ರಾಜಕೀಯ ವ್ಯವಸ್ಥೆಯಲ್ಲಿ ನಿರ್ವಾತ ಸೃಷ್ಟಿ

7

ರಾಜಕೀಯ ವ್ಯವಸ್ಥೆಯಲ್ಲಿ ನಿರ್ವಾತ ಸೃಷ್ಟಿ

Published:
Updated:
ರಾಜಕೀಯ ವ್ಯವಸ್ಥೆಯಲ್ಲಿ ನಿರ್ವಾತ ಸೃಷ್ಟಿ

ಕೋಲಾರ: ‘ಇಂದಿನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಆದರ್ಶಪ್ರಾಯರು ಇಲ್ಲದೆ ನಿರ್ವಾತ ಸೃಷ್ಟಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರ್‌್ಯಾಂಕ್‌ ಗಳಿಸಿದ ಜಿಲ್ಲೆಯ ಕೆ.ಆರ್‌. ನಂದಿನಿ, ಸ್ನೇಹಾ ಹಾಗೂ ಬೈರಪ್ಪ ಅವರಿಗೆ ಜಿಲ್ಲಾಡಳಿತವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದ ಸಾಮಾಜಿಕ, ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಹೀಗಾಗಿ ಸಮಾಜಕ್ಕೆ ರೋಲ್‌ ಮಾಡಲ್‌ಗಳೇ ಇಲ್ಲದಂತಾಗಿದೆ’ ಎಂದು ಹೇಳಿದರು.

‘ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳಲ್ಲಿ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಉತ್ತಮವಾಗಿ ಬೆಳೆಯಿತು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಮೌಲ್ಯಗಳಿದ್ದವು. ಆದರೆ, ಕಾಲ ಬದಲಾದಂತೆ ಮೌಲ್ಯಗಳೆಲ್ಲಾ ಕುಸಿದಿವೆ. ದೇಶ ಭಕ್ತಿಯೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರೆಲ್ಲಾ ಜನಮಾನಸದಿಂದ ದೂರವಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬ್ರಿಟಿಷರು ಭಾರತವನ್ನು ದೇಶವನ್ನಾಗಿ ನೋಡಲಿಲ್ಲ. ವ್ಯಾಪಾರಕ್ಕಾಗಿ ಬಂದ ಅವರು ದೇಶದಲ್ಲಿ ದೇಶದಲ್ಲಿ ನಾಗರಿಕ ಸೇವಾ ವ್ಯವಸ್ಥೆ ಜಾರಿಗೆ ತಂದರು. ಆ ವ್ಯವಸ್ಥೆ ಈಗ ಆಡಳಿತ ಸೇವೆಯಾಗಿ ಬದಲಾಗಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸುವುದು ಆಡಳಿತ ಸೇವೆಯ ಧ್ಯೇಯೋದ್ದೇಶ. ಸಾರ್ವಜನಿಕ ವ್ಯವಸ್ಥೆಯಲ್ಲಿ ನ್ಯಾಯಿಕ ಪ್ರಜ್ಞೆಯಿಂದ ಕೆಲಸ ಮಾಡಿದರೆ ಯಾರಿಗೂ ಅಂಜುವ ಅಗತ್ಯವಿಲ್ಲ’ ಎಂದರು.

ಉತ್ತಮ ಬಾಂಧವ್ಯ: ‘ಅಧಿಕಾರಿಗಳು ಮಾಧ್ಯಮದೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಅಧಿಕಾರಿಗಳ ಪ್ರತಿ ಹೆಜ್ಜೆಯನ್ನು ಮಾಧ್ಯಮ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಒಳ್ಳೆಯ ಕೆಲಸ ಮಾಡಿದಾಗ ಹೊಗಳುತ್ತದೆ. ಕೆಟ್ಟ ಕೆಲಸ ಮಾಡಿದಾಗ ತೆಗಳುತ್ತದೆ. ಆದ್ದರಿಂದ ತಪ್ಪುಗಳಿಗೆ ಅವಕಾಶವಿಲ್ಲದಂತೆ ಸದಾ ಎಚ್ಚರದಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ದೇಶದಲ್ಲಿ ಉನ್ನತ ಮಟ್ಟದ ಆಡಳಿತ ನಿರ್ವಹಣೆಗೆ ಐಎಎಸ್‌ ಅರ್ಹತೆ ಬೇಕು. ಆದರೆ, ರಾಜಕಾರಣಿಗಳಿಗೆ ಯಾವುದೇ ಅರ್ಹತೆ ನಿಗದಿಪಡಿಸದಿರುವುದು ವಿಷಾದನೀಯ. ರಾಜಕಾರಣಿಗಳು ಏನೇ ಆದೇಶ ಮಾಡಿದರೂ ಅವುಗಳನ್ನು ಕಾನೂನಿನ ಪರಿಧಿಯಲ್ಲಿ ನೋಡಬೇಕು’ ಎಂದು ಸಲಹೆ ನೀಡಿದರು.

ಮರೆಯಬೇಡಿ: ‘ಯಾವುದೇ ಕಾರಣಕ್ಕೂ ಬಾಲ್ಯದ ದಿನಗಳು, ಊರು ಕೇರಿ, ಪೋಷಕರ ಶ್ರಮ ಮರೆಯಬೇಡಿ. ಜೀವನದಲ್ಲಿ ಬೆಳೆದು ಬಂದ ಹಾದಿಯನ್ನು ನೆನೆದರೆ ತಪ್ಪು ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ರಾಜ್ಯಕ್ಕೆ ನಿಷ್ಠೆ ತೋರಿ. ಪೋಷಕರು ಹಾಗೂ ಶಿಕ್ಷಕರಿಗೆ ಗೌರವ ತರುವಂತ ಕೆಲಸ ಮಾಡಿ’ ಎಂದು ಯುಪಿಎಸ್‌ಎಸ್‌ ರ್‌್ಯಾಂಕ್‌ ವಿಜೇತರಿಗೆ ಕಿವಿಮಾತು ಹೇಳಿದರು.

‘ಕನಸು ಕಾಣದವನು ಮನುಷ್ಯನೇ ಅಲ್ಲ. ಇನ್ನು ಒಳ್ಳೆಯ ಕನಸು ಕಾಣದಿದ್ದರೆ ಜೀವನದಲ್ಲಿ ಏನೂ ಸಾಧಿಸಲಾಗುವುದಿಲ್ಲ. ಮಕ್ಕಳು ಭವಿಷ್ಯದ ಬಗ್ಗೆ ಈಗಿನಿಂದಲೇ ಕನಸ್ಸು ಕಟ್ಟಿಕೊಳ್ಳಬೇಕು. ಆಗ ಮಾತ್ರ ಸಾಧನೆಯ ಶಿಖರವೇರಲು ಸಾಧ್ಯ. ಜಿಲ್ಲೆಯಲ್ಲಿ ನೀರಿಗೆ ಬರವಿದ್ದರೂ ಪ್ರತಿಭಾವಂತರಿಗೆ ಬರವಿಲ್ಲ’ ಎಂದು ತಿಳಿಸಿದರು.

ಶಾಸಕಿ ವೈ.ರಾಮಕ್ಕ, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ ಡಾ.ಕೆ.ವಿ. ತ್ರಿಲೋಕಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಪಾಲ್ಗೊಂಡಿದ್ದರು.

ಪ್ರತಿಭೆ ಪೋಷಿಸುವುದು ಪೋಷಕರ ಜವಾಬ್ದಾರಿ

ಕೋಲಾರ: ‘ಪ್ರತಿಯೊಬ್ಬರಲ್ಲೂ ಪ್ರತಿಭೆಯೆಂಬ ಬೀಜವಿರುತ್ತದೆ. ಅದನ್ನು ಪೋಷಿಸಿ ಬೆಳೆಸುವುದು ಪೋಷಕರ ಜವಾಬ್ದಾರಿ’ ಎಂದು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಪ್ರಥಮ ರ್‌್ಯಾಂಕ್‌ ಗಳಿಸಿರುವ ಜಿಲ್ಲೆಯ ಕೆ.ಆರ್.ನಂದಿನಿ ಕಿವಿಮಾತು ಹೇಳಿದರು.

ಜಿಲ್ಲಾಡಳಿತವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಏಳನೇ ತರಗತಿಯಲ್ಲಿ ನಾನು ಇಡೀ ಜಿಲ್ಲೆಗೆ ಮೂರನೇ ರ್‌್ಯಾಂಕ್‌ ಗಳಿಸಿದಾಗ ಪತ್ರಿಕೆಗಳು ಉತ್ತಮ ಪ್ರಚಾರ ನೀಡಿದ್ದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‌್ಯಾಂಕ್‌ ಸಾಧನೆಗೆ ಸ್ಫೂರ್ತಿಯಾಯಿತು’ ಎಂದರು.

‘ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ್‌್ಯಾಂಕ್‌ ಗಳಿಸಿರುವುದಕ್ಕೆ ಇಡೀ ಜಿಲ್ಲೆ, ರಾಜ್ಯ ಹೆಮ್ಮೆ ಪಡುತ್ತಿದೆ. ಇದರಿಂದ ವೈಯಕ್ತಿಕವಾಗಿ ಸಾಕಷ್ಟು ಸಂತಸವಾಗಿದೆ. ಪರೀಕ್ಷೆಯಲ್ಲಿ ರ್‌್ಯಾಂಕ್‌ ವಿಜೇತರ ಸಾಧನೆ ಬೇರೆ ಬೇರೆಯಾಗಿದ್ದರೂ ಎಲ್ಲರ ಶ್ರಮ ಒಂದೇ. ಹೀಗಾಗಿ ಎಲ್ಲಾ ಸಾಧಕರಿಗೂ ಸಮಾನ ಗೌರವ ಸಿಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಸಮಾಜದ ಸಾಲದಿಂದ ನಾನು ಶೈಕ್ಷಣಿಕವಾಗಿ ಈ ಸಾಧನೆ ಮಾಡಿದ್ದೇನೆ. ಹೀಗಾಗಿ ಸಮಾಜದ ಋಣ ನನ್ನ ಮೇಲಿದೆ. ದಕ್ಷ ಅಧಿಕಾರಿಯಾಗಿ ಉತ್ತಮ ಆಡಳಿತದ ಮೂಲಕ ಸಮಾಜದ ಸಾಲದ ಋಣ ತೀರಿಸುತ್ತೇನೆ. ಮಕ್ಕಳ ಬೆಳವಣಿಗೆಗೆ ಶಿಕ್ಷಣಕ್ಕಿಂತ ಮತ್ತೊಂದು ಅಸ್ತ್ರವಿಲ್ಲ. ಹೆಣ್ಣು ಮಕ್ಕಳಿಗೂ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ, ಆದ್ಯತೆ ಸಿಗಬೇಕು’ ಎಂದು ಸಲಹೆ ನೀಡಿದರು.

‘ಕನಸುಗಳ ಹಿಂದೆ ಪರಿಶ್ರಮವಿರಬೇಕು. ಸಾಧಕರು ತಾಳ್ಮೆ, ವಿನಯ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸೋಲು ಗೆಲವು ಸಹಜ. ಅವೆರಡನ್ನು ಸಮನಾಗಿ ಸ್ವೀಕರಿಸಬೇಕು. ಸೋಲಿನಿಂದ ಹತಾಶರಾಗದೆ ಮರಳಿ ಪ್ರಯತ್ನ ಮಾಡಿದರೆ ಖಂಡಿತ ಒಳ್ಳೆಯ ಫಲ ಸಿಗುತ್ತದೆ’ ಎಂದು ಹೇಳಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‌್ಯಾಂಕ್‌ ಗಳಿಸಿರುವ ಕೆಜಿಎಫ್‌ನ ಸ್ನೇಹಾ ತಮ್ಮ ಸಾಧನೆಯ ಅನುಭವ ಹಂಚಿಕೊಂಡರು.

* * 

ಈ ಹಿಂದೆ ರಾಜಕಾರಣಿಗಳು, ಅಧಿಕಾರಿಗಳಲ್ಲಿ ದೇಶಭಕ್ತಿ, ಪ್ರಾಮಾಣಿಕತೆ ಇತ್ತು. ಆದರೆ, ಈಗ ಈ ಮೌಲ್ಯಗಳೆಲ್ಲಾ ಅಪರೂಪ. ಈಗ ಎಲ್ಲೆಲ್ಲೂ ಕೊಳಕು ತುಂಬಿದೆ

ಕೆ.ಆರ್‌.ರಮೇಶ್‌ಕುಮಾರ್‌

ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry