ಸುಲಿಗೆ ಮಾಡಿದರೆ ₹5 ಲಕ್ಷ ದಂಡ, 3 ವರ್ಷ ಜೈಲು!

7
ವಿಧಾನಸಭೆಯಲ್ಲಿ ‘ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)’ ಮಸೂದೆ ಮಂಡಿಸಿದ ಸಚಿವ ರಮೇಶ್‌ ಕುಮಾರ್‌

ಸುಲಿಗೆ ಮಾಡಿದರೆ ₹5 ಲಕ್ಷ ದಂಡ, 3 ವರ್ಷ ಜೈಲು!

Published:
Updated:
ಸುಲಿಗೆ ಮಾಡಿದರೆ ₹5 ಲಕ್ಷ ದಂಡ, 3 ವರ್ಷ ಜೈಲು!

ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳು ರಾಜ್ಯ ಸರ್ಕಾರ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತ ಹೆಚ್ಚು ವಸೂಲು ಮಾಡಿದರೆ ₹ 25 ಸಾವಿರದಿಂದ ₹ 5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಒದಗಿಸುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)–2017’ ಮಸೂದೆಯನ್ನು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

ಹೆಚ್ಚು ದರ ವಸೂಲು ಮಾಡುವ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರಿಗೆ ಆರು ತಿಂಗಳಿನಿಂದ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಈ ಮಸೂದೆ ಅವಕಾಶ ನೀಡಲಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ರೋಗಿಗಳ ಸುಲಿಗೆ ಪ್ರವೃತ್ತಿಗೆ ಕಡಿವಾಣ ಹಾಕಲು ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ– 2007’ಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಈ ಮಸೂದೆ ಮಂಡಿಸಿದೆ.

ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ನೇತೃತ್ವದ ಸಮಿತಿ ನೀಡಿದ ವರದಿ ಆಧರಿಸಿ ಈ ಮಸೂದೆ ಸಿದ್ಧಪಡಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಪ್ರತಿಯೊಂದು ಚಿಕಿತ್ಸೆಗೂ ರಾಜ್ಯ ಸರ್ಕಾರವೇ ದರ ನಿಗದಿಪಡಿಸಲಿದೆ. ವೈದ್ಯಕೀಯ ಸಂಸ್ಥೆಗಳನ್ನು ವರ್ಗೀಕರಿಸಿ, ಆರೋಗ್ಯ ಸೇವೆ ಅಥವಾ ಚಿಕಿತ್ಸೆ ವೆಚ್ಚವನ್ನು ತಜ್ಞರ ಸಮಿತಿ ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಅದರ ಆಧಾರದಲ್ಲಿ ಸರ್ಕಾರ ಚಿಕಿತ್ಸಾ ದರ ನಿರ್ಧರಿಸಲಿದೆ ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ರೋಗಿಗಳ ಕುಂದುಕೊರತೆ ಪರಿಹರಿಸಲು ಜಿಲ್ಲಾ ಅಥವಾ ಮಹಾನಗರ ಕುಂದುಕೊರತೆ ಪರಿಹಾರ ಸಮಿತಿ ರಚಿಸಲು ಮತ್ತು  ನೋಂದಣಿ ಪ್ರಾಧಿಕಾರ ಪುನರ್‌ರಚಿಸಲು ಅವಕಾಶ ಇದೆ.

ನೋಂದಣಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಆರೋಗ್ಯ ಅಧಿಕಾರಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಆಯುಷ್‌ ಅಧಿಕಾರಿ ಮತ್ತು  ಪ್ರಾಧಿಕಾರದ ಅಧ್ಯಕ್ಷರು ನಾಮ ನಿರ್ದೇಶನ ಮಾಡಿದ ಆಧುನಿಕ ವೈದ್ಯಕೀಯ ಮತ್ತು ಇತರ ವೈದ್ಯಕೀಯ ಪದ್ಧತಿಗಳನ್ನು ಪ್ರತಿನಿಧಿಸುವ ಮಾನ್ಯತೆ ಪಡೆದ ಸಂಘದ ಇಬ್ಬರು ಸದಸ್ಯರಾಗಿರುತ್ತಾರೆ.

ಕುಂದುಕೊರತೆ ಪರಿಹಾರ ಸಮಿತಿಗೆ ಸಿವಿಲ್‌ ನ್ಯಾಯಾಲಯದ ಅಧಿಕಾರ ನೀಡಲಾಗಿದೆ. ಯಾವುದೇ ಸಮಸ್ಯೆ ಸಮಿತಿಯ ಗಮನಕ್ಕೆ ಬಂದರೆ ನೋಂದಣಿ ಪ್ರಾಧಿಕಾರಕ್ಕೆ ಅಥವಾ ಖಾಸಗಿ ವೈದ್ಯಕೀಯ ಸಂಸ್ಥೆಯ ವ್ಯವಸ್ಥಾಪಕರಿಗೆ ಮತ್ತು ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ಪರಿಹಾರ ನೀಡುವಂತೆ ಆದೇಶ ನೀಡುವ ಕಾನೂನಾತ್ಮಕ ಅಧಿಕಾರವನ್ನು ಈ ಸಮಿತಿಗೆ ಒದಗಿಸಲಾಗಿದೆ.

ಖಾಸಗಿ ವೈದ್ಯಕೀಯ ರೋಗಪತ್ತೆ ಪ್ರಯೋಗಾಲಯ ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ದೂರದಲ್ಲಿರಬೇಕು. ರೋಗಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಹಕ್ಕುಗಳು ಮತ್ತು ಹೊಣೆಗಾರಿಕೆಗಳ ಸನ್ನದು ನಿರ್ದಿಷ್ಟಪಡಿಸಬೇಕು ಎಂದೂ ಮಸೂದೆಯಲ್ಲಿದೆ.

ಸರ್ಕಾರ ನಿಗದಿಪಡಿಸಿದ ದರದ ಕುರಿತು ರೋಗಿ ಅಥವಾ ರೋಗಿಯ ಸಹಾಯಕರಿಗೆ ಆರಂಭದಲ್ಲೇ ವಿವರಿಸಿ ಒಪ್ಪಿಗೆ ಪಡೆಯಬೇಕು. ಪ್ಯಾಕೇಜು ಚಿಕಿತ್ಸಾ ದರ (ತಪಾಸಣೆ, ಹಾಸಿಗೆ ದರ, ಶಸ್ತ್ರಚಿಕಿತ್ಸಾ ಕೊಠಡಿ ದರ, ತೀವ್ರ ನಿಗಾ ಘಟಕದ ದರ, ವೆಂಟಿಲೇಷನ್‌) ಕೂಡಾ ಸರ್ಕಾರ ನಿಗದಿಪಡಿಸಿದ ದರವನ್ನು ಮೀರಬಾರದು ಎಂದೂ ಮಸೂದೆಯಲ್ಲಿ ತಿಳಿಸಲಾಗಿದೆ.

ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯಿಂದ ಅಥವಾ ರೋಗಿಯ ಪ್ರತಿನಿಧಿಯಿಂದ ಮುಂಗಡ ಹಣ ನೀಡುವಂತೆ ಒತ್ತಾಯಿಸಬಾರದು. ಯಾವುದೇ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಸಂಬಂಧಟ್ಟವರಿಗೆ  ಮೃತದೇಹ ಹಸ್ತಾಂತರಿಸುವ ಸಂದರ್ಭದಲ್ಲಿ ಬಾಕಿ ಮೊತ್ತ ತಕ್ಷಣ ನೀಡುವಂತೆ ಒತ್ತಾಯಿಸುವಂತಿಲ್ಲ. ಬಾಕಿ ಹಣವನ್ನು ನಂತರ ಸಂಗ್ರಹಿಸಬೇಕು ಎಂದೂ  ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

****

ವೈದ್ಯಾಧಿಕಾರಿ ವರ್ಗಾವಣೆ: ಮಸೂದೆ ಮಂಡನೆ

ಒಂದೇ ಸ್ಥಳದಲ್ಲಿ 10 ವರ್ಷ ಪೂರೈಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆಗೆ ಅವಕಾಶ ಒದಗಿಸುವ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ– 2011ರ ತಿದ್ದುಪಡಿ ಮಸೂದೆಯನ್ನೂ ಆರೋಗ್ಯ ಸಚಿವರು ವಿಧಾನಸಭೆಯಲ್ಲಿ ಮಂಡಿಸಿದರು.

ಈ ಮಸೂದೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ಪ್ರಮಾಣವನ್ನು ಶೇ 5ರಿಂದ 15ಕ್ಕೆ ಏರಿಸುವ ಕುರಿತೂ ಪ್ರಸ್ತಾಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry