ಫೈನಲ್ ಕನಸಿನಲ್ಲಿ ಆತಿಥೇಯರು

7
ಇಂಗ್ಲೆಂಡ್–ಪಾಕಿಸ್ತಾನ ನಡುವಣ ಸೆಮಿಫೈನಲ್ ಹಣಾಹಣಿ ಇಂದು

ಫೈನಲ್ ಕನಸಿನಲ್ಲಿ ಆತಿಥೇಯರು

Published:
Updated:
ಫೈನಲ್ ಕನಸಿನಲ್ಲಿ ಆತಿಥೇಯರು

ಕಾರ್ಡಿಫ್, ಲಂಡನ್:  ಇಂಗ್ಲೆಂಡ್  ದಶಕಗಳ ಕನಸು ಈಡೇ ರುವ ಅವಕಾಶ ಮತ್ತೊಮ್ಮೆ  ಒಲಿದು ಬಂದಿದೆ. ಈ ಬಾರಿಯಾದರೂ ಚಾಂಪಿಯನ್ಸ್‌ ಟ್ರೋಫಿಯನ್ನು ಮಡಿಲಿಗೆ ಹಾಕಿಕೊಳ್ಳಲು   ಇನ್ನೆರಡು ಸವಾಲುಗಳನ್ನು ಮೀರಿ ನಿಲ್ಲುವ ಅಗತ್ಯವಿದೆ.

ಮೊದಲ ಸವಾಲು ಬುಧವಾರ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವನ್ನು ಎದುರಿಸುವುದಾಗಿದೆ. ಅದರಲ್ಲಿ ಗೆದ್ದರೆ ಫೈನಲ್‌ನಲ್ಲಿ ಭಾರತ ಅಥವಾ ಬಾಂಗ್ಲಾದೇಶ ತಂಡದ  ಸವಾಲನ್ನು ಮೀರಿ ನಿಲ್ಲಬೇಕು.

ಹೋದ ವರ್ಷದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತದ ಎದುರು ಸೋತಿತ್ತು.  ಟೂರ್ನಿಯ ಎರಡು ದಶಕಗಳ ಇತಿಹಾಸದಲ್ಲಿ  ಇಂಗ್ಲೆಂಡ್ ತಂಡವು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 42 ವರ್ಷಗಳ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಇಂಗ್ಲೆಂಡ್ ಮೂರು ಬಾರಿ ರನ್ನರ್ಸ್ ಅಪ್ ಆಗಿರುವುದಷ್ಟೇ ಸಾಧನೆ. 

‘ಮಿನಿ ವಿಶ್ವಕಪ್‘ ಎಂದೇ ಕರೆಸಿಕೊಳ್ಳುವ ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಇಂಗ್ಲೆಂಡ್‌ ಇದುವರೆಗೂ ಚಾಂಪಿಯನ್ ಆಗಿಲ್ಲ.

ಈ ಬಾರಿಯ ಟೂರ್ನಿಯಲ್ಲಿ ಇಂಗ್ಲೆಂಡ್ ಅಮೋಘ ಆಟವಾಡಿ ನಾಕೌಟ್ ಹಂತ ತಲುಪಿದೆ. ಲೀಗ್ ಹಂತದ ಮೂರು ಪಂದ್ಯಗಳಲ್ಲಿಯೂ ಜಯ ಸಾಧಿಸಿದೆ.  ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ ಪರಿಣತರು ತಂಡದಲ್ಲಿದ್ದಾರೆ. ಅದರಿಂದಾಗಿ ತವರಿನ ಅಂಗಳದಲ್ಲಿ ಇಂಗ್ಲೆಂಡ್ ತಂಡವೇ ಸೆಮಿಫೈನಲ್ ಪ್ರವೇಶಿಸುವ ನೆಚ್ಚಿನ ತಂಡವಾಗಿದೆ.

ಆದರೆ ಪಾಕಿಸ್ತಾನದ ಸ್ಥಿತಿ ಬೇರೆ ಇದೆ.  ’ಬಿ’ ಗುಂಪಿನ ಲೀಗ್ ಹಂತದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಭಾರತದ ಎದುರು ಹೀನಾಯ ಸೋಲನುಭವಿಸಿತ್ತು.  ನಂತರ ದಕ್ಷಿಣ ಆಫ್ರಿಕಾ ಎದುರು ಮಳೆ ಕಾಡಿದ ಪಂದ್ಯದಲ್ಲಿ 19 ರನ್‌ಗಳಿಂದ ಪಾಕ್ ತಂಡವು ಗೆದ್ದಿತ್ತು.  ಸೋಮವಾರ  ಶ್ರೀಲಂಕಾ ಎದುರು ಪಾಕ್ ಬೌಲರ್‌ಗಳು ಉತ್ತಮವಾಗಿ ಆಡಿದ್ದರು. ಏಂಜೆಲೊ ಮ್ಯಾಥ್ಯೂಸ್ ಬಳಗವನ್ನು 236 ರನ್‌ಗಳಿಗೆ ಕಟ್ಟಿ ಹಾಕಿದ್ದರು. ನಂತರ ಲಂಕಾ ತಂಡದ ಬೌಲರ್‌ಗಳೂ ಅಮೋಘ ಆಟವಾಡಿದ್ದರು. ಆದರೆ ಅದೃಷ್ಟ ಸರ್ಫರಾಜ್ ಬಳಗದ ಕೈಹಿಡಿದಿತ್ತು.

ಲಂಕಾ ಫೀಲ್ಡರ್‌ಗಳು ನಾಲ್ಕು ಸುಲಭ ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದು  ಪಾಕ್ ತಂಡಕ್ಕೆ ಗೆಲುವಿನ ಅವಕಾಶ ಒಲಿದಿತ್ತು.     ಆದರೆ ಇಂಗ್ಲೆಂಡ್ ತಂಡದ ಎದುರು ನಿಜವಾದ ಸವಾಲು ಪಾಕ್‌ ಬಳಗಕ್ಕೆ ಎದುರಾಗುವುದು ಖಚಿತ.  ಹೋದ ವರ್ಷ ಪಾಕ್ ತಂಡವು ಇಂಗ್ಲೆಂಡ್‌ ವಿರುದ್ಧ 1–4ರಿಂದ ಸರಣಿ ಸೋಲನುಭವಿಸಿತ್ತು.

ಇಂಗ್ಲೆಂಡ್‌ ಬ್ಯಾಟಿಂಗ್ ಪಡೆಯಲ್ಲಿರುವ ಜೇಸನ್ ರಾಯ್, ಅಲೆಕ್ಸ್‌ ಹೇಲ್ಸ್‌, ಜೋ ಜಾಸ್ ರೂಟ್, ಜಾಸ್ ಬಟ್ಲರ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್‌,  ನಾಯಕ ಏಯಾನ್ ಮಾರ್ಗನ್, ಬೌಲರ್‌ಗಳಾದ ಜೇಕ್ ಬಾಲ್,  ಮೊಯಿನ್ ಅಲಿ, ಡೇವಿಡ್ ವಿಲ್ಲಿ ಅವರು ಅಮೋಘ ಫಾರ್ಮ್‌ನಲ್ಲಿದ್ದಾರೆ.

ಅದರಲ್ಲೂ ಜೋ ರೂಟ್ ಮತ್ತು ಜೇಸನ್ ರಾಯ್ ಅವರು ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಅಮೋಘ ಆಟಗಾರರು.  ಆವರನ್ನು ಕಟ್ಟಿಹಾಕಲು ಪಾಕ್ ತಂಡದ ಮಧ್ಯಮವೇಗಿಗಳಾದ ಜುನೈದ್ ಖಾನ್, ಇಮಾದ್ ವಾಸೀಂ, ಮೊಹಮ್ಮದ್ ಅಮೀರ್ ಅವರು ವಿಶೇಷ ಅಸ್ತ್ರಗಳನ್ನು ಬಳಸುವುದು ಅನಿವಾರ್ಯ.

ಕಳೆದ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದ  ಬಲಗೈ ಮಧ್ಯಮವೇಗಿ ಹಸನ್‌ ಅಲಿ ಅವರು ಈ ಪಂದ್ಯದಲ್ಲಿಯೂ ಮಿಂಚಿದರೆ ಇಂಗ್ಲೆಂಡ್ ಆಟಗಾರರಿಗೆ ಕಠಿಣ ಸವಾಲು ಎದುರಾಗಲಿದೆ. ಅನುಭವಿ ಬೌಲರ್ ವಹಾಬ್ ರಿಯಾಜ್ ಅವರು ಇಲ್ಲದೇ ಇರುವುದರಿಂದ ಪಾಕ್ ತಂಡಕ್ಕೆ ಒತ್ತಡ ಹೆಚ್ಚಲಿದೆ.

ಪಾಕ್ ತಂಡಕ್ಕೆ ಹೆಚ್ಚು ಚಿಂತೆ ಇರುವುದು ಬ್ಯಾಟಿಂಗ್ ವಿಭಾಗದಲ್ಲಿ.  ಕಳೆದ ಪಂದ್ಯದಲ್ಲಿ ಆಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಅನುಭವಿ ಶೋಯಬ್ ಮಲಿಕ್, ಅಜರ್ ಅಲಿ, ಫಕ್ರ್ ಜಮಾನ್, ನಾಯಕ ಸರ್ಫರಾಜ್  ಅವರು ಮಿಂಚುವ ಅಗತ್ಯ ಇದೆ.  ಆದರೆ,ಜೇಕ್ ಬಾಲ್,  ಮಾರ್ಕ್ ವುಡ್, ಸ್ಪಿನ್ನರ್ ಆದಿಲ್ ರಶೀದ್ ಅವರ ಎಸೆತಗಳನ್ನು ಎದುರಿಸಲು ವಿಶೇಷ ಸಿದ್ಧತೆ ಮಾಡಿಕೊಂಡು ಕಣಕ್ಕಿಳಿಯುವ ಸವಾಲು ಅವರ ಮುಂದಿದೆ.

ತಂಡಗಳು ಇಂತಿವೆ

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜಾನಿ ಬೆಸ್ಟೊ, ಜೇಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್‌, ಅಲೆಕ್ಸ್‌ ಹೇಲ್ಸ್‌, ಜಾಸ್ ಬಟ್ಲರ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟೀವನ್ ಫಿನ್.

ಪಾಕಿಸ್ತಾನ: ಸರ್ಫರಾಜ್ ಅಹಮ್ಮದ್ (ನಾಯಕ), ಅಹಮದ್ ಶೆಹಜಾದ್, ಅಜರ್ ಅಲಿ, ಬಾಬರ್ ಆಜಂ, ಫಾಹೀಮ್ ಅಶ್ರಫ್, ಫಕ್ರ್ ಜಮಾನ್, ಹ್ಯಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಾಸೀಂ, ಜುನೈದ್ ಖಾನ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಜ್, ಶಾದಾಬ್ ಖಾನ್, ಶೋಯಬ್ ಮಲಿಕ್

ಪಂದ್ಯ ಆರಂಭ; ಮಧ್ಯಾಹ್ನ 3

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry