ಧನದಾಹಕ್ಕೆ ನಿಯಂತ್ರಣ ಅಗತ್ಯ

7

ಧನದಾಹಕ್ಕೆ ನಿಯಂತ್ರಣ ಅಗತ್ಯ

Published:
Updated:
ಧನದಾಹಕ್ಕೆ ನಿಯಂತ್ರಣ ಅಗತ್ಯ

ಕಲಬುರ್ಗಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಲಾಭಕೋರತನಕ್ಕೆ ಬಲಿಯಾಗಿ ಸಣ್ಣ ವಯಸ್ಸಿನಲ್ಲೇ ಮಹಿಳೆಯರು ಗರ್ಭಕೋಶಗಳನ್ನು ಕಳೆದುಕೊಂಡು, ದಿನನಿತ್ಯ ನರಕಯಾತನೆ ಅನುಭವಿಸುತ್ತಿರುವ ವಿಷಯ ರಾಷ್ಟ್ರ ಮಟ್ಟದ ಸುದ್ದಿಯಾಗಿದೆ. ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಮಹಿಳೆಯರು ಮಾತ್ರವಲ್ಲ, ಎಲ್ಲ ವರ್ಗದ ಜನರೂ ಬಲಿಯಾಗುತ್ತಿದ್ದಾರೆ.

ರೋಗಿ ಸತ್ತ ಮೇಲೂ ಹೆಣವನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಹಣ ಮಾಡಿಕೊಳ್ಳುವುದು, ವೈದ್ಯಕೀಯ ವರದಿಗಳನ್ನು ತಿರುಚುವುದು, ಇಲ್ಲದ ರೋಗ ಇದೆ ಎಂದು ವಿವಿಧ ತಪಾಸಣೆ ಮಾಡಿಸುವುದು, ಕಮಿಷನ್ ಚಾಳಿ, ರೋಗಿಯ ಬಳಿ ಹಣವಿಲ್ಲದ ಕಾರಣಕ್ಕೆ ಸೇವೆ ನಿರಾಕರಿಸುವುದು... ಇವೆಲ್ಲವೂ ಜನರ ಸಾಮಾನ್ಯ ಅನುಭವಗಳಾಗಿವೆ.

ಖಾಸಗಿ ಆಸ್ಪತ್ರೆಗಳ ಮೇಲ್ವಿಚಾರಣೆಗೆ ರಾಜ್ಯದಲ್ಲಿರುವ ಏಕೈಕ ಕಾಯ್ದೆಯಾದ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ– 2007’ರಲ್ಲಿ (ಕೆಪಿಎಂಇ) ಇಂತಹ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಕಲಮುಗಳು ಇಲ್ಲ. ಇದರಿಂದಾಗಿ ವೈದ್ಯರ ಅಥವಾ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಂಕಷ್ಟ ಅನುಭವಿಸಿದವರಿಗೆ ಇಂದಿಗೂ ನ್ಯಾಯ ಮರೀಚಿಕೆಯಾಗಿದೆ.

ಈ ಕಾಯ್ದೆಯನ್ನು ಜನಪರಗೊಳಿಸಿ, ಜನಸಾಮಾನ್ಯರ ಹಿತಾಸಕ್ತಿ ಕಾಯುವ ಉದ್ದೇಶದಿಂದ ರಾಜ್ಯ ಸರ್ಕಾರ ಅದಕ್ಕೆ  ತಿದ್ದುಪಡಿಗಳನ್ನು ಶಿಫಾರಸು ಮಾಡಲು ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಆದರೆ ಈ ಸಮಿತಿಯ ಬಹುಪಾಲು ಸದಸ್ಯರು ಖಾಸಗಿ ಆಸ್ಪತ್ರೆಗಳ ಒಕ್ಕೂಟ, ವೈದ್ಯರ ಒಕ್ಕೂಟ ಹಾಗೂ ಖಾಸಗಿ ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳಾಗಿದ್ದರು. ಬಡ ಮಹಿಳೆಯರು, ಕಾರ್ಮಿಕರು, ರೈತರು, ಲೈಂಗಿಕ ಅಲ್ಪಸಂಖ್ಯಾತರು, ದಲಿತ ಹಾಗೂ ಬುಡಕಟ್ಟು ಸಮುದಾಯ ಮುಂತಾಗಿ ಸಾಮಾನ್ಯ ನಾಗರಿಕರನ್ನು  ಪ್ರತಿನಿಧಿಸಲು ಒಂದೇ ಒಂದು ಸಂಘಟನೆಯ ಪ್ರತಿನಿಧಿ ಇದ್ದುದು ವಿಪರ್ಯಾಸ.

ತಜ್ಞರ ಸಮಿತಿಯಲ್ಲಿ ಬಹುಸಂಖ್ಯೆಯಲ್ಲಿದ್ದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಈ ಕಾಯ್ದೆಯಡಿ ಸರ್ಕಾರಿ ಆಸ್ಪತ್ರೆಗಳನ್ನೂ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು. ತಮ್ಮ ಲಾಭಕೋರತನಕ್ಕೆ ಕಡಿವಾಣ ಹಾಕಲು ಬಿಡಲಿಲ್ಲ. ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಅನುದಾನವನ್ನೂ ಕಬಳಿಸುವ  ಪ್ರಸ್ತಾವವೊಂದನ್ನು ಭಾರತೀಯ ವೈದ್ಯಕೀಯ ಸಂಸ್ಥೆ (ಐ.ಎಂ.ಎ) ಮುಂದೆಮಾಡಿತು.

ಕಾಯ್ದೆಯ ಅನುಷ್ಠಾನದ ವ್ಯವಸ್ಥೆಯಲ್ಲಿ ಸರ್ಕಾರಿ ಪ್ರತಿನಿಧಿಗಳಿರಬಾರದು, ಖಾಸಗಿ ಆಸ್ಪತ್ರೆಗಳ ಮೇಲೆ ದರ ನಿಯಂತ್ರಣ ಹೇರಬಾರದು, ಖಾಸಗಿ ಆಸ್ಪತ್ರೆಗಳು ಪಡೆಯಬೇಕಾದ ವ್ಯಾಪಾರ ಪರವಾನಗಿ ವ್ಯವಸ್ಥೆಯನ್ನು ರದ್ದುಮಾಡಬೇಕು,  ಪರವಾನಗಿ ಪಡೆದ ಎಲ್ಲಾ ಆಸ್ಪತ್ರೆಗಳನ್ನು ಸರ್ಕಾರಿ ವಿಮಾ ಯೋಜನೆಗಳ ವ್ಯಾಪ್ತಿಗೆ ತರಬೇಕು, ಕಾಯ್ದೆಯಲ್ಲಿ ಜೈಲು ಶಿಕ್ಷೆಯ ಕಲಮು ಇರಬಾರದು ಎಂದು ವಾದಿಸಿದರು.

ಪಶ್ಚಿಮ ಬಂಗಾಳದಲ್ಲಿ ಇದೇ ವರ್ಷದ  ಮಾರ್ಚ್‌ನಲ್ಲಿ  ಜಾರಿಗೆ ಬಂದ ಜನಪರ ಕಾಯ್ದೆಯ ಯಾವುದೇ ಅಂಶವನ್ನು ಅಳವಡಿಸಲು ತಜ್ಞರ ಸಮಿತಿಯ ಖಾಸಗಿ ವೈದ್ಯರು ನಿರಾಕರಿಸಿದರು.  

ಏಪ್ರಿಲ್ 18ರಂದು ನಡೆದ ಸಮಿತಿಯ ಅಂತಿಮ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಮೇಲಿನ  ನಿಯಂತ್ರಣ ಬಲಗೊಳಿಸುವ ಸಲಹೆಗಳನ್ನು ತಜ್ಞರ ಸಮಿತಿ ತಿರಸ್ಕರಿಸಿತು. ಬದಲಿಗೆ, ಈ ಕಾಯ್ದೆಯ ವ್ಯಾಪ್ತಿಯಲ್ಲೇ ಇಲ್ಲದ ಸರ್ಕಾರಿ ಆಸ್ಪತ್ರೆಗಳನ್ನೂ ಈ ಕಾಯ್ದೆಯಡಿ ತರಬೇಕು ಎಂದು ಶಿಫಾರಸು ಮಾಡಿತು.

ಅನುದಾನದ ಕೊರತೆಯ ಕಾರಣ, ರೋಗಿಗಳಿಗೆ ಪೂರ್ಣ ಪ್ರಮಾಣದ ಸೇವೆ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಈ ಕಾಯ್ದೆ ವ್ಯಾಪ್ತಿಗೆ ತಂದರೆ ಏನಾಗಬಹುದು ಎಂದು ಹೇಳಬೇಕಿಲ್ಲ.

ಮಕ್ಕಳ ಕೊರತೆ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚಿದಂತೆ, ಕಾಯ್ದೆಯಲ್ಲಿ ಉಲ್ಲೇಖಿಸಿರುವ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂಬ ನೆಪ ಹೇಳಿ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಲು ಅಥವಾ ಅವುಗಳನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸಬಹುದು.

ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲೂ ಉತ್ತರದಾಯಿತ್ವ ಹೆಚ್ಚಿಸಬೇಕಾದ ಅಗತ್ಯ ಇದೆ. ಆದರೆ ಖಾಸಗಿ ಆಸ್ಪತ್ರೆಗಳನ್ನು ಮತ್ತು ಸರ್ಕಾರಿ ವ್ಯವಸ್ಥೆಯನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗದು. ಸರ್ಕಾರಿ  ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ತದ್ವಿರುದ್ಧ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತವೆ.

ಕಡಿಮೆ ವೆಚ್ಚದಲ್ಲಿ ಜನರಿಗೆ ಆರೋಗ್ಯ ಸೇವೆ ನೀಡುವುದು ಸರ್ಕಾರಿ ಆಸ್ಪತ್ರೆಗಳ ಗುರಿ. ಜೊತೆಗೆ ರೋಗ ತಡೆಗಟ್ಟುವಿಕೆ, ಆರೋಗ್ಯ ವರ್ಧನೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮುಂತಾದ ಜವಾಬ್ದಾರಿಗಳನ್ನು ಸಹ ಒಳಗೊಂಡಿರುತ್ತದೆ. ಇದಕ್ಕಿಂತ ಮುಖ್ಯವಾಗಿ ಸರ್ಕಾರಿ ವ್ಯವಸ್ಥೆ ಆರೋಗ್ಯ ಸಚಿವಾಲಯದ ಮೇಲ್ವಿಚಾರಣೆ ಮತ್ತು ಶಾಸಕಾಂಗದ ನಿಯಂತ್ರಣಕ್ಕೆ ಒಳಪಟ್ಟಿದೆ. ಆದರೆ ಖಾಸಗಿ ವೈದ್ಯಕೀಯ ವಲಯದ ನಿಯಂತ್ರಣಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆಗಳ ಉತ್ತರದಾಯಿತ್ವವನ್ನು ಹೆಚ್ಚಿಸುವ ಪ್ರತ್ಯೇಕ ಕಾಯ್ದೆಯನ್ನು ರೂಪಿಸುವುದು ಅತ್ಯಗತ್ಯ.

ಖಾಸಗಿ ಆಸ್ಪತ್ರೆಗಳಿಂದ ಎಷ್ಟೇ ಘೋರ ಉಲ್ಲಂಘನೆ, ಅನ್ಯಾಯ, ಸುಲಿಗೆ ನಡೆದರೂ ಯಾವುದೇ ಕಾನೂನು ಅವರಿಗೆ ತಟ್ಟುವುದಿಲ್ಲ ಎಂಬುದು ಜನಸಾಮಾನ್ಯರ ಅನುಭವಕ್ಕೆ ಬಂದಿದೆ. ಇದರಿಂದಾಗಿ ಅವರ ಅಸಹಾಯಕತೆ ಮತ್ತು ಹತಾಶೆ ಮಿತಿ ಮೀರಿ ಹೋಗುತ್ತಿದೆ.

ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು ಖಂಡನೀಯ. ಆದರೆ ಅವನ್ನು ತಡೆಯಲು ವೈದ್ಯರಿಗೆ ಭದ್ರತೆ ನೀಡುವುದೊಂದೇ ದಾರಿಯಲ್ಲ. ಖಾಸಗಿ ಆರೋಗ್ಯ ವಲಯದ ಉತ್ತರದಾಯಿತ್ವವನ್ನು ಹೆಚ್ಚಿಸಬೇಕು. ಅಲ್ಲಿ ನಡೆಯುವ ಉಲ್ಲಂಘನೆಗಳಿಗೆ ಶೀಘ್ರ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು.

ಸುಲಿಗೆಗೆ ಕಡಿವಾಣ ಹಾಕಬೇಕು, ವೈಜ್ಞಾನಿಕವಾದ ವೈದ್ಯಕೀಯ ಮಾನದಂಡಗಳ ಪಾಲನೆಯನ್ನು ಖಾತ್ರಿಗೊಳಿಸುವ ದಕ್ಷ ಮೇಲ್ವಿಚಾರಣಾ ವ್ಯವಸ್ಥೆ ಇರಬೇಕು. ಇಂತಹ ಕ್ರಮಗಳಿಂದ ತಮಗೆ ರಕ್ಷಣೆ ಇದೆ ಎಂಬ ಭರವಸೆ ಜನರಲ್ಲಿ ಮೂಡಿದರೆ, ಅವರ ಅತಿರೇಕದ ಪ್ರತಿಕ್ರಿಯೆಗಳು ನಿಲ್ಲಬಹುದು. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ರೂಪಿಸಿರುವ  ಕಾಯ್ದೆ ಕರ್ನಾಟಕಕ್ಕೆ ಮಾದರಿಯಾಗಬೇಕಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮುಂದೆಯೂ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಮಾತ್ರ ಒಳಗೊಂಡು, ತಿದ್ದುಪಡಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂರಕ್ಷಣೆಯನ್ನು ಖಾತ್ರಿಗೊಳಿಸಿದರೆ ಮಾತ್ರ ನಿರ್ಲಕ್ಷ್ಯದಿಂದ ಸಂಕಷ್ಟ ಅನುಭವಿಸಿದವರಿಗೆ ನ್ಯಾಯ ಒದಗಿಸಿದಂತಾಗುತ್ತದೆ.

ವಿಜಯಕುಮಾರ ಸೀತಪ್ಪ, ವಿನಯ್ ಶ್ರೀನಿವಾಸ, ಅಖಿಲಾ, ಇ. ಪ್ರೇಮ್‌ದಾಸ್ ಪಿಂಟೋ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry