ಕೆಬಲ್‌ ಟಿ.ವಿ.ಯಲ್ಲಿ ಪ್ರಸಾರವಾದ ‘ರಾಜಕುಮಾರ’!

7

ಕೆಬಲ್‌ ಟಿ.ವಿ.ಯಲ್ಲಿ ಪ್ರಸಾರವಾದ ‘ರಾಜಕುಮಾರ’!

Published:
Updated:
ಕೆಬಲ್‌ ಟಿ.ವಿ.ಯಲ್ಲಿ ಪ್ರಸಾರವಾದ ‘ರಾಜಕುಮಾರ’!

ಬೆಂಗಳೂರು: ‘ಬಾಹುಬಲಿ–2’ ಚಿತ್ರದ ಮೊದಲ ದಿನದ ಪ್ರದರ್ಶನದಲ್ಲಿಯೇ ಚಿತ್ರದ ಬಹುಪಾಲನ್ನು ಫೇಸ್‌ಬುಕ್‌ ಲೈವ್‌ನಲ್ಲಿ ಅನಧಿಕೃತವಾಗಿ ಹರಿಬಿಡಲಾಗಿತ್ತು. ಇದೀಗ ಕನ್ನಡದ ‘ರಾಜಕುಮಾರ’ನ ಸರದಿ. ‘ರಾಜಕುಮಾರನ’ ವಿಷಯದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಿನ ಕೇಬಲ್‌ ವಾಹಿನಿ ‘ಎನ್‌ ಟಿವಿ’ಯಲ್ಲಿ ಅನಧಿಕೃತವಾಗಿ ಇಡೀ ಸಿನಿಮಾವನ್ನೂ ಪ್ರಸಾರ ಮಾಡಲಾಗಿದೆ!

ಒಂದೆಡೆ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಹನ್ನೆರಡು ವಾರಗಳನ್ನು ದಾಟಿ ಹದಿಮೂರನೇ ವಾರಕ್ಕೆ ಕಾಲಿಟ್ಟಿರುವ ‘ರಾಜಕುಮಾರ’ ಈಗ ಫೇಸ್‌ಬುಕ್‌, ಯೂ ಟ್ಯೂಬ್‌ ಎಲ್ಲೆಡೆಯೂ ಅನಧಿಕೃತವಾಗಿ ಹರಿದಾಡುತ್ತಿದ್ದಾನೆ.

ಇದೆಲ್ಲ ಆದದ್ದು ಹೇಗೆ?

‘ರಾಜಕುಮಾರ’ ಟಿ.ವಿ. ಹಕ್ಕನ್ನು ಉದಯ ಟಿ.ವಿ. ಖರೀದಿಸಿತ್ತು. ಸನ್‌ ನೆಟ್‌ವರ್ಕ್‌ ತಾಂತ್ರಿಕ ಕಾರಣಗಳಿಂದ ಎರಡು ದಿನಗಳ ಹಿಂದೆ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ.

ವಿಜಯ ಕಿರಗಂದೂರ

ಈ ಕುರಿತಂತೆ ‘ಪ್ರಜಾವಾಣಿ’  ಜತೆ ಮಾತನಾಡಿದ ‘ರಾಜಕುಮಾರ’ದ ನಿರ್ಮಾಪಕ ವಿಜಯ ಕಿರಗಂದೂರ ‘ಸನ್‌ ನೆಟ್‌ವರ್ಕ್‌ ಸಂಸ್ಥೆಯು ಅಂತರ್ಜಾಲದಲ್ಲಿ ಹಣ ಕೊಟ್ಟು ಸಿನಿಮಾ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಹೊಸ ಆ್ಯಪ್‌ ಒಂದನ್ನು ರೂಪಿಸುತ್ತಿದೆ. ಅದರ ಪರೀಕ್ಷೆ ನಡೆಸುತ್ತಿರುವಾಗ ಗೊತ್ತಿಲ್ಲದೇ ಅಂತರ್ಜಾಲದಲ್ಲಿ ಅವರ ಸಂಗ್ರಹದಲ್ಲಿನ ಹಲವು ಸಿನಿಮಾಗಳು ಸೋರಿಕೆಯಾಗಿಬಿಟ್ಟಿವೆ. ಅದು ಅವರ ಅರಿವಿಗೆ ಬರುವಷ್ಟರಲ್ಲಿಯೇ ಹಲವರು ಅಲ್ಲಿಂದ ಸಿನಿಮಾವನ್ನು ಡೌನ್‌ಲೋಡ್‌ ಮಾಡಿಕೊಂಡುಬಿಟ್ಟಿದ್ದಾರೆ. ಹಾಗೆಯೇ ಫೇಸ್‌ಬುಕ್‌, ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಕೂಡ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

ಆದರೆ ‘ರಾಜಕುಮಾರ’ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಅದನ್ನು ಹೀಗೆ ಅಂತರ್ಜಾಲದಲ್ಲಿ ಬಿಡುವಂತಿಲ್ಲ. ಸಿನಿಮಾ ಬಿಡುಗಡೆಯಾಗಿ ಆರು ತಿಂಗಳ ಒಳಗೆ ಹೀಗೆ ಅಂತರ್ಜಾಲದಲ್ಲಿ ಬಿಡುಗಡೆ ಮಾಡುವುದು ಒಪ್ಪಂದಕ್ಕೆ ವಿರುದ್ಧವಾದದ್ದು.

‘ಈಗ ಆಗಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಹೇಗೆ ಎಂಬ ಕುರಿತು ಸನ್‌ನೆಟ್‌ವರ್ಕ್‌ನವರ ಜತೆಗೆ ಮಾತುಕತೆ ನಡೆಯುತ್ತಿದೆ’ ಎಂದೂ ವಿಜಯ್‌ ತಿಳಿಸಿದ್ದಾರೆ.

‘ಅಂತರ್ಜಾಲದಿಂದ ‘ರಾಜಕುಮಾರ’ವನ್ನು ತೆಗೆಸಲೂ ಪ್ರಯತ್ನಗಳು ನಡೆಯುತ್ತಿವೆ. ಆದರೆ ಈಗಾಗಲೇ ಹಲವಾರು ಜಾಲತಾಣಗಳು ಮತ್ತು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಆಗಿರುವುದರಿಂದ ನಿಯಂತ್ರಿಸುವುದೂ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಅವರು.

ಸನ್‌ ನೆಟ್‌ವರ್ಕ್‌ ಈಗಾಗಲೇ ಪೈರಸಿ ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದೆ. ಅದರ ಜತೆಗೆ ಚಿತ್ರತಂಡವೂ ಪ್ರತ್ಯೇಕವಾಗಿ ಖಾಸಗೀ ಏಜೆನ್ಸಿಯ ಮುಖಾಂತರ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ.

ಇದರಿಂದ ಸಿನಿಮಾ ಗಳಿಕೆಗೆ ತೊಂದರೆಯಾವುದಿಲ್ಲವೇ ಎಂಬ ಪ್ರಶ್ನೆಗೆ ‘ಸದ್ಯಕ್ಕೆ ಯಾವ ರೀತಿಯ ತೊಂದರೆಯೂ ಆದಂತೆ ಕಾಣುತ್ತಿಲ್ಲ. ಅದು ಒಮ್ಮಿಂದೊಮ್ಮೆಲೇ ತಿಳಿಯುವುದಿಲ್ಲ. ಇನ್ನೊಂದೆರಡು ದಿನಗಳಲ್ಲಿ ಸ್ಪಷ್ಟವಾಗಿ ತಿಳಿಯಬಹುದು. ಅದರ ನಂತರವೇ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದೂ ಯೋಚಿಸುತ್ತೇವೆ’ ಎನ್ನುತ್ತಾರೆ ವಿಜಯ್‌.

ದೂರು ನೀಡಿಲ್ಲ

ಈ ಕುರಿತಂತೆ ಚಿತ್ರತಂಡ ಸೈಬರ್‌ ಪೊಲೀಸ್‌ಗಾಗಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾಗಲೀ ಇದುವರೆಗೆ ದೂರು ನೀಡಿಲ್ಲ. ‘ದೂರು ನೀಡುವ ಕುರಿತು ಇನ್ನೂ ಏನೂ ಯೋಚಿಸಿಲ್ಲ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆದ ಘಟನೆಯನ್ನು ವಿವರಿಸಿ ಒಂದು ಪತ್ರವನ್ನು ನೀಡುತ್ತೇವೆ’ ಎಂದು ವಿಜಯ್‌ ತಿಳಿಸುತ್ತಾರೆ.

ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ‘ರಾಜಕುಮಾರ’ ಚಿತ್ರದಲ್ಲಿ ಪುನೀತ್‌ ರಾಜಕುಮಾರ್‌ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ 75 ದಿನಗಳನ್ನು ಪೂರೈಸಿರುವ ಚಿತ್ರವು ನೂರು ದಿನಗಳತ್ತ ಮುನ್ನುಗ್ಗುತ್ತಿದೆ.

ಸಂತೋಷ್‌ ಆನಂದ್‌ರಾಮ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry