ಊರಲ್ಲೇ ಕೆಲಸ; ಕೃಷಿ ಕಾರ್ಮಿಕರಲ್ಲಿ ಸಂತಸ

7

ಊರಲ್ಲೇ ಕೆಲಸ; ಕೃಷಿ ಕಾರ್ಮಿಕರಲ್ಲಿ ಸಂತಸ

Published:
Updated:
ಊರಲ್ಲೇ ಕೆಲಸ; ಕೃಷಿ ಕಾರ್ಮಿಕರಲ್ಲಿ ಸಂತಸ

ವಿಜಯಪುರ: ‘ಜೂನ್‌ ಸಾತ್‌’ ಬಳಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಬಿತ್ತನೆ ಬಿರುಸುಗೊಂಡಿಲ್ಲದಿದ್ದರೂ; ಪೂರ್ವ ಭಾವಿ ಸಿದ್ಧತೆ ಭರದಿಂದ ನಡೆದಿವೆ.

ನಗರದ ಸುತ್ತಮುತ್ತ ಸೇರಿದಂತೆ ಕೆಲವೆಡೆ ಎರಡ್ಮೂರು ದಿನಗಳಿಂದ ಮಳೆ ಸುರಿದಿದೆ. ಯುಗಾದಿಯ ಬಳಿಕ ನೇಗಿಲು ಹೊಡೆದಾಗ ಹೊಲದಲ್ಲಿ ಎದ್ದಿದ್ದ ಹೆಂಟೆಗಳು ಮಳೆ ನೀರಿಗೆ ಇನ್ನೂ ಕರಗಿ ಮಣ್ಣಾಗಿಲ್ಲ. ಹಿಂದಿನ ವರ್ಷದ ತೊಗರಿ ಬೆಳೆಯ ಕಡ್ಡಿಗಳು ಕರಗಿ ಗೊಬ್ಬರವಾಗಿಲ್ಲ.

‘ಮಿರಗಾ’ (ಮೃಗಶಿರಾ) ಮಳೆ ಆರಂಭಗೊಳ್ಳುತ್ತಿದ್ದಂತೆ, ಹೊಲದಲ್ಲಿನ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಪ್ರಮುಖವಾಗಿ ಕಸ ಸ್ವಚ್ಛಗೊಳಿಸುವ ಕಾಯಕ ಎಲ್ಲೆಡೆ ಬಿರುಸಿನಿಂದ ನಡೆದಿದೆ. ಇದು ಕೃಷಿ ಕೂಲಿ ಕಾರ್ಮಿಕರ ಸಂತಸ ವನ್ನು ಇಮ್ಮಡಿಗೊಳಿಸಿದೆ.

ಹಳ್ಳೀಲೇ ಕೆಲಸ: ಸತತ ಬರದಿಂದಾಗಿ ಜಮೀನುಗಳಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆದಿರಲಿಲ್ಲ. ದ್ರಾಕ್ಷಿ ಪಡಗಳಲ್ಲೂ ಕೆಲಸವಿರಲಿಲ್ಲ. ಬದುಕಿನ ಅನಿವಾರ್ಯತೆಗಾಗಿ ಕೃಷಿ ಕೂಲಿ ಕಾರ್ಮಿಕರು ವಿಜಯಪುರ ನಗರ ಸೇರಿದಂತೆ ಹತ್ತಿರದ ಮುದ್ದೇಬಿಹಾಳ, ಸಿಂದಗಿ, ಬಸವನಬಾಗೇವಾಡಿ, ಇಂಡಿ, ಚಡಚಣ, ಆಲಮೇಲ, ನಿಡಗುಂದಿ, ಕೊಲ್ಹಾರ, ದೇವರಹಿಪ್ಪರಗಿ, ನಾಲತ ವಾಡ, ಮನಗೂಳಿ ಪಟ್ಟಣಗಳಿಗೆ ಕೆಲಸ ಅರಸಿ ನಿತ್ಯವೂ ಊರಿನಿಂದ ಹೋಗಿ ಬರಬೇಕಿತ್ತು.

ಗೌಂಡಿ, ಕಾಂಕ್ರೀಟ್, ಕಟ್ಟಡ ನಿರ್ಮಾಣ ಸೇರಿದಂತೆ ಯಾವ ಕೆಲಸ ಸಿಕ್ಕರೂ ಮಾಡಬೇಕಾದ ಪರಿಸ್ಥಿತಿಯಿತ್ತು. ‘ವಾರದಿಂದ ಮಳೆ ಆರಂಭ ಗೊಳ್ಳುತ್ತಿದ್ದಂತೆ, ಮನೆ ಬಾಗಿಲಲ್ಲೇ ಕೂಲಿ ಕೆಲಸ ದೊರಕುತ್ತಿದೆ. ನಾವೂ ನೆಮ್ಮದಿ ಯಿಂದ ಊರ ಹೊರ ಭಾಗದ ಹೊಲಗಳಲ್ಲಿ ದುಡಿಯಲು ಹೋಗುತ್ತಿದ್ದೇವೆ’ ಎಂದು ಐನಾಪುರ ಗ್ರಾಮದ ಮಹಾದೇವಿ ಕನ್ನೂರ, ಚನ್ನವ್ವ ಕನ್ನೂರ, ಸಂಜಕ್ಕ ಕನ್ನೂರ, ರುಕ್ಮಾ ಗೂಗದಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗುಂಪು: ‘ವಾರದಿಂದ ಕಸ ಆಯೋ ಕೆಲಸ ಆರಂಭಿಸಿದ್ದೇವೆ. ನಮ್ದು 15ರಿಂದ 20 ಮಂದಿಯ ಗುಂಪಿದೆ. ಎಲ್ರೂ ಒಟ್ಟಿಗೆ ಕೆಲಸಕ್ಕೆ ಹೋಗ್ತೀವಿ. ಇದೀಗ ನಮ್ಗೆ ಬೇಡಿಕೆ ಬಂದಿದೆ. ದಿವವಿಡಿ ಹೊಲದಲ್ಲಿನ ಕಸ ತೆಗೆದರೆ ₹ 200 ಕೊಡ್ತಾರೆ. ಅರ್ಧ ದಿನದ ಕೆಲಸಕ್ಕೆ ₹ 150 ಸಿಗುತ್ತೆ.

ಮುಂಜಾನೆ 8ರಿಂದ ಮುಸ್ಸಂಜೆ 5–6 ಗಂಟೆವರೆಗೆ ದುಡಿದರೆ ದಿನದ ಪಗಾರ. ಮಧ್ಯಾಹ್ನ 2–3 ಗಂಟೆವರೆಗೆ ದುಡಿದರೆ ಅರ್ಧ ದಿನದ ಪಗಾರ ನೀಡ್ತಾರೆ. ನೀರು–ಊಟ ಹೊಲದ ಮಾಲಕನೇ ಕೊಡ್ತಾರೆ’ ಎಂದು ಐನಾಪುರ ಗ್ರಾಮದ ಮಹಾದೇವಿ ಮಲಘಾಣ ತಿಳಿಸಿದರು.

‘ಬಿತ್ತನೆ ಇನ್ನೂ ಚಾಲೂ ಆಗಿಲ್ಲ. ಹೊಲದ ಸ್ವಚ್ಛತೆ ನಡೆದಿವೆ. ಈಗೊಂದು ಸುತ್ತು ಹೊಲ ಸ್ವಚ್ಛಗೊಳಿಸಿದರೆ, ಮತ್ತೆ ನಮಗೆ ಬೇಡಿಕೆ ಬರೋದು ಬಿತ್ತನೆ ಮುಗಿದು, ಪೈರಿನಲ್ಲಿ ಕಳೆ ಹೆಚ್ಚಿದ ಸಂದರ್ಭದಲ್ಲಿ ಮಾತ್ರ. ಇನ್ನೂ ಒಂದೆರೆಡು ಹದ ಮಳೆ ಬೀಳಬೇಕು. ಭೂಮಿ ಹಸಿಯಾಗಬೇಕು. ಬಳಿಕ ಬಿತ್ತನೆ ನಡೆದು, ಅದರೊಳಗೆ ಕಸ ಹುಟ್ಟಿದರೆ ಮಾತ್ರ ನಮಗೆ ಕೆಲಸ. ಇಲ್ಲದಿದ್ದರೆ, ಹೊಟ್ಟೆಪಾಡಿಗಾಗಿ ಕೆಲಸಕ್ಕಾಗಿ ನಿರಂತರವಾಗಿ ಅಲೆಯ ಬೇಕು. ನಗರ, ಪಟ್ಟಣಕ್ಕೆ ಯಾವ ಕೆಲಸಕ್ಕಾದರೂ ಸೈ ಎಂಬ ಮನೋಭಾವ ದಿಂದ ಹೋಗ ಬೇಕಾಗಿದೆ’ ಎಂದು ಅವರು ಹೇಳಿದರು.

‘ಮಳೆ ಸುಭಿಕ್ಷೆಯಾಗಿ ನಡೆಸಿದರೆ ಮಾತ್ರ ನಮ್ಮ ಹೊಟ್ಟೆಗೆ ಒಂದೊತ್ತಿನ ತುತ್ತಿನ ದುಡಿಮೆ ದೊರಕುವುದು. ಇಲ್ಲದಿದ್ದರೆ ಗುಳೆ ಅನಿವಾರ್ಯ. ಶಕ್ತಿ ಇದ್ದವರು ಗೋವಾ, ಮಹಾರಾಷ್ಟ್ರ ಕಡೆ ಹೋಗ್ತಾರೆ. ಸಾಮರ್ಥ್ಯ ಕುಂದಿದವರು ಇಲ್ಲೇ ಹತ್ತಿರದ ವಿಜಯಪುರ ನಗರಕ್ಕೆ ನಿತ್ಯವೂ ತೆರಳಿ ಯಾವ ಕೆಸಲಕ್ಕಾದರೂ ಸಿದ್ಧರಾಗಿರ್ತೇವೆ’ ಎಂದು ಮಹಾದೇವಿ ಕನ್ನೂರ ಹೇಳಿದರು.

ಚಡಚಣದಲ್ಲಿ ಭಾರಿ ಮಳೆ

ಸೋಮವಾರ ಚಡಚಣ ಸುತ್ತಮುತ್ತ ಬಿರುಸಿನ ಮಳೆ ಸುರಿ ದಿದೆ. 5.60 ಸೆಂ.ಮೀ. ಮಳೆ ಯಾಗಿದ್ದು, ಒಡ್ಡುಗಳು ನೀರಿನಿಂದ ತುಂಬಿವೆ. ಹಳ್ಳಗಳಲ್ಲಿ ನೀರು ಹರಿದಿದೆ. ಇಂಡಿ ತಾಲ್ಲೂಕಿನ ನಾದ ಬಿ.ಕೆ. ಅಗರಖೇಡ, ಹೊರ್ತಿ, ಹಲಸಂಗಿ ಭಾಗದಲ್ಲೂ  ಮಳೆ ಸುರಿದಿದೆ.

ಸಿಂದಗಿ ತಾಲ್ಲೂಕಿನ ಆಲಮೇಲ, ಸಾಸಾಬಾಳ, ರಾಮನಹಳ್ಳಿ, ದೇವರ ಹಿಪ್ಪರಗಿ, ಕೊಂಡಗೂಳಿ ಸುತ್ತಮುತ್ತ ಭಾರಿ ಮಳೆ ಸುರಿದಿದ್ದು, ರೈತ ಸಮೂಹದಲ್ಲಿ ಅಪಾರ ಹರ್ಷ ಮೂಡಿಸಿದೆ.  ಜಿಲ್ಲೆಯಲ್ಲಿನ ಮಳೆ ವಿವರ: ವಿಜಯಪುರ 0.86 ಸೆಂ.ಮೀ, ನಾಗಠಾಣ 0.80, ಭೂತನಾಳ 0.64, ಹಿಟ್ನಳ್ಳಿ 1.60, ಕುಮಟಗಿ 0.86, ಕನ್ನೂರ 3.91, ಮನಗೂಳಿ 0.83, ಇಂಡಿ 1.90, ನಾದ ಬಿ.ಕೆ 2.24, ಅಗರಖೇಡ  1.05, ಹೊರ್ತಿ 1.92, ಹಲಸಂಗಿ 1.90, ಚಡಚಣ 5.60, ಝಳಕಿ 3.86, ಸಿಂದಗಿ  0.64, ಆಲಮೇಲ 2.14, ಸಾಸಾಬಾಳ 2, ರಾಮನಹಳ್ಳಿ 3.46, ಕಡ್ಲೇವಾಡ 0.91, ದೇವರ ಹಿಪ್ಪರಗಿ 1.40, ಕೊಂಡಗೂಳಿ ಸುತ್ತಮುತ್ತ ಸೋಮವಾರ 1.10 ಸೆಂ.ಮೀ. ಮಳೆ ಸುರಿದಿದೆ.

ಅಂಕಿ–ಅಂಶ

₹200 ದಿನವಿಡೀ ದುಡಿದರೆ ಸಿಗುವ ಕೂಲಿ

₹150 ಅರ್ಧ ದಿನದ ಕೂಲಿ

* * 

ದುಡಿಮೆ ಸಿಕ್ಕರೆ ಹೊಟ್ಟೆಗೊಂದು ತುತ್ತು.  ನಿತ್ಯವೂ ಕೆಲಸ ಹುಡುಕಿಕೊಂಡು ವಿಜಯಪುರಕ್ಕೆ ಹೋಗ್ತೇವೆ. ಮಳೆ ಬಂದಿದ್ರಿಂದ ಊರಲ್ಲೇ ಕೆಲಸ ಸಿಕ್ಕಿದೆ

ಮಹಾದೇವಿ ಮಲಘಾಣ

ಕೃಷಿ ಕೂಲಿ ಕಾರ್ಮಿಕ ಮಹಿಳೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry