ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗೆ ಮಲ್ಯ ಹಾಜರು ಡಿ. 4ರವರೆಗೆ ಜಾಮೀನು

Last Updated 13 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್‌ :  ಭಾರತ ಸರ್ಕಾರದ ಗಡೀಪಾರು ಕೋರಿಕೆಯ ವಿಚಾರಣೆಗಾಗಿ ಉದ್ಯಮಿ ವಿಜಯ ಮಲ್ಯ ಅವರು ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದರು.

ಭಾರತದ ಬ್ಯಾಂಕುಗಳಿಗೆ ₹9,000 ಕೋಟಿಗೂ ಹೆಚ್ಚು ಸಾಲ ಬಾಕಿ ಇರಿಸಿ ಬ್ರಿಟನ್‌ಲ್ಲಿ ಕುಳಿತಿರುವ ವಿಜಯ ಮಲ್ಯ ಅವರನ್ನು ಗಡೀಪಾರು ಮಾಡುವಂತೆ ವಿದೇಶಾಂಗ ಸಚಿವಾಲಯ  ಬ್ರಿಟನ್‌ಗೆ ಮನವಿ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಲ್ಯ ಅವರಿಗೆ ಡಿ. 4ರವರೆಗೆ ಜಾಮೀನು ಮಂಜೂರು ಮಾಡಿದೆ.

‘ನಾನು ಯಾವುದೇ ವಿಚಾರಣೆ ಅಥವಾ  ನ್ಯಾಯಾಲಯದಿಂದ ತಪ್ಪಿಸಿಕೊಂಡಿಲ್ಲ. ನನ್ನ ಪರವಾಗಿ ಸಾಕಷ್ಟು ಸಾಕ್ಷ್ಯಗಳು ಇವೆ’ ಎಂದು ನ್ಯಾಯಾಲಯದ ಹೊರಗೆ ಮಲ್ಯ ಹೇಳಿದರು.

‘ಭಾರತದ ಕ್ರಿಕೆಟ್‌ ತಂಡವನ್ನು ಹುರಿದುಂಬಿಸುವುದಕ್ಕಾಗಿ ನಾನು ಕ್ರೀಡಾಂಗಣಕ್ಕೆ ಹೋಗಿದ್ದೆ. ಅದು ಮಾಧ್ಯಮಕ್ಕೆ ಆಹಾರವಾಯಿತು. ಹಾಗಾಗಿ ಮಾತನಾಡದೆ ಇರುವುದೇ ಒಳ್ಳೆಯದು’ ಎಂದು ಅವರು ತಿಳಿಸಿದರು. ಬ್ರಿಟನ್‌ನ ತನಿಖಾಧಿಕಾರಿಗಳು ಭಾರತದ ಪರವಾಗಿ ವಾದ ಮಂಡಿಸಿದರು. ಮಲ್ಯ ಅವರು ಖಾಸಗಿ ಕಾನೂನು ಸಂಸ್ಥೆಯೊಂದನ್ನು ತಮ್ಮ ಪರವಾದ ಮಂಡಿಸಲು ನೇಮಿಸಿ ಕೊಂಡಿದ್ದಾರೆ. ಮಲ್ಯ ಅವರ ಗಡೀಪಾರಿಗೆ ಭಾರತ ಸರ್ಕಾರ ಇನ್ನೊಂದು ಅರ್ಜಿಯನ್ನು ಶೀಘ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಈ ಸಂಸ್ಥೆ ನ್ಯಾಯಾಲಯಕ್ಕೆ ಹೇಳಿತು.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕಳೆದ ತಿಂಗಳು ಲಂಡನ್‌ಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಬ್ರಿಟನ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಂಗಳವಾರದ ವಿಚಾರಣೆಗೂ ಸಿಬಿಐನ ಅಧಿಕಾರಿಯೊಬ್ಬರು ಹಾಜರಾಗಿದ್ದರು. ಮಲ್ಯ ಮಾಲೀಕತ್ವದ ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ₹9,000 ಕೋಟಿಗೂ ಹೆಚ್ಚು ಸಾಲವನ್ನು ಸರ್ಕಾರಿ ಸ್ವಾಮ್ಯದ ವಿವಿಧ ಬ್ಯಾಂಕುಗಳಿಂದ ಪಡೆದಿತ್ತು. ಸುಸ್ತಿದಾರರಾಗಿರುವ ಮಲ್ಯ ಅವರು 2016ರ ಮಾರ್ಚ್‌ನಿಂದ ಬ್ರಿಟನ್‌ನಲ್ಲಿದ್ದಾರೆ. ಏಪ್ರಿಲ್‌ 18ರಂದು ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT