ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಬಾಕಿ ಸಂಕಷ್ಟಗಳೇನು?

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ತಮ್ಮ ಮಗ 10ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ್ದಕ್ಕಾಗಿ ಸಂತಸಗೊಂಡ ಲಕ್ಷ್ಮೀ ಅವರು ಪಿಯುನಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿ ಎಂಜಿನಿಯರ್‌ ಮಾಡುವ ಅವನ ಕನಸನ್ನು ನನಸುಗೊಳಿಸುವ ಮಾರ್ಗದಲ್ಲಿ ಸಾಗಿದ್ದರು. ಪ್ರತಿಷ್ಠಿತ ಕಾಲೇಜಿನಲ್ಲೇ ಮಗನಿಗೆ ಪ್ರವೇಶವೂ ದೊರೆಯಿತು. ಕಾಲೇಜಿನ ಶುಲ್ಕ ಮತ್ತು ಇತರೆ ಖರ್ಚುಗಳನ್ನು ನಿಭಾಯಿಸಲು ಸಾಲಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋದರು. ಆದರೆ, ಸಾಲ ಮಂಜೂರಾತಿಯಾಗಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಇನ್ನೊಂದು ಬ್ಯಾಂಕಿನಲ್ಲಿ ಸಾಲ ಬಾಕಿ ಇರುವ ವಿಷಯವನ್ನು ತಿಳಿಸಿದರು.

ಈ ಮೊದಲು ಲಕ್ಷ್ಮೀ ಅವರು ಸಾಲ ಪಡೆದಾಗ ನಿಯಮಿತವಾಗಿ ಪ್ರತಿ ತಿಂಗಳು ಕಂತು ಪಾವತಿಸುತ್ತಿದ್ದರು. ಆದರೆ, ಸಾಲ ಮನ್ನಾ ಮಾಡುವ ಬಗ್ಗೆ ಕೆಲವರು ತಿಳಿಸಿದಾಗ ಕಂತು ಪಾವತಿಸುವುದನ್ನು ಸ್ಥಗಿತಗೊಳಿಸಿದ್ದರು. ಆಗ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು.

ಯಾವುದೇ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ಗಳಿಂದ ಸಾಲ ಪಡೆದಾಗ ಸಾಲ ಪಡೆದವರ ಮತ್ತು ಅವರ ಮರುಪಾವತಿಸಿರುವ ಕುರಿತು ಕ್ರೆಡಿಟ್‌ ಬ್ಯೂರೋಗಳಿಗೆ ಮಾಹಿತಿ ನೀಡಲಾಗುತ್ತದೆ.

ಈ ಕ್ರೆಡಿಟ್‌ ಬ್ಯೂರೊ ಎನ್ನುವುದು ಎಲ್ಲ ಸಾಲಗಾರರ ಮಾಹಿತಿಯನ್ನು ಒಳಗೊಂಡ ಕೇಂದ್ರೀಯ ಸಂಸ್ಥೆಯಾಗಿದೆ. ಇಲ್ಲಿ ಎಲ್ಲ ಸಾಲಗಾರರ ಮಾಹಿತಿ ದೊರೆಯುತ್ತದೆ. ಕಂತು ಪಾವತಿಸದ ಲಕ್ಷ್ಮಿ ಅವರ ಮಾಹಿತಿಯೂ ಇಲ್ಲಿ ಲಭ್ಯವಾಗಿತ್ತು. ಇಲ್ಲಿ ಅವರ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ದಾಖಲಾಗಿತ್ತು. ಹೀಗಾಗಿ, ಸಾಲ ಮರುಪಾವತಿ ಕಾರಣ ಎಲ್ಲ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಸಾಲದ ಅರ್ಜಿಯನ್ನು ತಿರಸ್ಕೃರಿಸುತ್ತಿದ್ದವು.

ಇದು ಲಕ್ಷ್ಮೀ ಒಬ್ಬರ ಸಮಸ್ಯೆ ಅಲ್ಲ. ಇದೇ ರೀತಿಯ ಹಲವು ಮಂದಿ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಾರೆ. ಕೆಲವರು ಉದ್ದೇಶಪೂರ್ವಕವಾಗಿ, ಇನ್ನು ಕೆಲವರು ಇತರರ ಮಾತು ಕೇಳಿ ಸಾಲ ಮರುಪಾವತಿಸದ ಉದಾಹರಣೆಗಳಿವೆ. ಇದು ಭವಿಷ್ಯದಲ್ಲಿ ಅನಿವಾರ್ಯ ವಾಗಿ ಸಾಲ ಪಡೆಯುವ ಸಂದರ್ಭದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಸಾಲ ಪಡೆಯುವವರು ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಸಂಸ್ಥೆಯು, ಸಾಲ ಮರುಪಾವತಿಸದ ವ್ಯಕ್ತಿಗಳ ಪಟ್ಟಿಗೆ ಸೇರಿಸಲಾಗುತ್ತದೆ ಮತ್ತು  ಸಾಲದ ಮಾಹಿತಿಯನ್ನು ಕ್ರೆಡಿಟ್‌ ಬ್ಯೂರೋ ಜತೆ ಹಂಚಿಕೊಳ್ಳಲಾಗುತ್ತದೆ. ಜತೆಗೆ ಇತರ ಹಣಕಾಸಿನ ಸಂಸ್ಥೆಗಳಿಗೂ ಸಾಲದ ಮಾಹಿತಿ ಲಭ್ಯವಾಗುತ್ತದೆ.

ಏನು ಮಾಡಬೇಕು?
ಸಾಲಗಾರರು ಸಮರ್ಪಕವಾಗಿ ಸಾಲ ಮರುಪಾವತಿಸಬೇಕು. ಈ ಮೂಲಕ ಅವರ ‘ಸಾಲದ ಹಿನ್ನೆಲೆ’ಯೂ ಉತ್ತಮವಾಗಿರಬೇಕು. ಇದರಿಂದ ಭವಿಷ್ಯದಲ್ಲಿ ಯಾವುದೇ ರೀತಿ ಸಮಸ್ಯೆಗಳಾಗುವುದಿಲ್ಲ. ಇದಕ್ಕಾಗಿಯೇ ಇಲ್ಲಿ ಕೆಲವು ಪರಿಹಾರಗಳನ್ನು ನೀಡಲಾಗಿದೆ.

* ಕಂತುಗಳನ್ನು ಸಕಾಲಕ್ಕೆ ಪಾವತಿಸಬೇಕು. ಸಮರ್ಪಕವಾದ ಸಾಲ ಮರುಪಾವತಿಯಿಂದ ಹೆಚ್ಚಿನ ಅನುಕೂಲ

* ಸಾಲ ಮರುಪಾವತಿಗೆ ಹಣಕಾಸಿನ ಸಮಸ್ಯೆಯಾಗಿದ್ದರೆ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಿ. ಆಗ ಸಾಲ ಮರುಪಾವತಿಸುವ ಕಂತುಗಳನ್ನು ಕಡಿಮೆ ಮೊತ್ತಕ್ಕೆ ದೀರ್ಘಾವಧಿಗೆ ಪಾವತಿಸುವ ಅವಕಾಶಗಳನ್ನು ಕಲ್ಪಿಸುತ್ತದೆ.

* ಸಾಲ ಮನ್ನಾದಂತಹ ವದಂತಿಗಳಿಗೆ ಕಿವಿಗೊಡಬೇಡಿ.

* ಬಾಕಿ ಸಾಲವನ್ನು ಮರುಪಾವತಿಸದಂತೆ ಹೇಳುವ ಜನರ ಮಾತುಗಳನ್ನು ಆಲಿಸದಿರಿ. ಇದರಿಂದ ನಿಮ್ಮ ಸಾಲದ ಹಿನ್ನೆಲೆ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಹಣಕಾಸು ಸಂಸ್ಥೆಗಳು ನಿಮ್ಮ ಮೇಲಿಡುವ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತದೆ.

* ಅಗತ್ಯಕ್ಕೆ ತಕ್ಕಂತೆ ಸಾಲ ಮಾಡಿ. ಹೆಚ್ಚಿನ ಹೊರೆಯಾಗದಂತೆ ಎಚ್ಚರವಹಿಸಿ.

* ಅಧಿಕೃತ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಿರಿ. ಅನಧಿಕೃತ ಸಂಸ್ಥೆಗಳು ಅಥವಾ ವ್ಯಕ್ತಿಗಳಿಂದ ಸಾಲ ಪಡೆಯುವವರಿಂದ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.

* ಸಾಲ ಮರುಪಾವತಿಸದವರ ಪಟ್ಟಿಯಲ್ಲಿ ನಿಮ್ಮನ್ನು ಸೇರಿಸಿದ್ದರೆ ತಕ್ಷಣವೇ ಸಾಲ ಮರುಪಾವತಿಸಿ. ಬಳಿಕ ನಿಯಮಿತವಾಗಿ ಸಾಲ ಮರುಪಾವತಿಸಿ.
ಸರ್ಕಾರವು ಈಗ ಹಲವಾರು ಯೋಜನೆಗಳನ್ನು ಆರಂಭಿಸಿದೆ.  ಪ್ರಧಾನ ಮಂತ್ರಿ ಜನ ಧನ ಯೋಜನಾ ಮತ್ತು ‘ಮುದ್ರಾ’ ದಂತಹ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ಈ ಮೂಲಕ ಸಾಲದ ಹಿನ್ನೆಲೆಯನ್ನು ಉತ್ತಮವಾಗಿಟ್ಟುಕೊಳ್ಳಬೇಕು.

-ಸ್ನೇಹಾ ಠಾಕೂರ್
(ಉಜ್ಜೀವನ್‌ ಸಣ್ಣ ಹಣಕಾಸು ಬ್ಯಾಂಕ್‌ನ ಸಾಲ ಮತ್ತು ಸಂಗ್ರಹದ ಮುಖ್ಯಸ್ಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT