ಠಾಣೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ಕಾಂಗ್ರೆಸ್‌ ಶಾಸಕಿ ವಿರುದ್ಧ ಪ್ರಕರಣ

7

ಠಾಣೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ಕಾಂಗ್ರೆಸ್‌ ಶಾಸಕಿ ವಿರುದ್ಧ ಪ್ರಕರಣ

Published:
Updated:
ಠಾಣೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ಕಾಂಗ್ರೆಸ್‌ ಶಾಸಕಿ ವಿರುದ್ಧ ಪ್ರಕರಣ

ಶಿವಪುರಿ (ಮಧ್ಯಪ್ರದೇಶ):  ಮಧ್ಯಪ್ರದೇಶದಲ್ಲಿ ರೈತರು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ ಆರೋಪದಲ್ಲಿ ಕಾಂಗ್ರೆಸ್‌ ಶಾಸಕಿ ಶಕುಂತಳಾ ಖಟಿಕ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚುವಂತೆ ಖಟಿಕ್‌ ಅವರು ಉತ್ತೇಜಿಸುತ್ತಿದ್ದರು ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲ ತಾಣದಲ್ಲಿ ಇತ್ತೀಚೆಗೆ ಪ್ರಸಾರವಾಗಿತ್ತು.

ಮಂದ್‌ಸೌರ್‌ನಲ್ಲಿ ನಡೆದ ಪೊಲೀಸ್‌ ಗುಂಡು ಹಾರಾಟದಲ್ಲಿ ರೈತರ ಹತ್ಯೆಯನ್ನು ಖಂಡಿಸಿ ಕರೇರ ಪೊಲೀಸ್‌ ಠಾಣೆಯ ಹೊರಭಾಗದಲ್ಲಿ ಖಟಿಕ್‌ ಅವರ ನೇತೃತ್ವದಲ್ಲಿ ಇದೇ 8ರಂದು ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಠಾಣೆಗೆ ಬೆಂಕಿ ಹಚ್ಚುವಂತೆ ಪ್ರತಿಭಟನಾಕಾರರಿಗೆ ಖಟಿಕ್‌ ಪ್ರಚೋದನೆ ನೀಡಿದ್ದರು ಎಂದು ಹೇಳಲಾಗಿದೆ. ಖಟಿಕ್‌ ಅವರು ಶಿವಪುರಿ ಜಿಲ್ಲೆಯ ಕರೇರಾ ಕ್ಷೇತ್ರದ ಶಾಸಕಿ.

ಕಟಿಕ್‌, ಬ್ಲಾಕ್‌ ಕಾಂಗ್ರೆಸ್‌ ಮುಖ್ಯಸ್ಥ ವೀನಸ್‌ ಗೋಯಲ್‌  ಮತ್ತು ಇತರರ ವಿರುದ್ಧ ಮಂಗಳವಾರ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕರೇರಾ ಉಪವಿಭಾಗೀಯ ಪೊಲೀಸ್‌ ಮುಖ್ಯಸ್ಥ ಅನುರಾಗ್‌ ಸುಜಾನಿಯಾ ತಿಳಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಅವರ ಪ್ರತಿಕೃತಿಯನ್ನು ಸುಟ್ಟು ಪ್ರತಿಭಟನೆ ನಡೆಸಲಾಗಿತ್ತು. ಬೆಂಕಿ ನಂದಿಸುವುದಕ್ಕಾಗಿ ಉರಿಯುತ್ತಿದ್ದ ಪ್ರತಿಕೃತಿಗೆ ಪೊಲೀಸರು ನೀರು ಸುರಿದಿದ್ದರು. ನೀರು ಸುರಿಯುವಾಗ ಪಕ್ಕದ್ದಲೇ ಇದ್ದ ಕಟಿಕ್‌ ಅವರೂ ತೊಯ್ದಿದ್ದರು.

ಇದರಿಂದ ಕೋಪಗೊಂಡ ಅವರು ತಮ್ಮ ಬೆಂಬಲಿಗರೊಂದಿಗೆ ಪೊಲೀಸ್‌ ಠಾಣೆಯ ಮುಂದೆ ಧರಣಿ ನಡೆಸಿದ್ದರು. ಧರಣಿಯ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲಿ ಅವರು ಠಾಣೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿರುವುದಾಗಿ ದಾಖಲಾಗಿದೆ ಎಂದು ಹೇಳಲಾಗಿದೆ.

ಈ ತಿಂಗಳ ಒಂದರಂದು ಆರಂಭಗೊಂಡ ರೈತರ ಪ್ರತಿಭಟನೆ ಆರರಂದು ಹಿಂಸೆಗೆ ತಿರುಗಿತ್ತು. ಮಂದ್‌ಸೌರ್‌ ಜಿಲ್ಲೆಯಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಐದು ರೈತರು ಬಲಿಯಾಗಿದ್ದರು.

****

ಒಂದೇ ದಿನ ಮೂರು ರೈತರ ಆತ್ಮಹತ್ಯೆ

ಮಧ್ಯಪ್ರದೇಶದಲ್ಲಿ ಮಂಗಳವಾರ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ವಾರದ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಐದಕ್ಕೆ ಏರಿದೆ.

ರೈತರ ಸಂಕಷ್ಟ ಪರಿಹಾರಕ್ಕೆ ಸರ್ಕಾರ ಹಲವು ಕ್ರಮ ಕೈಗೊಂಡ ಕೆಲವೇ ದಿನಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಆತ್ಮಹತ್ಯೆಗೆ ಶರಣಾದ  ಮೂವರಲ್ಲಿ ಒಬ್ಬರು ಮುಖ್ಯಮಂತ್ರಿಯ ತವರು ಜಿಲ್ಲೆ ಸೆಹೋರ್‌ನವರು.

****

ಹಾರ್ದಿಕ್‌ ಬಂಧನ, ಬಿಡುಗಡೆ

ಪೊಲೀಸ್‌ ಗುಂಡಿಗೆ ಬಲಿಯಾದ ರೈತರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಮಂದ್‌ಸೌರ್‌ಗೆ ಹೊರಟಿದ್ದ ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟದ ಮುಖಂಡ ಹಾರ್ದಿಕ್‌ ಪಟೇಲ್‌ ಅವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಅವರ ಜತೆಗಿದ್ದ ಜೆಡಿಯು ಮುಖಂಡ ಅಖಿಲೇಶ್‌ ಕಟಿಯಾರ್‌ ಅವರನ್ನೂ ಬಂಧಿಸಲಾಗಿತ್ತು. ನಂತರ ಇಬ್ಬರನ್ನೂ ಜಾಮೀನಿನಲ್ಲಿ ಬಿಡುಗಡೆ ಮಾಡಿ ಪೊಲೀಸ್‌ ವಾಹನದಲ್ಲಿಯೇ ಕರೆದೊಯ್ದು ಮಧ್ಯಪ್ರದೇಶ ಗಡಿಯ ಹೊರಗೆ ಬಿಡಲಾಯಿತು.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಾರ್ದಿಕ್‌ ಅವರು, ‘ನಾನು ಭಯೋತ್ಪಾದಕ ಅಲ್ಲ, ನಾನು ಲಾಹೋರ್‌ನಿಂದ ಬಂದವನೂ ಅಲ್ಲ. ಭಾರತೀಯನಾಗಿರುವ ನನಗೆ ದೇಶದಲ್ಲಿ ಎಲ್ಲಿ ಬೇಕಿದ್ದರೂ ಹೋಗುವ ಸ್ವಾತಂತ್ರ್ಯ ಇದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry