ನಿಯಮ ಸರಳೀಕರಣಕ್ಕೆ ಸದಸ್ಯರ ಒತ್ತಾಯ

7

ನಿಯಮ ಸರಳೀಕರಣಕ್ಕೆ ಸದಸ್ಯರ ಒತ್ತಾಯ

Published:
Updated:
ನಿಯಮ ಸರಳೀಕರಣಕ್ಕೆ ಸದಸ್ಯರ ಒತ್ತಾಯ

ಶಿರಸಿ: ಖಾತಾ ಬದಲಾವಣೆಗೆ ಫಾರ್ಮ್‌ ನಂಬರ್ 3 ನೀಡುವಲ್ಲಿ ನಗರಸಭೆ ವಿಧಿಸುತ್ತಿರುವ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ನಗರಸಭೆ ಸದಸ್ಯರು ಸಾಮಾನ್ಯಸಭೆಯಲ್ಲಿ ಒಕ್ಕೊರಲಿನ ಒತ್ತಾಯ ವ್ಯಕ್ತವಾಯಿತು.

ವಿಷಯ ಪ್ರಸ್ತಾಪಿಸಿದ ಸದಸ್ಯ ರವಿ ಚಂದಾವರ ಅವರು ‘ಪೌರಾಯುಕ್ತರು ಅಂಗಡಿಗಳಿಗೆ ಲೈಸನ್ಸ್‌ ನೀಡುತ್ತಿಲ್ಲ. ಇದರಿಂದ ನಗರಸಭೆಗೆ ಬರುವ ಆದಾಯ ಕಡಿಮೆಯಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ತಕ್ಷಣ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ನಗರಸಭೆ ಸದಸ್ಯರು ಮುಜುಗರ ಎದುರಿಸುವ ಪರಿಸ್ಥಿತಿ ಬರುತ್ತದೆ’ ಎಂದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಶ್ರೀಕಾಂತ ತಾರೀಬಾಗಿಲು ಅವರು ‘ಅಂಗಡಿ, ಕಟ್ಟಡ ಅನುಮತಿ, ಆಸ್ತಿ ಮಾರಾಟ, ಸಾಲ ಪಡೆಯಲು, ಮಕ್ಕಳ ಶಿಕ್ಷಣಕ್ಕೆ ದಾಖಲೆ ಪೂರೈಸಲು ಸಹ ತೊಂದರೆಯಾಗುತ್ತಿದೆ. ಖಾತೆ ಬದಲಾವಣೆಯ ಸಂದರ್ಭದಲ್ಲಿ ನಗರಸಭೆ ಆಸ್ತಿ ಕಬ್ಜಾ ಪಡೆಯುತ್ತಿರುವುದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

ಈ ರೀತಿ ಆಸ್ತಿ ಕಬ್ಜಾ ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಭೂಮಿ ಪಡೆದುಕೊಳ್ಳಲು ನಗರಸಭೆಗೆ ಅನುಮತಿ ನೀಡಿದವರು ಯಾರು’ ಎಂದು ಪ್ರಶ್ನಿಸಿದರು.

‘ಫಾರ್ಮ್ ನಂಬರ್ 3 ಕೊಡುವಾಗ ಬೇಕಾಬಿಟ್ಟಿ ಶುಲ್ಕ ಪಡೆಯುತ್ತಿರುವ ದೂರುಗಳು ಬಂದಿವೆ’ ಎಂದು ಸದಸ್ಯ ಅರುಣ ಕೋಡ್ಕಣಿ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮಹೇಂದ್ರಕುಮಾರ ಅವರು ‘2016 ಏಪ್ರಿಲ್ 1ರಿಂದ ಫಾರ್ಮ್ ನಂಬರ್ 3 ಅನ್ನು ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಲಾಗಿದೆ. ಫಾರ್ಮ್ ಪಡೆಯಲು ಮಾಲೀಕತ್ವದ ಪುರಾವೆ, ಮಾಲೀಕರ ನಿರಾಕ್ಷೇಪಣಾ ಪತ್ರ, ನೀರಿನ ಕರ, ಬಾಡಿಗೆ ಬಿಲ್‌ ಇನ್ನಿತರ ಅಗತ್ಯ ದಾಖಲೆಗಳನ್ನು ಒದಗಿಸಬೇಕು.

ರಸ್ತೆಗೆ ನಿಗದಿಯಾದ ಸ್ಥಳ ಬಿಡದೇ ಇರುವ ಕಟ್ಟಡಗಳ ಲೈಸನ್ಸ್ ನವೀಕರಿಸುವ ಸಂದರ್ಭದಲ್ಲಿ ಭೂಮಿ ಕಬ್ಜಾ ಪಡೆಯಲಾಗುತ್ತಿದೆ. ರಸ್ತೆ ವಿಸ್ತರಣೆಗೆ ಈ ಕ್ರಮ ಅನಿವಾರ್ಯ’ ಎಂದರು.‘ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತ ಬಫರ್ ಝೋನ್ ವ್ಯಾಪ್ತಿ ನಿಗದಿಗೊಳಿಸಬೇಕು. ಅನೇಕರು ಸಮೀಪದಲ್ಲಿ ನಿವೇಶನ ಖರೀದಿಸುತ್ತಿದ್ದಾರೆ. ಅವರಿಗೆ ಅನ್ಯಾಯ ಆಗಬಾರದು’ ಎಂದು ಸದಸ್ಯರಾದ ರಮೇಶ ಆಚಾರಿ, ರವಿ ಚಂದಾವರ ಹೇಳಿದರು.

ಅಮಾನತುಗೊಂಡಿರುವ ಪ್ಲಂಬರ್‌ ಅನ್ನು ಕೆಲಸಕ್ಕೆ ಮತ್ತೆ ನೇಮಿಸಿಕೊಳ್ಳಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರು. ‘ಪುನಃ ನೇಮಕ ಮಾಡಿಕೊಳ್ಳಲಾಗುವುದು. ಒಂದೆರಡು ತಿಂಗಳು ಕಾಲಾವಕಾಶ ಕೊಡಿ’ ಎಂದು ಪ್ರಭಾರ ಅಧ್ಯಕ್ಷೆ ಅರುಣಾ ವೆರ್ಣೇಕರ ಹೇಳಿದರು. ಈ ಎಲ್ಲ ವಿಷಯಗಳ ಮೇಲಿನ ಚರ್ಚೆ ಮುಗಿದು ನಿಗದಿತ ವಿಷಯಗಳು ಬರುವಾಗ 2.15 ತಾಸು ತಡವಾಗಿತ್ತು.

ನಿವೇಶನ ಖರೀದಿಸುವವರೇ ಎಚ್ಚರ...

‘ಖಾಲಿ ನಿವೇಶನಗಳಿಗೆ ಯಾವುದೇ ತಕರಾರಿಲ್ಲದೇ ಫಾರ್ಮ್ 3 ಕೊಡಲಾಗುತ್ತದೆ. ನಿವೇಶನ ಮಾರಾಟ ಮಾಡುವವರು ಇಡೀ ನಿವೇಶನದ ಮೊತ್ತಕ್ಕೆ ಮಾರಾಟ ಮಾಡುತ್ತಾರೆ. ಆದರೆ ಖರೀದಿಸಿದವರು ಕಟ್ಟಡ ನಿರ್ಮಿಸುವಾಗ ಕಾನೂನು ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ.

ರಸ್ತೆ ವಿಸ್ತರಣೆ ನಗರ ಯೋಜನಾ ಪ್ರಾಧಿಕಾರದಲ್ಲಿ ನಿರ್ಧಾರವಾಗುತ್ತದೆ. ಆಗ ಜಾಗ ಕಡಿತಗೊಂಡರೆ ಖರೀದಿದಾರನಿಗೆ ನಷ್ಟವಾಗುತ್ತದೆ’ ಎಂದು ಪೌರಾಯುಕ್ತ ಮಹೇಂದ್ರಕುಮಾರ ತಿಳಿಸಿದರು. ಖಾಲಿ ನಿವೇಶನಗಳಿಗೆ ಫಾರ್ಮ್ ನಂಬರ್ 3 ಕೊಡುವಾಗ ಕಟ್ಟಡಗಳಿಗೆ ಮಾಡಿದಂತೆ ಜಾಗ ಕಬ್ಜಾ ಪಡೆಯಬಾರದು ಎಂದು ಕೆಲವು ಸದಸ್ಯರು ಒತ್ತಾಯಿಸಿದರು.

* * 

ಮಳೆಗಾಲ ಆರಂಭವಾದರೂ ನಗರಸಭೆಯ ವಾಲ್‌ಮನ್‌ ಗಳಿಗೆ ರೇನ್‌ಕೋಟ್ ನೀಡಲಾಗಿಲ್ಲ. ಆದಷ್ಟು ಶೀಘ್ರ ವಿತರಿಸಬೇಕು

ರವಿ ಚಂದಾವರ

ನಗರಸಭೆ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry