ಅವಘಡ: ಅಧಿಕಾರಿ, ಮುಖ್ಯಶಿಕ್ಷಕರೇ ಹೊಣೆ

7

ಅವಘಡ: ಅಧಿಕಾರಿ, ಮುಖ್ಯಶಿಕ್ಷಕರೇ ಹೊಣೆ

Published:
Updated:
ಅವಘಡ: ಅಧಿಕಾರಿ, ಮುಖ್ಯಶಿಕ್ಷಕರೇ ಹೊಣೆ

ಹಾವೇರಿ: ‘ಶೀಘ್ರವೇ ಶಾಲೆಗಳ ಶಿಥಿಲ ಕಟ್ಟಡಗಳ ದುರಸ್ತಿ ಅಥವಾ ನೆಲಸಮ ಮಾಡಿಸಬೇಕು. ನಿರ್ಲಕ್ಷ್ಯ ವಹಿಸಿ ಅವಘಡ ಸಂಭವಿಸಿದರೆ ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ನೇರ ಹೊಣೆ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆ.ಡಿ.ಪಿ ಸಭೆಯಲ್ಲಿ ಅವರು ಮಾತನಾಡಿದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಓ) ಕೆ.ಬಿ.ಅಂಜನಪ್ಪ ಮಾತನಾಡಿ, ‘ಮಳೆಗಾಲ ಆರಂಭವಾಗಿದೆ. ಶಿಥಿಲ ಕಟ್ಟಡಗಳನ್ನು ದುರಸ್ತಿ ಮಾಡಿಸಿ. ಮಕ್ಕಳಿಗೆ ರಕ್ಷಣೆ ನೀಡಿ. ಈ ಕುರಿತು ಎಲ್ಲ ಶಾಲಾ ಮುಖ್ಯಸ್ಥರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ತಾಕೀತು ಮಾಡಿದರು.

‘ನಾಲ್ಕಾರು ಹೆಂಚು ಹೋಗಿರುವುದು, ಸಣ್ಣಪುಟ್ಟ ದುರಸ್ತಿಯನ್ನು ಶಾಲಾ ಅನುದಾನದಲ್ಲಿ ಮಾಡಿಸದೇ ಬೇಜವಾಬ್ದಾರಿತನ ತೋರುವ ಮುಖ್ಯಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಿ’ ಎಂದರು. ‘ಗ್ರಾಮ ಪಂಚಾಯ್ತಿಗೆ ಬರುವ 14ನೆಯ ಹಣಕಾಸು ಅನುದಾನದಲ್ಲಿ ಶಾಲಾ ಕಟ್ಟಡ ದುರಸ್ತಿಗೆ ಅವಕಾಶ ಕಲ್ಪಿಸಲಾಗಿದೆ. ದುರಸ್ತಿಗೆ ಸಾಧ್ಯವಾಗದ ಕಟ್ಟಡ ನೆಲಸಮಗೊಳಿಸಿ’ ಎಂದರು.

‘ಶಿಥಿಲ ಕಟ್ಟಡಗಳನ್ನು ಪ್ರಮಾಣಿಕರಿಸಲು ಪಂಚಾಯತ್ ರಾಜ್ ಎಂಜಿನಿಯರ್‌ಗಳನ್ನು ನೇಮಕ ಮಾಡಿ’ ಎಂದು ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ  ಸೂಚನೆ ನೀಡಿದರು.

ಅಲ್ಲದೇ, ಕಟ್ಟಡಗಳ ನೆಲಸಮ, ಸಣ್ಣಪುಟ್ಟ ದುರಸ್ತಿಗೆ ಜಿಲ್ಲಾ ಪಂಚಾಯ್ತಿಯಿಂದ ಅನುದಾನ ಒದಗಿಸಲು ಸಭೆಯಲ್ಲಿ ಸೂಚಿಸಲಾಯಿತು. ಖಾಲಿ ಇರುವ ಅಕ್ಷರದಾಸೋಹ ಕಟ್ಟಡಗಳನ್ನು ತಾತ್ಕಾಲಿಕವಾಗಿ ಬಳಕೆ ಮಾಡಲು ತಿಳಿಸಲಾಯಿತು.

ಎಸ್ಸೆಸ್ಸೆಲ್ಸಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಫಲಿತಾಂಶ ಸುಧಾರಣೆಯಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಈ ವರ್ಷದ ಆರಂಭದಿಂದಲೇ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸೂಚನೆ ನೀಡಲಾಯಿತು.

‘ಹಾನಗಲ್‌ ತಾಲ್ಲೂಕಿನಲ್ಲಿ ಕ್ಲುಪ್ತ ಸಮಯಕ್ಕೆ ಸಂಬಳ ಆಗದಿರುವ ಬಗ್ಗೆ ಶಿಕ್ಷಕರಿಂದ ದೂರುಗಳು ಬಂದಿವೆ. ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳನ್ನು ನಿಯೋಜಿಸಿ, ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮಕೈಗೊಳ್ಳಿ’ ಎಂದು ಹೇಳಿದರು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಶಾಲೆಗಳ ಆವರಣ ಗೋಡೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸಿ.ಆರ್.ಪಿ. ಮತ್ತು ಬಿ.ಆರ್.ಸಿ.ಗಳಿಗೆ ಸೂಚನೆ ನೀಡಿ. ಗಣಕಯಂತ್ರಗಳು ಕಾರ್ಯನಿರ್ವಹಿಸದಿರುವ ಬಗ್ಗೆ ದೂರುಗಳು ಬಂದಿವೆ. ತಕ್ಷಣವೇ ಕ್ರಮಕೈಗೊಳ್ಳಿ’ ಎಂದರು.

‘ಸಮವಸ್ತ್ರ, ಉಚಿತ ಸೈಕಲ್, ಶೂಗಳು ಪೂರೈಕೆಯಾಗಿವೆ. ಶೇ 60 ರಷ್ಟು ಪಠ್ಯಪುಸ್ತಕಗಳು ಬಂದಿವೆ. 400 ಅತಿಥಿ ಶಿಕ್ಷಕರ ನೇಮಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ಆರೋಗ್ಯ: ‘ಹೊರಗುತ್ತಿಗೆ ಆಧಾರದ ಸಿಬ್ಬಂದಿಯ ನಿಗದಿತ ವೇತನ, ಭವಿಷ್ಯ ನಿಧಿ, ಇಎಸ್ಐಯನ್ನು ಪಾವತಿಸದ, ಅಕ್ರಮ ಹಣವಸೂಲಿ ಮಾಡುವ, ಶೋಷಣೆ ಮಾಡುತ್ತಿರುವ ಏಜೆನ್ಸಿಗಳನ್ನು ರದ್ದು ಪಡಿಸಿ, ಕಪ್ಪುಪಟ್ಟಿಗೆ ಸೇರಿಸಿ. ಈ ಬಗ್ಗೆ ಬಟವಾಡೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು’ ಎಂದು ಅಧ್ಯಕ್ಷರು ಮತ್ತು ಸಿಇಓ ಸೂಚನೆ ನೀಡಿದರು.

‘ನೇಮಕಾತಿ ಪತ್ರ ನೀಡಲು ಹಣ ವಸೂಲಿ ಮಾಡುವ ಏಜನ್ಸಿ ಬಗ್ಗೆ ದೂರು ಬಂದಿದೆ. ತಕ್ಷಣವೇ ಹಣ ವಾಪಾಸ್ ಮಾಡಲು ಸೂಚನೆ ನೀಡಿ. ಇಲ್ಲದಿದ್ದರೆ, ಏಜೆನ್ಸಿ ಗುತ್ತಿಗೆ ರದ್ದು ಮಾಡಿ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಡ್ಡಿ ಅವರಿಗೆ ಅಧ್ಯಕ್ಷರು ಸೂಚನೆ ನೀಡಿದರು.

‘ಮುಂಗಾರು ಆರಂಭಗೊಂಡಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ವಿಷಜಂತು ಕಡಿತದ ಔಷಧಿ ದಾಸ್ತಾನು ಇರಬೇಕು. ಅಲ್ಲದೇ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದರು.

ಶಿಸ್ತುಕ್ರಮ: ‘ನರೇಗಾ’ ವಾರ್ಷಿಕ ಗುರಿಯ ಶೇ 40ರಷ್ಟು ಮಾನವ ದಿನಗಳನ್ನು ಜೂನ್‌ ಅಂತ್ಯದೊಳಗೆ ಸೃಜಿಸಬೇಕು.  ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳ ಸಾಧನೆ ಗೌಣವಾಗಿದೆ. ಗುರಿ ಸಾಧಿಸದ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಸಿಇಓ ಎಚ್ಚರಿಸಿದರು.

ಬಿತ್ತನೆ: ‘ಹಾವೇರಿ ತಾಲ್ಲೂಕು ಹೊರತು ಪಡಿಸಿ ಜಿಲ್ಲೆಯಲ್ಲಿ ವಾಡಿಕೆಯ ಶೇ 70ರಷ್ಟು ಮಳೆಯಾಗಿದ್ದು, ಹಾನಗಲ್‌ ಮತ್ತು ಹಿರೇಕೆರೂರ ತಾಲ್ಲೂಕುಗಳಲ್ಲಿ ಬಿತ್ತನೆ ಶುರುವಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. ಮೆಕ್ಕೆಜೋಳ ಹಾಗೂ ಶೇಂಗಾ ಬಿತ್ತನೆ ಕ್ಷೇತ್ರ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ತಿಳಿಸಿದರು.

‘ಜನರ ಬೇಡಿಕೆಗೆ ಸ್ಪಂದಿಸಿಕೊಂಡು ಗ್ರಾಮೀಣ ಭಾಗದಲ್ಲಿ ಬಸ್‌ಗಳನ್ನು ಓಡಿಸಿ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಅಧ್ಯಕ್ಷ ಬಸೇಗಣ್ಣಿ ಹೇಳಿದರು.ಅಲ್ಲದೇ, ಸಂಸ್ಥೆಯ ವಿಭಾಗೀಯ ನಿಯಂತ್ರಕರು ಪ್ರತಿ ಸಭೆಗೆ ಗೈರಾಗುತ್ತಿದ್ದು, ಇನ್ನು ಮುಂದೆ ಕೆಳ ಹಂತದ ಅಧಿಕಾರಿಗಳು ಸಭೆಗೆ ಬರುವುದುಬೇಡ. ಅವರೇ ಬರಲಿ’ ಎಂದು ಅಧ್ಯಕ್ಷರು ಗರಂ ಆಗಿ ಸೂಚನೆ ನೀಡಿದರು.

ಉಪಾಧ್ಯಕ್ಷೆ ಮಮತಾಜಬಿ ತಡಸ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರಕಾಶ ಬನ್ನಿಕೋಡ, ರಾಘವೇಂದ್ರ ತಹಸೀಲ್ದಾರ್, ಅಬ್ದುಲ್ ಮುನಾಫ್ ಎಲಿಗಾರ, ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಇದ್ದರು.

* * 

ಆಶ್ರಯ ಮನೆ, ಶೌಚಾಲಯ ನಿರ್ಮಾಣ ಹಾಗೂ ಸರ್ಕಾರಿ ಕೆಲಸಗಳಿಗೆ ತಕ್ಷಣವೇ ಮರಳಿನ ಒದಗಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವ್ಯವಸ್ಥೆ ಮಾಡಬೇಕು

ಕೊಟ್ರೇಶಪ್ಪ ಬಸೇಗಣ್ಣಿ

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry