ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿಗೆ ಬಂತು ₹ 72 ಕೋಟಿ

Last Updated 14 ಜೂನ್ 2017, 8:53 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಬೀಳದೆ ಲಕ್ಷಾಂತರ ರೈತರ ಬೆಳೆ ಒಣಗಿತು. ಈಗ ರಾಜ್ಯ ಸರ್ಕಾರ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಿದ್ದು, ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ.

ಜಿಲ್ಲೆಯ ಏಳು ತಾಲ್ಲೂಕಿನಲ್ಲಿ ಬೆಳೆ ಹಾನಿ ಅನುಭವಿಸಿದ 1,37,727 ಫಲಾನುಭವಿಗಳನ್ನು ಗುರುತಿಸಲಾಗಿದೆ. ಸರ್ಕಾರ ಐದು ಹಂತಗಳಲ್ಲಿ ಒಟ್ಟು ₹ 56 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ನಂತರ ಮತ್ತೊಮ್ಮೆ ಮೊದಲ ನಾಲ್ಕು ಹಂತದ ಹಣಕ್ಕೆ ಶೇ 10ರಷ್ಟು ಸೇರಿಸಿ ₹ 6 ಕೋಟಿ ಹಣ ಬಿಡುಗಡೆಯಾಗಿದ್ದು, ಒಟ್ಟಾರೆ ರೈತರ ಖಾತೆಗೆ ₹ 72 ಕೋಟಿ ಜಮೆ ಆಗಿದೆ.

ಮೊದಲ ಹಂತದ ಹಣ ಬಿಡುಗಡೆಯಾದಾಗ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆಯಾಗದ ಕಾರಣ ಗೊಂದಲ ಉಂಟಾಗಿತ್ತು. ಆದರೆ, ನಂತರದ ನಾಲ್ಕು ಹಂತಗಳಲ್ಲಿ ಎಲ್ಲ ಗೊಂದಲಗಳನ್ನು ನಿವಾರಿಸಿ ಹಣ ಜಮೆ ಮಾಡಲಾಗಿದೆ.

‘ಈಗಾಗಲೇ ಶೇ 90ರಷ್ಟು ಬೆಳೆಹಾನಿ ಪರಿಹಾರ ಹಣ ಬಿಡುಗಡೆ ಆಗಿದೆ. ಇನ್ನೊಂದು ಹಂತದ ಪರಿಹಾರ ಬಾಕಿ ಇದ್ದು, ಹಣ ಬಿಡುಗಡೆಯಾದ ತಕ್ಷಣ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ತಿಳಿಸಿದರು.

ರಾಗಿ ಅತಿ ಹೆಚ್ಚು ಹಾನಿ: ಕಳೆದ ವರ್ಷದ ಮುಂಗಾರು ಹಂಗಾಮಿನ ಒಣ ಭೂಮಿಯಲ್ಲಿ ರಾಗಿ, ಹಲಸಂದೆ, ಎಳ್ಳು ಮುಂತಾದ ಬೆಳೆಗಳಿಗೆ ಹಾನಿಯಾಗಿದೆ. ನೀರಾವರಿ ಭೂಮಿಯಲ್ಲಿ ಭತ್ತ ಮತ್ತು ಕಬ್ಬು ಬೆಳೆ ಹಾನಿಯಾಗಿದೆ. ಮದ್ದೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಬೆಳೆ ಹಾನಿಯಾದ ಬಗ್ಗೆ ಕೃಷಿ ಇಲಾಖೆ ವರದಿ ನೀಡಿದೆ.

ಮದ್ದೂರು ತಾಲ್ಲೂಕಿನಲ್ಲಿ 28,226 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿ ಉಂಟಾಗಿದೆ. ನಂತರ ಮಂಡ್ಯ ತಾಲ್ಲೂಕಿನಲ್ಲಿ 22,188 ಹೆಕ್ಟೇರ್‌, ನಾಗಮಂಗಲ ತಾಲ್ಲೂಕಿನಲ್ಲಿ 18,800 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ನಾಗಮಂಗಲ ತಾಲ್ಲೂಕಿನಲ್ಲಿ ಅತಿ ಹೆಚ್ಚು ರಾಗಿ ಬೆಳೆ ನಷ್ಟವಾದ ಬಗ್ಗೆ ವರದಿ ಇದೆ.

₹ 102 ಕೋಟಿ ಪ್ರಸ್ತಾವ ಜಿಲ್ಲೆಯಾದ್ಯಂತ ಬೆಳೆ ಹಾನಿ ಉಂಟಾದ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ₹ 102 ಕೋಟಿ ಪರಿಹಾರಕ್ಕೆ ಸರ್ಕಾರದ ಮುಂದೆ ಪ್ರಸ್ತಾವ ಸಲ್ಲಿಸಿದ್ದರು. ಮದ್ದೂರು ತಾಲ್ಲೂ ಕಿಗೆ ಅತಿ ಹೆಚ್ಚು ₹ 28.92 ಕೋಟಿ, ಮಂಡ್ಯ ತಾಲ್ಲೂಕಿಗೆ ₹ 20.27 ಕೋಟಿ ಪರಿಹಾರಕ್ಕೆ ತಾಲ್ಲೂಕುವಾರು ವಿಂಗಡಣೆ ಮಾಡಲಾಗಿತ್ತು. ವಿವಿಧೆಡೆ ತೆಂಗಿನ ಮರ ಗಳು ಒಣಗಿರುವ ಬಗ್ಗೆ ತೋಟಗಾರಿಕೆ ಇಲಾಖೆ ಕೂಡ ವರದಿ ನೀಡಿದ್ದು, ₹ 6.10 ಕೋಟಿ ಪ್ರಸ್ತಾವ ಸಲ್ಲಿಸಿತ್ತು.

‘ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ರಾಗಿ ಬೆಳೆ ಹೆಚ್ಚು ಹಾನಿಗೀಡಾಗಿದೆ. ಈ ಬಗ್ಗೆ ತಾಲ್ಲೂಕುವಾರು ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾಸುಲೋಚನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT