ಕಾಂಗ್ರೆಸ್‌ಗೆ ರಾಜೀನಾಮೆ ನೀಡುವೆ: ನಂಜುಂಡಿ

7

ಕಾಂಗ್ರೆಸ್‌ಗೆ ರಾಜೀನಾಮೆ ನೀಡುವೆ: ನಂಜುಂಡಿ

Published:
Updated:
ಕಾಂಗ್ರೆಸ್‌ಗೆ ರಾಜೀನಾಮೆ ನೀಡುವೆ: ನಂಜುಂಡಿ

ಬೆಂಗಳೂರು: ‘ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದ ಕಾರಣ ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಿದ್ದೇನೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ನಂಜುಂಡಿ ತಿಳಿಸಿದರು.

ವಿಶ್ವಕರ್ಮ ಸಮಾಜದ 67 ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಕಾಳಹಸ್ತೇಂದ್ರ ಸ್ವಾಮೀಜಿ, ಗೌರವಾಧ್ಯಕ್ಷ  ಶಿವಸುಜ್ಞಾನಮೂರ್ತಿ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ನಿರ್ಧಾರವನ್ನು ತಿಳಿಸಿದರು.

‘ದೆಹಲಿಗೆ ಶೀಘ್ರದಲ್ಲೇ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡುತ್ತೇನೆ’ ಎಂದರು.

‘ನಾನು 16 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ಸಂಘಟನೆ ತೊಡಗಿದ್ದೇನೆ. ಆದರೆ, ಪಕ್ಷದ ನಾಯಕರು ನೀಡಿದ ಆಶ್ವಾಸನೆಯಂತೆ ನಡೆದುಕೊಳ್ಳಲಿಲ್ಲ. ಈ ಪಕ್ಷವನ್ನು ನಂಬಿ ನಾನು ಮೋಸ ಹೋದೆ. ಮೂರು ಬಾರಿ ವಿಧಾನ ಪರಿಷತ್‌ ಸದಸ್ಯನಾಗುವ ಅವಕಾಶ ಬಂದಿತ್ತು. ಆದರೆ, ಪಕ್ಷದ ಕೆಲ ನಾಯಕರು ವಂಚನೆ ಮಾಡಿದರು’ ಎಂದು ದೂರಿದರು.

‘ಆರು ತಿಂಗಳ ಹಿಂದೆ,  ವಿಧಾನಪರಿಷತ್‌ ಸದಸ್ಯರ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ, ಈಗ ಹೆಸರಿಲ್ಲ. ನನಗೆ ನಾಚಿಕೆ ಆಗುತ್ತಿದೆ. ನನಗೆ ವಿದ್ಯಾ ಇಲ್ವಾ? ಬುದ್ಧಿ ಇಲ್ವಾ? ಮಾತು ಬರೋದಿಲ್ವಾ? ಯಾವುದರಲ್ಲಿ ನಾನು ಕಡಿಮೆ ಇದ್ದೇನೆ? ಆದರೂ ಏಕೆ ಕೈಬಿಟ್ಟರು ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ನಾನು ಸೀನಿಯರ್. ಅವರಿಗೆ ಮಾತ್ರ ಎಲ್ಲ ಬೇಕು. ನಮ್ಮ ಸಮಾಜಕ್ಕೆ ಮಾತ್ರ ಬೇಡವೇ? ನಮ್ಮ ಸಮಾಜ ಕಾಂಗ್ರೆಸ್ ಪಕ್ಷದ ಋಣದಲ್ಲಿಲ್ಲ. ಆ ಪಕ್ಷ ನಮ್ಮ ಋಣದಲ್ಲಿದೆ’ ಎಂದರು.

‘ಸಮುದಾಯದ ಸ್ವಾಮೀಜಿಗಳು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ  ಪಕ್ಷವನ್ನು ಸೇರುತ್ತೇನೆ’ ಎಂದರು.

ಶಿವಸುಜ್ಞಾನಮೂರ್ತಿ ಸ್ವಾಮೀಜಿ ಮಾತನಾಡಿ, ‘ಸಿದ್ದರಾಮಯ್ಯ ಮಾಡಿರುವ ಈ ಮೋಸದಿಂದ  ಬಲಿಷ್ಠ ಸಮಾಜದ ಬೆಂಬಲವನ್ನು ಕಳೆದುಕೊಂಡಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry