ಸನ್ನೆಯ ಆರ್ಡರ್‌ ಸರ್ವರ್ ಹಾಜರ್

7

ಸನ್ನೆಯ ಆರ್ಡರ್‌ ಸರ್ವರ್ ಹಾಜರ್

Published:
Updated:
ಸನ್ನೆಯ ಆರ್ಡರ್‌ ಸರ್ವರ್ ಹಾಜರ್

‘ಗಿವ್‌ ಮಿ ಎ ಚಾನ್ಸ್‌... ಐ ವಿಲ್‌ ಶೋ ದ ಮ್ಯಾಜಿಕ್‌’. ಆ ಹೋಟೆಲ್‌ ಒಳಪ್ರವೇಶಿಸಿದ ತಕ್ಷಣ ಈ ಬರಹವುಳ್ಳ ಟಿ–ಶರ್ಟ್‌ ಧರಿಸಿದ ಯುವಕರು ನಗುನಗುತ್ತಾ ಸ್ವಾಗತಿಸುತ್ತಾರೆ. ಅಲ್ಲೇ ಪಕ್ಕದಲ್ಲಿದ್ದ ‘ಸೈನ್‌ ಲ್ಯಾಂಗ್ವೇಜ್‌ ಸ್ಪೋಕನ್ ಹಿಯರ್‌, ಮೈಂಡ್‌ ಇಟ್‌’ (ಇಲ್ಲಿ ಸಂಜ್ಞೆಯ ಮೂಲಕವೇ ಮಾತಾಡಬೇಕು ಎಂಬುದು ತಿಳಿದಿರಲಿ) ಎಂಬ ಫಲಕ ಗ್ರಾಹಕರಿಗೆ ಸಂವಹನದ ಎಚ್ಚರಿಕೆಯನ್ನು ನೀಡುತ್ತದೆ.

ಕೋರಮಂಗಲದ ‘ಎಕೋಸ್‌’ ಹೋಟೆಲ್‌ಗೆ ಹೋದವರಿಗೆ ಇದು ಅನುಭವಕ್ಕೆ ಬಂದಿರುತ್ತದೆ. ಈ ಹೋಟೆಲ್‌ನ ವಿಶೇಷ ಎಂದರೆ ಇಲ್ಲಿನ ಸಿಬ್ಬಂದಿಗೆ ಮಾತು ಬರೋಲ್ಲ, ಕಿವಿನೂ ಕೇಳೊಲ್ಲ.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿದ್ದ ಕಾರ್ತಿಕ್‌ ಸಾಗಿರಾಜ್‌, ಅರ್ಜುನ್‌ ನರಿಂಪಳ್ಳಿ, ಆಕಾಶ್‌ ರಾಜು ಹಾಗೂ ಗಿರೀಶ್‌ ರಾಜ್‌ ಎಕೋಸ್‌ ಹೋಟೆಲ್‌ನ ಸ್ಥಾಪಕರು.

ಇಲ್ಲಿನ ಸಿಬ್ಬಂದಿ ಸಾಮಾನ್ಯರಂತೆ ಕೆಲಸ ಮಾಡುತ್ತಾರೆ. ಇವರ ಅನುಕೂಲಕ್ಕಾಗಿಯೇ ಹೋಟೆಲ್‌ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಮೆನು ಕಾರ್ಡ್‌ನಲ್ಲಿ ಡಿಶ್‌ ಕೋಡ್‌, ಗ್ರಾಹಕರಿಗೆ ಸಪ್ಲೈಯರ್‌ಗಳನ್ನು ಕರೆಯಲು ಬಣ್ಣದ ಲೈಟ್‌, ಆರ್ಡರ್‌್ ಮಾಡಲು ಪ್ರತ್ಯೇಕ ಹಾಳೆ... ಹೀಗೆ ಕೆಲ ಅನುಕೂಲಗಳನ್ನು ಮಾಡಿಕೊಳ್ಳಲಾಗಿದೆ.

‘ಸಾಫ್ಟ್‌ವೇರ್ ಕೆಲಸ ಬಿಟ್ಟ ಮೇಲೆ  ನಾವು ಮಾಡುವ ಕೆಲಸದಲ್ಲಿ ಏನಾದರೂ ವಿಶೇಷತೆ ಇರಬೇಕು. ಕಿವಿ ಕೇಳದವರಿಗೆ, ಮಾತು ಬರದವರಿಗೆ ನೆರವು ನೀಡಬೇಕು ಎಂಬ ಆಲೋಚನೆ ಬಂದಿತ್ತು. ಪೆಟ್ರೋಲ್‌ ಪಂಪ್‌, ಹೋಟೆಲ್‌ಗಳಲ್ಲಿ ಮಾತು ಬರದವರಿಗೆ, ಕಿವಿ ಕೇಳದವರಿಗೆ ಕೆಲಸ ಕೊಡುತ್ತಾರೆ. ಆದರೆ ಯಾರೂ ಅವರನ್ನು ಸಾಮಾನ್ಯರಂತೆ ನಡೆಸಿಕೊಳ್ಳುವುದಿಲ್ಲ. ಅವರನ್ನು ಎಲ್ಲರಂತೆ ಗುರುತಿಸಬೇಕು ಎಂಬ ಕಾರಣಕ್ಕೆ ಅವರನ್ನು ಕೆಲಸಕ್ಕೆ ತೆಗೆದುಕೊಂಡೆವು’ ಎನ್ನುತ್ತಾರೆ ಕಾರ್ತಿಕ್‌.

ಗ್ರಾಹಕರಿಗೆ ಸಿಬ್ಬಂದಿ ಜೊತೆ ಸಂವಹನ ನಡೆಸಲು ಸಾಧ್ಯವಾಗುವಂತೆ ಪ್ರತಿ ಟೇಬಲ್‌ನಲ್ಲಿ ಮೆನು, ಫೋರ್ಕ್‌, ಗ್ಲಾಸ್‌, ಕಾಲ್‌ ದಿ ಮ್ಯಾನೇಜರ್‌, ಬಿಲ್‌ ಪ್ಲೀಸ್‌... ಹೀಗೆ ಪಟ್ಟಿ ಮಾಡಿದ ಕಾರ್ಡ್‌ ಇಡಲಾಗಿದೆ. ಗ್ರಾಹಕರು ಅಗತ್ಯವಿದ್ದ ಕಾರ್ಡ್‌ ತೆಗೆದು ಅದನ್ನು ಸಿಬ್ಬಂದಿಗೆ ತೋರಿಸಬೇಕು.

ಮೆನು ಆಯ್ಕೆಗೂ  ಕಾರ್ಡ್‌ನಲ್ಲಿ ಪ್ರತಿ ಆಹಾರದ ಮುಂದೆ ಡಿಶ್‌ ಕೋಡ್‌ ಇದೆ.  ಗ್ರಾಹಕರು ಅಲ್ಲೆ ಇರುವ ಪ್ರತ್ಯೇಕ ಹಾಳೆ ಮೇಲೆ ಆ ಕೋಡ್‌  ಬರೆದು ಎಷ್ಟು ಜನರಿಗೆ ಎಷ್ಟು ಬೇಕು ಎಂದು ಬರೆಯಬೇಕು.

ಗ್ರಾಹಕರಿಗೆ ಸಿಬ್ಬಂದಿಯನ್ನು ಕರೆಯಲು ಪ್ರತಿ ಟೇಬಲ್‌ಗೆ ಆಳವಡಿಸಿರುವ ಲೈಟ್‌ನ ಸ್ವಿಚ್‌ ಒತ್ತಬೇಕು. ಒಂದೊಂದು ಟೇಬಲ್‌ಗೆ ಬೇರೆ ಬೇರೆ ಬಣ್ಣದ ಲೈಟ್‌ ಆಳವಡಿಸಲಾಗಿದೆ. ಇದು  ಹತ್ತಿಕೊಂಡಾಗ ಅದನ್ನು ನೋಡಿದ ಸಿಬ್ಬಂದಿ ನಿಮ್ಮ ಮುಂದೆ ಹಾಜರು.

ಆಗ ಸಿಬ್ಬಂದಿ ಗ್ರಾಹಕರ ಬಳಿ ಹಾಳೆ ಪಡೆದುಕೊಂಡು ಅದನ್ನು ಮ್ಯಾನೇಜರ್‌ ಹತ್ತಿರ ಹೋಗಿ ಆರ್ಡರ್‌ ತೆಗೆದುಕೊಂಡು, ವಾಪಸ್‌ ಗ್ರಾಹಕರ ಬಳಿ ಬಂದು ದೃಢಪಡಿಸಿಕೊಳ್ಳುತ್ತಾರೆ. ಇದಾದ ಕೆಲ ನಿಮಿಷಗಳಲ್ಲಿಯೇ  ಆಹಾರ ತೆಗದುಕೊಂಡು ಬಂದು, ಸನ್ನೆ ಮೂಲಕವೇ ವ್ಯವಹರಿಸುತ್ತಾರೆ. ನಿಮ್ಮ ಮಾತು ಅರ್ಥವಾಯಿತು ಎಂದು ಹೆಬ್ಬೆರಳನ್ನು ಮೇಲೆತ್ತಿ ಸನ್ನೆ ಮಾಡುತ್ತಾರೆ.

ಇಲ್ಲಿ 12 ಸಿಬ್ಬಂದಿ ಇದ್ದಾರೆ. ನರೇಶ್‌, ನಬೀನ್‌ ಅವರು ಸೂಪರ್‌ ವೈಸರ್‌ ಆಗಿ ಕೆಲಸ ಮಾಡುತ್ತಿದ್ದರೆ, ಸಂಜು, ಅನಿತಾ, ರಾಘವೇಂದ್ರ, ರಾಘವೇಂದ್ರ ಎಸ್‌.ಬಿ., ಪ್ರಕಾಶ್‌, ವಿಷ್ಣು, ಸದ್ದಾಂ, ದೀಪಾ, ಸಂದೇಶ್‌, ಗೋಪಿ ಸಪ್ಲೈಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸಂಜು, ಅನಿತಾ,  ಹಾಗೂ ಸದ್ದಾಂ, ದೀಪಾ ದಂಪತಿಗಳು.

ಈ ಸಿಬ್ಬಂದಿ ತಮ್ಮತಮ್ಮಲ್ಲಿ ಒಬ್ಬೊರನ್ನೊಬ್ಬರು ಗುರುತಿಸಿಕೊಳ್ಳಲು ಕೂಡ ಸಂಜ್ಞೆ ಭಾಷೆ ಬಳಸುತ್ತಾರೆ. ಇವರೆಲ್ಲರೂ  ಕನ್ನಡ, ಇಂಗ್ಲಿಷ್‌ ಭಾಷೆಯನ್ನು ಚೆನ್ನಾಗಿ ಓದುತ್ತಾರೆ. ‘ಇವರಿಗೆ 11ಸಾವಿರದಿಂದ 16 ಸಾವಿರ ತನಕ ಸಂಬಳ ನೀಡುತ್ತೇವೆ. ಇದರ ಜೊತೆಗೆ ಸರ್ವೀಸ್‌ ಚಾರ್ಜ್‌ ಕೂಡ ನೀಡುತ್ತೇವೆ. ಅಲ್ಲದೆಮ ಟಿಪ್ಸ್‌  ಪೆಟ್ಟಿಗೆಯಲ್ಲಿ ಗ್ರಾಹಕರು ಹಾಕುವ ದುಡ್ಡನ್ನು ತಿಂಗಳ ಕೊನೆಗೆ ಸಿಬ್ಬಂದಿ ಹಂಚಿಕೊಳ್ಳುತ್ತಾರೆ’ ಎಂದು ವಿವರಿಸುತ್ತಾರೆ ಕಾರ್ತಿಕ್‌.

(ಕಾರ್ತಿಕ್)

ಈ ಹೋಟೆಲ್‌ನ ಮತ್ತೊಂದು ಶಾಖೆ ದೆಹಲಿಯ ಸತ್ಯನಿಕೇತನ್‌ನಲ್ಲಿದೆ. ಅಲ್ಲಿನ ಸಿಬ್ಬಂದಿಯೂ ಇಲ್ಲಿನಂತೆಯೇ ಕಿವಿ ಕೇಳದ, ಮಾತು ಬರದವರು.

ಈ ಹೋಟೆಲ್‌ನಲ್ಲಿ ಇಂಡಿಯನ್‌, ಮೆಕ್ಸಿಕನ್‌, ಕಾಂಡಿನೆಂಟಲ್‌ ಈ ಎಲ್ಲಾ ಬಗೆ ಆಹಾರಗಳು ಲಭ್ಯವಿವೆ. ರೈಸ್‌ ಪ್ಲಾಟರ್ಸ್‌, ಚಾರ್‌ಗ್ರಿಲ್ಡ್‌ ರೋಸ್‌ಮರಿ ಟಿಕ್ಕ, ತಂದೂರಿ ಮೋಮೊಸ್‌, ರೆಡ್‌ರೇವ್‌ ಶೇಕ್‌, ಬಟರ್‌ ಚಿಕನ್‌ ಥಾಲಿ, ಹನಿ ಚಿಲ್ಲಿ ಪೊಟೊಟೊ,  ವೆಜ್‌ ಪಕೋಡ, ಗಲಾಟಿ ಕಬಾಬ್‌ ಇಲ್ಲಿನ  ಸಿಗ್ನೇಚರ್‌ ಫುಡ್‌. 

ಈ ಹೊಟೇಲ್‌ ಒಳಾಂಗಣ ವಿನ್ಯಾಸವೂ ಆಕರ್ಷಕವಾಗಿದೆ. ಪ್ಲಾಸ್ಟರಿಂಗ್‌ ಮಾಡದ ಗೋಡೆಯಲ್ಲಿ ಅಲ್ಲಲ್ಲಿ ಹಳೆ ಕಾಲದ ಪಾತ್ರೆಗಳನ್ನು ತೂಗು ಹಾಕಲಾಗಿದೆ. ಹೋಟೆಲ್‌ ಮಧ್ಯಭಾಗದಲ್ಲಿ ಮರದ ಅಡ್ಡತೊಲೆಗಳನ್ನು ಬಳಸಿ ವಿನ್ಯಾಸ ಮಾಡಿರುವುದು ಹೋಟೆಲ್‌ಗೆ ಕಳೆ ತಂದಿದೆ. ಇನ್ನು ಗೋಡೆಯಲ್ಲಿ ಅಲ್ಲಲ್ಲಿ ಸನ್ನೆ ಭಾಷೆಯ ಬಗ್ಗೆ ಬೋರ್ಡ್‌ಗಳಿವೆ.

**

ವಿಳಾಸ: ಇಕೋಸ್‌ ರೆಸ್ಟೊರೆಂಟ್‌, 44, 4ನೇ ಬಿ ಕ್ರಾಸ್‌ ರಸ್ತೆ, 5ನೇ ಬ್ಲಾಕ್‌, ಕೋರಮಂಗಲ, ಮಾಹಿತಿಗೆ: 080 4965 2531, 9590809809

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry