ಹೊಸ ಕಾಲದ ರವಿಕೆ

7

ಹೊಸ ಕಾಲದ ರವಿಕೆ

Published:
Updated:
ಹೊಸ ಕಾಲದ ರವಿಕೆ

ಕೇಪ್‌ ಸ್ಲೀವ್ ರವಿಕೆ: ಸಾದಾ ಸೀರೆಗೆ ಹೆಚ್ಚಿನ ವರ್ಕ್‌ ಮಾಡಿಸಿ ಈ ವಿನ್ಯಾಸದ ರವಿಕೆ ಧರಿಸಬಹುದು. ಇದು ದೂರಕ್ಕೆ ದುಪ್ಪಟ್ಟಾ ಹೊದ್ದಿಕೊಂಡಂತೆ ಕಾಣುತ್ತದೆ. ಈ ರವಿಕೆಯಲ್ಲಿ ಎರಡು ಪದರವಿದ್ದು ತೋಳಿನ ಪೂರ್ತಿ ಭಾಗದವರೆಗೆ ಬಟ್ಟೆ ಹರವಿಕೊಂಡಿರುತ್ತದೆ. ದಪ್ಪ ಇರುವವರಿಗೆ ಈ ವಿನ್ಯಾಸ ಹೊಂದುವುದಿಲ್ಲ. ಸೀರೆ ಹಾಗೂ ಲೆಹೆಂಗಾದೊಂದಿಗೂ ಧರಿಸಬಹುದು. ರೇಷ್ಮೆ, ಶಿಫಾನ್ ಬಟ್ಟೆಯಲ್ಲಿ ಈ ವಿನ್ಯಾಸದ ರವಿಕೆ ಹೊಲಿಸಬಹುದು.

***

ಹಾಟರ್‌ ನೆಕ್‌ ರವಿಕೆ: ಹಾಟರ್ ವಿನ್ಯಾಸದ ರವಿಕೆ ಇಂಡೊ–ಪಾಶ್ಚಾತ್ಯ ಲುಕ್‌ ನೀಡುತ್ತದೆ. ಈ ವಿನ್ಯಾಸದ ರವಿಕೆ ಸಂಜೆ ಪಾರ್ಟಿಗಳಿಗೆ ಸೂಕ್ತ. ರವಿಕೆಯಲ್ಲಿ ಭುಜದ ಭಾಗ ಹೆಚ್ಚು ತೆರೆದಂತೆ ಇರುವುದರಿಂದ  ದಪ್ಪ ಇರುವವರಿಗೆ ಹೊಂದುವುದಿಲ್ಲ. ಜಾರ್ಜೆಟ್‌, ಕ್ರೇಪ್, ಸ್ಯಾಟಿನ್ ಸೀರೆಗಳಿಗೆ ಈ ವಿನ್ಯಾಸ ಹೆಚ್ಚು ಸೂಕ್ತ.

***

ಶರ್ಟ್‌ ವಿನ್ಯಾಸ: ಇದು ಸ್ವಲ್ಪ ಹಳೆಯ ವಿನ್ಯಾಸವಾದರೂ ಫಾರ್ಮಲ್ ಲುಕ್‌  ನೀಡುವುದರಿಂದ ಕಾಟನ್ ಸೀರೆಗಳಿಗೆ ಈ ವಿನ್ಯಾಸ ಒಪ್ಪುತ್ತದೆ. ಉದ್ದ ಕತ್ತಿನವರು ಕಾಲರ್‌ ನೆಕ್‌, ಇಲ್ಲದಿದ್ದರೆ ಚೀನಿ ಕಾಲರ್‌ ನೆಕ್‌ ಇರುವ ವಿನ್ಯಾಸವನ್ನು ಬಳಸಬಹುದು.

***

ಸೀರೆ ಉಡುವ ಮಾದರಿ

ಈ ರವಿಕೆಯ ಹೊಸ ಟ್ರೆಂಡ್‌ನಿಂದ ಸೀರೆ ಉಡುವ ಮಾದರಿಯೇ ಬದಲಾಗುತ್ತಿದೆ. ಈ ಹೊಸ ವಿನ್ಯಾಸದ ರವಿಕೆಯಿಂದ ಸೆರಗನ್ನು ಬಿಗಿಯಾಗಿ ಉಡುವ ಅವಶ್ಯಕತೆ ಇಲ್ಲ. ಇದನ್ನು ದುಪ್ಪಟ್ಟಾ ಹಾಕಿಕೊಳ್ಳುವಂತೆ ಒಂದು ಭುಜಕ್ಕೆ ಸೆರಗನ್ನು ಹಾಕಿಕೊಳ್ಳಬಹುದು. ಇಲ್ಲವೇ ಲೆಹೆಂಗಾಕ್ಕೆ ದುಪಟ್ಟಾ ಹೊದ್ದುಕೊಳ್ಳುವಂತೆಯೂ ಹಾಕಿಕೊಳ್ಳಬಹುದು. ಪೂರ್ತಿ ಸೀರೆಯನ್ನು ಸ್ಕರ್ಟ್‌ನಂತೆ ನೆರಿಗೆ ಹಾಕಿ ಸುತ್ತಿಕೊಳ್ಳಬಹುದು.

***

ಹೈ–ಲೋ ರವಿಕೆ: ಈ ರವಿಕೆ ಮುಂಭಾಗದಲ್ಲಿ ಕುತ್ತಿಗೆಯಿಂದ ಸೊಂಟದವರೆಗೆ ಉದ್ದವಿರುತ್ತದೆ. ಹಿಂಭಾಗದಲ್ಲಿ ರವಿಕೆಯಿಂದ ನೆರಿಗೆ ಬಂದು ಕಾಲಿನವರೆಗೆ ಇಳಿ ಬಿಟ್ಟಿರುತ್ತದೆ. ನೀಳಕಾಯದವರಿಗೆ ಈ ರವಿಕೆ ಸೂಕ್ತ. ಸೀರೆ ಉಡುವಾಗ ನರಿಗೆಯನ್ನು ಹಿಂಭಾಗಕ್ಕೆ ಸಿಕ್ಕಿಸಿದರೆ ಚೆನ್ನಾಗಿ ಕಾಣುತ್ತದೆ. ಸೀರೆ ಜೊತೆ ಪಲಾಜೊ, ಧೋತಿಯೊಂದಿಗೂ ಧರಿಸಬಹುದು.

***

ಜಾಕೆಟ್‌ ವಿನ್ಯಾಸದ ರವಿಕೆ: ಚಳಿಗಾಲದಲ್ಲಿ ಈ ರವಿಕೆ ಬೆಚ್ಚಗಿನ ಅನುಭವ ಕೊಡುತ್ತದೆ. ಧೋತಿ ಸೀರೆಗೆ ಇದು ಸೂಕ್ತವಾಗಿ ಹೊಂದುತ್ತದೆ. ಈ ವಿನ್ಯಾಸದ ರವಿಕೆ ಜಾಕೆಟ್‌ನಂತೆ ಇದ್ದು ಇದಕ್ಕೆ ಸೆರೆಗು ಹೊದ್ದಿಕೊಳ್ಳಬೇಕು ಎಂದಿಲ್ಲ. ಈ ರವಿಕೆ ಮೇಲೆ ಡಾಬು, ಬೆಲ್ಟ್‌ ಹಾಕಿಕೊಳ್ಳಬಹುದು. ನೀಳಾಕಾರದ ದೇಹ ಪ್ರಕೃತಿಯವರಿಗೆ ಈ ವಿನ್ಯಾಸ ಸೂಕ್ತ. ಈ ರವಿಕೆಯೊಂದಿಗೆ ಸೀರೆಯಲ್ಲದೆ, ಗುಜರಾತಿ, ಬೆಂಗಾಲಿ ಡ್ರೇಪ್ (ಎರಡು ತುಂಡಿನ ಸೀರೆ), ಧೋತಿ ಪ್ಯಾಂಟ್ ಕೂಡ ಧರಿಸಬಹುದು.

***

ಪೀಟರ್‌ ಪ್ಯಾನ್ ಕಾಲರ್‌: ಉದ್ದ ಕುತ್ತಿಗೆಯವರಿಗೆ ಈ ವಿನ್ಯಾಸ ಹೊಂದುತ್ತದೆ. ಮಕ್ಕಳ ಫ್ರಾಕ್‌ಗೆ ಬರುವಂತೆ ಕಾಲರ್‌ ಈ ವಿನ್ಯಾಸ ರವಿಕೆಗೆ ಇರುತ್ತದೆ. ಬಾಲಿವುಡ್‌ ನಟಿ ಸೋನಂ ಕಪೂರ್ ಈ ವಿನ್ಯಾಸದ ರವಿಕೆಯನ್ನು ಹೆಚ್ಚಾಗಿ ಬಳಸುತ್ತಾರೆ. ಈ ವಿನ್ಯಾಸ ಕಾಟನ್ ಹಾಗೂ ಸ್ಯಾಟಿನ್ ಬಟ್ಟೆಯ ಸೀರೆಗಳಿಗೆ ಸೂಕ್ತ. ತೆಳು ಹಾಗೂ ದಪ್ಪವಿರುವವರು ಎಲ್ಲರಿಗೂ ಈ ವಿನ್ಯಾಸದ ರವಿಕೆ ಹೊಂದುತ್ತದೆ.

***

ಅಸಮತೆ (ಅಸಿಮೆಟ್ರಿಕ್ ಬ್ಲೌಸ್‌) ರವಿಕೆ: ಈ ವಿನ್ಯಾಸ ಕಾಲೇಜು ಯುವತಿಯರಲ್ಲಿ ಹೆಚ್ಚು ಜನಪ್ರಿಯ. ಕುತ್ತಿಗೆ ಭಾಗದಲ್ಲಿ ಯಾವುದೇ ವಿನ್ಯಾಸವನ್ನು ಇಟ್ಟುಕೊಳ್ಳಬಹುದು. ಬೋಟ್‌ ನೆಕ್‌ ಇದಕ್ಕೆ ಸೂಕ್ತ. ಆದರೆ ಕೆಳಗೆ ಜೀನ್ಸ್‌ ಟಾಪ್‌ನಂತೆ ಸೊಂಟದವರೆಗೆ ಬರುತ್ತದೆ. ತುದಿಯಲ್ಲಿ ಸ್ಕರ್ಟ್‌ ಇರುವಂತೆ ಫ್ಲೇರ್‌ (ನೆರಿಗೆ)ಗಳು ಇರುತ್ತದೆ. ಈ ವಿನ್ಯಾಸದ ರವಿಕೆ ಪಾರ್ಟಿಗಳಿಗೆ ಚೆಂದ ಕಾಣುತ್ತದೆ.

***

ಕ್ರಾಪ್ ರವಿಕೆ: ಇದು ಪಾರಂಪರಿಕ ರವಿಕೆಗೆ ಸ್ವಲ್ಪ ಭಿನ್ನವಷ್ಟೆ. ಇದರಲ್ಲಿ ಕಟ್‌ಪೀಸ್‌ ಹೆಚ್ಚು ಇರುವುದಿಲ್ಲ. ಜೀನ್ಸ್‌ಗೆ ಹಾಕುವ ಕ್ರಾಪ್‌ ಟಾಪ್‌ನಂತೆ ಸೊಂಟದವರೆಗೆ ಇರುತ್ತದೆ.   ಇದು ಇಂದಿನ ಯುವತಿಯರ ನೆಚ್ಚಿನ ವಿನ್ಯಾಸದ ರವಿಕೆ. ಈ ವಿನ್ಯಾಸದ ರವಿಕೆ ಕಾಟನ್ ಸೀರೆಗಳಿಗೆ ಹೆಚ್ಚು ಸೂಕ್ತ.

***

ಪೆಪ್ಲಮ್ (ಅನಾರ್ಕಲಿ) ರವಿಕೆ: ಇದು ಸೊಂಟದ ಭಾಗದಲ್ಲಿ ಹೆಚ್ಚು ನೆರಿಗೆಗಳಿಂದ ಕೂಡಿರುತ್ತದೆ. ಮಕ್ಕಳ ಫ್ರಾಕ್‌ನಂತೆ ಕಾಣುತ್ತದೆ. ನೀಳ ಸೊಂಟವಿರುವವರಿಗೆ ಈ ವಿನ್ಯಾಸ ಸೂಕ್ತ ಹಾಗೇ ದಪ್ಪವಿದ್ದವರಿಗೂ ಈ ವಿನ್ಯಾಸದ ರವಿಕೆ ಹೊಂದುತ್ತದೆ. ಇದಕ್ಕೂ ಸೆರಗು ಹೊದ್ದಿಕೊಳ್ಳುವ ಅವಶ್ಯಕತೆ ಇಲ್ಲ. ಲಂಗದಂತೆ ಸೀರೆ ನೆರಿಗೆಗಳನ್ನು ಸುತ್ತಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry