ಬಿಎಂಡಬ್ಲ್ಯೂ ಎಕ್ಸ್‌ ಸರಣಿಯ ಚೂಟಿ ಕಾರು!

7

ಬಿಎಂಡಬ್ಲ್ಯೂ ಎಕ್ಸ್‌ ಸರಣಿಯ ಚೂಟಿ ಕಾರು!

Published:
Updated:
ಬಿಎಂಡಬ್ಲ್ಯೂ ಎಕ್ಸ್‌ ಸರಣಿಯ ಚೂಟಿ ಕಾರು!

ಐಷಾರಾಮಿ ಕಾರು ಕೊಳ್ಳುವ ಶಕ್ತಿ ಇರುವವರಿಗೆ, ಇಂತಹ ಕಾರುಗಳ ಬಗ್ಗೆ ಆಸಕ್ತಿ ಇರುವವರಿಗೆ ಬಿಎಂಡಬ್ಲ್ಯೂ ಕಂಪೆನಿ ಬಗ್ಗೆ ಹೊಸದಾಗಿ ಹೇಳಬೇಕಾದ ಅಗತ್ಯವೇನೂ ಇಲ್ಲ. ಹಾಗೆಯೇ, ಬಿಎಂಡಬ್ಲ್ಯೂ ಕಂಪೆನಿಯ ‘ಎಕ್ಸ್‌’ ಶ್ರೇಣಿಯ ಕಾರುಗಳ ಬಗ್ಗೆಯೂ ತಿಳಿದಿರುತ್ತದೆ.

ಈ ಶ್ರೇಣಿಯ ಕಾರುಗಳ ಚಾಲನೆಯ ಅವಕಾಶವನ್ನು ಕಂಪೆನಿಯು ಉತ್ಸಾಹಿಗಳಿಗೆ ಬೆಂಗಳೂರಿನಲ್ಲಿ ಈಚೆಗೆ ಕಲ್ಪಿಸಿತ್ತು. ಬನ್ನೇರುಘಟ್ಟ ಸಮೀಪದ ಶಾನುಭೋಗನಹಳ್ಳಿಯಲ್ಲಿ ಟ್ರ್ಯಾಕ್‌ ಸಿದ್ಧಪಡಿಸಲಾಗಿತ್ತು. ಈ ಟ್ರ್ಯಾಕ್‌ನಲ್ಲಿ ಬಿಎಂಡಬ್ಲ್ಯೂ ಎಕ್ಸ್‌3 ಶ್ರೇಣಿಯ ಕಾರು ಚಾಲನೆ ಮಾಡುವ ಅವಕಾಶ ದೊರಕಿತ್ತು.

ಹೇಳಿಕೇಳಿ ಇದು ಪ್ರತಿಷ್ಠಿತ ಕಂಪೆನಿಯ ಐಷಾರಾಮಿ ಕಾರು. ಹಾಗಾಗಿ, ಅತ್ಯುತ್ತಮ ಒಳಾಂಗಣ ವಿನ್ಯಾಸ, ಅತ್ಯುತ್ತಮ ಎನ್ನಬಹುದಾದ ಹವಾನಿಯಂತ್ರಣ ವ್ಯವಸ್ಥೆ, ಆರಾಮದಾಯಕ ಸೀಟುಗಳು ಈ ಕಾರಿನಲ್ಲಿವೆ. ಚಾಲಕನ ಹಾಗೂ ಆತನ ಪಕ್ಕದಲ್ಲಿರುವ ಸೀಟುಗಳು ಆರಾಮದಾಯಕ ಮಾತ್ರವಲ್ಲದೆ, ಸುರಕ್ಷತೆ ದೃಷ್ಟಿಯಿಂದಲೂ ಉತ್ತಮವಾಗಿವೆ. ಸೀಟ್‌ ಬೆಲ್ಟ್‌ ಧರಿಸಿ ಕುಳಿತರೆ ಚಾಲಕನಿಗೆ ಆರಾಮದ ಅನುಭವ ಆಗುತ್ತದೆ. ಆಫ್‌ ರೋಡ್‌ ಚಾಲನೆಗೆ ಈ ಕಾರು ಹೇಳಿ ಮಾಡಿಸಿದಂತೆ ಇದೆ. ಬೆಂಗಳೂರಿನಲ್ಲಿ ಕಂಪೆನಿಯು ಪರೀಕ್ಷಾರ್ಥ ಚಾಲನೆಗೆ ನೀಡಿದ್ದ ಕಾರು ಸ್ವಯಂಚಾಲಿತ ಗಿಯರ್‌ ಬಾಕ್ಸ್‌ ಹೊಂದಿತ್ತು. ಅತ್ಯಂತ ಕಡಿದಾದ ತಗ್ಗಿನಲ್ಲಿ ಹಾಗೂ ಕಡಿದಾದ ಏರಿನಲ್ಲಿ ಸಾಗುವಾಗ ಕಾರು ಸುರಕ್ಷಿತ ಎಂಬ ಭಾವ ಬರುತ್ತದೆ. ಇದಕ್ಕೆ ಕಾರಣ, ಕಾರಿನಲ್ಲಿ ಅಳವಡಿಸಿರುವ ಕೆಲ ಚೂಟಿ ವ್ಯವಸ್ಥೆಗಳು.

ಅತ್ಯಂತ ಅಪಾಯಕಾರಿ, ಕಡಿದಾದ ತಗ್ಗಿನಲ್ಲಿ ಸಾಗುವಾಗ ‘ಹಿಲ್ ಡಿಸೆಂಟ್ ಕಂಟ್ರೋಲ್’ ವ್ಯವಸ್ಥೆಯನ್ನು ಚಾಲೂ ಮಾಡಿಕೊಳ್ಳಬೇಕು. ಆಗ ಕಾರು ಬ್ರೇಕ್‌ ಸಹಾಯವೇ ಇಲ್ಲದೆ, ಇಳಿಜಾರಿನಲ್ಲಿ ತೀರಾ ನಿಧಾನವಾಗಿ ಸಾಗುತ್ತದೆ. ಯಾವ ವೇಗದಲ್ಲಿ ಕಾರು ಇಳಿಜಾರು ಇಳಿಯಬೇಕು (4 ಕಿ.ಮೀ ಪ್ರತಿ ಗಂಟೆ ಅಥವಾ 5 ಕಿ.ಮೀ ಪ್ರತಿ ಗಂಟೆ ಇತ್ಯಾದಿ) ಎಂಬುದನ್ನು ನಿರ್ಧರಿಸುವ ಆಯ್ಕೆಯೂ ಚಾಲಕನ ಬಳಿ ಇರುತ್ತದೆ.

ಹಾಗೆಯೇ, ಭಾರಿ ಏರಿನಲ್ಲಿ ಸಾಗುವಾಗ ಏನೋ ಕಾರಣಕ್ಕೆ ಚಾಲಕ ಬ್ರೇಕ್‌ ಹಾಕಿ ಕಾರನ್ನು ನಿಲ್ಲಿಸಲೇಬೇಕಾದ ಸಂದರ್ಭ ಎದುರಾಯಿತು ಎಂದಿಟ್ಟುಕೊಳ್ಳಿ. ಬ್ರೇಕ್‌ ಮೇಲಿನ ಕಾಲನ್ನು ತೆಗೆದಾಕ್ಷಣ ಕಾರು ಹಿಂದೆ ಚಲಿಸುವುದಿಲ್ಲ! ಬದಲಿಗೆ ಮೂರರಿಂದ ನಾಲ್ಕು ಸೆಕೆಂಡ್‌ಗಳವರೆಗೆ ಕಾರು ಹಾಗೇ ನಿಂತಿರುತ್ತದೆ. ಈ ಅವಧಿಯಲ್ಲಿ, ಬ್ರೇಕ್‌ ಪೆಡಲ್‌ ಮೇಲಿನ ಕಾಲನ್ನು ಆ್ಯಕ್ಸಲರೇಟರ್‌ ಮೇಲಕ್ಕೆ ತರಲು ಸಾಧ್ಯ.

ಚೂಟಿ ವ್ಯವಸ್ಥೆ

ಸಾಮಾನ್ಯ ಪರಿಸ್ಥಿತಿಯಲ್ಲಿ ಈ ಕಾರಿನ ಟಾರ್ಕ್‌ ಹಂಚಿಕೆ ಮುಂದಿನ ಹಾಗೂ ಹಿಂದಿನ ಚಕ್ರಗಳ ನಡುವೆ ಕ್ರಮವಾಗಿ ಶೇಕಡ 40 ಹಾಗೂ ಶೇಕಡ 60ರಷ್ಟು ಪ್ರಮಾಣದಲ್ಲಿ ಇರುತ್ತದೆ. ಆದರೆ, ಪರಿಸ್ಥಿತಿಯ ಅಗತ್ಯವನ್ನು ಗ್ರಹಿಸುವ ಈ ಕಾರು, ಕಡಿದಾದ ದಿಣ್ಣೆಗಳನ್ನು ಏರುವಾಗ– ಇಳಿಯುವಾಗ ಯಾವ ಚಕ್ರಕ್ಕೆ ಎಷ್ಟು ಬಲ ಬೇಕು ಎಂಬುದನ್ನು ತಾನೇ ಲೆಕ್ಕಹಾಕಿ, ಅಗತ್ಯ ಶಕ್ತಿಯನ್ನು ಆ ಚಕ್ರಕ್ಕೆ ಪೂರೈಸುತ್ತದೆ. ಇವೆಲ್ಲವೂ ಚಾಲಕನ ಅರಿವಿಗೇ ಬಾರದಷ್ಟು ವೇಗವಾಗಿ ಆಗಿರುತ್ತವೆ. ಈ ವ್ಯವಸ್ಥೆಯ ಕಾರಣದಿಂದಾಗಿ ಬಿಎಂಡಬ್ಲ್ಯೂ ಎಕ್ಸ್‌ ಸರಣಿಯ ಕಾರುಗಳನ್ನು ಕಡಿದಾದ ರಸ್ತೆಗಳಲ್ಲಿ ಓಡಿಸುವಾಗಲೂ ‘ಸುರಕ್ಷಿತವಾಗಿದ್ದೇವೆ’ ಎಂಬ ಅನುಭವ ಸಿಗುತ್ತದೆ.  ಶಾನುಭೋಗನಹಳ್ಳಿಯ ಕಠಿಣ ಟ್ರ್ಯಾಕ್‌ನ ಮಜಾ ಅನುಭವಿಸುವ ವೇಳೆ ಸುಸ್ತು ಅನಿಸಲಿಲ್ಲ. ಈ ಮಾತು, ಕಾರು ಎಷ್ಟು ಆರಾಮದಾಯಕ ಅನುಭವ ನೀಡುತ್ತದೆ ಎಂಬುದನ್ನು ಹೇಳುತ್ತದೆ.

ಬೆಲೆ ಮತ್ತು ಇತರೆ...

ಎಕ್ಸ್‌–3 ಸರಣಿಯ ಕಾರುಗಳ ಎಕ್ಸ್‌ಶೋರೂಂ ಬೆಲೆ ಭಾರತದಲ್ಲಿ ₹48 ಲಕ್ಷದಿಂದ ಆರಂಭವಾಗಿ ₹54.9 ಲಕ್ಷದವರೆಗೂ ಇದೆ. ಇವು 2 ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿವೆ. ಆಫ್‌ ರೋಡ್‌ ಟ್ರ್ಯಾಕ್‌ನಲ್ಲಿ ಚಾಲನೆ ಮಾಡುವಾಗ, ಕಾರು ಎಷ್ಟು ಡಿಗ್ರಿ ಕೋನದಲ್ಲಿ ವಾಲಿಕೊಂಡಿದೆ ಎಂಬುದನ್ನು ತೋರಿಸುವ ವ್ಯವಸ್ಥೆಯು ಕಾರಿನಲ್ಲಿ ಇದೆ. ಈ ವ್ಯವಸ್ಥೆ ಆಧರಿಸಿ, ಚಾಲಕ ಕಾರನ್ನು ಮುಂದೆ ಚಲಾಯಿಸಬೇಕೇ ಅಥವಾ ತುಸು ಹಿಂದಕ್ಕೆ ತಂದು ಇನ್ನಷ್ಟು ಸುರಕ್ಷಿತವಾಗಿ ಚಾಲನೆ ಮಾಡಬೇಕೇ ಎಂಬುದನ್ನು ತೀರ್ಮಾನಿಸಬಹುದು. ಚೂಟಿ ವ್ಯವಸ್ಥೆಯು ಎಲ್ಲ ಚಕ್ರಗಳಿಗೂ ಶಕ್ತಿಯನ್ನು ಸ್ವಯಂಚಾಲಿತವಾಗಿ, ಕ್ಷಣಾರ್ಧದಲ್ಲಿ ಒದಗಿಸುವ ಕಾರಣ ಕಾರು ತೀರಾ ವಾಲಿಕೊಂಡಿದ್ದ ಸಂದರ್ಭದಲ್ಲೂ ಚಾಲನೆ ಮಾಡಲು ಅಡ್ಡಿಯಿಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry