ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ‘ನೀಲಿ’ ಸುಂದರಿ

Last Updated 14 ಜೂನ್ 2017, 7:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ಆರ್ಭಟದ ನಡುವೆಯೇ ಬಾಯಲ್ಲಿ ನೀರೂರಿಸುವ ಒಗರು, ಸಿಹಿ ಮಿಶ್ರಿತ ರುಚಿಯ ‘ನೀಲಿ’ ಸುಂದರಿ ಜಂಬೂ ನೇರಳೆ ಹಣ್ಣುಗಳು ಭರ್ಜರಿ ಬಿಕರಿಯಾಗುತ್ತಿವೆ. ಮೇ ತಿಂಗಳಿನಿಂದ ಆರಂಭ ಗೊಂಡಿರುವ ನೇರಳೆ ಸುಗ್ಗಿಯ ಕಾಲ ಇನ್ನೂ ಒಂದೂವರೆ ತಿಂಗಳು ಇರುತ್ತದೆ. ವರ್ಷಕ್ಕೊಮ್ಮೆ ದೊರಕುವ ಈ ಹಣ್ಣುಗಳ ರುಚಿ ತಪ್ಪದೇ ಸವಿಯಬೇಕು. ಬಾಯಿ ರುಚಿಯ ಜತೆಗೆ ಆರೋಗ್ಯ ದೃಷ್ಟಿಯಿಂದಲೂ ಉತ್ತಮ ಹಣ್ಣಿದು.

ಹಣ್ಣು ಮಧುಮೇಹಕ್ಕೆ ಉತ್ತಮ ಔಷಧವಾಗಿದೆ. ಆದ ಕಾರಣವೂ ಅಪಾರ ಬೇಡಿಕೆ ಇದೆ. ದಾರಿ ಬದಿ, ಅರಣ್ಯದಲ್ಲಿ ಕಾಣ ಸಿಗುತ್ತಿದ್ದ ಜಂಬೂ ನೇರಳೆ ಮರಗಳು ಇಂದು ರೈತರ ಜಮೀನುಗಳಲ್ಲಿ ತೋಟವಾಗಿವೆ.  ಮರಗಳನ್ನು ಗುತ್ತಿಗೆ ಪಡೆದು ಹಣ್ಣು ಕಿತ್ತು ಮಾರುವುದೇ ಉದ್ಯಮವಾಗಿದೆ. ಸದ್ಯ ಮಾರು ಕಟ್ಟೆಯಲ್ಲಿ ಒಂದು ಕೆ.ಜಿ  ಹಣ್ಣು  ₹100 ರಿಂದ ₹140 ರವರೆಗೆ ಮಾರಾಟವಾಗುತ್ತಿದೆ.

ಜಿಲ್ಲೆಯ ಪೆರೇಸಂದ್ರ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು ಸುತ್ತಲಿನ ಪ್ರದೇಶದಲ್ಲಿ ನೇರಳೆ ಮರಗಳು ಹೆಚ್ಚಾಗಿವೆ. ಸದ್ಯ ಜಿಲ್ಲಾ ಕೇಂದ್ರವಾದ ನಗರದ ಮಾರುಕಟ್ಟೆವೊಂದರಲ್ಲೇ ನಿತ್ಯ ಅರ್ಧ ಟನ್‌ ಹಣ್ಣು ಮಾರಾಟವಾಗುತ್ತದೆ. ಇನ್ನುಳಿದ ತಾಲ್ಲೂಕು ಕೇಂದ್ರಗಳಲ್ಲಿನ ಮಾರಾಟ ಲೆಕ್ಕಕ್ಕೆ ತೆಗೆದುಕೊಂಡರೆ ಅದರ ಪ್ರಮಾಣ ದಿನಕ್ಕೆ ಒಂದು ಟನ್‌ ದಾಟುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ವಿವಿಧ ಋತುಗಳಿಗೆ ಅನುಸಾರವಾಗಿ ಹಣ್ಣು, ಕಾಯಿಗಳನ್ನು ಮಾರಾಟ ಮಾಡುವ ತಳ್ಳುಗಾಡಿಯ ವ್ಯಾಪಾರಿ, ನಗರದ ಡಿಪೋ ಗ್ಯಾರೇಜ್ ಹಿಂಭಾಗ ಪ್ರದೇಶದ ನಿವಾಸಿ ಗೋವಿಂದಪ್ಪ ಸದ್ಯ ನೇರಳೆ ಮಾರಾಟದಲ್ಲಿ ಬಿಡುವಿಲ್ಲದವ ರಾಗಿದ್ದಾರೆ. ಎಂ.ಜಿ. ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಅವರನ್ನು ಮಾತಿಗೆಳೆದರೆ, ‘ಸದ್ಯ ನೇರಳೆ ಹಣ್ಣಿನ ವ್ಯಾಪಾರ ಚೆನ್ನಾಗಿದೆ. ಶಿಡ್ಲಘಟ್ಟದ ತೋಟದಿಂದ ಹಣ್ಣುಗಳನ್ನು ತರಿಸುತ್ತೇವೆ. ನಗರದಲ್ಲಿ ಮೂರು ಕಡೆಗಳಲ್ಲಿ ನಾವು ಹಣ್ಣು ಮಾರುತ್ತೇವೆ. ನಿತ್ಯ 100 ಕೆ.ಜಿ ಹಣ್ಣು ಮಾರುತ್ತೇನೆ’ ಎಂದು ತಿಳಿಸಿದರು.

ನಗರದ ವ್ಯಾಪಾರಿಗಳಿಗೆ ನೇರಳೆ ಹಣ್ಣು ಪೂರೈಸುವ ಪೇರೇಸಂದ್ರದ ನಿವಾಸಿ ಹಸನ್‌ಸಾಬ್‌ ಅವರು, ‘ರೈತರು ಜಮೀನುಗಳಲ್ಲಿ ಬೆಳೆದ ನೇರಳೆ ಮರದಲ್ಲಿರುವ ಫಸಲನ್ನು ನಾವು ಗುತ್ತಿಗೆಗೆ ಪಡೆದು, ಹಣ್ಣು ಕಿತ್ತು ನಗರದ ಮಾರುಕಟ್ಟೆಗಳಲ್ಲಿರುವ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತೇವೆ. ಕಾಯಿಯ ಪ್ರಮಾಣದ ಮೇಲೆ ಮರಕ್ಕೆ ಬೆಲೆ ನಿಗದಿ ಮಾಡುತ್ತೇವೆ. ಕನಿಷ್ಠ ₹ 3,000 ದಿಂದ ₹ 10 ಸಾವಿರದ ವರೆಗೆ ಮರಗಳಿಗೆ ಬೆಲೆ ನಿಗದಿಯಾಗುತ್ತದೆ’ ಎಂದು ತಿಳಿಸಿದರು.

ಪೇರೇಸಂದ್ರದಿಂದ ನಗರಕ್ಕೆ ನೇರಳೆ ಹಣ್ಣು ಮಾರಲು ಬಂದಿದ್ದ ಚಂದ್ರಪ್ಪ ಅವರನ್ನು ಮಾತನಾಡಿಸಿದರೆ,  ‘ನಾನು ಮರ ಗುತ್ತಿಗೆ ಪಡೆದು ವ್ಯಾಪಾರಿಗಳಿಗೆ ಹಣ್ಣುಗಳನ್ನು ಮಾರುತ್ತೇನೆ. ಒಮ್ಮೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಸಿಕ್ಕಾಗ, ವ್ಯಾಪಾರಿಗಳು ಕಡಿಮೆ ಖರೀದಿಸಿದಾಗ ಉಳಿದ ಹಣ್ಣನ್ನು ಸ್ವತಃ ನಾನೇ ಮಾರುಕಟ್ಟೆಯಲ್ಲಿ ಕುಳಿತು ಮಾರಾಟ ಮಾಡುತ್ತೇನೆ’ ಎಂದು ಹೇಳಿದರು.

ನಗರಸಭೆ ವೃತ್ತದಲ್ಲಿ ತಳ್ಳುಗಾಡಿ ಯಲ್ಲಿ ಆಲೂಗಡ್ಡೆಯ ಜತೆಗೆ ನೇರಳೆ ಯನ್ನೂ ಮಾರುತ್ತಿದ್ದ ಗೋವಿಂದಪ್ಪ ಅವರನ್ನು ಕೇಳಿದರೆ, ‘ನಾನು ವರ್ಷಪೂರ್ತಿ ಈರುಳ್ಳಿ, ಆಲೂ ಗಡ್ಡೆ ವ್ಯಾಪಾರ ಮಾಡುತ್ತೇನೆ. ಜತೆಗೆ ಈ ಸೀಸನ್‌ನಲ್ಲಿ ನೇರಳೆ, ಮಾವಿನ ಹಣ್ಣು ಗಳನ್ನು ಕೂಡ ಮಾರಾಟ ಮಾಡುತ್ತೇನೆ. ಸದ್ಯ ಬಾಗೇಪಲ್ಲಿ, ಗುಡಿಬಂಡೆ ಕಡೆಗ ಳಿಂದ ನೇರಳೆ ಹಣ್ಣು ತರಿಸುತ್ತಿದ್ದೇನೆ.   ಕೆ.ಜಿ ಹಣ್ಣಿನ ಮೇಲೆ ₹ 20 ಲಾಭವಿಟ್ಟು ಕೊಂಡು ಮಾರುತ್ತೇನೆ’ ಎಂದು ಅವರು ಹೇಳಿದರು.

‘ಮಧುಮೇಹಿಗಳಿಗೆ ನೇರಳೆ ಹಣ್ಣು ಉತ್ತಮ ಔಷಧಿ. ನಿತ್ಯ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ಈ ಹಣ್ಣು ತಿನ್ನುವುದರಿಂದ ಅಜೀರ್ಣ ಸಮಸ್ಯೆಗಳು ದೂರವಾಗಿ, ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ನಾನಂತೂ ಈ ಸೀಸನ್‌ನಲ್ಲಿ ಆಗಾಗ ನೇರಳೆಯನ್ನು ತಪ್ಪದೆ ಚಪ್ಪರಿಸುತ್ತೇನೆ’ ಎಂದು ಗಂಗಮ್ಮನಗುಡಿ ರಸ್ತೆಯ ನಿವಾಸಿ ನವೀನ್‌ ತಿಳಿಸಿದರು.

ಅಂಕಿ ಅಂಶ
₹140 ಒಂದು ಕೆಜಿ ಹಣ್ಣಿನ ಗರಿಷ್ಠ ಬೆಲೆ

₹20 ಕೆಜಿ ಹಣ್ಣಿಗೆ ಲಾಭ

* * 

ತೋಟದವರೇ ಬಂದು ಹಣ್ಣುಗಳನ್ನು ಪೂರೈಸುತ್ತಾರೆ. ನಾವು ಒಂದು ಕೆ.ಜಿಗೆ ₹100 ರಂತೆ ಖರೀದಿಸಿ, ₹ 130 ರಿಂದ ₹ 140 ರವರೆಗೆ ಮಾರಾಟ ಮಾಡುತ್ತೇವೆ.
ಗೋವಿಂದಪ್ಪ
ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT