ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರುಮಯವಾದ ನಗರ: ಜನಜೀವನ ಅಸ್ತವ್ಯಸ್ತ

Last Updated 14 ಜೂನ್ 2017, 6:25 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಗೆ ಮುಂಗಾರು ಪ್ರವೇಶ ಮಾಡಿದೆ. ಮೊದಲ ದಿನವೇ ಎರಡು ಗಂಟೆ ಮಳೆ ಅಬ್ಬರಿಸಿ ಹಲವೆಡೆ ಆವಾಂತರ ಮಾಡಿದೆ. ನಗರದಲ್ಲಿ ಗಟಾರಗಳು ಉಕ್ಕಿ ಹರಿದ ಕಾರಣ ಕೊಳಚೆ ನೀರು ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ರಸ್ತೆ ಮೇಲೆ ಹರಡಿ ಗಬ್ಬು ವಾಸನೆ ಬರುತ್ತಿದೆ.

ಸಿದ್ಧಾರ್ಥ ಕಾಲೇಜಿನ ಮುಂಭಾಗದ ರಸ್ತೆ, ಅಂಬೇಡ್ಕರ್‌ ವೃತ್ತ, ಭಗತಸಿಂಗ್‌ ವೃತ್ತ, ಬಸವೇಶ್ವರ ವೃತ್ತ, ನಯಾಕಮಾನ್‌ದಿಂದ ಚೌಬಾರಾ ವರೆಗಿನ ರಸ್ತೆ ಕೆಸರು ಗುಂಡಿಯಾಗಿದೆ. ಒಳಚರಂಡಿ ನಿರ್ಮಾಣಕ್ಕೆ ಅಲ್ಲಲ್ಲಿ ರಸ್ತೆ ಮಧ್ಯೆ ಅಗೆದು ಬಿಡಲಾಗಿದೆ. ಅದರಲ್ಲಿ ನೀರು ನಿಂತ ಕಾರಣ ದಾರಿಯಲ್ಲಿ ಸಾಗುವ ದ್ವಿಚಕ್ರವಾಹನಗಳು ಕೆಸರಲ್ಲಿ ಸಿಕ್ಕು ಚಾಲಕರು ಹಿಂಸೆ ಅನುಭವಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಭಾರಿ ಸರಕು ಸಾಗಣೆ ಲಾರಿಯ ಚಕ್ರಗಳು ಮಣ್ಣಿನಲ್ಲಿ ಹೂತು ಸಂಚಾರಕ್ಕೆ ತಡೆ ಉಂಟಾಯಿತು. ಜೆಸಿಬಿ ಬಳಸಿ ಲಾರಿಯನ್ನು ಹೊಂಡದಿಂದ ಹೊರಗೆ ತೆಗೆಯಲಾಯಿತು. ಗವಾನ್‌ಚೌಕ್‌– ಮೊಘಲ್‌ ಗಾರ್ಡನ್‌ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ.

ಓಲ್ಡ್‌ಸಿಟಿಯಲ್ಲೂ ವಾಹನಗಳು ಗುಂಡಿಯಲ್ಲಿ ಸಿಲುಕಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಎದುರಿಸಬೇಕಾಯಿತು. ಕ್ರೇನ್ ಸಹಾಯದಿಂದ ವಾಹನಗಳನ್ನು ಮೇಲಕ್ಕೆ ಎತ್ತಲಾಯಿತು.

ಜಿಲ್ಲಾ ನಗರ ಅಭಿವೃದ್ಧಿ ಕೋಶದ ಮೂಲಕ ನಗರೋತ್ಥಾನ ಯೋಜನೆಗಳ ಅಡಿಯಲ್ಲಿ ಓಲ್ಡ್‌ಸಿಟಿಯಲ್ಲಿ ಮನೆಗಳ ಮುಂದೆ ಗಟಾರ ನಿರ್ಮಾಣ ಮಾಡಲು ಅಗೆದು ಬಿಡಲಾಗಿದೆ. ಇದರಲ್ಲಿ ನೀರು ನಿಂತು ನಿವಾಸಿಗಳು ಮನೆಯಿಂದ ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಒಳಚರಂಡಿ ಹಾಗೂ ನಿರಂತರ ನೀರು ಯೋಜನೆಯ ಪೈಪ್‌ ಅಳವಡಿಸಲು ತೋಡಿದ್ದ ಗುಂಡಿಗಳನ್ನು ಮುಚ್ಚಿ ಕೆಲವು ಕಡೆ ರಸ್ತೆಯನ್ನೂ ನಿರ್ಮಿಸಲಾಗಿದೆ. ಮಣ್ಣು ಹಸಿಯಾಗಿ ನೆಲದೊಳಗೆ ಇಳಿದು ಅಲ್ಲಲ್ಲಿ ತಗ್ಗು ಬಿದ್ದಿದೆ.

ಅಧಿಕಾರಿಗಳ ಭೇಟಿ: ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಹಾಗೂ ನಗರಸಭೆಯ ಆಯುಕ್ತ ನರಸಿಂಹಮೂರ್ತಿ ಮಂಗಳವಾರ ದೀನದಯಾಳ್‌ ನಗರದ ಲೇಬರ್ ಕಾಲೊನಿ, ನ್ಯಾಯಾಧೀಶರ ವಸತಿಗೃಹ ಹಾಗೂ ಓಲ್ಡ್‌ಸಿಟಿಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಗರಸಭೆಯ ಕಾರ್ಮಿಕರು ಕಸ ತುಂಬಿಕೊಂಡಿದ್ದ ಗಟಾರಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದರು.

‘ಮಳೆಯಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ 10 ಜನ ಕಾರ್ಮಿಕರ ತಂಡವನ್ನು ರಚಿಸಲಾಗಿದೆ. ಮಳೆಯಿಂದ ಏನಾದರೂ ತೊಂದರೆಯಾದರೆ ನಗರಸಭೆಯ ಸಹಾಯವಾಣಿ 08482– 229272 ಅಥವಾ ನನ್ನ ಮೊಬೈಲ್‌ಗೆ (94499 80465) ಕರೆ ಮಾಡಿದರೆ ಸಾಕು ತಕ್ಷಣ ಸ್ಪಂದಿಸಲಾಗುವುದು’ ಎಂದು ನಗರಸಭೆಯ ಆಯುಕ್ತ ನರಸಿಂಹಮೂರ್ತಿ ತಿಳಿಸಿದರು.

ಮೂರು ದಿನಗಳಿಂದ ವಿದ್ಯುತ್‌ ಸಮಸ್ಯೆ
ಬೀದರ್‌: ನಗರದಲ್ಲಿ ಮೂರು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ನಿತ್ಯ ಮೂರರಿಂದ ನಾಲ್ಕು ತಾಸು ವಿದ್ಯುತ್‌ ಸ್ಥಗಿತಗೊಳ್ಳುತ್ತಿದೆ. ಕೆಲ ಕಡೆ ಮಂಗಳವಾರ ಬೆಳಗಿನ ಜಾವದಿಂದ ಮಧ್ಯಾಹ್ನದ ವರೆಗೂ ಸಿಂಗಲ್‌ ಫೇಸ್‌ ಮಾತ್ರ ವಿದ್ಯುತ್‌ ಇತ್ತು.ಬಾವಿಗಳಿಂದ ಮನೆಯ ಸಿಂಟೆಕ್ಸ್‌ಗಳಲ್ಲಿ ನೀರು ತುಂಬಿಕೊಳ್ಳಲಾಗದೆ ತೊಂದರೆ ಅನುಭವಿಸಿದರು.

‘ಜೆಸ್ಕಾಂ ಅಧಿಕಾರಿಗಳು ಮುನ್ಸೂಚನೆ ನೀಡದೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುತ್ತಿರುವ ಕಾರಣ ವ್ಯಾಪಾರ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೂರು ದಿನಗಳಿಂದ ನಗರಕ್ಕೆ ಸರಿಯಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಸಂಜೆ ಅನಿವಾರ್ಯವಾಗಿ ಅಂಗಡಿ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಬೇಕಾಗಿದೆ’ ಎಂದು ಮೋಹನ್‌ ಮಾರ್ಕೆಟ್‌ನ ಅಂಗಡಿಯೊಂದರ ಮಾಲೀಕ  ಶಿವಕುಮಾರ ಅಸಮಾಧಾನ ವ್ಯಕ್ತಪಡಿಸಿದರು.

‘ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ವಿದ್ಯುತ್‌ ತಂತಿಗಳ ಮೇಲೆ ಮರದ ಟೊಂಗೆಗಳು ಬಿದ್ದು, ತಂತಿಗಳು ತುಂಡಾಗುತ್ತಿವೆ. ಸ್ಥಳಕ್ಕೆ ತೆರಳಿ ವಿದ್ಯುತ್‌ ತಂತಿ ಜೋಡಿಸಲು ಸ್ವಲ್ಪ ಸಮಯ ತಗಲುತ್ತಿದೆ. ಹೀಗಾಗಿ ಮೂರು ದಿನಗಳಿಂದ ವಿದ್ಯುತ್‌ ಸಮಸ್ಯೆ ಎದುರಾಗುತ್ತಿದೆ’ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್‌ ತಿಳಿಸಿದರು.

* * 

ಮಳೆಯ ನೀರು ಮನೆಗೆ ನುಗ್ಗುವುದು ಗಮನಕ್ಕೆ ಬಂದರೆ ಸಾರ್ವಜನಿಕರು ತಕ್ಷಣ ಸಹಾಯವಾಣಿಗೆ ಕರೆ ಮಾಡಬೇಕು. ವಿಶೇಷ ತಂಡ ಕೆಲ ಕ್ಷಣಗಳಲ್ಲೇ ಸ್ಥಳಕ್ಕೆ ಧಾವಿಸುವುದು.
ನರಸಿಂಹಮೂರ್ತಿ
ಆಯುಕ್ತ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT