ವಂತಿಗೆ ಎತ್ತಿ ಬೋರ್‌ವೆಲ್ ಕೊರೆಸಿದ ಗ್ರಾಮಸ್ಥರು

7

ವಂತಿಗೆ ಎತ್ತಿ ಬೋರ್‌ವೆಲ್ ಕೊರೆಸಿದ ಗ್ರಾಮಸ್ಥರು

Published:
Updated:
ವಂತಿಗೆ ಎತ್ತಿ ಬೋರ್‌ವೆಲ್ ಕೊರೆಸಿದ ಗ್ರಾಮಸ್ಥರು

ದಾವಣಗೆರೆ: ಕಡು ಬೇಸಿಗೆಯಲ್ಲಿ ಹನಿ ನೀರಿಲ್ಲದೆ ಪರದಾಡಿದ್ದ ಚನ್ನಗಿರಿ ತಾಲ್ಲೂಕು ಚಿಕ್ಕಗಂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರಗಟ್ಟಿಹಳ್ಳಿಗೆ ಕೊನೆಗೂ ನೀರು ಬಂತು. ಜನರೇ ವಂತಿಗೆ ಎತ್ತಿ ಕೊರೆಸಿದ -ಬೋರ್‌ವೆಲ್‌ನಲ್ಲಿ ಈಗ ನೀರೋ ನೀರು!

ಇಡೀ ಊರಿಗೆ ನೀರು ಪೂರೈಸುತ್ತಿದ್ದ ನಾಲ್ಕು ಬೋರ್‌ವೆಲ್‌ಗಳು ಒಂದೊಂದಾಗಿ ಬೇಸಿಗೆಯಲ್ಲಿ ಕೈಕೊಟ್ಟಿದ್ದವು. ಉಳಿದೊಂದು ಬೋರ್‌ವೆಲ್‌ನಲ್ಲಿ ವಿದ್ಯುತ್‌ ಇದ್ದರೆ ಮಾತ್ರ ನೀರು ಸಿಗುತ್ತಿತ್ತು. ಹಾಗಾಗಿ, ಗ್ರಾಮಸ್ಥರಿಗೆ ಹಗಲು–ರಾತ್ರಿ ಬೋರ್‌ವೆಲ್‌ ಎದುರು ಠಿಕಾಣಿ ಹೂಡಬೇಕಾಗಿದ್ದು ಅನಿವಾರ್ಯವಾಗಿತ್ತು. ಸಾಲದ್ದಕ್ಕೆ ಶುದ್ಧ ಕುಡಿಯುವ ನೀರಿನ ಘಟಕವೂ ಕೈ ಕೊಟ್ಟಿತು.

ಯರಗಟ್ಟಿಹಳ್ಳಿ ಸುಮಾರು 800 ಜನಸಂಖ್ಯೆ ಇರುವ ಗ್ರಾಮ. ಇಲ್ಲಿಯ ಜನರದ್ದು ಮಳೆ ಹಾಗೂ ಬೋರ್‌ವೆಲ್ ನೀರು ಆಶ್ರಿತ ಕೃಷಿ. ಅಡಿಕೆ, ಮೆಕ್ಕೆಜೋಳ ಪ್ರಮುಖ ಬೆಳೆ. ಈ ವರ್ಷದ ಬಿಸಿಲ ತಾಪಕ್ಕೆ ಅನೇಕ ಅಡಿಕೆ ಮರಗಳು ನಾಶವಾದವು. ಕುಡಿಯುವುದಕ್ಕೇ ನೀರಿಲ್ಲದಿದ್ದಾಗ ಮರಕ್ಕೆ ಕೊಡುವುದಾದರೂ ಎಲ್ಲಿಂದ?

ಗ್ರಾಮದಲ್ಲಿ 5–6 ತಿಂಗಳು ಇದೇ ಗೋಳಿನ ಸ್ಥಿತಿ ಎದುರಾಯಿತು. ಗ್ರಾಮ ಪಂಚಾಯ್ತಿ ಕೊರೆಸಿದ ಬೋರ್‌ವೆಲ್‌ಗಳೆಲ್ಲಾ ವೈಫಲ್ಯ ಕಾಣುತ್ತಿದ್ದವು. ಗ್ರಾಮಸ್ಥರಿಗೆ ಬೇರೆ ದಾರಿ ಕಾಣದಾಯಿತು. ತಾವೇ ಬೋರ್‌ವೆಲ್‌ ಕೊರೆಸಿದರೆ ಹೇಗೆ ಎಂಬ ಅಲೋಚನೆ ಬಂತು. ಕೊನೆಗೆ ಎಲ್ಲರೂ ಸೇರಿ ವಿಚಾರ ಮಾಡಿದರು.

ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿದರು. ಹಲವರು ₹100 ಕೊಟ್ಟರು, ಇನ್ನು ಕೆಲವರು ₹ 500, ₹ 1 ಸಾವಿರ ವಂತಿಗೆ ನೀಡಿದರು. ಒಂದು ಬೋರ್‌ವೆಲ್‌ ಕೊರೆಸುವಷ್ಟು ಹಣ ಸಂಗ್ರಹವಾಯಿತು.ಯರಗಟ್ಟಿಹಳ್ಳಿಯಿಂದ 2 ಕಿ.ಮೀ. ದೂರದ ಹಳ್ಳದ ಬುಡದಲ್ಲಿ ಗ್ರಾಮಸ್ಥರು ಬೋರ್‌ವೆಲ್‌ ತೆಗೆಸಿದರು. ಅದೃಷ್ಟಕ್ಕೆ 250 ಅಡಿಗೇ ನೀರು ಸಿಕ್ಕಿತು. ಇನ್ನೂ 200 ಅಡಿ ಅಳ ತೆಗೆದರು. ಇನ್ನಷ್ಟು ಜಲರಾಶಿ ಬಂತು. ಗ್ರಾಮಸ್ಥರ ಹರ್ಷಕ್ಕೆ ಕೊನೆಯೇ ಇಲ್ಲದಾಯಿತು.

‘ವರದಿಯಿಂದ ಎಚ್ಚೆತ್ತುಗೊಂಡೆವು’:  ‘ಐದಾರು ತಿಂಗಳು ಹನಿ ನೀರಿಲ್ಲದೆ ಪಟ್ಟ ಪಾಡು ಹೇಳತೀರದು. ಇಂತಹ ವೇಳೆ ‘ಪ್ರಜಾವಾಣಿ’ಯಲ್ಲಿ ‘ಯರಗಟ್ಟಿಹಳ್ಳಿಯಲ್ಲಿ ಹನಿ ನೀರಿಲ್ಲ’ ಎಂಬ ಲೇಖನ ಪ್ರಕಟವಾಯಿತು. ಇದರಿಂದ ಎಚ್ಚೆತ್ತು ನಾವೇ ಹಣ ಸಂಗ್ರಹಿಸಲು ಮುಂದಾದೆವು. ಸುಮಾರು ₹ 1 ಲಕ್ಷ ಸಂಗ್ರಹವಾಯಿತು. ಬೋರ್‌ವೆಲ್‌ ತೆಗೆಸಿ ಕೊನೆಗೂ ನೀರು ಕಂಡೆವು’ ಎನ್ನುತ್ತಾರೆ ಗ್ರಾಮದ ನಿವಾಸಿ, ಉಪನ್ಯಾಸಕ ಶಿವಕುಮಾರ.

‘ಬೋರ್‌ವೆಲ್‌ ತೆಗೆದ ಸ್ಥಳದಿಂದ ಗ್ರಾಮಕ್ಕೆ ಎರಡು ಕಿ.ಮೀ. ದೂರದ ಅಂತರ. ಅಲ್ಲಿಂದ ಪೈಪ್‌ಲೈನ್‌ ಎಳೆಯಬೇಕಾಯಿತು. ಅರ್ಧದಷ್ಟು ಮಾರ್ಗಕ್ಕೆ ಗ್ರಾಮಸ್ಥರ ವಂತಿಗೆ ಖರ್ಚಾಯಿತು. ಇನ್ನರ್ಧ ಖರ್ಚು ಪಂಚಾಯ್ತಿ ಭರಿಸಿತು’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಆರ್.ಎಂ.ಮಂಜಪ್ಪ.

‘ಗ್ರಾಮದ ಅದೃಷ್ಟವೇ ಇರಬೇಕು. 800 ಅಡಿ ಕೊರೆದರೂ ಸಿಗದಿದ್ದ ನೀರು ನಮಗೆ 250 ಅಡಿಗೇ ಸಿಕ್ಕಿದೆ. ದೇವರು ನಮ್ಮ ಪಾಲಿಗೆ ಇದ್ದಾನೆ’ ಎಂದು ಕೈ ಮುಗಿಯುತ್ತಾರೆ ಅವರು.

‘ಬೋರ್‌ವೆಲ್‌ ಕೊರೆದು 20 ದಿವಸ ಆಗಿದೆ. ವಿದ್ಯುತ್‌ ಇದ್ದಾಗಲೆಲ್ಲಾ ನೀರು ಯಥೇಚ್ಚವಾಗಿ ಸಿಗುತ್ತಿದೆ. ಮಹಿಳೆಯರಂತೂ ತುಂಬಾ ಖುಷಿಯಾಗಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕವೂ ಈಗ ಸರಿಯಾಗಿದೆ. ಊರಿನಲ್ಲಿ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಮಂಜಪ್ಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry