ರಾಜೀನಾಮೆ ಕೇಳಲು ಕಾಂಗ್ರೆಸ್‌ನವರು ಯಾರು?

7

ರಾಜೀನಾಮೆ ಕೇಳಲು ಕಾಂಗ್ರೆಸ್‌ನವರು ಯಾರು?

Published:
Updated:
ರಾಜೀನಾಮೆ ಕೇಳಲು ಕಾಂಗ್ರೆಸ್‌ನವರು ಯಾರು?

ಬೆಂಗಳೂರು: ‘ನನ್ನನ್ನು ಸಭಾಪತಿ ಮಾಡಿದ್ದು ಬಿಜೆಪಿ ಮತ್ತು ಜೆಡಿಎಸ್‌ನವರು. ಈಗ ರಾಜೀನಾಮೆ ಕೇಳಲು ಕಾಂಗ್ರೆಸ್‌ನವರು ಯಾರು’ ಎಂದು ಶಂಕರಮೂರ್ತಿ ಕಿಡಿಕಾರಿದರು.

ಭೋಜನ ವಿರಾಮಕ್ಕಾಗಿ ಸದನವನ್ನು ಮುಂದೂಡಿದ ಬಳಿಕ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ವಿ.ಎಸ್. ಉಗ್ರಪ್ಪ ಮತ್ತು ಅವರ ಗುಂಪಿನಿಂದ ನಾನು ಸಭಾಪತಿ ಆಗಿಲ್ಲ. ಹತ್ತು ಮಂದಿ ನಿಂತು ಯಾವುದೇ ಕಾರಣ ಇಲ್ಲದೆ, ನೀವು ಸರಿಯಿಲ್ಲ. ಸಭಾಪತಿ ಸ್ಥಾನ ತ್ಯಜಿಸಿ ಎಂದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಈ ಹಿಂದೆ ಯಾವ ಸಭಾಪತಿ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸಿದ ಉದಾಹರಣೆ ಇಲ್ಲ’ ಎಂದರು.

‘ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್‌ ನೀಡಿದ 14 ದಿನದ ಬಳಿಕ ಸದನದಲ್ಲಿ ಮಂಡಿಸಲು ಅವಕಾಶ ನೀಡಬಹುದು ಅಥವಾ ನೀಡದಿರಬಹುದು. ಆದರೆ, ನಾನು ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಳ್ಳದೆ ನಿಗದಿತ ಅವಧಿ ಮುಗಿದ ಮರುದಿನವೇ ಮಂಡನೆಗೆ ಅವಕಾಶ ನೀಡಿದ್ದೇನೆ. ನಿಯಮಗಳ ಪ್ರಕಾರ ಐದು ದಿನದೊಳಗೆ ಚರ್ಚೆಗೂ ಅವಕಾಶ ನೀಡುತ್ತೇನೆ’ ಎಂದು ಅವರು ವಿವರಿಸಿದರು.

ಜೆಡಿಎಸ್‌ ಬೆಂಬಲ: ಸಭಾಪತಿ ಸ್ಥಾನದಲ್ಲಿ ಶಂಕರಮೂರ್ತಿ  ಮುಂದುವರಿಯಲು ಬೆಂಬಲ ನೀಡುವುದಾಗಿ ಜೆಡಿಎಸ್‌ ನಿರ್ಧರಿಸಿದ್ದಾರೆ. ಮಂಗಳವಾರ ರಾತ್ರಿ ಪಕ್ಷದ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಈ ಸಂಬಂಧ ವಿಧಾನಪರಿಷತ್‌ ಸದಸ್ಯರ ಜೊತೆ ಸಭೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದರು. ಆದರೆ, ಅಂತಿಮ ನಿರ್ಣಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತೆಗೆದುಕೊಳ್ಳಲಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

‘ಬಿಬಿಎಂಪಿಯಲ್ಲಿ  ನಮ್ಮ ಸದಸ್ಯರಿಗೆ ಕಾಂಗ್ರೆಸ್‌ನವರು ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿಯ ಬಗ್ಗೆಯೂ ವಿರೋಧ ಇದೆ’ ಎಂದು ಪರಿಷತ್‌ ಸದಸ್ಯ ಟಿ.ಎ.ಶರವಣ ತಿಳಿಸಿದರು.

****

ನಾಲಿಗೆ ಕಚ್ಚಿಕೊಂಡ ಶಂಕರಮೂರ್ತಿ

ಶಂಕರಮೂರ್ತಿ ಅವರು ತಮ್ಮ ಕೊಠಡಿಯಲ್ಲಿ ಮಂಗಳವಾರ ಸಂಜೆ  ಲಘು ಉಪಾಹಾರ ತಿನ್ನುವಾಗ ನಾಲಿಗೆ ಕಚ್ಚಿಕೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ಪರಿಷತ್ತಿನ ಕೆಲ ಸದಸ್ಯರ ಜೊತೆ ಮಾತನಾಡುತ್ತಾ ಚೌಚೌಬಾತ್ ತಿನ್ನುವಾಗ ನಾಲಿಗೆ ಕಡಿದುಕೊಂಡು ರಕ್ತಸ್ರಾವ ಆಯಿತು. ವಿಧಾನಸೌಧದ ವೈದ್ಯರನ್ನು ಕರೆದು ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಅವರು ನಿಯಮಿತವಾಗಿ ಚಿಕಿತ್ಸೆ ಪಡೆಯುವ ವಿಕ್ರಂ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿ ಮಾಡಿದರು. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರೂ ತಿಳಿಸಿದ್ದಾರೆ’ ಎಂದು ಅವರ ಆಪ್ತ ಸಿಬ್ಬಂದಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry