ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರಾಳದ ನೋವು ಕೇಳುವರು ಯಾರು?’

Last Updated 13 ಜೂನ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರರು ಹಾಗೂ ಮೇಸ್ತ್ರಿಗಳ ಜತೆ ಸಲುಗೆಯಿಂದ ಇದ್ದರೆ ಮನೆಯಲ್ಲಿದ್ದರೂ ಪೂರ್ತಿ ಸಂಬಳ ಸಿಗುತ್ತದೆ. ವಿರೋಧ ವ್ಯಕ್ತಪಡಿಸಿದರೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಸಿಗುವುದು ಮಾತ್ರ ಬೈಗುಳ, ದೌರ್ಜನ್ಯ, ಸಂಬಳ ಕಡಿತದಂತಹ ಶಿಕ್ಷೆ....

ಹತ್ತಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಸ ಎತ್ತುವ ಕೆಲಸ ಮಾಡುತ್ತಿರುವ ಬಿಬಿಎಂಪಿ ಮಹಿಳಾ ಪೌರಕಾರ್ಮಿಕರ ಅಂತರಾಳದ ಮಾತುಗಳಿವು.
‘ಹೊಲಸು, ಗಬ್ಬು ನಾರುವ  ಕಸದಲ್ಲೇ ಕೆಲಸ ಮಾಡುತ್ತೇವೆ ಅಂದ ಮಾತ್ರಕ್ಕೆ ಮನ, ಮೈ (ದೇಹ) ಹೊಲಸಿನಿಂದ ಕೂಡಿದೆ ಎಂದಲ್ಲ. ನಮ್ಮಲ್ಲೂ ಸ್ವಾಭಿಮಾನವಿದೆ. ಕಷ್ಟ ಪಟ್ಟು ದುಡಿಯುತ್ತೇವೆ. ಕೆಲವರ ನೀಚ ಕೃತ್ಯದಿಂದ ಎಲ್ಲ ಮಹಿಳಾ ಪೌರ ಕಾರ್ಮಿಕರ ಮೇಲೆ ಕೆಟ್ಟ ಅಭಿಪ್ರಾಯ ಮೂಡಿದೆ. ನಮ್ಮ ಅಂತರಾಳದ ನೋವನ್ನು ಆಲಿಸುವರು ಯಾರೂ ಇಲ್ಲ’ ಎಂದು ಮಹಿಳಾ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘ಕೆಲ ಗುತ್ತಿಗೆದಾರರು ಹಾಗೂ ಮೇಸ್ತ್ರಿಗಳು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಸಾರ್ವಜನಿಕವಾಗಿ ದನಿ ಎತ್ತಿದರೆ ಕೆಲಸದಿಂದ ತೆಗೆದುಹಾಕುತ್ತಾರೆ. ಬಡತನದಿಂದಾಗಿ ಅನಿವಾರ್ಯ ಪರಿಸ್ಥಿತಿಯಿಂದ ಕಿರುಕುಳದ ನಡುವೆಯೂ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ಗುತ್ತಿಗೆ ಪದ್ಧತಿ ರದ್ದು ಮಾಡಿ, ನಮ್ಮನ್ನೇ ಕಾಯಂಗೊಳಿಸುವ ಮೂಲಕ ಆ ನರಕಯಾತನೆಯಿಂದ ಮುಕ್ತಿಕೊಡಿಸಿ’ ಎಂದರು.

ಸಲಕರಣೆಗಳ ಹಣ ಗುಳುಂ: ‘ಕಾರ್ಮಿಕರಿಗೆ ಆರೋಗ್ಯದ  ದೃಷ್ಟಿಯಿಂದ ಪೊರಕೆ, ಕೈ ಗವಸು, ಮುಖಗವಸು ಸೇರಿದಂತೆ ಅಗತ್ಯ ಸಲಕರಣೆಗಳ ಖರೀದಿಗೆ ಬಿಬಿಎಂಪಿ ವತಿಯಿಂದ ಗುತ್ತಿಗೆದಾರರಿಗೆ ಹಣ ಒದಗಿಸಲಾಗುತ್ತದೆ. ಗುತ್ತಿಗೆದಾರರು ಇದರ ಹಣ ಗುಳುಂ ಮಾಡುತ್ತಿದ್ದಾರೆ. ಸಾಲದಕ್ಕೆ ಈ ವಸ್ತುಗಳಿಗೆ ಕಾರ್ಮಿಕರಿಂದಲೇ ಹಣ ಪೀಕುತ್ತಿದ್ದಾರೆ. ಹೀಗಾಗಿ, ಬಿಬಿಎಂಪಿ ವತಿಯಿಂದ ನೇರವಾಗಿ ಈ ವಸ್ತುಗಳನ್ನು ಪೂರೈಸಲಿ’ ಎಂದು ಮತ್ತೊಬ್ಬ ಕಾರ್ಮಿಕ ಮಹಿಳೆ ದೂರಿದರು.

‘ಗುತ್ತಿಗೆ ಪೌರಕಾರ್ಮಿಕರಿಗೆ ನೀಡುತ್ತಿದ್ದ ವೇತನವನ್ನು ₹ 7,000ದಿಂದ ₹ 14,439ಕ್ಕೆ ಹೆಚ್ಚಳ ಮಾಡಲಾಗಿದೆ. ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ಈ ಮೊತ್ತವನ್ನು ಪಾವತಿಸಬೇಕಿದ್ದರೂ ಈವರೆಗೂ ಅಷ್ಟೂ ವೇತನ ಪಾವತಿಯಾಗುತ್ತಿಲ್ಲ. ಹೆಚ್ಚುವರಿ ವೇತನ ಬಿಡುಗಡೆಯಾಗಿದ್ದರೂ ಕಾರ್ಮಿಕರಿಗೆ ನೀಡುತ್ತಿಲ್ಲ’ ಎಂದು ಹೇಳಿದರು.

‘ಅನಾರೋಗ್ಯದಿಂದ ಕೆಲವೊಮ್ಮೆ ರಜೆ ಹಾಕಿದರೆ ಉದ್ದೇಶಪೂರ್ವಕವಾಗಿಯೇ ವೇತನದಲ್ಲಿ ಹೆಚ್ಚು ಹಣ ಕಡಿತಗೊಳಿಸುತ್ತಾರೆ. ಮೇಸ್ತ್ರಿಗಳಿಗೆ ಹಣ ನೀಡದಿದ್ದರೆ 15 ದಿನ ರಜೆಯನ್ನು ತಿಂಗಳುಗಟ್ಟಲೆ ರಜೆ ಇದ್ದಾರೆ ಎಂದು ಸುಳ್ಳು ಬರೆಯುತ್ತಾರೆ’ ಎಂದರು.

‘ಕೆಲವೊಮ್ಮೆ 3–4 ತಿಂಗಳವರೆಗೆ ಸಂಬಳ ಕೊಡುವುದಿಲ್ಲ. ಬಿಲ್ ಆಗಿದ್ದರೂ ಆಗಿಲ್ಲ ಎಂದು ಸಬೂಬು ಹೇಳುತ್ತಾರೆ. ಜೋರು ಮಾಡಿ ಕೇಳಿದರೆ, ನೀನು ಸರಿಯಿಲ್ಲ ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ ಎಂದು ಗುತ್ತಿಗೆದಾರರು ಹೇಳುತ್ತಾರೆ’ ಎಂದರು.
****
ಕಸದ ವಾಹನದಲ್ಲೇ ಆಹಾರ ಪೂರೈಕೆ
‘ಮಧ್ಯಾಹ್ನ ನೀಡಬೇಕಿರುವ ಬಿಸಿಯೂಟವನ್ನು ಬೆಳಿಗ್ಗೆ 10ಕ್ಕೆ ನೀಡುತ್ತಾರೆ. ಕಸ ಸಾಗಿಸುವ ವಾಹನಗಳಲ್ಲೇ ಆ ಆಹಾರವನ್ನು ತರಲಾಗುತ್ತದೆ. ನೊಣ, ಸೊಳ್ಳೆ ಕುಳಿತಿದ್ದರೂ ಶುಚಿತ್ವ ಇಲ್ಲದ ಅದೇ ಆಹಾರವನ್ನೇ ನೀಡುತ್ತಾರೆ. ಬೇರೆ ದಾರಿಯಿಲ್ಲದೇ ತಿನ್ನುತ್ತಿದ್ದೇವೆ’ ಎಂದು ಹೇಳಿದರು.
****
‘ಪ್ರತಿಭಟನೆ ನಡೆಸುವ ಅಗತ್ಯವಿರಲಿಲ್ಲ’
‘ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಬಗೆಹರಿಯುವ ಸಂದರ್ಭದಲ್ಲಿ ರಾಜ್ಯ ಪೌರಕಾರ್ಮಿಕ ಸಂಘ ಪ್ರತಿಭಟನೆಗೆ ಕರೆ ನೀಡಿರುವುದು ಸರಿಯಲ್ಲ’ ಎಂದು ಬಿಬಿಎಂಪಿ ಪೌರ ಕಾರ್ಮಿಕರ ಸಂಘಗಳ ಒಕ್ಕೂಟವು ಆಕ್ಷೇಪ ವ್ಯಕ್ತಪಡಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರಳಿ ಅಶೋಕ ಸಾಲಪ್ಪ ಅವರು, ‘ಎರಡು ತಿಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಲಿದೆ. ಇಂಥ ಸಮಯದಲ್ಲಿ ಪ್ರತಿಭಟನೆ ಅನಿವಾರ್ಯ ಇರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT