ಸೂಲಿಬೆಲೆ ಸರ್ಕಾರಿ ಉರ್ದು ಶಾಲೆಗೆ ಕಾಯಕಲ್ಪ

7
ಶಾಲೆಗೆ ಎಂಬತ್ತು ವರ್ಷಗಳ ಇತಿಹಾಸ l ಹಿಂದೆ ನೂರು ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 400ಕ್ಕೆ ಏರಿಕೆ

ಸೂಲಿಬೆಲೆ ಸರ್ಕಾರಿ ಉರ್ದು ಶಾಲೆಗೆ ಕಾಯಕಲ್ಪ

Published:
Updated:
ಸೂಲಿಬೆಲೆ ಸರ್ಕಾರಿ ಉರ್ದು ಶಾಲೆಗೆ ಕಾಯಕಲ್ಪ

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಉರ್ದು ಪ್ರಾಥಮಿಕ ಶಾಲೆಗೆ ಗ್ರಾಮದ ಯುವಕರ ಪರಿಶ್ರಮದಿಂದ ಕಾಯಕಲ್ಪ ಸಿಕ್ಕಿದೆ.

ಶಾಲೆಯಲ್ಲಿ ಈ ಹಿಂದೆ 100 ವಿದ್ಯಾರ್ಥಿಗಳಿದ್ದರು. ಆದರೆ, 2015–16ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 400ಕ್ಕೆ ಏರಿಕೆ ಆಗಿದೆ.

ಸರ್ಕಾರದ ವತಿಯಿಂದ ನೂತನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಇದೇ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ನುರಿತ ಶಿಕ್ಷಕರನ್ನು ನೇಮಿಸಲಾಗಿದೆ.

ಸುಮಾರು 80 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿತ್ತು. ಅಲ್ಲದೆ, ಇಲ್ಲಿ ಮೂಲಸೌಕರ್ಯಗಳೂ ಮರೀಚಿಕೆಯಾಗಿದ್ದವು. ಇದರಿಂದ ದಿನೇದಿನೇ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಸಾಗಿತ್ತು. ಇದರಿಂದ ಎಚ್ಚೆತ್ತ ಗ್ರಾಮದ ಯುವಕರು ಶಾಲೆಯನ್ನು ಉಳಿಸಿಬೇಕು ಎಂಬ ಉದ್ದೇಶದಿಂದ ಹೊಸ ಸ್ವರೂಪವನ್ನೇ ನೀಡಿದ್ದಾರೆ.

ರಿಜ್ವಾನ್, ಜಿಯಾವುಲ್ಲಾ, ಶೇಕ್ ದೌಲತ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಲ್.ಅಂಜಾದ್ ಹಾಗೂ ಉಸಾನ್ ಷರೀಫ್ ಅವರು 3–4 ವರ್ಷಗಳಿಂದ ಗ್ರಾಮದ ಮನೆ ಮನೆಗೆ ತೆರಳಿ, ಪೋಷಕರನ್ನು ಮನವೊಲಿಸಿದ್ದಾರೆ. ಅವರ ಮನವಿಗೆ ಸ್ಪಂದಿಸಿದ ಗ್ರಾಮದ ಬಹುತೇಕ ಪೋಷಕರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸದೆ, ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ.

ಎಲ್‌ಕೆಜಿ, ಯುಕೆಜಿ ತರಗತಿಯೂ ಶೀಘ್ರ ಪ್ರಾರಂಭ: ಖಾಸಗಿ ಶಾಲೆಗಳಂತೆ ಈ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿಯನ್ನು ನಡೆಸಬೇಕು ಎಂದು ಪೋಷಕರು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪೋಷಕರೊಂದಿಗೆ ಸೋಮವಾರ ಸಭೆ ನಡೆಸಿದ ಶಾಲಾ ಅಭಿವೃದ್ಧಿ ಹಾಗೂ ವ್ಯವಸ್ಥಾಪನಾ  ಸಮಿತಿಯು (ಎಸ್‌ಡಿಎಂಸಿ) ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ನಡೆಸಲು ಒಪ್ಪಿಗೆ ಸೂಚಿಸಿದೆ.

‘ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಕರಿಗೆ ವೇತನ ಹಾಗೂ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಸಮವಸ್ತ್ರ, ವಾಹನ ಸೌಲಭ್ಯ ಒದಗಿಸಲಾಗುತ್ತದೆ’ ಎಂದು ಸಮಿತಿಯ ಸದಸ್ಯರು ತಿಳಿಸಿದರು.

****

ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಪ್ರತಿ ಮಗುವಿಗೆ ಬೇಕಿರುವ ಎಲ್ಲ ರೀತಿಯ ಸಹಕಾರ ನೀಡುತ್ತೇವೆ

ಕೃಷ್ಣಪ್ಪ, ಸೂಲಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry