ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ವರ್ತಕರ ಗೊಂದಲ

Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ರಾಜ್ಯದಲ್ಲಿಯೇ ಅತಿದೊಡ್ಡದು. ಇಲ್ಲಿನ ವರ್ತಕರಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಕುರಿತು ಸಾಕಷ್ಟು ಗೊಂದಲವಿದೆ. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಅವರಿಗೆ ಸಾಕಷ್ಟು ಸಲಹೆ, ಮಾರ್ಗದರ್ಶನದ ಕೊರತೆಯೂ ಕಂಡು ಬರುತ್ತಿದೆ.

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ. ತಕ್ಷಣಕ್ಕೆ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಕಷ್ಟ.  ಈ ಕಾರಣಕ್ಕಾಗಿ  ನಿಯಮವನ್ನು ತುಸು ಸಡಿಲಗೊಳಿಸಿ, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯಾವಕಾಶ ನೀಡುವ ಅಗತ್ಯವಿದೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಹೇಳಿದ್ದಾರೆ.

ಜುಲೈ 1 ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ವರ್ತಕರು ಎಷ್ಟರ ಮಟ್ಟಿಗೆ ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನುವ ಬಗ್ಗೆ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಮಾರ್ಚ್‌ 31ರವರೆಗೆ ಅವಕಾಶ ನೀಡಬೇಕು. ಆಹಾರ ಪದಾರ್ಥಗಳಿಗೆ ನಿಗದಿ ಮಾಡಿರುವ ತೆರಿಗೆ ಬಗ್ಗೆ ಸ್ಪಷ್ಟನೆ ನೀಡಿ ಎಂದು ಮುಖ್ಯಮಂತ್ರಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೂ ಅದಕ್ಕೆ ಯಾವುದೇ ಪ್ರತಿಕ್ರಿಯೆ, ಸ್ಪಷ್ಟನೆ ಬಂದಿಲ್ಲ’ ಎಂದರು.

‘ದಿನಬಳಕೆಗೆ ಅಗತ್ಯವಾದ ಸರಕುಗಳನ್ನು ಶೇ 5ರ ತೆರಿಗೆ ಹಂತದ ವ್ಯಾಪ್ತಿಗೆ ತರಲಾಗಿದೆ. ಕೆಲವು ಆಹಾರ ಪದಾರ್ಥಗಳು ಶೂನ್ಯ ತೆರಿಗೆಗೆ ಒಳಪಟ್ಟಿರುವುದರಿಂದ ಅಗ್ಗವಾಗಲಿವೆ. ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳಿಗೆ ಶೇ 5 ರಷ್ಟು ತೆರಿಗೆ ವಿಧಿಸಲಾಗಿದೆ. ಬ್ರ್ಯಾಂಡೆಡ್‌ ಅಲ್ಲದ ಆಹಾರ ಪದಾರ್ಥಗಳಿಗೂ ತೆರಿಗೆ ವಿನಾಯ್ತಿ ನೀಡಲಾಗಿದೆ. ಈ ಸಂಗತಿಗಳು ವರ್ತಕರನ್ನು ಸಾಕಷ್ಟು ಗೊಂದಲಕ್ಕೆ ದೂಡಿವೆ.

‘ಬ್ರ್ಯಾಂಡ್‌ ಮತ್ತು ಬ್ರ್ಯಾಂಡೆಡ್‌ ಅಲ್ಲದ ಆಹಾರ ಪದಾರ್ಥಗಳು ಎಂದರೆ ಏನು ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಖಾಲಿ ಚೀಲದಲ್ಲಿ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಟ್ಟರೆ ನಾಳೆ ಆಹಾರ ಇಲಾಖೆಯವರು ಗುಣಮಟ್ಟದ ಮಾನ್ಯತೆ ಇಲ್ಲ, ಅಕ್ರಮ ದಾಸ್ತಾನು ಎಂದು ಜಪ್ತಿ ಮಾಡುವ ಸಾಧ್ಯತೆ ಇದೆ. ಹಾಗಂತ ಸಗಟು ಮಾರಾಟಗಾರರು ಚೀಲದ ಮೇಲೆ  ಹೆಸರು ಹಾಕಿದರೆ ಅದನ್ನು ಬ್ರ್ಯಾಂಡ್‌ ಎಂದು ಪರಿಗಣಿಸಿ ಶೇ 5 ರಷ್ಟು ತೆರಿಗೆ ವಿಧಿಸಿದರೆ ವರ್ತಕರಿಗೆ ಹೊರೆಯಾಗಲಿದೆ.  ಅಂತಹ ಸಂದರ್ಭದಲ್ಲಿ ವ್ಯಾಪಾರಿಗಳು ಸಹಜವಾಗಿಯೇ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಾರೆ’ ಎಂದು ಅವರು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರು.

ಹೆಚ್ಚುವರಿ ಹೊರೆ: ಚಿಲ್ಲರೆ ವಹಿವಾಟು ನಡೆಸುವ ಪ್ರತಿಯೊಬ್ಬ ವ್ಯಾಪಾರಿಗೂ ಕಂಪ್ಯೂಟರ್‌ ಕೊಳ್ಳಲು ಜುಲೈ 1 ರಿಂದ  ₹15 ಸಾವಿರದಿಂದ ₹25 ಸಾವಿರದಷ್ಟು ಹೆಚ್ಚುವರಿ ಹೊರೆಯಾಗಲಿದೆ.


ರಮೇಶ್‌ ಚಂದ್ರ ಲಹೋಟಿ

ತಾಂತ್ರಿಕ ಅರಿವು ಅಗತ್ಯ: ‘ಫುಡ್‌ ಬಜಾರ್‌ಗಳು, ತಯಾರಕರು ಈಗಾಗಲೇ ತಂತ್ರಜ್ಞಾನ ಬಳಕೆಗೆ ಒಗ್ಗಿಕೊಂಡಿದ್ದಾರೆ. ಅವರಿಗೆ ಆನ್‌ಲೈನ್‌ ಬಳಕೆ ಕಷ್ಟವಾಗುವುದಿಲ್ಲ. ಆದರೆ ಸಾಂಪ್ರದಾಯಿಕ ಮಾದರಿ ಅನುಸರಿಸುತ್ತಿರುವ ಸಾಮಾನ್ಯ ವರ್ತಕರಿಗೆ ಕಷ್ಟವಾಗುತ್ತದೆ.

‘ಕೆಲವು ವರ್ತಕರು ತಿಂಗಳಿಗೆ ಒಂದು ಬಾರಿ, ಲೆಕ್ಕಪತ್ರ ಪರಿಶೋಧಕರಲ್ಲಿ ತಿಂಗಳ ವ್ಯವಹಾರದ ಪರಿಶೀಲನೆ ನಡೆಸಿ ತೆರಿಗೆ ಕಟ್ಟುತ್ತಿದ್ದಾರೆ. ಆದರೆ, ಹೊಸ ವ್ಯವಸ್ಥೆಯಲ್ಲಿ ಹಾಗಲ್ಲ. ಪ್ರತಿ ವಹಿವಾಟಿನ ಬಗ್ಗೆಯೂ ಆನ್‌ಲೈನ್‌ ಮಾಹಿತಿ ಇರಬೇಕು. ಇದು ಸಾಧ್ಯವಾಗಲು ಕನಿಷ್ಠ ಆರು ತಿಂಗಳಿನಿಂದ ಒಂದುವರ್ಷ ಬೇಕಾಗುತ್ತದೆ. ವರ್ತಕರಿಗೆ ಜಿಎಸ್‌ಟಿ ತಂತ್ರಾಂಶವನ್ನಾದರೂ ಉಚಿತವಾಗಿ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ’ ಎಂದು ಲಹೋಟಿ ಹೇಳುತ್ತಾರೆ.

ಮಾಹಿತಿ ಕೊರತೆ: ಜಿಎಸ್‌ಟಿಗೆ ಪೂರಕವಾದ ಮಾಹಿತಿ, ತರಬೇತಿಯು ಸಮಗ್ರವಾಗಿ ಸಿಗುತ್ತಿಲ್ಲ. ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆರ್ಥಿಕವಾಗಿ ಸ್ವಲ್ಪ ಸಬಲರಾಗಿರುವವರು ಖಾಸಗಿ ಲೆಕ್ಕಪತ್ರಪರಿಶೋಧಕರು, ತೆರಿಗೆ ತಜ್ಞರ ನೆರವು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಅಭಿಪ್ರಾಯ ಪೇಟೆಯಲ್ಲಿ ವ್ಯಕ್ತವಾಗುತ್ತಿದೆ.

ಬೇಳೆಕಾಳು ಹೆಸರಿನ ಪ್ರಸ್ತಾಪವೇ ಇಲ್ಲ: ‘ಸರ್ಕಾರ ನೀಡಿರುವ ಸರಕುಗಳ ಪಟ್ಟಿಯಲ್ಲಿ ಬೇಳೆಕಾಳು (Pulses) ಹೆಸರಿನ ಪ್ರಸ್ತಾಪವೇ ಇಲ್ಲ. ಅದಕ್ಕೆ ಬದಲಾಗಿ Dried Leguminous Vegetables ಎಂಬ ವೈಜ್ಞಾನಿಕ ಹೆಸರಿದೆ.  ಇದು ಸಾಮಾನ್ಯ ವರ್ತಕರಿಗೆ ಏನೆಂದು ಅರ್ಥವೇ ಆಗುವುದಿಲ್ಲ. ಇದನ್ನು ಕೆಲ ಮಟ್ಟಿಗೆ ‘ಜಿಎಸ್‌ಟಿ’ಗೂ ಅನ್ವಯಿಸಬಹುದು’ ಎಂದು  ರಮೇಶ್‌  ಅಭಿಪ್ರಾಯಪಡುತ್ತಾರೆ.
***
ಸಿದ್ಧತೆ ನಡೆಯುತ್ತಿದೆ

‘ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುವ ಸಿದ್ಧತೆ ದೃಷ್ಟಿಯಿಂದ ನೋಡಿದರೆ, ಯಶವಂತಪುರ ಮಾರುಕಟ್ಟೆಯಲ್ಲಿ  ಶೇ 75 ರಷ್ಟು ವರ್ತಕರು ಕಂಪ್ಯೂಟರ್‌ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಉಳಿದ ಶೇ 25 ರಷ್ಟು ವರ್ತಕರು ಈಗಲೂ ಲೆಡ್ಜರ್‌ನಲ್ಲಿ ವ್ಯವಹಾರ ಬರೆದಿಡುತ್ತಿದ್ದಾರೆ.

ಹಾಗಂತ, ಕಂಪ್ಯೂಟರ್‌ ಬಳಸುವ ವರ್ತಕರೆಲ್ಲರೂ ಜಿಎಸ್‌ಟಿಗೆ ಸಿದ್ಧರಿದ್ದಾರೆ ಎಂದಲ್ಲ. ಶೇ 50 ರಷ್ಟು ವರ್ತಕರು ಮಾತ್ರವೇ ಸಿದ್ಧರಿದ್ದಾರೆ. ಉಳಿದ ಶೇ 50 ರಷ್ಟು ವರ್ತಕರಿಗೆ ಜಿಎಸ್‌ಟಿ ಅರ್ಥವೇ ಆಗಿಲ್ಲ. ಅವರಲ್ಲಿ ಕೆಲವರಿಗೆ ನಾವು ಜಿಎಸ್‌ಟಿಗೆ ಸೇರುವುದಿಲ್ಲ ಎನ್ನುವ ಭಾವನೆ ಇದೆ’ ಎಂದು ಲಹೋಟಿ ತಿಳಿಸಿದ್ದಾರೆ.

***
ಮುಷ್ಕರದ ಎಚ್ಚರಿಕೆ

‘ವರ್ತಕರ ಅನುಮಾನಗಳಿಗೆ ಸ್ಪಷ್ಟನೆ ನೀಡುವಂತೆ ಈಗಾಗಲೇ ಸಾಕಷ್ಟು ಬಾರಿ ಪತ್ರ ಬರೆದು ಮನವಿ ಮಾಡಲಾಗಿದೆ. ಸೂಕ್ತ ಪ್ರತಿಕ್ರಿಯೆ ಬರದೇ ಇದ್ದರೆ ದಕ್ಷಿಣ ಭಾರತದಲ್ಲಿ ಜೂನ್‌ 25ರ ಒಳಗಾಗಿ ಒಂದು ದಿನ  ಮುಷ್ಕರ ನಡೆಸಲು ನಿರ್ಧರಿಸಲಾಗಿದೆ’ ಎಂದು ಲಹೋಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT