ಶಿಳ್ಳೆಯಲ್ಲೇ ಪ್ರೇಮ ಸಲ್ಲಾಪ

7

ಶಿಳ್ಳೆಯಲ್ಲೇ ಪ್ರೇಮ ಸಲ್ಲಾಪ

Published:
Updated:
ಶಿಳ್ಳೆಯಲ್ಲೇ ಪ್ರೇಮ ಸಲ್ಲಾಪ

-ಡೇವಿಡ್‌ ರಾಬ್ಸನ್‌

**

ಯಾವಾಗಲಾದರೂ ಒಮ್ಮೆ ಹಿಮಾಲಯದ ತಪ್ಪಲು ಪ್ರದೇಶಕ್ಕೆ ಭೇಟಿ ನೀಡುವ ಅದೃಷ್ಟ ಒಲಿದರೆ, ಅಲ್ಲಿನ ಕಾನನಗಳಲ್ಲಿ ಜೋಡಿಗಳು ಹಾಡುವ ಇಂಪಾದ ದನಿ ನಿಮ್ಮನ್ನು ಮಂತ್ರಮುಗ್ಧಗೊಳಿಸದೆ ಬಿಡದು. ಪರಿಚಿತವಲ್ಲದ ಈ ಧ್ವನಿಯನ್ನು ಕೇಳಿ ನೀವು ಯಾರೋ ಸಂಗೀತಗಾರ ಪರಿಕರವನ್ನು ಸಿದ್ಧಪಡಿಸುತ್ತಿರಬಹುದು ಎಂದು ಭಾವಿಸಿದರೆ ತಪ್ಪಾದೀತು. ಭಾವಪರವಶಗೊಳಿಸುವಂತಹ ಈ ನಾದದ ಗುಟ್ಟು ಬೇರೆಯೇ ಇದೆ. ಪ್ರೇಮಿಗಳಿಬ್ಬರು ಶಿಳ್ಳೆಯನ್ನೇ ಗುಪ್ತಭಾಷೆಯನ್ನಾಗಿ ಬಳಸಿ ಪ್ರೇಮ ಸಲ್ಲಾಪ ನಡೆಸುವ ಪರಿ ಇದು.

ಹಮಂಗ್‌ ಬುಡಕಟ್ಟು ಸಮುದಾಯದ ಜನರು ಶಿಳ್ಳೆಯನ್ನೇ ಭಾಷೆಯನ್ನಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಅಲ್ಲಿನ ರೈತರು ಗದ್ದೆಗಳಲ್ಲಿ ಕೆಲಸ ಮಾಡುವಾಗ ಪರಸ್ಪರ ಸಂವಹನ ನಡೆಸಲು ಹಾಗೂ ಬೇಟೆಗಾರರು ಕಾಡುಗಳಲ್ಲಿ ಶಿಕಾರಿ ನಡೆಸುವಾಗ  ಒಬ್ಬರನ್ನೊಬ್ಬರು  ಕರೆಯಲು  ಶಿಳ್ಳೆಯನ್ನು ಬಳಸುತ್ತಾರೆ. ಆದರೆ, ಅವರ ಈ ಭಾಷೆ ಹೆಚ್ಚು ಆಪ್ಯಾಯಮಾನವಾಗಿ ವ್ಯಕ್ತವಾಗುವುದು ಅಪರೂಪಕ್ಕೊಮ್ಮೆ ಮಾತ್ರ ನಡೆಸುವ ಪ್ರೇಮ ನಿವೇದನೆ ಪ್ರಸಂಗಗಳಲ್ಲಿ. ಮುಸ್ಸಂಜೆಯಾಗುತ್ತಲೇ ಆಸುಪಾಸಿನ ಗ್ರಾಮಗಳಲ್ಲಿ ಅಂಡಲೆಯುವ ಹುಡುಗರು ಬೀದಿಗಳಲ್ಲಿ ಹಾದು ಹೋಗುವಾಗ ತಮ್ಮಿಷ್ಟದ ಹಾಡುಗಳನ್ನು ಶಿಳ್ಳೆಯ ರೂಪದಲ್ಲಿ ಹಾಡುತ್ತಾ ಹೋಗುತ್ತಾರೆ. ಹುಡುಗಿಯ ಕಡೆಯಿಂದಲೂ ಇದಕ್ಕೆ ಹಸಿರು ನಿಶಾನೆ ಸಿಕ್ಕಿತೆಂದರೆ ಮುಗಿಯಿತು; ಅಲ್ಲೇ ಅವರಿಬ್ಬರ ಪ್ರೇಮ ಸಲ್ಲಾಪ ಶುರು. ಅವರ ಅಷ್ಟೂ ಸರಸ ಸಲ್ಲಾಪ ನಡೆಯುವುದು ಶಿಳ್ಳೆಯ ಮೂಲಕವೇ!

ಸರಸ ಸಲ್ಲಾಪಕ್ಕೆ ಪರಿಪೂರ್ಣವಾದ ಪರಿಭಾಷೆಯಾಗುವ ಈ ಮನಮೋಹಕ ಶಿಳ್ಳೆಯ ಹಾಡುಗಳಲ್ಲಿ ಇನ್ನೊಂದು ವೈಶಿಷ್ಟ್ಯವಿದೆ. ಜೋಡಿಗಳು ಬಳಸುವ ಈ ಭಾಷೆಯನ್ನು ಬೇರೆಯವರು ಅರ್ಥೈಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ಅವರ ಪ್ರೇಮದ ಪರಿಭಾಷೆ ಇತರರ ಪಾಲಿಗೆ ಅಜ್ಞಾತವಾಗಿಯೇ ಉಳಿಯುತ್ತದೆ.

‘ಈ ಜೋಡಿಗಳು ತೀರಾ ಖಾಸಗಿ ಸಂಕೇತಗಳನ್ನೂ ರೂಪಿಸಿಕೊಳ್ಳುತ್ತಾರೆ. ಕದ್ದಾಲಿಸುವ ಕಳ್ಳರಿಗೆ ಅವರ ಮಾತುಗಳ ಗೂಡಾರ್ಥ ತಿಳಿಯಬಾರದು ಎಂಬ ಕಾರಣಕ್ಕೆ ಕೆಲವು ಅಸಂಬದ್ಧ ಶಬ್ದಗಳನ್ನೂ ಪೋಣಿಸುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಪದಗಳಲ್ಲಿನ ಕೆಲವು ಅಕ್ಷರಗಳನ್ನು ಅದಲು ಬದಲು ಮಾಡುವ ಮೂಲಕ ಪೋಷಕರನ್ನು ಬೇಸ್ತು ಬೀಳಿಸುವಂತೆಯೇ ಇದು ಕೂಡ. ಈ ರೀತಿ ಮಾಡುವುದು ಈ  ಜೋಡಿಗಳ ನಡುವೆ ಆತ್ಮೀಯ  ಭಾವನೆ ಹೆಚ್ಚಿಸುತ್ತದೆ’ ಎನ್ನುತ್ತಾರೆ ದಶಕಗಳ ಹಿಂದೆ ಹಿಮಾಲಯದ ತಪ್ಪಲಿನಲ್ಲಿ ಪ್ರವಾಸ ಕೈಗೊಂಡಿದ್ದ ಫ್ರಾನ್ಸ್‌ನ ಗ್ರೆನೋಬಲ್‌ ವಿಶ್ವವಿದ್ಯಾಲಯದ ಸಂಶೋಧಕ ಜೂಲಿಯನ್‌ ಮೆಯೆರ್‌. 

‘ಈ ಪದ್ಧತಿ ಮಾನವತೆಯ ಅದ್ಭುತ ಭಾಷಾ ವೈವಿಧ್ಯದ ಬಹುಮುಖ್ಯ ಅಂಶವೂ ಹೌದು. ಹಾಗೆಯೇ ಮನುಷ್ಯ ಸಂವಹನದ ಇತಿಮಿತಿಯನ್ನು ಅರಿತುಕೊಳ್ಳುವುದಕ್ಕೂ ಇದು ಸಹಕಾರಿ. ಅನೇಕ ಕಡೆಗಳಲ್ಲಿ ಇನ್ನೊಬ್ಬರ ಗಮನ ಸೆಳೆಯುವ ಕಾರ್ಯಕ್ಕಿಂತಲೂ ಹೆಚ್ಚಿನದಾದ ಉದ್ದೇಶಗಳಿಗೆ ಶಿಳ್ಳೆ ಬಳಕೆಯಾಗುತ್ತದೆ. ಅಗಾಧ ಅರ್ಥವನ್ನು ತುಂಬಿಕೊಡಲು ಇದು ಅತ್ಯಂತ ಸರಳವಾದ ವಿಧಾನ. ವಿಶ್ವದಾದ್ಯಂತ 70ಕ್ಕೂ ಹೆಚ್ಚು ಜನಾಂಗಗಳು ಭಾವನೆಗಳನ್ನು ವ್ಯಕ್ತಪಡಿಸಲು ಸಹಜ ಮಾತುಕತೆಯಷ್ಟೇ ಸುಲಲಿತವಾಗಿ ಶಿಳ್ಳೆಯನ್ನೂ ಬಳಸುತ್ತವೆ’ ಎನ್ನುತ್ತಾರೆ ಅವರು.

ಈ ನಿಗೂಢ ಭಾಷೆಗಳು ಹೊಸ ಸಂಕೇತ ರೂಪದ ಮಾಹಿತಿಯನ್ನು ಗ್ರಹಿಸುವ ಮಿದುಳಿನ ಅಗಾಧ ಸಾಮರ್ಥ್ಯಕ್ಕೂ ಕನ್ನಡಿ ಹಿಡಿಯುತ್ತವೆ. ನರವಿಜ್ಞಾನಿಗಳು ಮಿದುಳಿನ ಸಂರಚನೆ ಕುರಿತ ಮೂಲ ಗ್ರಹಿಕೆಯನ್ನೇ ಮತ್ತೆ ಪರಾಮರ್ಶಿಸಬೇಕಾದ ಹೊಸ ಹೊಳಹುಗಳಿಗೂ ಇವು ಕಾರಣವಾಗಿವೆ. ಅವರ ಈ ಸಂಶೋಧನೆ ಭಾಷೆಯ ಉಗಮದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಒಂದು ಪರಿಕಲ್ಪನೆ ಪ್ರಕಾರ, ಮಾನವನ ಮೊದಲ ತೊದಲ್ನುಡಿ ಹಮಂಗ್‌ ಬುಡಕಟ್ಟಿನ ಪ್ರೇಮ ನಿವೇದನೆಯ ಶಿಳ್ಳೆ ಹಾಡುಗಳಂತೆಯೇ ಇದ್ದಿರುವ ಸಾಧ್ಯತೆಯೂ ಇದೆ. 

ಕ್ಯಾನರಿ ದ್ವೀಪವೊಂದರಲ್ಲಿ ಬಳಕೆಯಲ್ಲಿದ್ದ ಸ್ಪ್ಯಾನಿಷ್‌ ಭಾಷೆಯ ‘ಸಿಲ್ಬೊ ಗೊಮೆರೊ’ ಎಂಬ ಶಿಳ್ಳೆಯ ಪರಿಭಾಷೆಯ ಕುರಿತು, 40 ವರ್ಷ ಹಿಂದೆ ಅಮೆರಿಕದಲ್ಲಿ ಪ್ರಕಟವಾದ ವೈಜ್ಞಾನಿಕ ಲೇಖನ ಓದಿದ ಬಳಿಕ ಮೆಯೆರ್‌ ಅವರಿಗೆ ಶಿಳ್ಳೆ ಭಾಷೆ ಬಗ್ಗೆ ಆಸಕ್ತಿ ಕೆರಳಿತು. ಕುರಿಗಾಹಿಗಳು ಕಡಿದಾದ ಕಣಿವೆಗಳ ನಡುವೆ ಸಂವಹನ ನಡೆಸಲು ಚೇತೋಹಾರಿ ಶಿಳ್ಳೆಗಳನ್ನು ಬಳಸುತ್ತಿದ್ದರು. ಅದು ಹೆಚ್ಚೂ ಕಡಿಮೆ, ಸ್ಥಳೀಯ ಹಕ್ಕಿಗಳ (ಬ್ಲಾಕ್‌ಬರ್ಡ್‌) ಭಾಷೆಯಂತೆಯೇ ಇತ್ತು. ಮನುಷ್ಯರ ಮಾತುಗಳನ್ನು ಅನುಕರಿಸುವುದಕ್ಕೆ  ಈ ಹಕ್ಕಿಗಳು ಹೆಸರುವಾಸಿ. 

ಈ ವಿಚಾರ ಸಹಜವಾಗಿಯೇ ಮೆಯೆರ್‌ ಅವರ ಕುತೂಹಲ ಕೆರಳಿಸಿತ್ತು. ಅವರು ಈ ವಿಷಯದ ಕುರಿತೇ ಪಿಎಚ್‌.ಡಿ  ಪದವಿ ಪಡೆದರು. ಇದಾಗಿ ಒಂದು ದಶಕದ ಬಳಿಕವೂ ಅವರು ಶಿಳ್ಳೆಯ ಗುಂಗಿನಿಂದ ಹೊರಗೆ ಬಂದಿಲ್ಲ. ‘ಮುಂದೊಂದು ದಿನ ಇದೇ ನನಗೆ ಉದ್ಯೋಗವನ್ನೂ ನೀಡುತ್ತದೆ ಎಂದು ನಾನು ಕನಸಿನಲ್ಲೂ ಕಲ್ಪಿಸಿರಲಿಲ್ಲ’ ಎನ್ನುತ್ತಾರೆ ಮೆಯೆರ್‌.

ಮೆಯೆರ್‌ ಅವರ ಹೆಚ್ಚಿನ ಸಂಶೋಧನೆಗಳು ಜಗತ್ತಿನಾದ್ಯಂತ ಶಿಳ್ಳೆಯ ಪರಿಭಾಷೆಗಳನ್ನು ಗುರುತಿಸುವುದರ ಬಗ್ಗೆಯೇ ಕೇಂದ್ರೀಕೃತವಾಗಿವೆ. ಪ್ರಾಚೀನ ಇತಿಹಾಸ ಪುಸ್ತಕಗಳಲ್ಲೂ ಈ ಕುರಿತ ಕೆಲವು ಉಲ್ಲೇಖಗಳಿದ್ದವು. ಉದಾಹರಣೆಗೆ, ಕ್ರಿಸ್ತಪೂರ್ವ 5ನೇ ಶತಮಾನದ ಗ್ರೀಕ್‌ ಇತಿಹಾಸಕಾರ ಹೆರೋಡೋಟಸ್‌ ಅವರು, ಗುಹೆಗಳಲ್ಲಿ ವಾಸಿಸುತ್ತಿದ್ದ ಇಥಿಯೋಪಿಯನ್ನರ ಗುಂಪಿನ ಬಗ್ಗೆ ವಿವರಿಸಿದ್ದರು. ‘ಅವರ ಭಾಷೆಯಂತಹ ಇನ್ನೊಂದು ಭಾಷೆ ಜಗತ್ತಿನ ಬೇರೆಲ್ಲೂ ಇರಲು ಸಾಧ್ಯವಿಲ್ಲ. ಅದು ಬಾವಲಿಗಳ  ಕೀರಲು ಧ್ವನಿಯಂತೆಯೇ ಇದ್ದವು’  ಎಂದು ಅವರು ಬರೆದಿದ್ದರು. ಯಾವ ಜನಾಂಗದ ಬಗ್ಗೆ ಅವರು ವಿವರಿಸಿದ್ದರು ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ, ಮೆಯೆರ್‌ ಅವರ ಪ್ರಕಾರ ಇಥಿಯೋಪಿಯಾದ ಓಮೊ ಕಣಿವೆಯಲ್ಲಿ ಈಗಲೂ ಅನೇಕ ವಿಧದ ಶಿಳ್ಳೆ ಭಾಷೆಗಳು ಬಳಕೆಯಲ್ಲಿವೆ.

ಜಗತ್ತಿನ ಎಲ್ಲ ಮೂಲೆಗಳಲ್ಲೂ ಶಿಳ್ಳೆ ಭಾಷೆ ಚಾಲ್ತಿಯಲ್ಲಿರುವುದನ್ನು ಮೆಯೆರ್‌ ಗುರುತಿಸಿದ್ದಾರೆ. ಮಾತಿಗಿಂತಲೂ ಹೆಚ್ಚು ದೂರಕ್ಕೆ ಶಿಳ್ಳೆ ಕೇಳಿಸಬಲ್ಲುದು. ಮುಕ್ತ ವಾತಾವರಣದಲ್ಲಿ ಮಾತು 5 ಕಿ.ಮೀ ದೂರದವರೆಗೆ ಕೇಳಿಸಿದರೆ, ಶಿಳ್ಳೆ 8 ಕಿ.ಮೀ.ಯಷ್ಟು ದೂರ ಕೇಳಿಸಬಲ್ಲುದು. ಹಾಗಾಗಿಯೇ, ಕಣಿವೆ ಪ್ರದೇಶಗಳಲ್ಲಿ ಕುರಿಗಾಹಿಗಳು ಹಾಗೂ ರೈತರು ಕಣಿವೆಗಳಾಚೆಗೆ ಸಂದೇಶ ರವಾನಿಸಲು ಸಾಮಾನ್ಯವಾಗಿ ಶಿಳ್ಳೆ ಭಾಷೆಯನ್ನೇ ಬಳಸುತ್ತಾರೆ.

ಶಿಳ್ಳೆಯ ಸದ್ದು ಅಮೆಜಾನ್‌ನಂತಹ ದಟ್ಟಾರಣ್ಯದೊಳಗೂ ಸರಾಗವಾಗಿ ನುಸುಳಬಲ್ಲುದು. ಇಲ್ಲಿನ ದಟ್ಟ ಹಸಿರು ಕಾನನದ ನಡುವೆಯೂ ಪರಸ್ಪರ ಗುರುತಿಸಿಕೊಳ್ಳಲು ಬೇಟೆಗಾರರು ಶಿಳ್ಳೆಯನ್ನೇ ಬಳಸುತ್ತಾರೆ. ‘ಪ್ರತಿಧ್ವನಿಗಳು ಒಂದಕ್ಕೊಂದು ಕೂಡಿಕೊಂಡು ಗೊಂದಲ ಉಂಟಾಗುವುದನ್ನು ತಪ್ಪಿಸಲು ಶಿಳ್ಳೆಗಳು ಸಹಕಾರಿ’ ಎನ್ನುತ್ತಾರೆ ಮೆಯೆರ್. 

‘ಮಾತನಾಡಿದರೆ ಶಿಕಾರಿಯ ಪ್ರಾಣಿ ಬೆದರಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ, ಶಿಳ್ಳೆಯಿಂದ ಅವು ವಿಚಲಿತವಾಗುವುದಿಲ್ಲ. ಸಮುದ್ರದಲ್ಲಿ ನಡೆಸುವ ಬೇಟೆಗೂ ಈ ಭಾಷೆ ಸಹಕಾರಿ. ಕೆಲವು ಎಸ್ಕಿಮೊ ಜನರು ತಿಮಿಂಗಿಲಗಳನ್ನು ಬೇಟೆಯಾಡುವಾಗ ಶಿಳ್ಳೆಯ ಮೂಲಕವೇ ಪರಸ್ಪರ ಆದೇಶ ನೀಡುತ್ತಾರೆ’ ಎಂದು ಅವರು ಹೇಳುತ್ತಾರೆ.

ಇಂತಹ ಗೂಢಭಾಷೆ ಯುದ್ಧದ ಅಸ್ತ್ರವಾಗಿ ಬಳಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ.  ಅಟ್ಲಾಸ್ ಪರ್ವತ ಶ್ರೇಣಿಯ ಬರ್ಬೆರ್‌ ಜನಾಂಗದವರು (ಅಮೇಜಿಗ್ ಎಂದೂ ಕರೆಯುತ್ತಾರೆ) ಫ್ರೆಂಚರ ವಿರುದ್ಧ ದಂಗೆ ಸಾರಿದ ಸಂದರ್ಭದಲ್ಲಿ ಸಂದೇಶಗಳನ್ನು ರವಾನಿಸಲು ಶಿಳ್ಳೆಯನ್ನೇ ಬಳಸಿದ್ದರು. ಈ ನಿಗೂಢ ಭಾಷೆಯನ್ನು ಜಪಾನೀ ಗೂಢಚರರು ಗ್ರಹಿಸಬಾರದು ಎಂಬ ಉದ್ದೇಶದಿಂದ ಆಸ್ಟ್ರೇಲಿಯಾದ ಸೇನೆ ರೇಡಿಯೊಗಳ ಮೂಲಕ ಶಿಳ್ಳೆಯ ಸಂದೇಶಗಳನ್ನು ಪ್ರಸಾರ ಮಾಡಲು ಪಪುವ ನ್ಯೂಗಿನಿಯ ಪರಿಣತರನ್ನು ನೇಮಿಸಿಕೊಂಡಿದೆ.

ಹಮಂಗ್‌ ಜನಾಂಗದವರು ಪ್ರೇಮ ನಿವೇದನೆಗೆ ಶಿಳ್ಳೆಯನ್ನು ಮೋಹಕವಾಗಿ ಬಳಸುವಂತೆಯೇ ಧಾರ್ಮಿಕವಾಗಿಯೂ ಇದು ಬಳಕೆಯಲ್ಲಿದೆ. ಚೀನಾದ ಪ್ರಾಚೀನ ಸಾಹಿತ್ಯದಲ್ಲಿ ಟಾವೊ ತತ್ವಪದಗಳನ್ನು ಜನ ಶಿಳ್ಳೆಗಳ ಮೂಲಕವೇ ಹಾಡುತ್ತಿದ್ದರು. ಈ ಅಭ್ಯಾಸ ಅವರನ್ನು ಒಂದು ಬಗೆಯ ವಿಶಿಷ್ಟ ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತಿತ್ತು.  ಚೀನಾದ ದಕ್ಷಿಣ ಭಾಗದಲ್ಲಿ  ವೈವಿಧ್ಯಮಯ  ಶಿಳ್ಳೆಗಳನ್ನು ಬಳಸುವ ಹಮಂಗ್‌ ಹಾಗೂ ಆಖಾದಂತಹ ಅನೇಕ ದೇಸಿ ಅಲ್ಪಸಂಖ್ಯಾತ ಸಮುದಾಯಗಳು ಈಗಲೂ ಇವೆ.

ಲಕ್ಷಾಂತರ ಜನರ ಪಾಲಿಗೆ ಶಿಳ್ಳೆ ಈಗಲೂ ಅತ್ಯಂತ ಶಕ್ತಿಶಾಲಿ ಸಂವಹನ ವಿಧಾನ.  ಶಿಳ್ಳೆಯನ್ನು ಬಳಸುವವರು ಸಾಮಾನ್ಯವಾಗಿ ಎರಡರಲ್ಲೊಂದು ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ಮೆಯೆರ್‌ ಕಂಡುಕೊಂಡಿದ್ದಾರೆ. ಇವೆರಡರಲ್ಲೂ, ಶ್ರುತಿಯನ್ನು ಬದಲಿಸುವ ಮೂಲಕ  ಮಾತಿನ ಭಾಷೆಯ ಹಂದರವನ್ನು ಮಾತ್ರ ಸೃಷ್ಟಿಸಲಾಗುತ್ತದೆ. ನಿತ್ಯವೂ ಬಳಸುವ ಮಾತು ಎಷ್ಟು ಲಯಬದ್ಧವಾಗಿದೆ ಎಂಬುದನ್ನು ಇದು ಅವಲಂಬಿಸಿದೆ. ಕೆಲವು ದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಏಷ್ಯಾದಲ್ಲಿ ಒಂದು ಪದದ, ಒಂದೊಂದು ಅಕ್ಷರದ ಶ್ರುತಿಯ ವ್ಯತ್ಯಾಸವೂ ಅರ್ಥವನ್ನೇ ಬದಲಾಯಿಸಬಲ್ಲುದು. ಇದರ ಪರಿಣಾಮ ಮಾತನಾಡುವ ವಾಕ್ಯದಲ್ಲಿ ಅಂತರ್ಗತವಾಗಿರುವ ಲಯವನ್ನೇ ಶಿಳ್ಳೆಯೂ ಅನುಸರಿಸುತ್ತದೆ. ಆದರೆ, ಸ್ಪ್ಯಾನಿಷ್‌ ಅಥವಾ ಟರ್ಕಿಯಂತಹ ಭಾಷೆಗಳು ಸಹಜವಾಗಿಯೇ ಲಯಬದ್ಧವಾಗಿಲ್ಲ. ಇಂತಹ ಪ್ರಕರಣಗಳಲ್ಲಿ ಶಿಳ್ಳೆ ಸ್ವರಾಕ್ಷರಗಳ ವಿಭಿನ್ನ ಧ್ವನಿಯ ಕಂಪನವನ್ನು ಅನುಕರಿಸುತ್ತದೆ. ವ್ಯಂಜನಗಳ ವ್ಯತ್ಯಾಸಕ್ಕೆ ಅನುಗುಣವಾಗಿ ಶ್ರುತಿಯಿಂದ ಶ್ರುತಿಗೆ ಶಿಳ್ಳೆ ಹಠಾತ್‌ ಏರಿಳಿತವಾಗುತ್ತದೆ.

ವಿಭಿನ್ನ ಪದಗಳನ್ನು ಬೇರ್ಪಡಿಸಲು ಸಹಾಯವಾಗುವ ಅನೇಕ ಸಂಕೇತಗಳು ಶಿಳ್ಳೆಯಲ್ಲಿ ಇಲ್ಲ. ಆದರೂ, ಅವುಗಳಲ್ಲಿ ಗ್ರಾಹ್ಯ ಸಂದೇಶಗಳು ಅಡಕವಾಗಿರುತ್ತವೆ ಎಂಬುದನ್ನು ಹೊರಗಿನವರು ನಂಬುವುದೂ ಕಷ್ಟ. ನುರಿತ ಶಿಳ್ಳೆಗಾರರು ವಾಕ್ಯಗಳನ್ನು ಶೇಕಡಾ 90ಕ್ಕಿಂತಲೂ ಹೆಚ್ಚು ನಿಖರವಾಗಿ ಗ್ರಹಿಸಬಲ್ಲರು ಎಂಬುದನ್ನು  ಮೆಯೆರ್‌ ಕಂಡುಕೊಂಡಿದ್ದಾರೆ. ಕಿಕ್ಕಿರಿದಿರುವ ಕೊಠಡಿಯಲ್ಲಿ ಸಂಭಾಷಣೆ ನಡೆಸುವುದಕ್ಕೆ ಅಥವಾ ಪಿಸುಮಾತನ್ನು ಅರ್ಥೈಸುವುದಕ್ಕೆ ನರಮಂಡಲ ಹೇಗೆ ನೆರವಾಗುತ್ತದೆಯೋ ಅದೇ ರೀತಿ ಶಿಳ್ಳೆಯ ವಿಚಾರದಲ್ಲೂ ಆಗುತ್ತದೆ ಎಂದು ಅವರು ವಿವರಿಸುತ್ತಾರೆ. 

(ಚಿತ್ರ: ವಿಜಯ ಕುಮಾರಿ ಆರ್.)

‘ಅಡಚಣೆಗಳಿಂದ ಕರ್ಕಶವಾಗುವ ಪದಗಳ ಮರುಜೋಡಿಸುವ ಸಾಮರ್ಥ್ಯವನ್ನು ಮಿದುಳು ಹೊಂದಿದೆ’ ಎನ್ನುತ್ತಾರೆ ಅವರು. ಬರವಣಿಗೆಯಲ್ಲೂ ಇದನ್ನು ಗಮನಿಸಬಹುದು. ಇಂಗ್ಲಿಷ್‌ ಭಾಷೆಯ ಅಕ್ಷರಗಳು ಅದಲುಬದಲಾದರೂ, ಅಥವಾ ಕೆಲವೊಂದು ಸ್ವರಾಕ್ಷರಗಳನ್ನು ಕೈಬಿಟ್ಟರೂ ಮಿದುಳು ಅದನ್ನು ಸರಿಮಾಡಿಕೊಂಡು ಓದುತ್ತದೆ.

ಈ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ ನಡೆದದ್ದೇ ಆದರೆ, ನರರೋಗ ತಜ್ಞರು ಮಿದುಳಿನ ಸಂರಚನೆಯ ಕುರಿತ ಗ್ರಹಿಕೆಯ ಬಗ್ಗೆಯೇ ಮರುಚಿಂತನೆ ನಡೆಸಬೇಕಾಗುತ್ತದೆ.

ದಶಕಗಳ ಕಾಲ ಮಿದುಳಿನ ಪ್ರತಿಯೊಂದು ಪಾರ್ಶ್ವವೂ ನಿರ್ದಿಷ್ಟ ಸವಾಲುಗಳನ್ನು ನಿಭಾಯಿಸಲು ಸೀಮಿತವಾಗಿದೆ ಎಂದೇ ಸಂಶೋಧಕರು ಗ್ರಹಿಸಿದ್ದರು. ಭಾಷೆ ಕುರಿತ ಕ್ರಿಯೆಗಳು ನಡೆಯುವುದು ಎಡ ಪಾರ್ಶ್ವದಲ್ಲಿ ಮಾತ್ರ ಎಂಬ ಗ್ರಹಿಕೆ ಈಗಲೂ ಇದೆ. ಈ ಗ್ರಹಿಕೆ ಶಿಳ್ಳೆಗಳ ವಿಚಾರದಲ್ಲೂ ಅನ್ವಯವಾಗುತ್ತದೆಯೇ ಎಂಬುದನ್ನು ಪರೀಕ್ಷಿಸಲು  ಜರ್ಮನಿಯ ಬೋಚುಂನ ರುಹ್ರ್‌ ವಿಶ್ವವಿದ್ಯಾಲಯದ ಗುಂಟುರ್‌ಕುನ್‌ ಬಯಸಿದರು.

ಹಕ್ಕಿಗಳ ಗ್ರಾಮ

ಈ ಬಗ್ಗೆ ಶೋಧ ಆರಂಭಿಸಿದ ಗುಂಟುರ್‌ಕುನ್‌, ಕಪ್ಪು ಸಮುದ್ರದ ಬಳಿಯ ಕಣಿವೆಯೊಂದರಲ್ಲಿರುವ ಕುಸ್ಕೋಯ್‌ಗೆ, ಅಂದರೆ ಹಕ್ಕಿಗಳ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು.

‘ಸಿಲ್ಬೊ ಗೊಮೆರೊ’ದ ಜನರಂತೆಯೇ ಇಲ್ಲೂ ಕುರಿಗಾಹಿಗಳು ಪರ್ವತಗಳ ಪ್ರಸ್ಥಭೂಮಿಯಲ್ಲಿ ಸಂದೇಶ ರವಾನೆಗಾಗಿ ಶಿಳ್ಳೆ ಹೊಡೆಯುತ್ತಾರೆ. ಈ ಕಣಿವೆಯಲ್ಲಿ ಧುಮ್ಮಿಕ್ಕುವ ನದಿಯ ಗರ್ಜನೆಯ ನಡುವೆಯೂ ಸಂವಹನ ನಡೆಸುವುದಕ್ಕೆ ಮೀನುಗಾರರು ಶಿಳ್ಳೆಯನ್ನೇ ಬಳಸುತ್ತಾರೆ. ಶಿಳ್ಳೆಯ ಮೂಲಕ ನಡೆಯುವ ಸಂಭಾಷಣೆಯನ್ನು ಮೊದಲ ಬಾರಿ ವೀಕ್ಷಿಸಿದಾಗ ಆದ ರೋಮಾಂಚನವನ್ನು ಗುಂಟುರ್‌ಕುನ್‌ ಅವರು ಇನ್ನೂ ಮರೆತಿಲ್ಲ. 

‘ಮಾಮೂಲಿ ಭಾಷೆಗಿಂತ ವಿಭಿನ್ನವಾದ, ಸಾಕಷ್ಟು ಅರ್ಥಪೂರ್ಣವಾದ ಸಂಭಾಷಣೆಯನ್ನು ಆಲಿಸಿದಾಗ ನನ್ನೆದುರು ಜಾದೂ ನಡೆಯುತ್ತಿದೆಯೇನೋ ಎಂದು  ಅನಿಸಿತ್ತು’ ಎನ್ನುತ್ತಾರೆ ಅವರು.

ಭಾರಿ ಗಾತ್ರವನ್ನು ಹೊಂದಿರುವ ಬ್ರೈನ್‌ ಸ್ಕ್ಯಾನರ್‌ ಉಪಕರಣವನ್ನು ಜರ್ಮನಿಯಿಂದ ಈ ಕುಗ್ರಾಮಕ್ಕೆ ಕೊಂಡೊಯ್ಯುವುದು ಸುಲಭವಾಗಿರಲಿಲ್ಲ. ಹಾಗಾಗಿ ಗುಂಟುರ್‌ಕುನ್‌ ಅವರು ಒಬ್ಬೊಬ್ಬರ ಕಿವಿಯಲ್ಲಿ ಬೇರೆ ಬೇರೆ ಅಕ್ಷರವನ್ನು ಉಸುರಿ, ಏನು ಕೇಳಿಸಿತು ಎಂದು ಅವರಿಂದ ಹೇಳಿಸುವ ಸರಳವಾದ ಶ್ರವಣ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದರು. ಎಡ ಕಿವಿಯಲ್ಲಿ ಕೇಳಿಸಿಕೊಂಡರೆ ಅದು ಮಿದುಳಿನ ಬಲಭಾಗವನ್ನು ತಲುಪುತ್ತದೆ. ದೇಹದ ಈ ವಿಶಿಷ್ಟ ವ್ಯೂಹ ವ್ಯವಸ್ಥೆಯನ್ನು ಕೇಂದ್ರೀಕರಿಸಿ ಅವರ ಪ್ರಯೋಗ ನಡೆದಿತ್ತು. 

ಬಲಕಿವಿಯಲ್ಲಿ ಕೇಳಿಸಿಕೊಂಡ ಅಕ್ಷರವು ಮಿದುಳಿನ ಹೆಚ್ಚು ಶಕ್ತಿಯುತವಾದ ಎಡಪಾರ್ಶ್ವಕ್ಕೆ ತಕ್ಷಣ ರವಾನೆಯಾಗುತ್ತದೆ. ಹಾಗಾಗಿ ಅದು ಹೆಚ್ಚು ಗಮನ ಸೆಳೆಯಬೇಕು.  ಎಡ ಕಿವಿಯಲ್ಲಿ ‘ಫ’ ಎಂದು ಹಾಗೂ ಬಲಕಿವಿಯಲ್ಲಿ ‘ಠ’ ಎಂದು ಉಸುರಿದರೆ ನಿಮಗೆ ‘ಠ’ ಮಾತ್ರ ಕೇಳಿಸುತ್ತದೆ. ಏಕೆಂದರೆ ಭಾಷಾ ಪ್ರಕ್ರಿಯೆ ನಡೆಯುವ ಎಡಪಾರ್ಶ್ವಕ್ಕೆ ಅದು ತಕ್ಷಣ ತಲುಪುತ್ತದೆ. ಈಗಿನ ಸಿದ್ಧಾಂತ ಇರುವುದೇ ಹೀಗೆ. ಆದರೆ, ಗುಂಟುರ್‌ಕುನ್‌ ಶಿಳ್ಳೆಯ ರೂಪದ ಸ್ವರ ಹೊರಡಿಸಿದಾಗ ಕುಸ್ಕೋಯ್‌ ಜನರಿಗೆ ಹಾಗೆ ಆಗಲೇ ಇಲ್ಲ. ಎರಡು ಕಿವಿಗಳಲ್ಲಿ ಉಸುರಿದ ಶಿಳ್ಳೆಯ ಸ್ವರಗಳನ್ನೂ ಅವರು  ಪ್ರತ್ಯೇಕವಾಗಿ ಗುರುತಿಸಿದರು. ಸಂಕೇತಗಳನ್ನು ಗ್ರಹಿಸುವಾಗ ಮಿದುಳಿನ ಎರಡೂ ಪಾರ್ಶ್ವಗಳೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದು ಕಂಡುಬಂತು. ‘ಮಿದುಳಿನ ಅಸಮ ಪಾರ್ಶ್ವದ (ಎರಡು ಪಾರ್ಶ್ವಗಳು ಒಂದೇ ಸಮ ಇಲ್ಲ) ಸಿದ್ಧಾಂತ ಇಲ್ಲಿ ಸೋತುಹೋಯಿತು. ಎರಡೂ ಪಾರ್ಶ್ವಗಳು ಕೆಲಸವನ್ನು ಸಮನಾಗಿ ಹಂಚಿಕೊಂಡವು’ ಎನ್ನುತ್ತಾರೆ ಗುಂಟುರ್‌ಕುನ್‌.

2015ರಲ್ಲಿ ಪ್ರಕಟವಾದ ಈ ಫಲಿತಾಂಶ, ಮಿದುಳು ಒಗ್ಗಿಕೊಳ್ಳುವ ಸಾಮರ್ಥ್ಯವನ್ನು ಶ್ರುತಪಡಿಸುವುದಕ್ಕೆ ಮಾತ್ರ ಸೀಮಿತ ಅಲ್ಲ. ಪಾರ್ಶ್ವವಾಯುವಿಗೆ ಒಳಗಾದ ರೋಗಿಗಳು ಆ ಬಳಿಕವೂ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದಕ್ಕೂ ಇದು ನೆರವಾಗಬಲ್ಲುದು. ಎಡ ಪಾರ್ಶ್ವ ಹಾನಿಗೊಳಗಾದರೆ ಕೆಲವರು ಮಾತನಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಆದರೆ, ಅವರು ಶಿಳ್ಳೆಯ ಭಾಷೆಯ ಮೂಲಕ ಮಾತನಾಡಬಹುದು ಎಂಬ ಸಾಧ್ಯತೆಯನ್ನು ಗುಂಟುರ್‌ಕುನ್‌ ಅವರು ಕಂಡುಕೊಂಡ ಅಂಶಗಳು ತೋರಿಸಿಕೊಟ್ಟಿವೆ.

ಈ ಗ್ರಾಮದ ಹೊರಗಿನ ವ್ಯಕ್ತಿಗಳೂ ‘ಹಕ್ಕಿಗಳ ಭಾಷೆ’ಯನ್ನು ನಿರಂತರವಾಗಿ ಆಲಿಸಿದರೆ, ಅದನ್ನು ಕಲಿಯಲು ಸಾಧ್ಯವಿದೆ. ಗುಂಟುರ್‌ಕುನ್‌ ಅವರು ಪ್ರವಾಸ ಮುಗಿಸಿ ಹಿಂತಿರುಗುವ ವೇಳೆ ಅವರು ಸ್ಥಳೀಯರು ಸಂಭಾಷಣೆಗೆ ಬಳಸುವ ಶಿಳ್ಳೆ ಭಾಷೆಯ ಕೆಲವು ವಿಶಿಷ್ಟ ಪದಗಳನ್ನು ಗುರುತಿಸಲು ಸಾಮರ್ಥ್ಯ ಗಳಿಸಿದ್ದರು.

‘ಶಿಳ್ಳೆ ಭಾಷೆಯ ಬಗ್ಗೆ ಗಂಧಗಾಳಿ ಇಲ್ಲದವರೂ ಅದರ ನಿರ್ದಿಷ್ಟ ಸ್ವರವು ಯಾವುದಕ್ಕೆ ಸಂಬಂಧಿಸಿದ್ದು ಎಂಬುದನ್ನು ಕಲಿಯಬಲ್ಲರು. ಇದಕ್ಕೆ ಕುಸ್ಕೋಯ್‌ ಜನರಂತೆ ಹಕ್ಕಿಗಳ ಭಾಷೆ ಕಲಿಯಲು ಆ ಪ್ರದೇಶದಲ್ಲೇ ಹುಟ್ಟಿಬೆಳೆಯಬೇಕಾಗಿಲ್ಲ’ ಎಂದು ಮೆಯೆರ್‌ ಅವರು ಅಧ್ಯಯನದ ಮೂಲಕ ಕಂಡುಕೊಂಡಿದ್ದರು. ಗುಂಟುರ್‌ಕುನ್‌ ಅವರ ಅನುಭವವು ಇದನ್ನೂ ಪುಷ್ಟೀಕರಿಸುವಂತಿದೆ.

ಶಿಳ್ಳೆಯ ಭಾಷೆ ಸಂಗೀತದ ಬಗ್ಗೆ ಅಧ್ಯಯನ ನಡೆಸುತ್ತಿರುವ ನರವಿಜ್ಞಾನಿಗಳ ಕುತೂಹಲವನ್ನೂ ಕೆರಳಿಸಿದೆ. ಭಾಷೆ ಮತ್ತು ಸಂಗೀತಗಳೆರಡೂ ಮಿದುಳಿನ ಒಂದೇ ಭಾಗದಲ್ಲಿ ಗ್ರಹಿಸಲ್ಪಡುತ್ತವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗುತ್ತಿವೆ.

ಮಾನವನ ಭಾಷೆ ಬೆಳೆದುಬಂದ ಹಾದಿಯು ದೊಡ್ಡ ಜಿಗಿತಗಳ ಬದಲು ಸಣ್ಣ ಸಣ್ಣ ಹೆಜ್ಜೆಗಳನ್ನು ಒಳಗೊಂಡಿದೆ. ಈ ಆಲೋಚನೆ ವಿಕಾಸವಾದದ ಬೆನ್ನುಹತ್ತಿದ ಜೀವವಿಜ್ಞಾನಿಗಳಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸಿದೆ. ಆಖಾ ಹಾಗೂ ಹಮಂಗ್‌ ಜನರ ಸಂಸ್ಕೃತಿಯನ್ನು ಗಮನಿಸಿದರೆ, ಆದಿ ಭಾಷೆ ಸಂಗೀತದ ಬದಲು ಶಿಳ್ಳೆಯೇ ಆಗಿರಬಹುದೋ ಏನೋ ಎಂದೆನಿಸುತ್ತದೆ!

ಮೆಯೆರ್‌ ಅವರ ಸಂಶೋಧನೆ ಒಂದನ್ನಂತೂ ಖಚಿತವಾಗಿ ಶ್ರುತಪಡಿಸುತ್ತದೆ. ಬಹುದೂರದವರೆಗೆ ಸಂವಹನ ನಡೆಸಲು ಬೇಟೆ ಹಾಗೂ ಭಕ್ಷಕ ಪ್ರಾಣಿಗಳ ಗಮನಕ್ಕೆ ಬಾರದಂತೆ ಸಂವಹನ ನಡೆಸಲು ಶಿಳ್ಳೆ ಭಾಷೆ ಸೂಕ್ತ. ಈ ಅನುಕೂಲಗಳು ನಮ್ಮ ಪೂರ್ವಜರು ಬದುಕುಳಿಯುವುದಕ್ಕೂ ನೆರವಾಗಿರಬಹುದು. ಕ್ರಮೇಣ ಮನುಷ್ಯ ಧ್ವನಿಪೆಟ್ಟಿಗೆ ಮೇಲೆ ಹಿಡಿತ ಸಾಧಿಸಿರಬಹುದು. ಮಾನವನ ಬೆಳವಣಿಗೆಯ ಸಮಗ್ರ ಸಂಪುಟವನ್ನು ಪರಿಗಣಿಸಿದರೆ ಶಿಳ್ಳೆಯ ಭಾಷೆಗೆ ಅದರದ್ದೇ ಆದ ಮಹತ್ವವಿದೆ.

ಆದರೆ, ಚಿಂತನೆ ಬಗ್ಗೆ ವೈಜ್ಞಾನಿಕವಾಗಿ ಒಮ್ಮತವಿಲ್ಲ. 

ಆಧುನೀಕರಣದ ಕಬಂಧಬಾಹು ಎಲ್ಲೋ ಕಾಡಿನ ಮೂಲೆಯಲ್ಲಿರುವ ಸಮುದಾಯಗಳನ್ನೂ ಆಕ್ರಮಿಸಿಕೊಳ್ಳುತ್ತಿರುವಾಗ ಇಂತಹ ಭಾಷೆಗಳನ್ನು ಕಾಪಾಡಲು ತಕ್ಷಣವೇ ಮುಂದಾಗಬೇಕಾಗುತ್ತದೆ. ಇತಿಹಾಸದ ಈ ಮಾರ್ದನಿಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮುನ್ನವೇ ನಾವು ಎಚ್ಚೆತ್ತುಕೊಳ್ಳಬೇಕು.

**

(ಕೃಪೆ: ಬಿಬಿಸಿ)

(ಕನ್ನಡಕ್ಕೆ: ಪಿ.ವಿ. ಪ್ರವೀಣ್‌ ಕುಮಾರ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry