ರಾಹುಲ್‌ ಗಾಂಧಿಯನ್ನು ‘ಪಪ್ಪು’ ಎಂದ ಕಾಂಗ್ರೆಸ್‌ ನಾಯಕ ಪಕ್ಷದಿಂದ ವಜಾ

7

ರಾಹುಲ್‌ ಗಾಂಧಿಯನ್ನು ‘ಪಪ್ಪು’ ಎಂದ ಕಾಂಗ್ರೆಸ್‌ ನಾಯಕ ಪಕ್ಷದಿಂದ ವಜಾ

Published:
Updated:
ರಾಹುಲ್‌ ಗಾಂಧಿಯನ್ನು ‘ಪಪ್ಪು’ ಎಂದ ಕಾಂಗ್ರೆಸ್‌ ನಾಯಕ ಪಕ್ಷದಿಂದ ವಜಾ

ಮೀರಠ್: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ‘ಪಪ್ಪು’ ಎಂದು ಸಂಬೋಧಿಸಿದ್ದಕ್ಕೆ ಹಿರಿಯ ನಾಯಕರೊಬ್ಬರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾ ಮಾಡಲಾಗಿದೆ.

ಕಾಂಗ್ರೆಸ್‌ನ ಮೀರಠ್ ಘಟಕದ ಅಧ್ಯಕ್ಷ ವಿನಯ್ ಪ್ರಧಾನ್ ಅವರು ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಸಂಬೋಧಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ.

ರೈತರ ಮೇಲೆ ಗೋಲಿಬಾರ್ ನಡೆದ, ಮಧ್ಯಪ್ರದೇಶದ ಮಂದಸೌರ್‌ಗೆ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದನ್ನು ಹೊಗಳಿ ವಿನಯ್ ಪ್ರಧಾನ್ ಅವರು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ಸಂದೇಶದಲ್ಲಿ ಅವರು, ‘ಪಪ್ಪು ಅವರು ಅದಾನಿ, ಅಂಬಾನಿ, ಮಲ್ಯ ಜತೆ ಕೈಜೋಡಿಸಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಪಪ್ಪು ಅವರು ಸಚಿವ, ಪ್ರಧಾನಿ ಆಗಬಹುದಾಗಿತ್ತು. ಇದಕ್ಕೆ ಹೊರತಾಗಿ, ಮಂದಸೌರ್‌ಗೆ ಭೇಟಿ ನೀಡುವ ಮೂಲಕ ಜೀವವನ್ನೇ ಪಣಕ್ಕಿಟ್ಟರು’ ಎಂದು ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಶಿಸ್ತು ಸಮಿತಿಯ ಅಧ್ಯಕ್ಷ ರಾಮಕೃಷ್ಣ ದ್ವಿವೇದಿ, ಪ್ರಧಾನ್ ಅವರನ್ನು ಪಕ್ಷದ ಎಲ್ಲ ಹುದ್ದೆಯಿಂದ ತೆರವುಗೊಳಿಸಲಾಗಿದೆ ಎಂದು ಮಂಗಳವಾರವೇ ಪತ್ರದ ಮೂಲಕ ತಿಳಿಸಿದ್ದಾರೆ.

‘ಇದು ಪಕ್ಷದ ನಾಯಕತ್ವವನ್ನು ಟೀಕಿಸುವ ಪ್ರಯತ್ನ. ಇತರ ಪಕ್ಷಗಳು ಈ ಕೆಲಸದಲ್ಲಿ ನಿರತವಾಗಿವೆ. ಇದು ಮಧ್ಯಪ್ರದೇಶದ ರೈತರ ಸಮಸ್ಯೆಯೂ ಸೇರಿದಂತೆ ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಯತ್ನ. ವಿನಯ್ ಪ್ರಧಾನ್ ಅವರು ಪಕ್ಷದ ಸಂವಿಧಾನದಲ್ಲಿರುವ ಅಂಶಗಳನ್ನು ಉಲ್ಲಂಘಿಸಿ ತಪ್ಪಿತಸ್ಥರಾಗಿದ್ದಾರೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ತಮ್ಮ ಮೇಲಿನ ಆರೋಪವನ್ನು ಪ್ರಧಾನ್ ಅಲ್ಲಗಳೆದಿದ್ದು, ತಮ್ಮ ಸಂದೇಶವನ್ನು ತಿರುಚಲಾಗಿದೆ ಎಂದು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry