ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ

7

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ

Published:
Updated:
ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ

ಮರಳವಾಡಿ (ಕನಕಪುರ): ಸರ್ಕಾರಿ ಶಾಲೆಗಳು ಉಳಿಯಬೇಕೆಂದು ಘೋಷಣೆ ಕೂಗಿದರೆ ಅಥವಾ ಒತ್ತಾಯಿಸಿದರೆ ಸರ್ಕಾರಿ ಶಾಲೆ ಉಳಿಯುವುದಿಲ್ಲ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಡ್ಡಾಯವಾಗಿ ಸೇರಿಸಬೇಕೆಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಚೀಲೂರು ಮುನಿರಾಜು ಹೇಳಿದರು.

ತಾಲ್ಲೂಕಿನ ಮರಳವಾಡಿ ಹೋಬಳಿ ಪಡುವಡಣಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ರೈತ ಸಂಘದ ವತಿಯಿಂದ ಆಯೋಜನೆ ಮಾಡಿದ್ದ ‘ರೈತರ ನಡಿಗೆ ಸರ್ಕಾರಿ ಶಾಲೆ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶದ ಜನತೆಗೆ ಶಿಕ್ಷಣವೆಂಬುದು ಗಗನ ಕುಸುಮವಾಗಿತ್ತು, ಹಣವುಳ್ಳವರು ಮತ್ತು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರಿಗೆ ಮಾತ್ರ ಶಿಕ್ಷಣ ದೊರೆಯುತ್ತಿತ್ತು. ಮಠಗಳಲ್ಲಿ ಆಶ್ರಯ ಪಡೆದು ಶಿಕ್ಷಣ ಮಾಡಿದರೆ ಮಾತ್ರ ವಿದ್ಯಾಭ್ಯಾಸ ಸಿಗುತ್ತಿತ್ತು. ಮನೆಯಲ್ಲಿನ ಕಡುಬಡತನ ಅದಕ್ಕೂ ಅವಕಾಶವಿಲ್ಲದಂತೆ ಬಹುಪಾಲ ಜನ ಶಿಕ್ಷಣದಿಂದ ವಂಚಿತರಾಗುತ್ತಿದ್ದರು ಎಂದರು.

ಬದಲಾದ ಪರಿಸ್ಥಿತಿಯಲ್ಲಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಎಲ್ಲಾ ಗ್ರಾಮಗಳಲ್ಲೂ ಸರ್ಕಾರಿ ಶಾಲೆ ತೆರೆದು ಮುಕ್ತವಾಗಿ ಆವಕಾಶ ಕೊಟ್ಟಾಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಾಯಿತು ಎಂದರು. ಚಿಕ್ಕಕಲ್ಬಾಳ್‌ ಮಠದ ಶಿವಾನಂದ ಶಿವಚಾರ್ಯ ಸ್ವಾಮಿ ಮಾತನಾಡಿ ವಾಸ್ತವದಲ್ಲಿ ಶಿಕ್ಷಣವೆಂಬುದು ಇಂದು ವ್ಯಾಪಾರಿ ವಸ್ತುವಾಗಿದೆ, ಉಳ್ಳವರು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ತೆರೆದು ಪೈಪೋಟಿ ಮೇಲೆ ನಡೆಸುತ್ತಿದ್ದಾರೆ, ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಬಡವರು ಓದಿಸುವುದು ಅಸಾಧ್ಯದ ಮಾತು, ಬಡವರು ಏನಿದ್ದರೂ ಉಚಿತವಾಗಿ ಓದಿಸುವ ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿಸಬೇಕೆಂದು ಹೇಳಿದರು.

ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆ ರಾಜ್ಯ ಸಂಚಾಲಕಿ ನಾಗರತ್ನ ಮಾತನಾಡಿ, ಸರ್ಕಾರಿ ಶಾಲೆಗಳು ಮುಚ್ಚುಲು ಸರ್ಕಾರವೇ ಕಾರಣವಾಗಿದೆ, ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡುವುದಾಗಿ ಹೇಳುವ ಸರ್ಕಾರ ಸರ್ಕಾರಿ ಶಾಲೆಗಳಿಗೆ ಬೇಕಾದ ಅಗತ್ಯ ಸವಲತ್ತುಗಳನ್ನು ಕೊಡುತ್ತಿಲ್ಲ ಎಂದರು.

ಎಷ್ಟೋ ಸರ್ಕಾರಿ ಶಾಲೆಗಳು ಇಂದೊ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ, ಸರಿಯಾದ ಆಟದ ಮೈದಾನವಿಲ್ಲ, ಶಾಲೆಯ ಸುತ್ತಲು ಕಾಂಪೌಂಡ್‌ಯಿಲ್ಲ, ಶೌಚಾಲಯವಿಲ್ಲ, ಖಾಸಗಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯವನ್ನು ಸರ್ಕಾರಿ ಶಾಲೆಗಳಿಗೇಕೆ ನೀಡುತ್ತಿಲ್ಲವೆಂದು ಪ್ರಶ್ನಿಸಿದರು.

ಪಡುವಣಗೆರೆ ಮಠದ ಮರಿಯಪ್ಪಸ್ವಾಮಿ, ಟಿ.ಹೊಸಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದರಾಜು, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾ ಮುಖಂಡ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್‌, ಮುಖಂಡರಾದ ಬಸವ ರಾಜು, ಸಿದ್ದರಾಜು, ಶಿವರಾಮು, ಮುನಿಬಸವಯ್ಯ, ಶಾಲೆಯ ಮುಖ್ಯ ಶಿಕ್ಷಕ ತಳವಾರ, ಎಸ್‌.ಡಿ.ಎಂ.ಸಿ. ಅಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು.

ಹೊಸ ಕಾನೂನು ಜಾರಿ ಮಾಡಿ

ಆಯಾ ಗ್ರಾಮದ ಮಗು ಅದೇ ಪರಿಮಿತಿಯಲ್ಲಿರುವ ಸರ್ಕಾರಿ ಶಾಲೆಯಲ್ಲೇ ಓದಬೇಕು, ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ಕಡ್ಡಾಯ ಸರ್ಕಾರಿ ಕೆಲಸ ಎಂಬ ಕಾನೂನು ಮಾಡಬೇಕು ಎಂದು  ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆ ರಾಜ್ಯ ಸಂಚಾಲಕಿ ನಾಗರತ್ನ ಒತ್ತಾಯಿಸಿದರು. ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಓದಿಸಬೇಕೆಂದು ಕಾನೂನು ಜಾರಿ ಮಾಡಿದರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದು ತಿಳಿಸಿದರು.

ರೈತರು ಎಚ್ಚರಿಕೆ ವಹಿಸಲಿ

ರೈತರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಖಾಸಗಿ ಶಾಲೆಗಳಲ್ಲಿ ಲಕ್ಷ ಲಕ್ಷ ಕೊಟ್ಟು ಓದಿಸಲು ಆಗುವುದಿಲ್ಲ, ಸರ್ಕಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳಿಸಿ ವಿದ್ಯಾಭ್ಯಾಸ ಮಾಡಿಸಬೇಕಿರುವುದರಿಂದ ಗ್ರಾಮದ ಸರ್ಕಾರಿ ಶಾಲೆ ಮುಚ್ಚದಂತೆ ನೋಡಿಕೊಳ್ಳಬೇಕಿದೆ ಎಂದು ಚೀಲೂರು ಮುನಿರಾಜು ಎಚ್ಚರಿಸಿದರು. ಇವತ್ತಿಗೂ ಶ್ರೀಮಂತರು, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದವರು ದೊಡ್ಡ ದೊಡ್ಡ ಕಾನ್ವೆಂಟ್‌ಗಳಿಗೆ ಸೇರಿಸಿ ಶಿಕ್ಷಣ ಕೊಡಿಸುತ್ತಾರೆ ಎಂದರು.

* * 

ಹೆಚ್ಚಿನ ಸಂಖ್ಯೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಶಿಕ್ಷಣ ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ

ಚೀಲೂರು ಮುನಿರಾಜು

ರೈತ ಸಂಘದ ತಾಲ್ಲೂಕು ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry