ಮತ್ತೆ ಬಂದಿದೆ ರ‍್ಯಾನ್ಸಂವೇರ್‌ ಕುತಂತ್ರಾಂಶ..!

7

ಮತ್ತೆ ಬಂದಿದೆ ರ‍್ಯಾನ್ಸಂವೇರ್‌ ಕುತಂತ್ರಾಂಶ..!

Published:
Updated:
ಮತ್ತೆ ಬಂದಿದೆ ರ‍್ಯಾನ್ಸಂವೇರ್‌ ಕುತಂತ್ರಾಂಶ..!

ದಶಕದ ಹಿಂದೆ ವಿಂಡೋಸ್‌ ಮತ್ತು ಆಂಡ್ರಾಯ್ಡ್‌ ಕಾರ್ಯನಿರ್ವಹಣಾ ವ್ಯವಸ್ಥೆ ಹೊಂದಿರುವ ಗ್ಯಾಜೆಟ್‌ಗಳಲ್ಲಿ ರ‍್ಯಾನ್ಸಂವೇರ್‌ ಎಂಬ ಕುತಂತ್ರಾಂಶದ ದಾಳಿ ತೀವ್ರವಾಗಿತ್ತು. 2014ರಲ್ಲಿ ಈ ವೈರಸ್‌ ದಾಳಿಯಿಂದ ಜಗತ್ತಿನಾದ್ಯಂತ ಲಕ್ಷಾಂತರ ಕಂಪ್ಯೂಟರ್‌ಗಳಲ್ಲಿದ್ದ ಮಾಹಿತಿಯು ಹಾನಿಗೊಳಗಾಗಿತ್ತು. ರ‍್ಯಾನ್ಸಂವೇರ್‌ ಗಣಕಯಂತ್ರಗಳನ್ನು ಅಕ್ಷರಶಃ ಕಾರ್ಯ ನಿರ್ವಹಿಸದಂತೆ ಮಾಡುತ್ತಿದ್ದವು. ಈಗ ಮತ್ತೆ ಈ ವೈರಸ್‌ನ ದಾಳಿ ಹೆಚ್ಚಿದೆ.

ಸೈಬರ್‌ ಅಪರಾಧಿಗಳು ರ‍್ಯಾನ್ಸಂವೇರ್‌ ಕುತಂತ್ರಾಂಶ ಬಳಸಿ ದೊಡ್ಡ ದೊಡ್ಡ ಕಂಪೆನಿಗಳು, ಶೈಕ್ಷಣಿಕ ಸಂಸ್ಥೆಗಳು, ಉದ್ದಿಮೆ ಸಮೂಹಗಳ ಕಂಪ್ಯೂಟರ್‌ಗಳಿಂದ ಮಾಹಿತಿ ಸೋರಿಕೆ ಮಾಡಿದ್ದಾರೆ. ರ‍್ಯಾನ್ಸಂವೇರ್‌ ಪಾಪ್‌–ಅಪ್ ಜಾಹೀರಾತು ಮೂಲಕ ಕಂಪ್ಯೂಟರ್ ಪ್ರವೇಶಿಸುತ್ತದೆ.  ಬಳಕೆದಾರ ವೆಬ್‌ ಪುಟ ತೆರೆಯುತ್ತಿದ್ದಂತೆ, ಆಕರ್ಷಕವಾದ ಪಾಪ್‌ ಅಪ್‌ ಜಾಹೀರಾತು ಪ್ರತ್ಯಕ್ಷವಾಗುತ್ತದೆ. ನಿಮ್ಮ ಕಂಪ್ಯೂಟರ್‌ನಲ್ಲಿರುವ ಮಾಲ್‌ವೇರ್‌ಗಳನ್ನು ಸ್ವಚ್ಚಗೊಳಿಸಲು ಈ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ ಎಂಬ ಸಂದೇಶ ಪದೇ ಪದೇ ಪ್ರತ್ಯಕ್ಷಗೊಳ್ಳುತ್ತದೆ. ಅಪ್ಪಿ–ತಪ್ಪಿ ಏನಾದರೂ ಇದರ ಮೇಲೆ ಕ್ಲಿಕ್‌ ಮಾಡಿದರೆ ವೈರಸ್‌ ಮರು ಕ್ಷಣ ಕಂಪ್ಯೂಟರ್‌ ಪ್ರವೇಶಿಸುತ್ತದೆ. ಹೀಗೆ ಬ್ರೌಸರ್‌ ಮತ್ತು ಇ–ಮೇಲ್ ಮೂಲಕ ಒಳನುಸುಳುವ ಈ ತಂತ್ರಾಂಶ  ಹಂತ ಹಂತವಾಗಿ ಗಣಕಯಂತ್ರದ ಕಾರ್ಯನಿರ್ವಹಣೆಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತದೆ. ಕಡತಗಳನ್ನು ನಾಶಪಡಿಸುವುದು ಮಾತ್ರವಲ್ಲ, ಅದರಲ್ಲಿರುವ ಪಠ್ಯ, ಚಿತ್ರಗಳನ್ನು ಓದಲು ಸಾಧ್ಯವಾಗದಂತೆ ಗೂಢಲಿಪಿಗೆ ಪರಿವರ್ತಿಸಿ ಇಡುತ್ತದೆ.

ಕಂಪ್ಯೂಟರ್‌ನಲ್ಲಿರುವ ಕಡತವನ್ನು ಬಳಕೆದಾರ ತೆರೆಯಲು ಸಾಧ್ಯವಾಗದಂತೆ ಮಾಡುತ್ತವೆ. ಇಂತಹ ಫೈಲ್‌ಗಳನ್ನು ರಿಕವರಿ ಮಾಡಿದರೂ, ಗೂಢಲಿಪಿಯಲ್ಲಿ ಇರುವುದರಿಂದ ಮಾಹಿತಿಯನ್ನು ಓದಲು ಸಾಧ್ಯವಾಗುವುದಿಲ್ಲ. ಕಂಪ್ಯೂಟರ್ ಪ್ರವೇಶಿಸಿದ ನಂತರ ಬಳಕೆದಾರರ ಗಮನಕ್ಕೆ ಬಾರದಂತೆಯೇ ಇವು ಒಂದು ಕಂಪ್ಯೂಟರ್‌ನಿಂದ ಇನ್ನೊಂದಕ್ಕೆ ಬ್ರೌಸರ್‌ ಮತ್ತು ಇ–ಮೇಲ್‌ ಮೂಲಕ ಸಂಚರಿಸುತ್ತವೆ. ಬಳಕೆದಾರನ ಡಿಫಾಲ್ಟ್‌ ವೆಬ್‌ ಬ್ರೌಸರ್‌ ಅನ್ನೇ ಇವು ಹೈಜಾಕ್‌ ಮಾಡಿಕೊಂಡುಸಂಪೂರ್ಣ ನಿಯಂತ್ರಣ ಸಾಧಿಸುತ್ತವೆ.

ಕಳೆದ 6 ತಿಂಗಳಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ, ಬ್ರಿಟನ್‌ ಸೇರಿ 2ಲಕ್ಷಕ್ಕೂ ಹೆಚ್ಚು ವಿಂಡೋಸ್‌ ಕಂಪ್ಯೂಟರ್‌ಗಳಲ್ಲಿ ರ‍್ಯಾನ್ಸಂವೇರ್‌ ಮತ್ತೆ ಕಾಣಿಸಿಕೊಂಡಿದೆ.  ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಕಾರ್ಪೊರೇಟ್ ಕಂಪೆನಿಗಳು, ಬೃಹತ್‌ ಉದ್ದಿಮೆ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ಸೈಬರ್‌ ದಾಳಿಕೋರರು, ಈ ಕುತಂತ್ರಾಂಶದ ಮೂಲಕ ದಾಳಿ ನಡೆಸುತ್ತಿದ್ದಾರೆ.

‘ವೈಯಕ್ತಿಕ ಕಂಪ್ಯೂಟರ್ ಬಳಕೆದಾರ ಮಾತ್ರವಲ್ಲ, ಕಾರ್ಪೊರೇಟ್ ಕಂಪೆನಿಗಳು, ಸರ್ಕಾರಿ ಇಲಾಖೆಗಳು ಸಹ ಸಮರ್ಪಕವಾದ ಆ್ಯಂಟಿ ವೈರಸ್‌ ತಂತ್ರಜ್ಞಾನ ಅಳವಡಿಸಿಕೊಂಡಿರುವುದಿಲ್ಲ. ಅಥವಾ ಅಲ್ಲಿನ ಸಿಬ್ಬಂದಿಗೆ ಭದ್ರತಾ ತಂತ್ರಾಂಶಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವ ಅಗತ್ಯ ತರಬೇತಿ ನೀಡಿರುವುದಿಲ್ಲ. ಇವೇ ಹ್ಯಾಕರ್‌ಗಳಿಗೆ ದಾರಿ ಮಾಡಿಕೊಡುತ್ತವೆ.

‘ಸುರಕ್ಷಿತ ವೆಬ್‌ ಬ್ರೌಸಿಂಗ್‌ ಮೂಲಕ ಅಥವಾ ಆನ್‌ಲೈನ್‌ ಚಟುವಟಿಕೆ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಇಂತಹ ದಾಳಿಗಳನ್ನು ತಡೆಗಟ್ಟಬಹುದು’ ಎನ್ನುತ್ತಾರೆ ವಿಪಿಎನ್‌ ನೆಟ್‌ವರ್ಕ್‌ ಸೇವಾ ಸಂಸ್ಥೆಯ ಮಾರುಕಟ್ಟೆ ಪ್ರತಿನಿಧಿ ಮಾರ್ಟಿ ಪಿ.ಕ್ಯಾಮ್ಡನ್‌. 

ರ‍್ಯಾನ್ಸಂವೇರ್‌ ದಾಳಿಯಿಂದ ಕಂಪ್ಯೂಟರ್‌ ರಕ್ಷಿಸಿಕೊಳ್ಳಲು ಇರುವ ಸುಲಭ ಮಾರ್ಗವೆಂದರೆ ‘ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳುವುದು ಎನ್ನುತ್ತಾರೆ ಗಣಕ ತಜ್ಞರು.

ಸದ್ಯ ಈ ಕುತಂತ್ರಾಂಶವು‘ವನ್ನಾಕ್ರೈ’ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ವಿಂಡೋಸ್‌ ಕಂಪ್ಯೂಟರ್‌ಗಳಲ್ಲಿ ವ್ಯಾಪಿಸಿ ಹಾವಳಿ ಮಾಡಿದೆ. ವಿಂಡೋಸ್‌ ಬಳಕೆದಾರರು ಅನಾಮಿಕ ಇ–ಮೇಲ್‌ ಕಡತಗಳನ್ನು ತೆರೆದು ನೋಡುವ ಮುನ್ನ ಅಥವಾ ಕಂಪ್ಯೂಟರ್‌ ಪರದೆಯಲ್ಲಿ ಮೂಡುವ ಪಾಪ್‌–ಅಪ್‌ ಜಾಹೀರಾತು ಕ್ಲಿಕ್ಕಿಸುವ ಮುನ್ನ ತುಸು ಹೆಚ್ಚೇ ಎಚ್ಚರಿಕೆ ವಹಿಸಬೇಕು.

ಮೈಕ್ರೊಸಾಫ್ಟ್‌ 2 ತಿಂಗಳ ಹಿಂದೆ ಈ ವೈರಸ್‌ ದಾಳಿಯಿಂದ ರಕ್ಷಣೆ ಪಡೆಯಲೆಂದೇ ‘ವನ್ನಾ ಕ್ರೈ’ ಭದ್ರತಾ ತಂತ್ರಾಂಶಗಳನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಇತ್ತೀಚಿನ ವಿಂಡೋಸ್‌ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿಕೊಂಡರೆ ಸಾಕು. ಸದ್ಯ ಇದು ವಿಂಡೋಸ್‌ ಕಂಪ್ಯೂಟರ್‌ಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ. ಹಾಗಂತ ಮುಂದೊಂದು ದಿನ ಇತರೆ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಕಂಪ್ಯೂಟರ್‌ಗಳಿಗೆ ದಾಳಿ ನಡೆಸಬಾರದು ಎಂದೇನೂ ಇಲ್ಲ. ಹಾಗಾಗಿ ಯಾವುದೇ ಸಿಸ್ಟಂ ಬಳಸುತ್ತಿದ್ದರೂ, ಮುನ್ನಚ್ಚರಿಕೆ ದೃಷ್ಟಿಯಿಂದ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳುವುದು ಜಾಣತನ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ  ಶೇ 30ರಷ್ಟು ಆ್ಯಂಟಿ ವೈರಸ್‌ ತಂತ್ರಾಂಶಗಳು, ಮಾತ್ರ ರ‍್ಯಾನ್ಸಂವೇರ್‌ ತಂತ್ರಾಂಶವನ್ನು ಪತ್ತೆ ಹಚ್ಚುವ ಮತ್ತು ಅದನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ. ಹೆಚ್ಚಿನವರು ಅಗ್ಗದ ಆ್ಯಂಟಿ ವೈರಸ್‌ ತಂತ್ರಾಂಶಗಳನ್ನು ಬಳಸುತ್ತಿರುತ್ತಾರೆ. ಕ್ಯಾಸ್‌ಪ್ರಸ್ಕಿ ಲ್ಯಾಬ್‌, ಬಿಟ್‌ಡಿಫೆಂಡರ್‌, ಮಾಲ್‌ವೇರ್‌ಬೈಟ್ಸ್‌ನಂತಹ ಅಧಿಕೃತ ತಾಣಗಳ ಮೂಲಕವೇ ಆ್ಯಂಟಿವೈರಸ್‌ ಅಪ್ಲಿಕೇಷನ್ಸ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ವೈರಸ್ ದಾಳಿಯಿಂದ ರಕ್ಷಣೆ ಪಡೆಯಲು ಕಂಪ್ಯೂಟರ್ ದತ್ತಾಂಶಗಳನ್ನು ಸದಾ ಬ್ಯಾಕ್‌ಅಪ್‌ ಮಾಡಿಟ್ಟು ಕೊಂಡಿರಬೇಕು. ಇಂಟರ್‌ನಲ್‌ ಡ್ರೈವ್‌ಗಿಂತಲೂ,  ಎಕ್ಸ್‌ಟರ್ನಲ್‌ ಡ್ರೈವ್‌ನಲ್ಲಿ ಸಂಗ್ರಹಿಟ್ಟುಕೊಳ್ಳುವುದು ಒಳ್ಳೆಯದು.

ಈಗಾಗಲೇ ನಿಮ್ಮ ಕಂಪ್ಯುಟರ್‌ಗೆ ಈ ವೈರಸ್‌ ದಾಳಿ ನಡೆಸಿದ್ದರೆ ಮೊದಲ ಮಾಡಬೇಕಾದ ಕೆಲಸ, ಕಂಪ್ಯೂಟರ್‌ಗೆ ಇಂಟರ್‌ನೆಟ್‌ ಸಂಪರ್ಕ ತಪ್ಪಿಸುವುದು. ಇದರಿಂದ ಇದು ಬೇರೆ ಕಂಪ್ಯೂಟರ್‌ಗೆ ಹರಡುವುದನ್ನು ತಪ್ಪಿಸಬಹುದು. ನಂತರ ಡಾಟಾ ರಿಕವರಿ ತಜ್ಞರನ್ನು ಕರೆಯಿಸಿ, ಕಂಪ್ಯೂಟರ್‌ ಸರಿಪಡಿಸಲು ಮರೆಯಬೇಡಿ.

–ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry