ವಾಹನಗಳ ಮೇಲೆ ನಾಮಫಲಕ ಹಾಕಿಕೊಳ್ಳಲು ಅವಕಾಶವಿದೆಯೇ? ಶಾಸಕ ಸುರೇಶ್‌ ಕುಮಾರ್ ಪ್ರಶ್ನೆ

7

ವಾಹನಗಳ ಮೇಲೆ ನಾಮಫಲಕ ಹಾಕಿಕೊಳ್ಳಲು ಅವಕಾಶವಿದೆಯೇ? ಶಾಸಕ ಸುರೇಶ್‌ ಕುಮಾರ್ ಪ್ರಶ್ನೆ

Published:
Updated:
ವಾಹನಗಳ ಮೇಲೆ ನಾಮಫಲಕ ಹಾಕಿಕೊಳ್ಳಲು ಅವಕಾಶವಿದೆಯೇ? ಶಾಸಕ ಸುರೇಶ್‌ ಕುಮಾರ್ ಪ್ರಶ್ನೆ

ಬೆಂಗಳೂರು:  ಖಾಸಗಿ ವಾಹನಗಳ ಮೇಲೆ ಮಾನವ ಹಕ್ಕುಗಳು, ಕಾರ್ಮಿಕ ಹಕ್ಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಎಂಬ ನಾಮಫಲಕಗಳನ್ನು ಹಾಕಿ ಕೊಳ್ಳುವುದಕ್ಕೆ ಸಾರಿಗೆ ಇಲಾಖೆ ಅನುಮತಿ ಕೊಡುವುದೇ ಎಂದು  ಬಿಜೆಪಿಯ ಹಿರಿಯ ಶಾಸಕರಾದ ಎಸ್‌. ಸುರೇಶ್‌ ಕುಮಾರ್‌ ಅವರು ಸಾರಿಗೆ ಇಲಾಖೆ ಅಧಿಕಾರಿಗಳನ್ನು  ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸುರೇಶ್‌ ಕುಮಾರ್‌ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಇಂತಹ ನಾಮಫಲಕಗಳಿರುವ ಕಾರುಗಳ ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಸಾರಿಗೆ ಇಲಾಖೆಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಸುರೇಶ್‌ ಕುಮಾರ್‌ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ವಿಧಾನಸೌಧದಿಂದ ಬರುವಾಗ ಕಣ್ಣಿಗೆ ಬಿದ್ದ ಕಾರಿನ ಹಿಂದೆ ಇರುವ ಫಲಕವಿದು. ನಗು ಬಂತು. ಅಷ್ಟೇ ಪ್ರಮಾಣದಲ್ಲಿ ಸಾರಿಗೆ ಇಲಾಖೆಯ ಉದಾರ ನಿರ್ಲಕ್ಷತೆ ಕುರಿತು ತಿರಸ್ಕಾರವೂ ಬಂತು.

ಒಮ್ಮೆ ಈ ಬೋರ್ಡಿನಲ್ಲಿ ಇಂಗ್ಲಿಷಿನಲ್ಲಿ ಮತ್ತು ಹಿಂದಿಯಲ್ಲಿ ಮಾತ್ರ ಬರೆದಿರುವ ಫಲಕವನ್ನು ಗಮನಿಸಿ–"Founder & President. National Labours Human Rights Anti Corruption Forum, Delhi"

ಯಾರನ್ನೋ ಹೆದರಿಸಲು ಅಥವಾ ಎಲ್ಲೆಂದರಲ್ಲಿ ಸಲೀಸಾಗಿ ಪ್ರವೇಶ ಪಡೆಯಲು ಹಾಕಿದಂತಿದೆ ಈ ಬೋರ್ಡ್. ಸಾರಿಗೆ ಇಲಾಖೆಯಲ್ಲಿ ಇದಕ್ಕೆ ಅವಕಾಶವಿದೆಯೇ?

ಪಾಪದ ಜನರನ್ನು ದಿನದ ಕೆಲಸಕ್ಕೆ ಹೋಗುತ್ತಿರುವಾಗ/ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ದಾರಿ ದಾರಿಯಲ್ಲಿ ಹಿಡಿದು ದಂಡ ವಿಧಿಸುವ ಟ್ರಾಫಿಕ್ ಪೋಲಿಸರಿಗೆ ಅಥವಾ ಸಾರಿಗೆ ಇಲಾಖೆಯವರಿಗೆ ಇಂತಹದು ಕಾಣಿಸುವುದಿಲ್ಲವೇ? ಅಥವಾ ಇವರಿಗೆ ವಿಶೇಷ ಪರವಾನಿಗೆ ನೀಡಲಾಗಿದೆಯೇ?’ ಎಂದು ಸುರೇಶ್‌ ಕುಮಾರ್‌ ಪ್ರಶ್ನೆ ಮಾಡಿದ್ದಾರೆ.

ಸುರೇಶ್ ಕುಮಾರ್‌ ಅವರು ಪ್ರಕಟಿಸಿದ ಈ ಪೋಸ್ಟ್‌ಗೆ ಸಾರ್ವಜನಿಕರಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು  ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ನಗರ ಸಂಚಾರ ಪೊಲೀಸರ ವಿರುದ್ಧ  ಟೀಕೆಗಳು ಕೇಳಿ ಬಂದಿವೆ.

ಸುರೇಶ್‌ ಕುಮಾರ್‌ ಫೋಟೊ ಹಾಕಿ ಪ್ರಕಟಿಸಿದ್ದ ಕಾರು ಬೆಂಗಳೂರಿನ ಮೊಹನ್‌ ರಾಜ್‌ ಒಡೆಯರ್‌ ಎಂಬುವರಿಗೆ ಸೇರಿದೆ. ಅವರು ರಾಷ್ಟ್ರೀಯ ಕಾರ್ಮಿಕರ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ಸುರೇಶ್‌ ಕುಮಾರ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮೊಹನ್‌ ರಾಜ್‌ ಒಡೆಯರ್‌  ‘ಸಾರ್‌ ನಾವು ಮಾತ್ರ ಈ ರೀತಿಯ ನಾಮಫಲಕಗಳನ್ನು ಹಾಕಿಕೊಂಡಿಲ್ಲ, ನಿಮ್ಮ  ಪಕ್ಷದವರು ಮತ್ತು ವಿರೋಧ ಪಕ್ಷದ ಶಾಸಕರು ಹಾಗೂ ಬಿಬಿಎಂಪಿ ಪಾಲಿಕೆಯ ಸದಸ್ಯರು ಕೂಡ ನಾಮಫಲಕಗಳನ್ನು ಹಾಕಿಕೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ ’ಎಂದಿದ್ದಾರೆ.

ಮೊಹನ್‌ ರಾಜ್‌ ಒಡೆಯರ್‌ ಅವರ  ಪ್ರತಿಕ್ರಿಯೆಗೆ ಉತ್ತರಿಸಿರುವ  ಸುರೇಶ್‌ ಕುಮಾರ್‌, ಮೋಹನ್‌ ರಾಜ್‌ ಅವರೇ, ನಾನು ನಿಮ್ಮನ್ನು ಪ್ರಶ್ನೆ ಮಾಡುತ್ತಿಲ್ಲ, ನನಗೆ ಕೋಪ ಇರುವುದು ನಗರ ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಮೇಲೆ. ನಾನು ಅವರಿಂದ ಉತ್ತರವನ್ನು ನಿರೀಕ್ಷಿಸುತ್ತಿದ್ದೆನೆ.  ನೀವು ಯಾರು ಎಂಬುದೇ ನನಗೆ ಗೊತ್ತಿಲ್ಲ.  ನಮ್ಮ ಪಕ್ಷದ ಶಾಸಕರು ಮತ್ತು ಪಾಲಿಕೆ ಸದಸ್ಯರು ಈ ರೀತಿ ನಾಮಫಲಕಗಳನ್ನು ಹಾಕಿಕೊಂಡಿದ್ದರೆ ಸಂಬಂಧಪಟ್ಟ ಇಲಾಖೆಯವರು ಅವರ ವಿರುದ್ಧವು  ಕ್ರಮ ಕೈಗೊಳ್ಳಬೇಕು’ ಎಂದು ಸುರೇಶ್‌  ಕುಮಾರ್‌ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಪ್ರದೀಪ್‌ ಪೈ ಎಚ್‌ ಎಂಬುವರು ‘ಕಾರ್ಯದರ್ಶಿಗಳು ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗ’ ಎಂಬ ನಾಮಫಲಕ ಇರುವ ವಾಹನದ ಚಿತ್ರವನ್ನು ಪೊಸ್ಟ್‌ ಮಾಡಿದ್ದು ಇಂತಹ ಹಲವಾರು ವಾಹನಗಳು ಕಾಣಸಿಗುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲವರು ಕನ್ನಡಪರ ಸಂಘಟನೆಗಳು ಇದೇ ರೀತಿಯ ನಾಮಫಲಕಗಳನ್ನು ಹಾಕಿಕೊಂಡಿರುತ್ತಾರೆ ಅವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಕೆಲವರು ಮಾಜಿ ಶಾಸಕರು, ಮಾಜಿ ಮಂತ್ರಿಗಳು, ಸಮುದಾಯಗಳ ಮುಖಂಡರು, ಸ್ವಾಮೀಜಿಗಳು ಕೂಡ ನಾಮಫಲಕಗಳನ್ನು ಹಾಕಿಕೊಂಡಿರುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಕೆಲವು ಕಮೆಂಟ್‌ಗಳು

ವಿನಯ್‌ ದಾಸನವುಡಿಲು:  ‘ಈ ಪೊಲೀಸರು ಎಷ್ಟು ಕೆಟ್ಟವರೆಂದರೆ ಸಾರ್ವಜನಿಕರ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದವರು. ಯಾರದೇ ವಾಹನ ಅಡ್ಡಗಟ್ಟಿದರೂ ಸರಿ, ಏರು ದನಿಯಲ್ಲಿ, ಏಕವಚನದಲ್ಲೇ ಮಾತನಾಡಿಸುತ್ತಾರೆ. ಇವರಿಗೆ ಖಾಕಿ ಕೊಟ್ಟಿರುವುದೇ ದರ್ಪ ಮೆರೆಯಲಿಕ್ಕೆ ಎಂದು ಸ್ವಯಂ ಘೋಷಿಸಿಕೊಂಡಂತಿರುತ್ತದೆ ಪೊಲೀಸರ ವರ್ತನೆ ಎಂದು ಬರೆದಿದ್ದಾರೆ.

ಲಯನ್‌ ಸಾಗರ್ ಎಂಕೆ:  ಕಳ್ಳ ಖದೀಮರು ಕಾರುಗಳು ಮಾತ್ರವೇ ಈ ರೀತಿ ಇರುತ್ತದೆ, ಕೆಲ So Called ಕನ್ನಡ ಸಂಘಟನೆಯ ಕಾರ್ಯಕರ್ತರ ತಮ್ಮ ಕಾರಿನ ಕೂಲಿಂಗ್ ಪೇಪರ್ "ಟ್ರಾಫಿಕ್ ಪೊಲೀಸ್ರ ಕಣ್ಣಿಗೆ ಕಾಣುವುದಿಲ್ಲ"

ವೇಣು ಗೋಪಾಲ: ಇದಷ್ಟೇ ಅಲ್ಲಾ ಕೆಲವರು ಸುಮ್ಮನೇ ಪಂಚಾಯ್ತಿ ಸದಸ್ಯರು - ಮಾಜಿ ತಾಲ್ಲೂಕು ಅಧ್ಯಕ್ಷ ಮತ್ಯಾವುದೋ ಸಂಘಟನೆಯ ಹೆಸರಿನಲ್ಲಿ ಬೋರ್ಡ್ ಹಾಕಿಕೊಂಡು ಒಡಾಡೋದು ನೋಡಿ ನಾಮಪಲಕದ ಮೇಲಿನ ಹಸಿರು ಪಟ್ಟಿಗೆ ಇದೇಂತ ಮರ್ಯಾದೆ ಅನ್ನೋ ಸಂಶಯ ಕಾಡುತ್ತೆ.

ಜಾನ್ ಮಥಾಯಿಸ್‌:  ರಾಜ್ಯದಲ್ಲಿ ಹಲವಾರು ಮಂದಿ ಈ ರೀತಿಯ ಫಲಕಗಳನ್ನು ಹಾಕಿಕೊಂಡು ಮಂಕು ಬೂದಿ ಎರಚುತ್ತಿದ್ದಾರೆ. ಸಾರಿಗೆ ಹಾಗೂ ಪೋಲೀಸ್ ಇಲಾಖೆ ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry