ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ಕಿರುದಾರಿ,ಅನುಭವದ ಹೆದ್ದಾರಿ!

Last Updated 14 ಜೂನ್ 2017, 4:47 IST
ಅಕ್ಷರ ಗಾತ್ರ

ಗುರುನಾಥ ಪವಾರ್‌ ಆ ತಾಂಡಾದ ಪ್ರತಿಷ್ಠಿತ ವ್ಯಕ್ತಿ ಏನೂ ಅಲ್ಲ. ದೇಶ ಸುತ್ತುವ ಡ್ರೈವರ್‌ ಅಷ್ಟೆ. ಅವರು ಈ ಬಾರಿ ದೆಹಲಿಯಿಂದ ತಂದಿರುವ ಅನುಭವ ಕಥನವನ್ನು ಕೇಳಲು ಹುಡುಗರು ಕಾತರರಾಗಿದ್ದರು.

ಇದು ಪವಾರ್‌ಗೂ ಗೊತ್ತಿತ್ತು. ಹೆದ್ದಾರಿಯ ಕಥನಗಳನ್ನು ಹೇಳುವುದು ಇವರಿಗೂ ಇಷ್ಟವೆ. ಪ್ರಯಾಣದ ದಣಿವು ಇನ್ನೂ ಆರಿರಲಿಲ್ಲ. ದೇಹ ವಿಶ್ರಾಂತಿ ಬಯಸುತ್ತಿತ್ತು. ಆದರೂ ಹುಡುಗರು ತನಗಾಗಿ ಕಾಯುತ್ತಿರುವುದು ನೆನಪಿಗೆ ಬಂದಿತು.

ಪವಾರ್‌ ಕಥೆ ಹೇಳುವ ಅಜ್ಜಿಯಂತೆ ಹುಡುಗರ ಮಧ್ಯೆ ಕುಳಿತರು. ಇಡೀ ವಾತಾವರಣ ನಿಶ್ಯಬ್ದವಾಯಿತು. ‘ಈ ಸರ್ತಿ ಏನಾಯ್ತು ಅಂದ್ರೆ’ ಪವಾರ್‌ ನಗುಮೊಗದೊಂದಿಗೆ ತಮಾಷೆ ಪ್ರಸಂಗವನ್ನು ಹೇಳುವ ಸೂಚನೆ ನೀಡಿದರು.

‘ಏನಾಯ್ತು?!’ ಹುಡುಗರ ಮುಖವೂ ಅರಳಿತು. ‘ನಮ್ಮಲ್ಲಿ ಒಬ್ಬ ಹೊಸ ಇದ್ದ. ಅವನು ದಾಡಿ ಮಾಡಿಸಿಕೊಳ್ಳಲು ಸೆಲೂನ್‌ಗೆ ಹೋಗಿದ್ದ. ರೇಟು–ಗೀಟು ಏನೂ ಕೇಳದೆ ಕುಳಿತು ಬಿಟ್ಟ. ಅವನಿಗೆ ದಾಡಿ ಮಾಡಿದ್ದೇ ತಿಳಿಲಿಲ್ಲವಂತೆ’ ಪವಾರ್‌ ಹೇಳಿದರು.

‘ಹಾಗಿದ್ದರೆ ಸೆಲೂನ್‌ ಹೇಗಿತ್ತಂತೆ?’ ಗುಂಪಿನಿಂದ ಧ್ವನಿಗಳು ಹೊರಟವು. ‘ಹೈ ಕ್ಲಾಸ್‌ ಇತ್ತಂತೆ’ ಪವಾರ್‌ ಉತ್ತರಿಸಿದರು. ‘ರೊಕ್ಕಾ’ ಹುಡುಗನೊಬ್ಬ ಅವಸರದಲ್ಲಿ ಕೇಳಿದನು.

‘ಇಲ್ಲೇ ಅದಾರೀಯಪ್ಪ ಮಜಾ. ಎಲ್ಲ ಮುಗಿದ ಮೇಲೆ ಎಷ್ಟು ಕೇಳಿದ್ರಂತೆ ಗೊತ್ತಾ’ ಎನ್ನುತ್ತಾ ಕುತೂಹಲ ಹೆಚ್ಚಿಸಿದರು. ‘ಐವತ್ತಾ, ನೂರಾ?’ ಒಬ್ಬ ಕೇಳಿದನು.
‘ಅಲ್ವೋ ಮಾರಾಯ, ಬರೋಬರೀ ನಾಲ್ಕು ನೂರು ರೂಪಾಯಿ’ ಪವಾರ್‌ ಉತ್ತರಿಸಿದರು. ‘ಅಬ್ಬಬ್ಬಾ, ಭಾಳ್‌ ಆಯ್ತಲ್ಲ’ ಇನ್ನೊಬ್ಬ ಹೌಹಾರಿದನು.

‘ಲೇ, ಕುಂಚಾವರಂನಲ್ಲಿ ನಲವತ್ತು ರೂಪಾಯಿಗೆ ಕಟ್ಟಿಂಗ್‌, ದಾಡಿ ಎರಡೂ ಮಾಡ್ತಾರೆ’ ಮತ್ತೊಬ್ಬ ಗೊಣಗಿದನು. ‘ಸರಿ ಬಿಡು. ದಾಡಿ, ಜೇಬು ಎರಡನ್ನೂ ಚೆನ್ನಾಗಿಯೇ ಹೆರೆದವರೆ’ ಹಿಂದೆ ಕುಳಿತಿದ್ದ ಹುಡುಗ ಹುಸಿನಗೆ ನಕ್ಕನು.

‘ಅವನ ಮುಖ ಸುಟ್ಟ ಉಳ್ಳಾಗಡ್ಡಿ ತರ ಆಗಿತ್ತು. ನಾವೆಲ್ಲ ರೊಕ್ಕ ಗ್ವಾಳಿ (ಗೊಳ್ಳೆ) ಮಾಡಿ ವಾಪಸು ಕರ್ಕೊಂಡ್ ಬಂದೆವು’– ಪವಾರ್‌ ಇಷ್ಟು ಹೇಳುವ ಹೊತ್ತಿಗೆ ನಗುವಿನ ಅಲೆ ಎದ್ದಿತು.

ಅಲ್ಲಿ ಬಾಯಿತೆರೆದು ಕುಳಿತು ಕಥೆ ಕೇಳುತ್ತಿದ್ದ ಹುಡುಗರಿಗೆ ಪವಾರ್‌ ಹೊರಗಿನ ಪ್ರಪಂಚವನ್ನು ತೋರಿಸುವ ಕಿಟಕಿಯಂತೆ ಕಾಣಿಸುತ್ತಿದ್ದರು. ಇವರು ಒಂದಾದ ಮೇಲೆ ಒಂದರಂತೆ ತಮ್ಮ ಅನುಭವದ ಕಣಜದಿಂದ ಹೆಕ್ಕಿ ತೆಗೆದ ಕಥೆಗಳನ್ನು ಹೇಳುತ್ತಾ ಸಾಗಿದ್ದರು. ಆ ಹುಡಗರಂತೆ ನಾನೂ ಸಹ ಅವರ ಕಥೆಗಳನ್ನು ಕೇಳುತ್ತಾ ಕುಳಿತಿದ್ದೆನು.

ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಶ್ರೀನಗರ ಪೆದ್ದಾ ತಾಂಡಾದಲ್ಲಿ ಹೀಗೆ ಪ್ರವಾಸ ಕಥನ ಹೇಳುವ–ಕೇಳುವ ಹೊಸ ಪರಂಪರೆ ಇಪ್ಪತ್ತೈದು ವರ್ಷಗಳಿಂದ ಚಾಲ್ತಿಯಲ್ಲಿದೆ. ಇವುಗಳ ಮೂಲಕವೇ ಬದುಕಿನ ಪಾಠವನ್ನು ಕಲಿಯುತ್ತಾ, ಪ್ರಬುದ್ಧರಾಗುತ್ತಾ, ಬದಲಾಗುತ್ತಾ ಮುನ್ನಡೆಯುತ್ತಿದ್ದಾರೆ.
ತಾಂಡಾದ ಸೇವಾಲಾಲ್‌ ಗುಡಿಯ ಮುಂದೆ ಕುಳಿತಿದ್ದ ಪ್ರೇಮಸಿಂಗ ಪವಾರ್‌, ಗಂಗಾರಾಮ ರಾಠೋಡ್‌ ಅವರು ಲೆಕ್ಕಾಚಾರದಲ್ಲಿ ಮುಳುಗಿದರು. ಚಹಾ ಕುಡಿದು ಮುಗಿಸುವ ಹೊತ್ತಿಗೆ ಇಬ್ಬರೂ ಒಮ್ಮತಕ್ಕೆ ಬಂದವರು–‘ನಮ್‌ ತಾಂಡಾದಲ್ಲಿ ನೂರಕ್ಕೂ ಹೆಚ್ಚು ಡ್ರೈವರ್‌ಗಳು ಅದಾರ’ ಎಂದು ಅಂಕಿ–ಸಂಖ್ಯೆಯನ್ನು ಒಪ್ಪಿಸಿದರು.

ಆ ಮೇಲೆ ಏನೋ ನೆನಪಾದವರಂತೆ ‘ನೋಡ್ರಿ, ಶಿವರಾಮ ರಾಠೋಡ್‌ ನಮ್‌ ತಾಂಡಾದ ಮೊದಲ ಡ್ರೈವರ್‌. ಅವನನ್ನು ಭೆಟ್ಟಿ ಮಾಡೇ ಹೋಗ್ರಿ’ ಎಂದು ಪ್ರೀತಿಯಿಂದಲೇ ವಿನಂತಿಸಿದರು.

ಶಿವರಾಮ ರಾಠೋಡ್‌ ಹಳೆಯ ನೆನಪುಗಳೊಂದಿಗೆ ಪಯಣ ಆರಂಭಿಸಿದವರು–‘ನಮ್ಮ ತಾಂಡಾಕ್ಕೆ ತೆಲಂಗಾಣ ರಾಜ್ಯದ ಜಹೀರಾಬಾದ್‌ 19 ಕಿಲೊಮೀಟರ್‌ನಷ್ಟು ಸನಿಹದಲ್ಲಿದೆ. ಅಲ್ಲಿನ ರೈತರು ಕೊಟ್ಟಿಗೆ ಗೊಬ್ಬರವನ್ನು ಖರೀದಿಸಿ, ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಗೊಬ್ಬರ ತುಂಬಲು, ಇಳಿಸಲು ತಾಂಡಾದ ಮಂದಿಯನ್ನೇ ಕರೆದುಕೊಳ್ಳುತ್ತಾರೆ. ನಾನು ಕೂಲಿ ಕೆಲಸ ಮಾಡುತ್ತಲೇ ಲಾರಿ ಚಾಲಕನೊಂದಿಗೆ ಸ್ನೇಹ ಬೆಳೆಸಿ ಕ್ಲೀನರ್‌ ಆದೆ.

ಮುಂದೆ ಡ್ರೈವರ್‌ ಕೂಡ. ಕಟ್ಟಿಗೆ ಮಾರಿ ಜೀವನ ನಡೆಸುತ್ತಿದ್ದ  ಕುಟುಂಬದ ಹೊಟ್ಟೆ ತುಂಬಿತು. ಅಲ್ಪಸ್ವಲ್ಪ ಹಣವೂ ಉಳಿಯಿತು. ಸಂಬಂಧಿಕರ ಹುಡುಗನನ್ನು ಕ್ಲೀನರ್‌ ಆಗಿ ಸೇರಿಸಿಕೊಂಡೆ. ಆತನೂ ಡ್ರೈವರ್‌ ಆದ. ಹೀಗೆ ನನ್ನಿಂದ ಹದಿನೈದು ಮಂದಿ ಡ್ರೈವರ್‌ ಆಗ್ಯಾರ್‌’ ಎಂದು ಹೆಮ್ಮೆಯಿಂದ ಹೇಳಿದರು.

ಜಹೀರಾಬಾದ್‌ನಲ್ಲಿ ಮಹೀಂದ್ರ ಅಂಡ್‌ ಮಹೀಂದ್ರ ಕಂಪೆನಿ ಇದೆ. ಇಲ್ಲಿ ತಯಾರಾಗುವ ವಾಹನಗಳನ್ನು ದೇಶದ ಮೂಲೆ ಮೂಲೆಗಳಿಗೆ ಹಾಗೂ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್‌ ಗಡಿಭಾಗಕ್ಕೆ ತಲುಪಿಸಲಾಗುತ್ತದೆ. ಕಂಪೆನಿಯ ಏಜೆಂಟ್‌ ತಮಗೆ ಗೊತ್ತಿರುವ ಡ್ರೈವರ್‌ಗಳನ್ನು ಕರೆಸಿಕೊಳ್ಳುತ್ತಾರೆ. ಒಮ್ಮೆಗೇ ಹತ್ತು–ಹದಿನೈದು ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇದಕ್ಕಾಗಿ ಡ್ರೈವರ್‌ಗಳು ಪ್ರತಿ ಕಿಲೊಮೀಟರ್‌ಗೆ ಎರಡು ರೂಪಾಯಿ ಪಡೆಯುತ್ತಾರೆ. ಆ ಕಡೆಯಿಂದ ಬರುವ ಖರ್ಚು ಇವರದೇ.

ಇವರು ದಾರಿ ಮಧ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ಆ ಹಣದಲ್ಲಿ ದಾರಿ ಖರ್ಚನ್ನು ನೋಡಿಕೊಳ್ಳುತ್ತಾರೆ. ಕಂಪೆನಿ ಕೊಡುವ ಹಣವನ್ನು ಉಳಿಸುತ್ತಾರೆ.

ಬಿಹಾರಕ್ಕೆ ಹೋಗಿ ಬಂದಿದ್ದ ಸೀತಾರಾಮ ರಾಠೋಡ್‌ ಅವರನ್ನು ಹುಡುಗರು ಸುತ್ತುವರಿದರು. ನಾನು ಅವರಲ್ಲಿ ಒಬ್ಬನಾದೆ. ನಮ್ಮಿಬ್ಬರ ಸಂಭಾಷಣೆ ಹೀಗಿತ್ತು:

‘ಗಾಡಿಗಳನ್ನು ಕೋಲ್ಕತ್ತಾ, ದೆಹಲಿ, ಬಿಹಾರ, ನೇಪಾಳ, ಭೂತಾನ್‌ಗಳ ಗಡಿ ತನಕ ಬಿಟ್ಟು ಬಂದಿದ್ದೇನೆ’.
‘ನಿಮಗೆ ತುಂಬಾ ಖುಷಿ ಕೊಟ್ಟ ಹಾದಿ..’
‘ಎಲ್ಲ ಊರಿನ ಹಾದಿಯೂ’.
‘ಭಯ ಹುಟ್ಟಿಸುವ ಹಾದಿ?’
‘ಪಶ್ಚಿಮ ಬಂಗಾಳದ ಸಿಲಿಗುರಿ. ಅಲ್ಲಿನ ಘಾಟ್‌ನಲ್ಲಿ ಡ್ರೈವ್‌ ಮಾಡಲು ಅಂಜಿಕೆ ಆಗುತ್ತದೆ. ಕುತ್ತಿಗೆ ಎತ್ತಿ ನೋಡಿದರೆ ಪರ್ವತ. ಕೆಳಗೆ ನೋಡಿದರೆ ಪ್ರಪಾತದಲ್ಲಿ ಹರಿಯುವ ನದಿ’ ಎನ್ನುತ್ತಲೇ ಭಯವನ್ನು ಮುಖದ ಮೇಲೆ ತಂದುಕೊಂಡರು.

ಇದೇ ತಾಂಡಾದ ಗುರುನಾಥ ರಾಠೋಡ್‌ ಪಿಯುಸಿ ಕಲಿಯುತ್ತಿರುವ ಹುಡುಗ. ಈತ ಶಿವರಾಮ, ಸೀತಾರಾಮ ಅವರಂತಹ ಹತ್ತಾರು ಮಂದಿಯಿಂದ ಕಥೆಗಳನ್ನು ಕೇಳಿದ್ದಾನೆ. ತಾನೂ ಕೂಡ ಭೂತಾನ್‌ನ ಕೊರೆಯುವ ಚಳಿಯಲ್ಲಿ, ಸಿಲಿಗುರಿಯ ಘಾಟಿಯಲ್ಲಿ, ಬಿಹಾರದ ಹೆದ್ದಾರಿಯಲ್ಲಿ, ನವದೆಹಲಿಯ ಇಂಡಿಯಾ ಗೇಟ್‌ ಮುಂದೆ ಸುತ್ತಾಡಬೇಕು ಎನ್ನುವ ಕನಸು ಕಾಣುತ್ತಿದ್ದಾನೆ!

ಈ ಭಾಗದ ಲಂಬಾಣಿಗಳು ಕೂಲಿ ಅರಸಿ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಗೆ ವಲಸೆ ಹೋಗುವುದು ಮಾಮೂಲಿ. ಆದರೆ, ಈ ತಾಂಡಾದ ಯುವಕರು ವಲಸೆ ಹೋಗುವುದು ನಿಂತಿದೆ. ತಾಂಡಾದ ಚಹರೆಯೂ ಬದಲಾಗಿದೆ. ಇಲ್ಲಿ ತಾರಸಿ ಮನೆಗಳು ಕಾಣಿಸುತ್ತವೆ. ಇಕ್ಕಟ್ಟಾದ ಬೀದಿಗಳಲ್ಲಿ ಬೈಕುಗಳ ಮೆರವಣಿಗೆ ನಡೆಯುತ್ತದೆ. ಸೇವಾಲಾಲ್‌, ಮರಿಯಮ್ಮನ ಗುಡಿ ಚೆಂದವಾಗಿವೆ. ಕೆಲವರ ಕುತ್ತಿಗೆಯಲ್ಲಿ ಚಿನ್ನದ ಸರ ಹೊಳೆಯುತ್ತವೆ. ಹುಡುಗರು ಚಿಂಚೋಳಿ, ಕಲಬುರ್ಗಿಗೆ ಕಲಿಯಲು ಹೋಗುತ್ತಾರೆ. ಹೆಣ್ಣು ಮಕ್ಕಳು ಹಣವಂತರ ಮನೆಯ ಸೊಸೆಯಾಗುತ್ತಾರೆ. ಇಷ್ಟೆ ಅಲ್ಲದೇ ಮೂರು ಮಂದಿ ಲಾರಿಗಳ ಮಾಲೀಕರು ಆಗಿದ್ದಾರೆ!'

ಶಿವರಾಮ ರಾಠೋಡ್‌ ದೇಶದ ಬೇರೆ ಸ್ಥಳಗಳನ್ನು ನೋಡುತ್ತಾ, ಅಲ್ಲಿಯ ಜನರನ್ನು ಅರಿಯುತ್ತಾ ಬದುಕು ಕಟ್ಟಿಕೊಂಡಿದ್ದರಿಂದ ಇಡೀ ತಾಂಡಾ ಪ್ರೇರಣೆ ಪಡೆದಿದೆ. ಶ್ರೀನಗರ ಪೆದ್ದಾ ತಾಂಡಾ ಎನ್ನುವ ‘ಕಿರುದಾರಿ’ ಈಗ ‘ಹೆದ್ದಾರಿ’ ಆಗಿದೆ. ಇಂಥ ಬದಲಾವಣೆ ದಿನ ಬೆಳಗಾಗುವುದರಲ್ಲಿ ಆಗಿದ್ದಲ್ಲ. ಇದಕ್ಕೆ ಹಲವು ವರ್ಷಗಳೇ ಹಿಡಿದವು. ಎಲ್ಲಕ್ಕಿಂತ ಮುಖ್ಯವಾಗಿ ತಾಂಡಾದ ಡ್ರೈವರ್‌ಗಳು ಹಾಗೂ ಯುವಕರು ಲೋಕವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ.

‘ಬಿಹಾರ ಈಗ ಮೊದಲಿನಂತೆ ಇಲ್ಲ. ಮದ್ಯ ಮಾರಾಟವಿದ್ದಾಗ ಅಲ್ಲಿಗೆ ಹೋಗಲು ಅಂಜಿಕೆ ಬರುತ್ತಿತ್ತು. ಗೂಂಡಾಗಿರಿಯೂ ಹೆಚ್ಚಿತ್ತು. ಗುಂಪಿನಲ್ಲಿ ಇದ್ದರೂ ದಾಳಿಗೆ ಒಳಗಾಗುವ ಆತಂಕವಿತ್ತು. ಈಗ ಅಲ್ಲಿ ಮದ್ಯದ ವಾಸನೆಯೇ ಇಲ್ಲ. ಖುಷಿಯಿಂದಲೇ  ಹೋಗುತ್ತೇವೆ’ ಎನ್ನುವ ಮೂಲಕ ಒಂದು ರಾಜ್ಯದ ಬದಲಾದ ಸ್ಥಿತಿಯನ್ನು ಸೂಕ್ಷ್ಮವಾಗಿ ಗ್ರಹಿಸುವ ವಿವೇಕವನ್ನು ಶಿವರಾಮ ರಾಠೋಡ್‌ ಪಡೆದುಕೊಂಡಿದ್ದಾರೆ.

ಹೊಸ ಸ್ಥಳ, ಅರಿಯದ ಹೆದ್ದಾರಿ, ಹಲವು ಬಗೆಯ ಆಹಾರ, ಭಾಷೆ, ಹವಾಗುಣ, ಸಂಸ್ಕೃತಿಗಳೊಂದಿಗೆ ಮುಖಾಮುಖಿ, ಹಾದಿಯಲ್ಲಿ ಧುತ್ತನೆ ಎದುರಾಗುವ ತಾಪತ್ರೆಯಗಳು, ಪ್ರತಿ ಬಾರಿಯೂ ಹೊಸದೇ ಅನಿಸುವ ಹೆದ್ದಾರಿಯಷ್ಟು ವಿಸ್ತಾರವಾದ ಅನುಭವ, ಎಂದಿಗೂ ಬೇಸರ ತರಿಸದ ಪ್ರಯಾಣ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT