ? ಅವರು ತಮ್ಮ ನಿವೇದನೆಯಲ್ಲಿ ಬಿಟ್ಟಿರುವ ‘...’ ಖಾಲಿ ಜಾಗವನ್ನು ಯಾವ ರೀತಿ ತುಂಬುತ್ತಾರೆ ಎಂಬ ಪ್ರಶ್ನೆಗೆ ಮಾತ್ರ ಅವರೇ ಉತ್ತರಿಸಬೇಕು. ಯಾವುದಕ್ಕೂ ಒಮ್ಮೆ ಇಷ್ಟು ಚರ್ಚೆಗೆ ಕಾರಣವಾದ ಲಿರಿಕಲ್‌ ವಿಡಿಯೊವನ್ನು ನೀವೂ ನೋಡಿಕೊಂಡು ಬಂದುಬಿಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry