ಸುಪ್ರೀಂ ಕೋರ್ಟ್‌ ಮೊರೆ ಹೋದ ಬಿಯರ್‌, ವೈನ್‌ ಪಾರ್ಲರ್‌ ಮಾಲೀಕರು

7

ಸುಪ್ರೀಂ ಕೋರ್ಟ್‌ ಮೊರೆ ಹೋದ ಬಿಯರ್‌, ವೈನ್‌ ಪಾರ್ಲರ್‌ ಮಾಲೀಕರು

Published:
Updated:
ಸುಪ್ರೀಂ ಕೋರ್ಟ್‌ ಮೊರೆ ಹೋದ ಬಿಯರ್‌, ವೈನ್‌ ಪಾರ್ಲರ್‌ ಮಾಲೀಕರು

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್‌ ವ್ಯಾಪ್ತಿಯಲ್ಲಿನ ಮದ್ಯ ಮಾರಾಟ ಮಳಿಗೆಗಳನ್ನು ಏಪ್ರಿಲ್‌ 1ರಿಂದ ಮುಚ್ಚಬೇಕು ಎಂಬ ತೀರ್ಪಿನ ಬಗ್ಗೆ ಸ್ಪಷ್ಟನೆ ಕೇಳಿ ಕೇರಳದ ಬಿಯರ್‌ ಮತ್ತು ವೈನ್‌ ಪಾರ್ಲರ್‌ಗಳ ಮಾಲೀಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ತಾವು ಮಾರಾಟ ಮಾಡುತ್ತಿರುವ ಬಿಯರ್‌ ಮತ್ತು ವೈನ್‌ನಲ್ಲಿ ಆಲ್ಕೊಹಾಲ್‌ ಪ್ರಮಾಣ ಕ್ರಮವಾಗಿ ಶೇ 6 ಮತ್ತು ಶೇ 12ಕ್ಕಿಂತ ಕಡಿಮೆ ಇದೆ. ಹಾಗಾಗಿ ಮಾರ್ಚ್‌ 31ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ತಮಗೆ ಅನ್ವಯವಾಗುವುದಿಲ್ಲ ಎಂದು ಮಾಲೀಕರು ಅರ್ಜಿಯಲ್ಲಿ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಆರ್‌.ಕೆ. ಅಗರ್‌ವಾಲ್‌ ಮತ್ತು ದೀಪಕ್‌ ಗುಪ್ತಾ ಅವರಿದ್ದ ರಜಾ ಕಾಲದ ನ್ಯಾಯಪೀಠದ ಮುಂದೆ ಈ ಅರ್ಜಿ ಬಂದಿದೆ. ರಜೆ ಮುಗಿದ ಬಳಿಕ, ಜುಲೈನಲ್ಲಿ ಈ ವಿಚಾರವನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ಹೇಳಿದೆ.

ಕೇರಳದ ಅಬಕಾರಿ ಇಲಾಖೆ ವಿವಿಧ  ವರ್ಗಗಳಲ್ಲಿ ತಮಗೆ ಎಫ್‌ಎಲ್‌–11 ಪರವಾನಗಿ ನೀಡಿತ್ತು. ಮಾರ್ಚ್‌ 31ರಿಂದ ಒಂದು ವರ್ಷದ ಅವಧಿಗೆ ಪರವಾನಗಿ ನವೀಕರಿಸಲಾಗಿದೆ ಎಂದು ಮಾಲೀಕರು ಅರ್ಜಿಯಲ್ಲಿ ಹೇಳಿದ್ದಾರೆ.

ಎಫ್‌ಎಲ್‌–11 ಪರವಾನಗಿ ಅಡಿಯಲ್ಲಿ, ಬಿಯರ್‌ ಮತ್ತು ವೈನ್‌ ಪಾರ್ಲರ್‌ಗಳ ಪ್ರತ್ಯೇಕ ಕೊಠಡಿಯಲ್ಲಿ ಸಾರ್ವಜನಿಕರು ಇವುಗಳನ್ನು ಸೇವಿಸಲು ಅವಕಾಶ ಇದೆ.

ಸುಪ್ರೀಂ ಕೋರ್ಟ್‌  ತೀರ್ಪಿನ ನಂತರ ರಾಜ್ಯ ಅಬಕಾರಿ ಇಲಾಖೆ, ಹೆದ್ದಾರಿಗಳ 150 ಮೀಟರ್‌ ಮತ್ತು 350 ಮೀಟರ್‌ ವ್ಯಾಪ್ತಿಯ ನಡುವೆ ಇರುವ ಹೋಟೆಲ್‌, ಬಾರ್‌, ರೆಸ್ಟೊರೆಂಟ್‌, ಬಿಯರ್‌ ಮತ್ತು ವೈನ್‌ ಪಾರ್ಲರ್‌ಗಳನ್ನು ಮುಚ್ಚುವಂತೆ ತಮಗೆ ಬೆದರಿಕೆ ಹಾಕುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಲಕ್ಷಗಟ್ಟಲೆ ಬೆಲೆಬಾಳುವ ದಾಸ್ತಾನು ಮಳಿಗೆಗಳಲ್ಲಿ ಬಿದ್ದಿದೆ. ಅವುಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದರೆ ತಾವು ಹಣಕಾಸಿನ ತೊಂದರೆ ಎದುರಿಸಬೇಕಾಗುತ್ತದೆ ಎಂದು ಮಾಲೀಕರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry