ಎಚ್‌ಐವಿ ಸೋಂಕಿತರಿಗೆ ‘ಪರೀಕ್ಷೆ–ಚಿಕಿತ್ಸೆ’

7
ವಿಶ್ವ ರಕ್ತದಾನಿಗಳ ದಿನಾಚರಣೆ’ ಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ

ಎಚ್‌ಐವಿ ಸೋಂಕಿತರಿಗೆ ‘ಪರೀಕ್ಷೆ–ಚಿಕಿತ್ಸೆ’

Published:
Updated:
ಎಚ್‌ಐವಿ ಸೋಂಕಿತರಿಗೆ ‘ಪರೀಕ್ಷೆ–ಚಿಕಿತ್ಸೆ’

ಬೆಂಗಳೂರು:  ‘ಎಚ್‌ಐವಿ ಸೋಂಕಿತರ ಮರಣ ಪ್ರಮಾಣ ಕಡಿಮೆಗೊಳಿಸಲು ‘ಪರೀಕ್ಷೆ–ಚಿಕಿತ್ಸೆ’ (ಟೆಸ್ಟ್‌ ಎಂಡ್‌ ಟ್ರೀಟ್‌) ಯೋಜನೆಯಡಿ ಇನ್ನು ಮುಂದೆ ರಾಜ್ಯದ ಎಲ್ಲ ಎಚ್ಐವಿ ಸೋಂಕಿತರಿಗೆ ಚಿಕಿತ್ಸೆ ಸಿಗಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಆರ್‌ ಪಾಟೀಲ್‌ ತಿಳಿಸಿದರು.

ಬುಧುವಾರ ಬೆಂಗಳೂರಿನಲ್ಲಿ ನಡೆದ ‘ವಿಶ್ವ ರಕ್ತದಾನಿಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿಯವರೆಗೆ  ಸಿಡಿ– 4(ಎಚ್​ಐವಿ ಪೀಡಿತರಲ್ಲಿನ ರೋಗ ನಿರೋಧಕ ಪ್ರಮಾಣ ಅಳೆಯುವ ಕ್ಲಸ್ಟರ್ ಡಿಫರೆನ್ಸಿಯೇಷನ್ ಸೆಲ್ಸ್) ಸಂಖ್ಯೆ 250ಕ್ಕಿಂತ ಹೆಚ್ಚಿದ್ದವರಿಗೆ ಮಾತ್ರ ಎಆರ್‌ಟಿ (ಆ್ಯಂಟಿ ರಿಟ್ರೋವಲ್ ಥೆರಪಿ) ಪ್ರಾರಂಭಿಸಲಾಗುತ್ತಿತ್ತು. ಇನ್ನು ಮುಂದೆ ಎಚ್‌ಐವಿ ಸೋಂಕಿತರು ಎಂದು ತಿಳಿದ ಕೂಡಲೆ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಹೇಳಿದರು.

‘ಎಚ್‌ಐವಿ ಸೋಂಕಿತರು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಬೇಕಿದ್ದು, ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಶೇ 50ರಷ್ಟು ರಿಯಾಯ್ತಿ ನೀಡಲಾಗುತ್ತಿತ್ತು. ಇನ್ನು ಮುಂದೆ ಆ ಪರೀಕ್ಷೆಗಳು ಉಚಿತವಾಗಿರಲಿವೆ’ ಎಂದರು.

ರಾಜ್ಯ ಏಡ್ಸ್‌ ತಡೆ ಸೊಸೈಟಿಯ ಯೋಜನಾ ನಿರ್ದೇಶಕಿ ಡಾ. ಶಮ್ಲಾ ಇಕ್ಬಾಲ್‌, ‘ಉಚಿತ ಚಿಕಿತ್ಸೆ ನೀಡುವುದರಿಂದ ಸುಮಾರು 20 ಸಾವಿರ ಸೋಂಕಿತರ ಜೀವಿತಾವಧಿ ಹೆಚ್ಚುವ ನಿರೀಕ್ಷೆಯಿದೆ. ರಾಜ್ಯದಲ್ಲಿನ 64 ಎಆರ್‌ಟಿ ಕೇಂದ್ರಗಳು ಹಾಗೂ 196 ಲಿಂಕ್ ಎಆರ್‌ಟಿ ಕೇಂದ್ರಗಳಲ್ಲಿ ಒಟ್ಟು 5.05 ಲಕ್ಷ ಸೋಂಕಿತರು ಚಿಕಿತ್ಸೆಗಾಗಿ ನೋಂದಾಯಿಸಿದ್ದಾರೆ. ಇವರಲ್ಲಿ 1.41 ಲಕ್ಷ ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಈಗಾಗಲೇ 30 ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ವಿಧಳನಾ ಘಟಕಗಳು (ಬಿಸಿಎಸ್‌ಯು) ಕಾರ್ಯನಿರ್ವಹಿಸುತ್ತಿವೆ.

ಬಾಗಲಕೋಟೆ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಕೊಡಗು, ಕೋಲಾರ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲಾ ಆಸ್ಪತ್ರೆಗಳಲ್ಲೂ ಶೀಘ್ರ ಬಿಸಿಎಸ್‌ಯು ಸ್ಥಾಪಿಸಲಾಗುವುದು’ ಎಂದು ಹೇಳಿದರು.

***

ವರ್ಷದಲ್ಲಿ 7.87 ಲಕ್ಷ ಯುನಿಟ್ ರಕ್ತ ಸಂಗ್ರಹ

‘2016–17ನೇ ಸಾಲಿನಲ್ಲಿ ರಾಜ್ಯದಲ್ಲಿರುವ 200 ರಕ್ತ ನಿಧಿಗಳಲ್ಲಿ 6.60 ಲಕ್ಷ ಯುನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು.

ಇಲ್ಲಿಯವರೆಗೆ ಒಟ್ಟು 7.87 ಲಕ್ಷ ಯುನಿಟ್ ರಕ್ತ ಸಂಗ್ರಹವಾಗಿದ್ದು, ಶೇ 119 ಸಾಧನೆ ಮಾಡಲಾಗಿದೆ. ಇದರಲ್ಲಿ 5.93 ಲಕ್ಷ ಯುನಿಟ್ ರಕ್ತವನ್ನು ಸ್ವಯಂ ಪ್ರೇರಿತರಾಗಿ ರಕ್ತದಾನಿಗಳು ನೀಡಿದ್ದು, ಉಳಿದ 1.94 ಲಕ್ಷ ಯುನಿಟ್ ರಕ್ತವನ್ನು ರಾಜ್ಯಾದ್ಯಂತ ನಡೆಸಿದ್ದ 5,266 ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry