ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪಣ ತೊಡಿ

7

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪಣ ತೊಡಿ

Published:
Updated:
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪಣ ತೊಡಿ

ಬಾಲ ಕಾರ್ಮಿಕ ಪದ್ಧತಿಗೆ ಪೂರ್ಣ ನಿಷೇಧ ಹೇರಲು ಅನುವು ಮಾಡಿಕೊಡುವಂತಹ ಎರಡು ಮೂಲಭೂತ ನಿರ್ಣಯಗಳಿಗೆ ಜಿನೀವಾದಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಓ) ಸಮ್ಮೇಳನದಲ್ಲಿ ಭಾರತ ಅನುಮೋದನೆ ನೀಡಿದೆ.

ಈ ಮೂಲಕ ಬಾಲ ಕಾರ್ಮಿಕ ಪದ್ಧತಿಮುಕ್ತ ಸಮಾಜದತ್ತ  ಬದ್ಧತೆಯನ್ನು ಭಾರತ ಪ್ರದರ್ಶಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.  ಐಎಲ್‌ಓದ ಈ ಮೂಲಭೂತ ನಿರ್ಣಯಗಳ ಪೈಕಿ 138ನೇ ನಿರ್ಣಯ, ಮಕ್ಕಳು ಉದ್ಯೋಗಕ್ಕೆ ಸೇರುವ ವಯಸ್ಸಿಗೆ ಸಂಬಂಧಿಸಿದ್ದಾಗಿದೆ. 

ಈ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉದ್ಯೋಗಕ್ಕೆ ಸೇರುವಂತಿಲ್ಲ.   ಬಾಲ ದುಡಿಮೆಯ ಹೀನ ರೂಪಗಳಿಗೆ ಸಂಬಂಧಿಸಿದೆ 182ನೇ ನಿರ್ಣಯ.  ಜೀತ, ಸಶಸ್ತ್ರ ಸಂಘರ್ಷ, ವೇಶ್ಯಾವಾಟಿಕೆ,  ಪೋರ್ನೊಗ್ರಫಿ, ಮಾದಕವಸ್ತು ಅಕ್ರಮ ಸಾಗಣೆಗಳಲ್ಲಿ ಮಕ್ಕಳ   ಬಳಕೆ ಸೇರಿದಂತೆ ಯಾವುದೇ ಅಪಾಯಕಾರಿ ಕೆಲಸಗಳಲ್ಲಿ ಬಾಲ ದುಡಿಮೆ  ನಿಷೇಧಕ್ಕೆ  ಈ 182ನೇ ನಿರ್ಣಯ ಕರೆ ನೀಡುತ್ತದೆ.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಕ್ಕೆ  ಈಗಾಗಲೇ ಭಾರತ ಹಲವು ಬಗೆಯ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷವಷ್ಟೇ  ರಾಷ್ಟ್ರದಲ್ಲಿ ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ– 1986ಕ್ಕೆ  ತರಲಾದ ತಿದ್ದುಪಡಿ ಪ್ರಕಾರ, 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗದಲ್ಲಿ ತೊಡಗುವುದಕ್ಕೆ ನಿಷೇಧವಿದೆ. ಜೊತೆಗೆ 14ರಿಂದ 18 ವರ್ಷದ ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದಕ್ಕೂ ನಿಷೇಧವಿದೆ. ಆದರೆ ಕುಟುಂಬದ ಕೆಲಸಕಾರ್ಯಗಳು ಹಾಗೂ ಮನರಂಜನಾ ಉದ್ಯಮಗಳಲ್ಲಿ ಶಾಲಾ ಅವಧಿ ನಂತರ ಮಕ್ಕಳು ತೊಡಗಿಕೊಳ್ಳಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಿದ್ದು  ಟೀಕೆಗಳಿಗೆ ಗುರಿಯಾಗಿತ್ತು. 

ಈಗ, ಐಎಲ್‌ಓ ನಿರ್ಣಯಗಳಿಗೆ ಅನುಮೋದನೆ ನೀಡಿದ ರಾಷ್ಟ್ರಗಳು,  ಪ್ರತಿ ನಾಲ್ಕು ವರ್ಷಗಳಿಗೊಮ್ಮೆ  ಆ ನಿರ್ಣಯಗಳಿಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯ ಬಗ್ಗೆ ವರದಿ  ನೀಡಬೇಕಾಗುತ್ತದೆ.  ಹೀಗಾಗಿ ಬಾಲ ಕಾರ್ಮಿಕ ಪದ್ಧತಿಯ ಪೂರ್ಣ ನಿಷೇಧದತ್ತ ಸಾಗುವತ್ತ ಇದು ಸಕಾರಾತ್ಮಕ ಹೆಜ್ಜೆ.

ಭಾರತದಲ್ಲಿ ಪ್ರತಿ 11 ಮಕ್ಕಳ ಪೈಕಿ ಒಂದು ಮಗು ಬಾಲಕಾರ್ಮಿಕನಾಗಿರುತ್ತದೆ. ಅಷ್ಟೇ ಅಲ್ಲ, 2001ರಿಂದ 2011ರವರೆಗಿನ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂಬುದನ್ನೂ ಅಂಕಿಅಂಶಗಳು ತಿಳಿಸಿವೆ.

ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಬರುತ್ತಿರುವ ಕಾರ್ಮಿಕರ ಮಕ್ಕಳು ದುಡಿಮೆಗೆ ತೊಡಗಿಕೊಳ್ಳುತ್ತಿರುವುದು ಇದಕ್ಕೆ ಕಾರಣ  ಎಂದು ವಿಶ್ಲೇಷಿಸಲಾಗುತ್ತದೆ.  ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ಕೈಗೊಂಡರೂ ಬಾಲ ದುಡಿಮೆ ರಾಷ್ಟ್ರದಲ್ಲಿ ಮುಂದುವರಿಯುತ್ತಲೇ ಇರುವುದು ವಿಷಾದನೀಯ. 

ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕವನ್ನು ಬಾಲ ಕಾರ್ಮಿಕ ಮುಕ್ತ ರಾಜ್ಯವಾಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಶ್ವಾಸನೆಯನ್ನೇನೋ ನೀಡಿದ್ದಾರೆ.  ಆದರೆ ಇಂತಹ ಭರವಸೆಗಳು ಬರೀ ಮಾತುಗಳಾಗಿ ಉಳಿಯಬಾರದು.  ನಿಜ. ಬಾಲ ಕಾರ್ಮಿಕ ಪದ್ಧತಿಯ ಸಮಸ್ಯೆಯೇ ಸಂಕೀರ್ಣ. ಆದರೆ ಇದರ ನಿರ್ಮೂಲನೆಗೆ ಪ್ರಬಲ ಇಚ್ಛಾಶಕ್ತಿ ಹಾಗೂ ಬದ್ಧತೆ ಅಗತ್ಯ.  ಹಲವು ನೆಲೆಗಳಲ್ಲಿ  ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು.  ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವುದಲ್ಲದೆ ಸಾಮಾಜಿಕ ನೆಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವುದೂ ಸಾಧ್ಯವಾಗಬೇಕು.

ಬಡತನ, ಅನಕ್ಷರತೆಯಲ್ಲದೆ ಅಭಿವೃದ್ಧಿಶೀಲ ಸಮಾಜದಲ್ಲಿ  ಸಾಮಾನ್ಯವಾಗುತ್ತಿರುವ  ವಲಸೆ, ಸ್ಥಳಾಂತರಗಳಿಂದ ಸೃಷ್ಟಿಯಾಗುವ ಅಸಹಾಯಕತೆ ಕಾರಣಕ್ಕೆ ಹೆಚ್ಚುತ್ತಿರುವ ಆಧುನಿಕ ಜೀತ, ಮಕ್ಕಳ ಅಕ್ರಮ ಸಾಗಣೆಗಳನ್ನು ನಿರ್ಬಂಧಿಸಲು ಕಠಿಣ ಕ್ರಮಗಳು ಅನಿವಾರ್ಯ.  2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಾವು ತಲುಪಬೇಕಿದೆ. ಇದಕ್ಕೆ ಬಾಲ ಕಾರ್ಮಿಕ ಪದ್ಧತಿ ನಿಷೇಧವೂ ಮುಖ್ಯವಾದದ್ದು ಎಂಬುದನ್ನು ಮರೆಯದಿರೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry