ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

7
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪ

ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

Published:
Updated:
ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಬೆಂಗಳೂರು: ‘ರಾಜ್ಯದ ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗಿದೆ. ಅಕ್ರಮ ಮರಳುಗಾರಿಕೆಯಲ್ಲಂತೂ ಹತ್ತಾರು ಸಾವಿರ ಕೋಟಿಯ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ವಿಧಾನಸಭೆಯಲ್ಲಿ ಬುಧವಾರ ಆರೋಪಿಸಿದರು.

‘ವಸತಿ ಯೋಜನೆಗಳಡಿ 12 ಲಕ್ಷ ಮನೆ ನಿರ್ಮಿಸಲಾಗಿದೆ ಎಂದು ವಸತಿ ಸಚಿವರು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ಬಡವರು ಹಾಗೂ ಅರ್ಹರಿಗೆ ಈ ಮನೆಗಳು ಸಿಗುತ್ತಿಲ್ಲ. ಗ್ರಾಮಸಭೆಗಳು ಡ್ರಾಮಾ ಸಭೆಗಳಾಗಿ ಪರಿವರ್ತನೆ ಹೊಂದಿವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕುಂದಗೋಳ ಕ್ಷೇತ್ರದಲ್ಲಿ ಕೆಎಸ್‌ಆರ್‌ಟಿಸಿ ನೌಕರರೊಬ್ಬರಿಗೆ ಮನೆ ಮಂಜೂರು ಮಾಡಲಾಗಿದೆ. ಮತ್ತೊಂದು ಕಡೆಯಲ್ಲಿ ಮನೆ ಮಂಜೂರಿಗೆ ₹50 ಸಾವಿರ ಲಂಚ ಪಡೆಯಲಾಗಿದೆ’ ಎಂದು ಅವರು ಆರೋಪಿಸಿದರು.

‘ಅರಣ್ಯ ಇಲಾಖೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲೂ ಭಾರಿ ಭ್ರಷ್ಟಾಚಾರ ಆಗಿದೆ. ನೆಟ್ಟ ಗಿಡಗಳೆಲ್ಲ ಎಲ್ಲಿ ಹೋದವು ಎಂದು ಮುಖ್ಯಮಂತ್ರಿಗಳೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 15 ವರ್ಷಗಳಲ್ಲಿ ನೆಟ್ಟ ಗಿಡಗಳ ಬಗ್ಗೆ ಅರಣ್ಯ ಸಚಿವರು ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಆಲಮಟ್ಟಿ ಅಣೆಕಟ್ಟೆ ಈ ವರ್ಷ ಡೆಡ್‌ ಸ್ಟೋರೇಜ್‌ ಹಂತ ತಲುಪಿದೆ. ಸಮರ್ಪಕ ನಿರ್ವಹಣೆ ಕೊರತೆ ಕಾರಣದಿಂದ ಜನರು ಕುಡಿಯುವ ನೀರಿಗೂ ಪಡಿಪಾಟಲು ಅನುಭವಿಸುವಂತಾಗಿದೆ. ಈ ಅಣೆಕಟ್ಟೆಯಿಂದ ಜಿಂದಾಲ್‌ಗೆ ನೀರು ಬಿಡಲಾಗಿದೆ ಎಂಬ ಆರೋಪ ಇದೆ. ಈ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ಜಲಸಂಪನ್ಮೂಲ ಸಚಿವರು ಬೋಗಸ್‌ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ನೀರಾವರಿ ಯೋಜನೆಗಳು ಕುಂಟುತ್ತಾ ಸಾಗಿವೆ.  ನಾಲ್ಕು ವರ್ಷಗಳಲ್ಲಿ ಎಷ್ಟು ನೀರಾವರಿ ಯೋಜನೆಗಳು ಪ್ರಗತಿ ಸಾಧಿಸಿವೆ ಎಂಬ ಬಗ್ಗೆಯೂ ಶ್ವೇತಪತ್ರ ಹೊರಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಬೆಂಗಳೂರಿನಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಹೋದ ಶಾಂತಕುಮಾರ್‌ ಕುಟುಂಬಕ್ಕೆ ಪರಿಹಾರ ನೀಡಲು ಬಿಬಿಎಂಪಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಮೊದಲು ಶವ ತೆಗೆದುಕೊಂಡು ಬನ್ನಿ ಎಂದು ಕುಟುಂಬಕ್ಕೆ  ಹೇಳುತ್ತಿದ್ದಾರೆ. ಇದು ಅಮಾನವೀಯ ವರ್ತನೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

***

‘ಬಿಜೆಪಿಗೆ ಮತ ಹಾಕಿದ್ದಕ್ಕೆ ಬಹಿಷ್ಕಾರ’

‘ಗುಂಡ್ಲುಪೇಟೆ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಮತ ಹಾಕಿದ ಕಾರಣಕ್ಕೆ ಬೊಮ್ಮನಪಾಳ್ಯ ಗ್ರಾಮದ ನಾಯಕ ಸಮುದಾಯದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ’ ಎಂದು ಜಗದೀಶ ಶೆಟ್ಟರ್‌ ಆರೋಪಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಕುಟುಂಬಗಳಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.  ‘ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಈ ಕುಟುಂಬಗಳಿಗೆ ರಕ್ಷಣೆ ಒದಗಿಸುತ್ತೇವೆ’ ಎಂದು ಸಚಿವ ಆರ್.ವಿ. ದೇಶಪಾಂಡೆ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry