ಶಾಲೆಗಳಿಗೆ ಶೇ 88ರಷ್ಟು ಪಠ್ಯಪುಸ್ತಕ ಪೂರೈಕೆ

7
ಬಿಇಓ ಕಚೇರಿಯಿಂದ ಪುಸ್ತಕಗಳು ಶಾಲೆಗಳಿಗೆ ಪೂರೈಕೆ,ಎರಡು ವಾರದಲ್ಲಿ ಪ್ರಕ್ರಿಯೆ ಪೂರ್ಣ

ಶಾಲೆಗಳಿಗೆ ಶೇ 88ರಷ್ಟು ಪಠ್ಯಪುಸ್ತಕ ಪೂರೈಕೆ

Published:
Updated:
ಶಾಲೆಗಳಿಗೆ ಶೇ 88ರಷ್ಟು ಪಠ್ಯಪುಸ್ತಕ ಪೂರೈಕೆ

ಬೆಂಗಳೂರು: ಒಂದರಿಂದ ಹತ್ತನೇ ತರಗತಿವರೆಗೆ  4.44 ಕೋಟಿ ಪುಸ್ತಕಗಳು ಈ ವೇಳೆಗೆ ಪೂರೈಕೆ ಆಗಬೇಕಿತ್ತು. ಆದರೆ, 3.91 ಕೋಟಿ ಪುಸ್ತಕಗಳು ಮಾತ್ರ ಸರಬರಾಜಾಗಿವೆ.

ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳಾಗಿದ್ದು, ಈ ವೇಳೆಗೆ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಬೇಕಿತ್ತು. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ ಶೇ 88ರಷ್ಟು ಪಠ್ಯಪುಸ್ತಕ ಲಭ್ಯವಾಗಿವೆ. ಇನ್ನೂ ಲಕ್ಷಾಂತರ ವಿದ್ಯಾರ್ಥಿಗಳು ಪುಸ್ತಕ ಇಲ್ಲದೆ  ಶಾಲೆಗೆ ಹೋಗುತ್ತಿದ್ದಾರೆ.

240ಕ್ಕಿಂತ ಹೆಚ್ಚಿನ ಪುಟಗಳಿರುವ ಪಠ್ಯಪುಸ್ತಕಗಳನ್ನು ಎರಡು ಭಾಗ ಮಾಡಲಾಗಿದೆ. ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ಉರ್ದು, ಸೇರಿದಂತೆ ಭಾಷಾ ವಿಷಯಗಳು 240ಕ್ಕಿಂತ ಕಡಿಮೆ ಪುಟಗಳು ಇರುವುದರಿಂದ ಒಂದೇ ಪುಸ್ತಕ ಇದೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಸ್ತಕಗಳು ಹೆಚ್ಚಿನ ಪುಟಗಳನ್ನು ಹೊಂದಿರುವುದರಿಂದ ಎರಡು ಭಾಗ ಮಾಡಲಾಗಿದೆ.

ಭಾಷಾ ವಿಷಯಗಳು ಮತ್ತು ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳ ಮೊದಲ ಭಾಗ ಸೇರಿ ಈಗಾಗಲೇ ಶೇ 97.95ರಷ್ಟು ಪಠ್ಯಪುಸ್ತಕಗಳ ಮುದ್ರಣ ಆಗಿದೆ. ಆದರೆ, ಪ್ರಕಾಶಕರು ಈ ಪುಸ್ತಕಗಳನ್ನು ತಾಲ್ಲೂಕು ಕೇಂದ್ರಗಳಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ (ಬಿಇಓ) ಇನ್ನೂ ತಲುಪಿಸಿಲ್ಲ. ಬಿಇಓ ಕಚೇರಿಯಿಂದ ಪುಸ್ತಕಗಳು ಶಾಲೆಗಳಿಗೆ ಪೂರೈಕೆ ಆಗುತ್ತವೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡು ವಾರ ಬೇಕಾಗಬಹುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಟೆಂಡರ್ ವಿಳಂಬವೂ ಕಾರಣ: ಪಠ್ಯಪುಸ್ತಕ ಪೂರೈಕೆ ತಡವಾಗಲು ಡಿಸೆಂಬರ್‌ನಲ್ಲಿ ನಡೆಸಬೇಕಿದ್ದ ಟೆಂಡರ್ ಪ್ರಕ್ರಿಯೆ ವಿಳಂಬವೂ ಕಾರಣ. ಡಿಸೆಂಬರ್‌ಗೆ ಟೆಂಡರ್ ಪ್ರಕ್ರಿಯೆ ಮುಗಿಯಬೇಕಿತ್ತು. ಆದರೆ, ಫೆಬ್ರುವರಿಯಲ್ಲಿ ಟೆಂಡರ್ ಅಂತಿಮಗೊಳಿಸಿ ಮುದ್ರಕರಿಗೆ  ಕಾರ್ಯಾದೇಶ ನೀಡಲಾಯಿತು.

ಈ ಮಧ್ಯೆ ಮುದ್ರಕರಿಗೆ ಕಾಗದದ ಕೊರತೆ ಉಂಟಾಗಿ ಪುಸ್ತಕಗಳನ್ನು ನಿಗದಿತ ಸಮಯಕ್ಕೆ ಮುದ್ರಿಸಲು ಸಾಧ್ಯವಾಗಿಲ್ಲ. ಭದ್ರಾವತಿಯ ‘ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಮತ್ತು ತಮಿಳುನಾಡು ನ್ಯೂಸ್‌ಪ್ರಿಂಟ್‌ ಅಂಡ್ ಪೇಪರ್ ಲಿಮಿಟೆಡ್ (ಟಿಎನ್‌ಪಿಎಲ್) ಮೂಲಕ ಖರೀದಿ ಮಾಡಬೇಕು ಎಂದು ಟೆಂಡರ್‌ನಲ್ಲಿ ಸೂಚಿಸಿತ್ತು.

ಆದರೆ, ಎಂಪಿಎಂ  ಉತ್ಪಾದನೆ ಸ್ಥಗಿತಗೊಳಿಸಿದೆ. ಟಿಎನ್‌ಪಿಎಲ್‌ನಿಂದ ನಿಗದಿತ ಪ್ರಮಾಣದಲ್ಲಿ ಕಾಗದ ಪೂರೈಕೆ ಆಗಿಲ್ಲ. ಬಳಿಕ ಎಲ್ಲೆಲ್ಲಿ ಕಾಗದ ಲಭ್ಯ ಇದೆಯೋ ಅಲ್ಲಿಂದ ಖರೀದಿಸುವಂತೆ ಸರ್ಕಾರದಿಂದ ಅನುಮತಿ ನೀಡಲಾಯಿತು.

ಅಧಿಕಾರಿಗಳ ನಿಯೋಜನೆ: ಪಠ್ಯಪುಸ್ತಕ ಮುದ್ರಿಸುವುದಾಗಿ ಟೆಂಡರ್ ಪಡೆದ ಮುದ್ರಕರು ನಿಗದಿತ ಪ್ರಮಾಣದಲ್ಲಿ ಮುದ್ರಣ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳ ತಂಡ ನೇಮಿಸಲಾಗಿದೆ. ಅವರು   ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು   ಇಲಾಖೆಯ  ಅಧಿಕಾರಿಯೊಬ್ಬರು ವಿವರಿಸಿದರು.

****

ಕಾಗುಣಿತ ದೋಷ ಪತ್ತೆಗೆ ತಜ್ಞರ ಸಮಿತಿ

‘ಪಠ್ಯಪುಸ್ತಕಗಳಲ್ಲಿನ ಕಾಗುಣಿತ ದೋಷ ಮತ್ತು ತಪ್ಪಾದ ಮಾಹಿತಿಗಳ ಪತ್ತೆಗೆ ವಿಷಯವಾರು ತಜ್ಞರ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹೇಳಿದರು.

ಪಠ್ಯಪುಸ್ತಕದಲ್ಲಿ ಅಲ್ಲಲ್ಲಿ ಕಾಗುಣಿತ ದೋಷ ಇರುವುದು ಕಂಡುಬಂದಿದೆ. ಒಂದು ವಿಷಯಕ್ಕೆ ಸುಮಾರು 10ರಿಂದ 15 ಪರಿಣಿತರ ತಂಡ ರಚಿಸಲಾಗಿದೆ. ಈ ವಾರದೊಳಗೆ ಅವರು ವಿವರ ಒದಗಿಸುತ್ತಾರೆ. ಬಳಿಕ ಯಾವ ಪುಸ್ತಕ, ಯಾವ ಪಾಠ, ಯಾವ ಪುಟ ಎಂಬುದರ ಸಮೇತ ಆಗಿರುವ ತಪ್ಪುಗಳನ್ನು ಪಟ್ಟಿ ಮಾಡಿ, ಅದನ್ನು ಹೇಗೆ ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂದು ಎಲ್ಲ ಶಿಕ್ಷಕರಿಗೆ ವಿವರಣೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

2016ರಲ್ಲಿ ನಡೆದ ರಿಯೊ  ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ‘ಬೆಳ್ಳಿ’ ಪದಕ ಗೆದ್ದಿದ್ದಾರೆ. ಆದರೆ, ಹತ್ತನೇ ತರಗತಿ ದೈಹಿಕ ಪರಿಷ್ಕೃತ ಪಠ್ಯಪುಸ್ತಕದಲ್ಲಿ ‘ಕಂಚು’ ಗೆದ್ದಿದ್ದಾರೆ ಎಂದು ಮುದ್ರಣವಾಗಿದೆ. ಅದೇ ರೀತಿ  ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ‘ಪರ್ಷಿಯನ್ ಗಲ್ಫ್‌’ ಪದದ ಬದಲಿಗೆ ‘ಪ್ರಿಷಿಯನ್ ಗಲ್ಫ್‌’ ಎಂದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry