ಶ್ರಮವೆಂಬ ಜೀವನ್ಮುಖಿ

7

ಶ್ರಮವೆಂಬ ಜೀವನ್ಮುಖಿ

Published:
Updated:
ಶ್ರಮವೆಂಬ ಜೀವನ್ಮುಖಿ

ಪೂನಂ ದಲಾಲ್

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ, ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿ, ತದನಂತರ ಭಾರತೀಯ ಕಂದಾಯ ಇಲಾಖೆಯಲ್ಲಿ ಸಿ ಗ್ರೂಪ್ ಅಧಿಕಾರಿಯಾಗಿ ಕೆಲಸ ಮಾಡುತ್ತಲೇ ಕೊನೆಯ ಅವಕಾಶದಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಪೂನಂ ದಲಾಲ್ ಅವರ ಸಾಧನೆ ಅನನ್ಯ. ಪೂನಂ ದಲಾಲ್ ಮೂಲತಃ ಹರಿಯಾಣದವರು. ಓದಿ ಬೆಳೆದದ್ದೆಲ್ಲ ದೆಹಲಿಯಲ್ಲಿ.

ಶಿಕ್ಷಕರ ತರಬೇತಿ ಕೋರ್ಸ್ ಪಡೆದು ದೆಹಲಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಓದಿನ ಹಸಿವು ಇದ್ದುದರಿಂದ ದೆಹಲಿ ವಿಶ್ವವಿದ್ಯಾಲಯದಿಂದ ದೂರಶಿಕ್ಷಣದಲ್ಲಿ ಪದವಿ ಪಡೆದರು. ನಂತರ ಬ್ಯಾಂಕಿಂಗ್ ಪರೀಕ್ಷೆಗೆ ಕುಳಿತು ಅದರಲ್ಲೂ ಯಶಸ್ವಿಯಾದರು. ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡರು. ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಲೇ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು ಬರೆದರು.

ಇವುಗಳಲ್ಲಿ ಕಂದಾಯ ಇಲಾಖೆಯ ಗ್ರೂಪ್ ಸಿ ಹುದ್ದೆಗೆ ಆಯ್ಕೆಯಾದರು. ಬ್ಯಾಂಕ್ ಕೆಲಸ ಬಿಟ್ಟು ಮತ್ತೆ ಸರ್ಕಾರಿ ಕೆಲಸಕ್ಕೆ ಸೇರಿಕೊಂಡರು. ಬರೆಯುತ್ತಿದ್ದ ಎಲ್ಲ ಪರೀಕ್ಷೆಗಳಲ್ಲೂ ಯಶಸ್ವಿಯಾಗುತ್ತಿದ್ದರು. ಈ ಯಶಸ್ಸಿನ ವಿಶ್ವಾಸವೇ ಅವರನ್ನು ನಾಗರಿಕ ಸೇವಾ ಪರೀಕ್ಷೆಗೆ ಕುಳಿತುಕೊಳ್ಳುವಂತೆ ಮಾಡಿತು.

ತಮ್ಮ 28ನೇ ವಯಸ್ಸಿನಲ್ಲಿ ಮೊದಲ ಬಾರಿ ಯುಪಿಎಸ್‌ಸಿ ಪರೀಕ್ಷೆಗೆ ಕುಳಿತರು. ಆ ವರ್ಷ ಯಶಸ್ವಿಯಾಗಲಿಲ್ಲ. ಮತ್ತೆ 30ನೇ ವರ್ಷದಲ್ಲಿ ಪರೀಕ್ಷೆಗೆ ಕುಳಿತರು. ಆಗ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆ ಬರೆದರಾದರೂ ಸಂದರ್ಶನಕ್ಕೆ ಆಯ್ಕೆಯಾಗಲಿಲ್ಲ.

30 ವರ್ಷ ದಾಟಿದ್ದರಿಂದ ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಂಡರು. ಪೂನಂ ಅದೃಷ್ಟಕ್ಕೆ ಕೇಂದ್ರ ಸರ್ಕಾರ ಸಾಮಾನ್ಯವರ್ಗದ ಅಭ್ಯರ್ಥಿಗಳ ವಯೋಮಿತಿಯನ್ನು ಎರಡು ವರ್ಷ ಹೆಚ್ಚಳ ಮಾಡಿತು.

ಇದರಿಂದ ಪೂನಂಗೆ ಮತ್ತೊಂದು ಬಾರಿ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಿತು. ಮೂರು ತಿಂಗಳ ಮಗುವನ್ನು ನೋಡಿಕೊಳ್ಳುತ್ತಲೇ ಮುಖ್ಯ ಪರೀಕ್ಷೆಗೆ ಸಿದ್ಧರಾದರು. ಹಗಲು ರಾತ್ರಿ ಎಂಬ ವ್ಯತ್ಯಾಸ ಇಲ್ಲದೆ ಓದಿ ಪರೀಕ್ಷೆ ಬರೆದರು. ಆ ವರ್ಷ 300ನೇ ರ್‍್ಯಾಂಕ್ ಪಡೆಯುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡರು.

**

ಅನುಪಮಾ ಟಿ.ವಿ.

ಇಟ್ಟ ಗುರಿ ಕೈಗೂಡುವವರೆಗೂ ಅದನ್ನು ಕೈಚೆಲ್ಲಬಾರದು ಎನ್ನುತ್ತಾರೆ ಅನುಪಮಾ. ಸತತ ಪ್ರಯತ್ನದ ಫಲವಾಗಿ 2009ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 4ನೇ ರ್ಯಾಂಕ್‌ ಪಡೆದಿದ್ದಾರೆ. ಎಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ಗುರಿಯಿಂದ ಹಿಂದೆ ಸರಿಯಬಾರದು. ಪರಿಶ್ರಮ ಮತ್ತು ಸತತ ಪ್ರಯತ್ನದ ಫಲವಾಗಿ ಆ ಗುರಿಯನ್ನು  ಸುಲಭವಾಗಿ ಮುಟ್ಟಬಹುದು. ಇದಕ್ಕಾಗಿ ಕಾಯುವ ತಾಳ್ಮೆ ನಮ್ಮಲ್ಲಿರಬೇಕು ಅಷ್ಟೇ ಎಂದು ಇಂದಿನ ಯುವ ಪೀಳಿಗೆಗೆ ಅನುಪಮಾ ಕಿವಿ ಮಾತು ಹೇಳುತ್ತಾರೆ.

ಅನುಪಮಾ ಕೇರಳದವರು. ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸನ್ನು ಚಿಕ್ಕ ವಯಸ್ಸಿನಿಂದಲೇ ಕಂಡವರು. ಆ ಕನಸಿನ ಹಿಂದೆ ಓಡಿದ ಅನುಪಮಾ ಹತ್ತು ವರ್ಷಗಳ ಪರಿಶ್ರಮದ ಫಲವಾಗಿ ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ. ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿದ್ದಾರೆ. ಇವರು ಓದಿದ್ದು ಎಂಜಿನಿಯರಿಂಗ್ ಪದವಿ. ಪದವಿ ಮುಗಿದ ಕೂಡಲೇ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ಮಾಡತೊಡಗಿದರು. 

ಕೇರಳದ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಕೆಲವು ಸಲ ಪೂರ್ವಭಾವಿ ಪರೀಕ್ಷೆಯಲ್ಲೇ ಯಶಸ್ವಿಯಾಗಿರಲಿಲ್ಲ. ಎರಡು ಮೂರು ಬಾರಿ ಸಂದರ್ಶನ ಎದುರಿಸಿ ಬಂದಿದ್ದರೂ ಆಯ್ಕೆಯಾಗಿರಲಿಲ್ಲ. ಇದರಿಂದ ಎದೆಗುಂದದ ಅನುಪಮಾ ಮರಳಿ ಯತ್ನವ ಮಾಡು ಎನ್ನುವಂತೆ ಅಧ್ಯಯನದಲ್ಲಿ ನಿರತರಾಗುತ್ತಿದ್ದರು. ಅಂತಿಮವಾಗಿ 2009ರಲ್ಲಿ ಯಶಸ್ವಿಯಾದರು. ಎಂಜಿನಿಯರಿಂಗ್ ಓದಿದ್ದರೂ ಮುಖ್ಯ ಪರೀಕ್ಷೆಗೆ ಭೂಗೋಳ ಮತ್ತು ಮಲಯಾಳಂ ಸಾಹಿತ್ಯವನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡಿದ್ದರು.

‘ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕಾದರೆ ನಿರಂತರ ಅಧ್ಯಯನ ಮಾಡಬೇಕು. ನಿತ್ಯ 15 ಗಂಟೆಗಳ ಕಾಲ ಓದಬೇಕು. ನಂತರ ಓದಿದ್ದನ್ನು ಟಿಪ್ಪಣಿ ಅಥವಾ ನೋಟ್ಸ್ ಮಾಡಿಕೊಂಡರೇ ಓದಿದ್ದು ನೆನಪಿನಲ್ಲಿ ಉಳಿಯುತ್ತದೆ’ ಎಂದು ಯುಪಿಎಸ್‌ಸಿ ಪರೀಕ್ಷೆ ಬರೆಯಬಯಸುವವರಿಗೆ ಅನುಪಮಾ ಕಿವಿ ಮಾತು ಹೇಳುತ್ತಾರೆ.

**

ಜೈಗಣೇಶ್

ಸಾಧನೆಯ ಪಣ ತೊಟ್ಟು ಯುಪಿಎಸ್‌ಸಿ ಅಖಾಡಕ್ಕೆ ಧುಮುಕಿದ ಸಾಧಕನ ಕಥೆ ಇದು. ಸತತ ಏಳು ವರ್ಷಗಳಿಂದ ಪ್ರಯತ್ನಪಟ್ಟರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಿರಲಿಲ್ಲ. ಕೊನೆಯ ಪ್ರಯತ್ನವಾಗಿ ಪರೀಕ್ಷೆಗೆ ಕುಳಿತು 2008ರಲ್ಲಿ 156ನೇ ರ್ಯಾಂಕ್‌ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಅವರೇ ತಮಿಳುನಾಡಿನ ವೆಲ್ಲೂರಿನವರಾದ ಜೈಗಣೇಶ್.

ಇವರು ಹುಟ್ಟಿದ್ದು ಬಡ ಕುಟುಂಬದಲ್ಲಿ. ತಂದೆ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ಬರುತ್ತಿದ್ದ ಕಡಿಮೆ ಸಂಬಳದಲ್ಲಿ ನಾಲ್ಕು ಮಕ್ಕಳ ವಿದ್ಯಾಭ್ಯಾಸ ಮತ್ತು ಸಂಸಾರದ ಹೊರೆಯನ್ನು ಅವರ ತಂದೆ ನಿಭಾಯಿಸುತ್ತಿದ್ದರು. ಜೈಗಣೇಶ್ ಹತ್ತನೇ ತರಗತಿ ಪಾಸಾದ ಬಳಿಕ ಪಾಲಿಟೆಕ್ನಿಕ್ ಕೋರ್ಸ್‌ಗೆ ಸೇರಿದರು. ಈ ಕೋರ್ಸ್ ಮಾಡಿದರೆ ಬಹುಬೇಗನೆ ಕೆಲಸ ದೊರೆಯುತ್ತದೆ ಎಂಬುದು ಅವರ ಆಸೆಯಾಗಿತ್ತು. ಪಾಲಿಟೆಕ್ನಿಕ್ ಕೋರ್ಸ್‌ನಲ್ಲಿ ಶೇ.91ರಷ್ಟು ಅಂಕಗಳು ಬಂದಿದ್ದರಿಂದ ಸರ್ಕಾರಿ ಕೋಟಾದಲ್ಲಿ ಎಂಜಿನಿಯರಿಂಗ್ ಸೀಟ್ ದೊರೆಯಿತು.

ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಕೆಲಸ ಹುಡುಕಿಕೊಂಡು ಜೈಗಣೇಶ್ ಬೆಂಗಳೂರಿಗೆ ಬಂದರು. ಕೆಲಸವೇನೋ ಸಿಕ್ಕಿತು, ಆದರೆ ಸಂಬಳ ಕೇವಲ 2500 ರೂಪಾಯಿ! ಇಷ್ಟು ಹಣ ಸಂಪಾದನೆ ಮಾಡಲು ಇಲ್ಲಿಗೆ ಬರಬೇಕೆ? ಎಂಬ ಚಿಂತೆ ಅವರನ್ನು ಕಾಡಿತು. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಉದ್ದೇಶದಿಂದ ಜೈಗಣೇಶ್ ಬೆಂಗಳೂರು ಬಿಟ್ಟು ಊರಿಗೆ ಮರಳಿದರು.

ತಂದೆಯ ಬೋನಸ್ ಹಣದಲ್ಲಿ ಯುಪಿಎಸ್‌ಸಿ ಪರೀಕ್ಷೆ ಕಟ್ಟಿ, ಅಧ್ಯಯನ ಸಾಮಗ್ರಿಗಳನ್ನು ಖರೀದಿಸಿ ಓದತೊಡಗಿದರು. ಸಿನಿಮಾ ಟಾಕೀಸ್, ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತ ಅಧ್ಯಯನ ನಡೆಸಿದರು. ಕೊನೆಯ ಯತ್ನದಲ್ಲಿ ಯಶಸ್ವಿಯಾಗುವ ಮೂಲಕ ದೇಶದ ಗಮನ ಸೆಳೆದರು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಇವರ ಸಾಧನೆಯೇ ಸಾಕ್ಷಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry