ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು ಸಾಗಣೆಯಲ್ಲಿ ₹39 ಲಕ್ಷ ಅಕ್ರಮ

ಹೇರೋಹಳ್ಳಿ ಕೆರೆ: ಅಧಿಕಾರಿಗಳ ವಿರುದ್ಧ ತನಿಖೆಗೆ ನಿರ್ದೇಶನ
Last Updated 13 ಜೂನ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೇರೋಹಳ್ಳಿ ಕೆರೆಯ ಹೂಳು ಸಾಗಿಸಲು ಬಿಬಿಎಂಪಿ ₹38.60 ಲಕ್ಷ ಅಧಿಕ ಪಾವತಿ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳ ಸಮಿತಿ, ಹೂಳು ಸಾಗಣೆಯ ಮಾರ್ಗಪಲ್ಲಟ ಮಾಡಲು ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿದೆ.

ಸಮಿತಿಯ 20 ನೇ ವರದಿಯನ್ನು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಮಂಡಿಸಲಾಯಿತು.

ಈ ಜಲಮೂಲವನ್ನು ಸಮಗ್ರ ಅಭಿವೃದ್ಧಿ ಮಾಡಲು ಬಿಬಿಎಂಪಿ 2009ರಲ್ಲಿ ₹2.58 ಕೋಟಿ ಮಂಜೂರು ಮಾಡಿತ್ತು. ಈ ಕಾಮಗಾರಿಯನ್ನು 2010ರ ಜೂನ್‌ ಒಳಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಷರತ್ತು ವಿಧಿಸಿತ್ತು. ಅಂದಾಜು ಪಟ್ಟಿಯ ಪ್ರಕಾರ, ಕೆರೆ ತಳದ 0.67 ಮೀಟರ್‌ಗಳ ಸರಾಸರಿ ಆಳದ ವರೆಗೆ ಹೂಳು ತೆಗೆಯಬೇಕಿತ್ತು.

ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡ ವೇಳೆ (2010ರ ಜುಲೈ) ಬಿಬಿಎಂಪಿ ಆಯುಕ್ತರು ಪರಿಶೀಲನೆ ನಡೆಸಿ, ಕೆರೆಯ ತಳದ ಆಳವನ್ನು 1.5 ಮೀಟರ್‌ಗೆ ಹೆಚ್ಚಿಸುವಂತೆ ಸೂಚಿಸಿದ್ದರು. 

ನಾಯಂಡಹಳ್ಳಿ ಕೆರೆ ಪ್ರದೇಶದ ಮಣ್ಣಿನ ಪರಿಮಾಣಕ್ಕೆ ತಕ್ಕಂತೆ ಹೇರೋಹಳ್ಳಿ ಕೆರೆಯ ಮಣ್ಣು ತೆಗೆಯಬಹುದು ಎಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಬಳಿಕ ಕಾಮಗಾರಿಯ ವೆಚ್ಚವನ್ನು ₹4.49 ಕೋಟಿಗೆ ಪರಿಷ್ಕರಣೆ ಮಾಡಲಾಗಿತ್ತು. ಅದೇ ಗುತ್ತಿಗೆದಾರನ ಜತೆಗೆ 2011ರ ಜನವರಿಯಲ್ಲಿ ಪೂರಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಗುತ್ತಿಗೆದಾರನಿಗೆ 2012ರ ಮಾರ್ಚ್‌ ತಿಂಗಳಿನಲ್ಲಿ ₹4.23 ಕೋಟಿ ಪಾವತಿ ಮಾಡಲಾಗಿತ್ತು.

ಆದರೆ, ನಾಯಂಡಹಳ್ಳಿ ಕೆರೆಯ ಕಾಮಗಾರಿಯನ್ನು ಬಿಬಿಎಂಪಿ ನಡೆಸಿರಲಿಲ್ಲ. ಹೀಗಾಗಿ ಹೂಳನ್ನು ಜನಪ್ರಿಯ ಟೌನ್‌ಶಿಪ್‌ನ ಸಮೀಪದ ಸರ್ಕಾರಿ ಗೋಮಾಳದಲ್ಲಿ ವಿಲೇವಾರಿ ಮಾಡಲಾಗಿತ್ತು. ಕೆರೆಯಿಂದ ಈ ಪ್ರದೇಶ 15 ಕಿ.ಮೀ. ದೂರ ಇದೆ ಎಂದು ಅಂದಾಜುಪಟ್ಟಿಯಲ್ಲಿ ತೋರಿಸಲಾಗಿತ್ತು.

‘ಜಲಮೂಲದಿಂದ 1.60 ಲಕ್ಷ ಘನ ಮೀಟರ್‌ಗಳಷ್ಟು ಒಣ ಹೂಳು ಹೊರ ತೆಗೆಯಲಾಗಿತ್ತು. ಈ ಪೈಕಿ 96,604 ಘನ ಮೀಟರ್‌ಗಳನ್ನು ಹೊರ ತೆಗೆಯಲು ಪ್ರತಿ  ಘನ ಮೀಟರ್‌ಗೆ ₹123 ಪಾವತಿಸಲಾಗಿತ್ತು. ಗೂಗಲ್‌ ನಕಾಶೆ ಮೂಲಕ ಲೆಕ್ಕ ಹಾಕಿದಾಗ ಹೂಳು ಸುರಿದ ಜಾಗ ಕೆರೆಯಿಂದ 8 ಕಿ.ಮೀ. ದೂರವಷ್ಟೇ ಇದೆ. ಆದರೆ, ಸುಳ್ಳು ಮಾಹಿತಿ ನೀಡಿ ₹38.60 ಲಕ್ಷ ಹೆಚ್ಚುವರಿ ಪಾವತಿಸಲಾಗಿತ್ತು’ ಎಂದು ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು.

‘ಈ ಕಾಮಗಾರಿ ವೇಳೆ ಮಾಗಡಿ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿತ್ತು. ಹೂಳು ಸಾಗಿಸಲು ಸಂಚಾರ ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಾಗಿ ಬದಲಿ ಮಾರ್ಗ ಬಳಸಲಾಗಿತ್ತು’ ಎಂದು ಬಿಬಿಎಂಪಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

‘ಸಂಚಾರ ಪೊಲೀಸರು ತಡೆ ಉಂಟು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲ’ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT