ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಘಟ್ಟಕ್ಕೆ ಪಾಕಿಸ್ತಾನ

ತವರಿನ ಅಂಗಳದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ನಿರಾಸೆ
Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಕಾರ್ಡಿಫ್‌ : ಆತಿಥೇಯ ಇಂಗ್ಲೆಂಡ್‌ ತಂಡವನ್ನು ಅದರ ತವರಿನಲ್ಲೇ ಮಣಿಸಿದ ಪಾಕಿಸ್ತಾನ, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.

ಸೋಫಿಯಾ ಗಾರ್ಡನ್ಸ್‌ನಲ್ಲಿ ಬುಧ ವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಜಯ ಸಾಧಿಸಿದ ಪಾಕ್‌ ಈ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತು.

212 ರನ್‌ಗಳ ಜಯದ ಗುರಿ ಬೆನ್ನತ್ತಿದ ಸರ್ಫರಾಜ್ ಅಹಮ್ಮದ್ ಬಳಗ ದವರು 37.1 ಓವರ್‌ಗಳಲ್ಲಿ 215 ರನ್‌ ಗಳಿಸಿದರು.   ಹಸನ್ ಅಲಿ, ಜುನೈದ್ ಖಾನ್‌ ಮತ್ತು ರುಮನ್ ರುಯೀಸ್‌ ಅವರ ಮೊನಚಾದ ಬೌಲಿಂಗ್‌ ದಾಳಿ ಹಾಗೂ ಅಜರ್‌ ಅಲಿ–ಫಖರ್‌ ಜಮನ್ ಜೋಡಿಯ ಶತಕದ ಜೊತೆಯಾಟ ಪಾಕಿ ಸ್ತಾನಕ್ಕೆ ಸುಲಭ ಜಯ ತಂದುಕೊಟ್ಟಿತು.

ಸಾಧಾರಣ ಮೊತ್ತದ ಬೆನ್ನತ್ತಿದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ ಫಖರ್ ಜಮನ್‌ ಮೊದಲ ಓವರ್‌ನಲ್ಲೇ ಸಿಕ್ಸರ್‌ ಸಿಡಿಸಿ ಅಮೋಘ ಇನಿಂಗ್ಸ್‌ಗೆ ನಾಂದಿ ಹಾಡಿದರು. ಅಜರ್ ಅಲಿ ಅವರೊಂದಿಗೆ ಫಖರ್‌ 11ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 50 ದಾಟಿಸಿದರು. 21 ಓವರ್‌ ಮುಗಿಯುಷ್ಟರಲ್ಲಿ ಇಬ್ಬರೂ ವೈಯಕ್ತಿಕ ಅರ್ಧಶತಕವನ್ನೂ ಪೂರೈಸಿದರು. ತಂಡದ ಮೊತ್ತವೂ ಮೂರಂಕಿ ದಾಟಿತು. 22ನೇ ಓವರ್‌ನಲ್ಲಿ ಔಟಾಗುವ ಮುನ್ನ ಫಖರ್ 58 ಎಸೆತಗಳಲ್ಲಿ 57 ರನ್‌ ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್‌ ಒಳಗೊಂಡಿತ್ತು.

ಅಜರ್ ಅಲಿ ಜೊತೆಗೂಡಿದ ಬಾಬರ್ ಆಜಮ್‌ ಕೂಡ ವೇಗವಾಗಿ ರನ್‌ ಗಳಿಸಲು ಮುಂದಾ ದರು. ಎರಡನೇ ವಿಕೆಟ್‌ಗೆ ಇವರಿಬ್ಬರು 55 ರನ್‌ ಸೇರಿಸಿ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು. ಅಜರ್ ಅಲಿ (76; 100 ಎ, 1 ಸಿ, 5 ಬೌಂ) ಔಟಾದಾಗ ತಂಡದ ಜಯಕ್ಕೆ ಕೇವಲ 39 ರನ್‌ ಬೇಕಾಗಿತ್ತು. ಬಾಬರ್ ಮತ್ತು ಮಹಮ್ಮದ್ ಹಫೀಜ್‌ ನಿರಾಯಾಸವಾಗಿ ಇಂಗ್ಲೆಂಡ್‌ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತು ಗೆಲುವಿನ ನಗೆ ಬೀರಿದರು.

ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ವೈಫಲ್ಯ:  ಟಾಸ್‌ ಗೆದ್ದ ಪಾಕಿಸ್ತಾನ ನಾಯಕ ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ವೇಗಿಗಳಾದ ಜುನೈದ್‌ ಖಾನ್‌, ರುಮನ್ ರಯೀಸ್‌ ಮತ್ತು ಹಸನ್ ಅಲಿ ದಾಳಿಗೆ ನಲುಗಿದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು. 49.5 ಓವರ್‌ಗಳಲ್ಲಿ ತಂಡ ಪತನ ಕಂಡಿತು. ಜಾನಿ ಬೇಸ್ಟೊ, ಜೋ ರೂಟ್‌, ಎಯಾನ್‌ ಮಾರ್ಗನ್‌ ಮತ್ತು ಬೆನ್‌ ಸ್ಟೋಕ್ಸ್‌ ಸ್ವಲ್ಪ ಪ್ರತಿರೋಧ ಒಡ್ಡಿದರೂ ನಿರಂತರವಾಗಿ ವಿಕೆಟ್‌ಗಳು ಉರುಳಿದ ಕಾರಣ ತಂಡಕ್ಕೆ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಮೊದಲ ವಿಕೆಟ್‌ಗೆ ಬೇಸ್ಟೊ ಮತ್ತು ಅಲೆಕ್ಸ್ ಹೇಲ್ಸ್‌ 5.5 ಓವರ್‌ಗಳಲ್ಲಿ 34 ರನ್‌ ಸೇರಿಸಿದರು. ಹೇಲ್ಸ್‌ ಮೊದಲ ಓವರ್‌ನಲ್ಲಿ ಒಂದು ಬೌಂಡರಿ ಗಳಿಸಿದರೆ ಬೇಸ್ಟೊ ಮೂರನೇ ಓವರ್‌ನಲ್ಲಿ ಎರಡು ಬೌಂಡರಿಗಳೊಂದಿಗೆ ವೇಗವಾಗಿ ರನ್‌ ಗಳಿಸಲು ಮುಂದಾದರು. ಐದು ಮತ್ತು ಆರನೇ ಓವರ್‌ನಲ್ಲಿ ಇಬ್ಬರೂ ತಲಾ ಒಂದೊಂದು ಬೌಂಡರಿ ಸಿಡಿಸಿದರು. ಆದರೆ ಆರನೇ ಓವರ್‌ನ ಐದನೇ ಎಸೆತದಲ್ಲಿ ಇಂಗ್ಲೆಂಡ್‌ ಮೊದಲ ಆಘಾತ ಕಂಡಿತು. ಹೇಲ್ಸ್‌ ಅವರನ್ನು ಕವರ್‌ನಲ್ಲಿದ್ದ ಬಾಬರ್ ಆಜಮ್ ಮುಷ್ಠಿಯಲ್ಲಿ ಬಂಧಿಯಾಗಿಸಿದ ರೂಮನ್‌ ರಯೀಸ್‌ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಕೆಟ್‌ ಪಡೆದು ಸಂಭ್ರಮಿಸಿದರು. ಬೇಸ್ಟೊ ಮತ್ತು ರೂಟ್‌ ಎರಡನೇ ವಿಕೆಟ್‌ಗೆ 46 ರನ್‌ ಸೇರಿಸಿದರು.

ಎರಡು ಜೀವದಾನ ಪಡೆದ ಬೇಸ್ಟೊ ಔಟಾದ ನಂತರ ತಂಡ ಉತ್ತಮ ಜೊತೆಯಾಟ ಕಾಣಲೇ ಇಲ್ಲ. ಕೊನೆಯ 9.5 ಓವರ್‌ಗಳಲ್ಲಿ ತಂಡ ಗಳಿಸಿದ್ದು ಕೇವಲ 42 ರನ್‌ ಮಾತ್ರ. ಬೇಸ್ಟೊ ಮತ್ತು ಮಾರ್ಗನ್‌ ಗಳಿಸಿದ ತಲಾ ನಾಲ್ಕು ಬೌಂಡರಿ ಒಳಗೊಂಡಂತೆ ಇಂಗ್ಲೆಂಡ್ ಇನಿಂಗ್ಸ್‌ನಲ್ಲಿ ಇದ್ದದ್ದು ಕೇವಲ 15 ಬೌಂಡರಿ. ಆದರೆ ಒಂದೂ ಸಿಕ್ಸರ್‌ ಇರಲಿಲ್ಲ. 

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 49.5 ಓವರ್‌ಗಳಲ್ಲಿ 211ಕ್ಕೆ ಆಲೌಟ್‌ (ಜಾನಿ ಬೇಸ್ಟೊ 43, ಜೋ ರೂಟ್‌ 46, ಇಯಾನ್ ಮಾರ್ಗನ್‌ 33, ಬೆನ್‌ ಸ್ಟೋಕ್ಸ್‌ 34; ಜುನೈದ್ ಖಾನ್‌ 42ಕ್ಕೆ2, ರೂಮನ್‌ ರಯೀಸ್‌ 44ಕ್ಕೆ2, ಹಸನ್‌ ಅಲಿ 35ಕ್ಕೆ3);
ಪಾಕಿಸ್ತಾನ: 37.1 ಓವರ್‌ಗಳಲ್ಲಿ  ಎರಡು ವಿಕೆಟ್‌ಗಳಿಗೆ 215 ರನ್‌ (ಅಜರ್ ಅಲಿ 76, ಫಖರ್‌ ಜಮಾನ್‌ 57, ಬಾಬರ್ ಆಜಮ್‌ ಔಟಾಗದೆ 38, ಮಹಮ್ಮದ್ ಹಫೀಜ್‌ ಔಟಾಗದೆ 31).

ಫಲಿತಾಂಶ: ಪಾಕಿಸ್ತಾನಕ್ಕೆ ಎಂಟು ವಿಕೆಟ್ ಜಯ; ಫೈನಲ್‌ಗೆ ಪ್ರವೇಶ. ಪಂದ್ಯಶ್ರೇಷ್ಠ–ಹಸನ್‌ ಸಲಿ (ಪಾಕಿಸ್ತಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT