ರಿಪ್ಪನ್‌ಪೇಟೆ ಸುತ್ತ ಹೆಚ್ಚಿದ ಗಾಂಜಾ ಸೇವನೆ

7

ರಿಪ್ಪನ್‌ಪೇಟೆ ಸುತ್ತ ಹೆಚ್ಚಿದ ಗಾಂಜಾ ಸೇವನೆ

Published:
Updated:
ರಿಪ್ಪನ್‌ಪೇಟೆ ಸುತ್ತ ಹೆಚ್ಚಿದ ಗಾಂಜಾ ಸೇವನೆ

ರಿಪ್ಪನ್‌ಪೇಟೆ: ಮಲೆನಾಡಿನ ಹೃದಯ ಭಾಗ ರಿಪ್ಪನ್‌ಪೇಟೆಯ ಸುತ್ತ ಮುತ್ತ ಗಾಂಜಾ ಸೇವನೆ ಹೆಚ್ಚಾಗುತ್ತಿದೆ. ಯುವ ಜನರು ಹಾಡಹಗಲೇ ಗಾಂಜಾ ಸೇವಿಸಿ, ಅಮಲಿನ ದಾಸರಾಗುತ್ತಿದ್ದಾರೆ. ನೆಮ್ಮದಿಯ ತಾಣವಾಗಿದ್ದ ಪಟ್ಟಣದ ಸರಹದ್ದಿನಲ್ಲಿ ಹಾಡಹಗಲೇ ಕಾರು, ಬೈಕ್‌ಗಳಲ್ಲಿ ಗಾಂಜಾ ವ್ಯವಹಾರ  ಎಗ್ಗಿಲ್ಲದೆ ಸಾಗಿದೆ.

ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ, ನಿಯಂತ್ರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ಅವಧಿಯಲ್ಲಿ ತೆರೆಮರೆಗೆ ಸರಿದಿದ್ದ ಈ ದಂಧೆ ನಾಯಿಕೊಡೆಯಂತೆ ಮತ್ತೆ ತಲೆ ಎತ್ತಿದೆ.

ಪಟ್ಟಣದ ಗಲ್ಲಿ, ಗಲ್ಲಿಯ ಸಣ್ಣ ಪುಟ್ಟ ಕ್ಯಾಂಟೀನ್‌, ಅಂಗಡಿ, ಮುಂಗಟ್ಟು , ಗ್ಯಾರೇಜ್‌, ಸೈಬರ್‌ ಸೆಂಟರ್‌, ಕಾಲೇಜು ಆವರಣ, ಬರುವೆ ಶಾಲೆ, ಹೈಸ್ಕೂಲ್‌ ಮೈದಾನಗಳಲ್ಲಿ ಹದಿ ಹರೆಯದ ಯುವಕರ ಗುಂಪು ಒಟ್ಟುಗೂಡಿ, ಗಾಂಜಾ , ಮದ್ಯ, ಮೋಜು ಮಸ್ತಿಯಲ್ಲಿ ಕಾಲಹರಣ ಮಾಡುತ್ತಿದೆ.

ಹಾರೋಹಿತ್ತಲು, ಬಸವಪುರ , ಬಿಳಕಿ , ಅರಮನೆಕೊಪ್ಪ, ಬೆಳಕೋಡು , ಮಸ್ಕಾನಿ,  ದೋಬೈಲ್‌ , ನೆವಟೂರು, ಹರತಾಳು, ಶುಂಠಿಕೊಪ್ಪ, ಬಿದರಹಳ್ಳಿ, ಹಾಲಂದೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆಲ ರೈತರು ಬಗರ್‌ಹುಕುಂ ಜಾಗದಲ್ಲಿ ಅನಧಿಕೃತವಾಗಿ ಶುಂಠಿ, ಜೋಳದ ಬೆಳೆಗಳ ಮಧ್ಯೆ ಗಾಂಜಾ ಬೆಳೆದು ಮಾರುಕಟ್ಟೆಗೆ ಸಾಗಿಸುತ್ತಿದ್ದ ಕಳ್ಳ ದಂಧೆಯ ಕೆಲವು ಪ್ರಕರಣಗಳು ಈಚೆಗೆ ಬೆಳಕಿಗೆ ಬಂದಿತ್ತು.

ಪ್ರೌಢಶಾಲೆಯ ವಿದ್ಯಾರ್ಥಿಗಳು ಸಹ ದುಶ್ಚಟಗಳ ದಾಸರಾಗಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಕೆಲವು ಪ್ರತಿಷ್ಠಿತ ಕುಟುಂಬಗಳ ಮಕ್ಕಳು , ನಿರುದ್ಯೋಗಿ ವಿದ್ಯಾವಂತ ಯುವಕ, ಯುವತಿಯರು ಈ ಮಾದಕ ವ್ಯಸನದ ಸುಳಿಗೆ ಸಿಲುಕಿರುವ ಪ್ರಕರಣಗಳು ವರದಿಯಾಗಿವೆ.

ಕೃಷಿ ಪ್ರಧಾನ ಮಾರುಕಟ್ಟೆಗೆ ಹೆಸರಾದ ಪಟ್ಟಣ  ಇಂದು ಗಾಂಜಾ, ಮಟ್ಕಾ  ದಂಧೆಯಲ್ಲಿ ಗುರುತಿಸಿಕೊಳ್ಳುತ್ತಿದೆ. ಸರ್ಕಾರಿ ಶಾಲಾ ಬಿಸಿಯೂಟ ಅಡುಗೆ ಸಹಾಯಕಿಯ ಏಕೈಕ ಪುತ್ರ ಈ ವ್ಯಸನಕ್ಕೆ ಬಲಿಯಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿ, ₹  50 ಸಾವಿರ ಖರ್ಚು ಮಾಡಿದ್ದಾರೆ.

‘ಮಿತ್ರರ ಸಹವಾಸದಿಂದ ನಾನು ಮಾದಕ, ಮದ್ಯ ವ್ಯಸನಿಯಾದೆ. ಸೇವಿಸುವಾಗ ಪ್ರಪಂಚದ ಪರಿವೆ ಇರುತ್ತಿರಲಿಲ್ಲ.  ನನ್ನ ತಾಯಿ ನನಗೆ ಚಿಕಿತ್ಸೆ ಕೊಡಿಸಿ ಪುನರ್‌ಜನ್ಮ ನೀಡಿದ್ದಾರೆ. ಮುಂದೆ ಎಂದೂ ಇಂತಹ ವ್ಯಸನಕ್ಕೆ ಬಲಿಯಾಗಲಾರೆ. ಮುಂದಿನ ದಿನಗಳಲ್ಲಿ ಚೆನ್ನಾಗಿ ದುಡಿದು ತಾಯಿಯನ್ನು   ನೋಡಿಕೊಳ್ಳುತ್ತೇನೆ’ ಎನ್ನುತ್ತಾನೆ ವ್ಯಸನಕ್ಕೆ ಒಳಗಾಗಿ ಚೇತರಿಸಿಕೊಂಡಿರುವ ಬಾಲಕ.

‘ನನ್ನ ಮಗನ ಪಾಡು ಬೇರೆ ಯಾರಿಗೂ ಬಾರದಿರಲಿ. ತಂದೆ–ತಾಯಿಗಳಿಗೆ ಆಗುವ ನೋವು ಮಕ್ಕಳು ಅರ್ಥಮಾಡಿಕೊಳ್ಳಬೇಕು’ ಎಂದು ಬಾಲಕನ ತಾಯಿ   ‘ಪ್ರಜಾವಾಣಿ’ ಜತೆ ಅಲವತ್ತುಕೊಂಡರು.

* * 

ರಿಪ್ಪನ್‌ ಪೇಟೆ ಮಾತ್ರವಲ್ಲ ಜಿಲ್ಲೆಯ ಬೇರೆ ಬೇರೆ ಭಾಗಗಲ್ಲೂ ಈ ಧಂದೆ ನಡೆಯುತ್ತಿರುವ ಮಾಹಿತಿ ಇದೆ. ಆರೋಪಿಗಳ ವಿರುದ್ಧ ನಿರ್ದಾಕ್ಷ್ಯಣ್ಯ ಕ್ರಮ ಕೈಗೊಳ್ಳಲಾಗುವುದು.

ಮುತ್ತುರಾಜ್, ಹೆಚ್ಚುವರಿ ಎಸ್‌ಪಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry