ಬಿತ್ತನೆ ಬೀಜ ಖರೀದಿಯಲ್ಲಿ ಇರಲಿ ಎಚ್ಚರ

7

ಬಿತ್ತನೆ ಬೀಜ ಖರೀದಿಯಲ್ಲಿ ಇರಲಿ ಎಚ್ಚರ

Published:
Updated:
ಬಿತ್ತನೆ ಬೀಜ ಖರೀದಿಯಲ್ಲಿ ಇರಲಿ ಎಚ್ಚರ

ದಾವಣಗೆರೆ: ಜಿಲ್ಲೆಯಲ್ಲಿ ಎಲ್ಲೆಡೆ ತುಂತುರು ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಹೊಲಗಳನ್ನು ಹದಗೊಳಿಸಿ, ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಬಿತ್ತನೆ ಬೀಜಗಳ ಖರೀದಿ ವೇಳೆ ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರೂ ರೈತರು ಮೋಸ ಹೋಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.

ಕೆಲವೆಡೆ ಅನಧಿಕೃತವಾಗಿ ಪರವಾನಗಿ ಇಲ್ಲದೇ ಮೆಕ್ಕೆಜೋಳ, ಅಲಸಂದೆ ಹಾಗೂ ತೊಗರಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ ಸಿಗುತ್ತದೆ ಎಂದು ರೈತರು ಇಂಥ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿದ್ದಲ್ಲಿ ನಷ್ಟ ಅನುಭವಿಸ ಬೇಕಾಗುತ್ತದೆ. ಇಲಾಖೆಯ ಅಧಿಕೃತ ಕೇಂದ್ರಗಳಲ್ಲಿಯೇ ರೈತರು ಬೀಜಗಳ ಖರೀದಿ ಮಾಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮೆಕ್ಕೆಜೋಳಕ್ಕೆ ಒಲವು:  ‘ಜಿಲ್ಲೆಯಲ್ಲಿ ಸುಮಾರು 1.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗುತ್ತಿದೆ. ದಾವಣಗೆರೆ, ಹರಪನಹಳ್ಳಿ, ಜಗಳೂರು ಹಾಗೂ ಹೊನ್ನಾಳಿ ತಾಲ್ಲೂಕುಗಳಲ್ಲಿ ರೈತರು ಮೆಕ್ಕೆಜೋಳ ಬಿತ್ತನೆಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಹೀಗಾಗಿ ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಹೆಚ್ಚು ಬೇಡಿಕೆಯಿದೆ. ಇದನ್ನೇ ಕೆಲವರು ದುರುಪಯೋಗ ಮಾಡಿಕೊಂಡು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದಾರೆ.

‘ಈ ಹಿಂದೆ ಮಾಯಕೊಂಡ, ಆನಗೋಡು ಹೋಬಳಿ ಮತ್ತು ಜಗಳೂರು ತಾಲ್ಲೂಕಿನ ಬಿಳಿಚೋಡು ಹೋಬಳಿಯಲ್ಲಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಹೋಬಳಿಯಲ್ಲಿ ಕೆಲವೆಡೆ ಅನಧಿಕೃತವಾಗಿ ಚಿಲ್ಲರೆಯಾಗಿ ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟ ಮಾಡಲಾಗಿತ್ತು. ಕಡಿಮೆ ದರದ ಬೀಜ ಕೊಳ್ಳಲು ಹೋಗಿ ರೈತರು ನಷ್ಟ ಅನುಭವಿಸಿದ್ದಾರೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ.

ಬಿತ್ತನೆ ಬೀಜ ವಿತರಣಾ ಕೇಂದ್ರಗಳು...

ದಾವಣಗೆರೆ: ಬೀಜರಾಜ ನಿಗಮ (ಪಿ.ಬಿ. ರಸ್ತೆ), ಆನಗೋಡು, ಹೆಬ್ಬಾಳು, ಅಣಜಿ, ಮಾಯಕೊಂಡ, ಕೊಡಗನೂರು (ರೈತ ಸಂಪರ್ಕ ಕೇಂದ್ರ).

ಹರಿಹರ: ಕಸಬಾ ಮತ್ತು ಮಲೇಬೆನ್ನೂರು ಹೋಬಳಿ (ರೈತ ಸಂಪರ್ಕ ಕೇಂದ್ರ).

ಹೊನ್ನಾಳಿ: ನ್ಯಾಮತಿ, ಕೆಂಚಿಕೊಪ್ಪ, ಗೋವಿನಕೋವಿ, ಕುಂದೂರು, ಚೀಲೂರು, ಸಾಸ್ವೆಹಳ್ಳಿ (ರೈತ ಸಂಪರ್ಕ ಕೇಂದ್ರ).

ಜಗಳೂರು: ಎಪಿಎಂಸಿ ಜಗಳೂರು, ಬಿದರಕೆರೆ (ಅಂಬೇಡ್ಕರ್ ಭವನ), ಹುಚ್ಚವ್ವನಹಳ್ಳಿ, ಹೊಸಕೆರೆ, ಸೊಕ್ಕೆ, ಬಸವನಕೋಟೆ, ಬಿಳಿಚೋಡು, ಹಾಲೇಕಲ್ಲು, ಅಸಗೋಡು, ಪಲ್ಲಾಗಟ್ಟೆ ಗೋದಾಮು (ರೈತ ಸಂಪರ್ಕ ಕೇಂದ್ರ).

ಚನ್ನಗಿರಿ: ನಲ್ಲೂರು, ಹಿರೇಮಳಲಿ, ಸುಣ್ಣಿಗೆರೆ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ದೇವರಹಳ್ಳಿ, ಚಿಕ್ಕಗಂಗೂರು, ಸಂತೆಬೆನ್ನೂರು, ಹಿರೇಕೊಗಲೂರು, ಬಸವಾಪಟ್ಟಣ, ತ್ಯಾವಣಿಗೆ (ರೈತ ಸಂಪರ್ಕ ಕೇಂದ್ರ/ ಪಿಎಸಿಎಸ್‌ ಕೇಂದ್ರ).

ಹರಪನಹಳ್ಳಿ: ಎಪಿಎಂಸಿ ಆವರಣ, ತೆಲಗಿ, ಹಲವಾಗಲು, ಅರಸೀಕೆರೆ, ಹಿರೇಮೇಗಳಗೆರೆ, ಚಿಗಟೇರಿ, ಸಾಸ್ವಿಹಳ್ಳಿ, ನಂದಿಬೇವೂರು (ರೈತ ಸಂಪರ್ಕ ಕೇಂದ್ರ/ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಕೇಂದ್ರ).

ಬೀಜ ಖರೀದಿಸುವ ಮುನ್ನ...

* ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟ ಕೇಂದ್ರಗಳಿಂದ ಖರೀದಿಸಿ, ರಸೀದಿ ಪಡೆಯಬೇಕು. ರಸೀದಿಯಲ್ಲಿ ರೈತರ ಹೆಸರು, ವಿಳಾಸ, ಬೆಳೆ, ಕಂಪೆನಿ, ತಳಿ ಹಾಗೂ ಲಾಟ್‌   ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರುವ ಬಗ್ಗೆ ಗಮನಿಸಬೇಕು.

* ಹಿಂದಿನ ಹಂಗಾಮಿನಲ್ಲಿ ಉತ್ತಮ ಇಳುವರಿ ನೀಡಿದ ವಿವಿಧ ತಳಿಗಳ ಬಿತ್ತನೆ ಬೀಜ ಖರೀದಿಸಬೇಕು.

* ಹವಾಮಾನದ ವೈಪರೀತ್ಯಗಳಿದ್ದಾಗ ತಳಿಗಳ ಕಾರ್ಯಕ್ಷಮತೆ ಕುರಿತು ಮಾಹಿತಿ ಹೊಂದಿರಬೇಕು.

* ಬಿತ್ತನೆ ಬೀಜ ಮಾರಾಟದ ಪ್ಯಾಕೇಟ್‌ಗಳ ಮೇಲೆ ನಮೂದಿಸಿದ ಗರಿಷ್ಠ ಮಾರಾಟ ಬೆಲೆ ಮಾತ್ರ ಸಂದಾಯಿಸಬೇಕು. ಹೆಚ್ಚಿನ ದರ ವಸೂಲಿ ಮಾಡಿದ್ದಲ್ಲಿ ತಕ್ಷಣ ಕೃಷಿ ಇಲಾಖೆ   ಅಧಿಕಾರಿಗಳನ್ನು ಸಂಪರ್ಕಿಸಬೇಕು.

* * 

ರೈತ ಸಂಪರ್ಕ ಕೇಂದ್ರಗಳಲ್ಲಿ ಮಾತ್ರ ಬಿತ್ತನೆ ಬೀಜ ಖರೀದಿಸಬೇಕು. ಅನಧಿಕೃತ ಬಿತ್ತನೆ ಬೀಜ ಮಾರಾಟ ಕಂಡು ಬಂದಲ್ಲಿ ಮೊಬೈಲ್‌ ಸಂಖ್ಯೆ: 8277931106 ಸಂಪರ್ಕಿಸಿ.

ವಿ.ಸದಾಶಿವ

ಜಂಟಿ ಕೃಷಿ ನಿರ್ದೇಶಕರು.

* * 

ಎಪಿಎಂಸಿ ಗೋದಾಮು ವೊಂದರಲ್ಲಿ ಅನಧಿಕೃತವಾಗಿ ಸಂಗ್ರಹಿಸಿಕೊಂಡಿದ್ದ 60 ಕ್ವಿಂಟಲ್‌ ಮೆಕ್ಕೆಜೋಳ ಹಾಗೂ 10 ಕ್ವಿಂಟಲ್‌ ಅಲಸಂದೆ ಬಿತ್ತನೆ ಬೀಜಗಳನ್ನು ಈಚೆಗೆ ವಶಪಡಿಸಿಕೊಳ್ಳಲಾಗಿದೆ. 

ಬಿ.ಉಮೇಶ್,

ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry