₹1,100 ಕೋಟಿ ಬಂಡವಾಳ ಹೂಡಿಕೆ

7
ನಗರದಲ್ಲಿ ಇಂಟೆಲ್‌ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ

₹1,100 ಕೋಟಿ ಬಂಡವಾಳ ಹೂಡಿಕೆ

Published:
Updated:
₹1,100 ಕೋಟಿ ಬಂಡವಾಳ ಹೂಡಿಕೆ

ಬೆಂಗಳೂರು: ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ, ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ಸಿಲಿಕಾನ್‌ ಎಳೆಗಳ ಸಾಧನಗಳೂ ಸೇರಿದಂತೆ ವಿವಿಧ ರೀತಿಯ  ಕ್ರಾಂತಿಕಾರಕ ತಂತ್ರಜ್ಞಾನಗಳ ಸಂಶೋಧನೆ, ಅಭಿವೃದ್ಧಿ ಮತ್ತು ವಿನ್ಯಾಸ ಕೇಂದ್ರವನ್ನು ಇಂಟೆಲ್‌ ಸಂಸ್ಥೆ ಬೆಂಗಳೂರಿನಲ್ಲಿ ಸ್ಥಾಪಿಸಲಿದೆ.

‘ಅಮೆರಿಕ ನಂತರ ವಿಶ್ವದ ಎರಡನೇ ಅತಿ ದೊಡ್ಡ  ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಇದಾಗಲಿದ್ದು, ₹ 1,100 ಕೋಟಿ ಬಂಡವಾಳ ತೊಡಗಿಸಲಾಗುವುದು’ ಎಂದು ಇಂಟೆಲ್‌ನ (ಭಾರತ) ವ್ಯವಸ್ಥಾಪಕ ನಿರ್ದೇಶಕಿ ನಿವೃತಿ ರೈ  ಬುಧವಾರ ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ದೇಶಿತ ಸಂಶೋಧನಾ ಕೇಂದ್ರದ  ನೀಲ ನಕ್ಷೆಯನ್ನು ಅನಾವರಣಗೊಳಿಸಿದರು.

ಈ ಕೇಂದ್ರದಲ್ಲಿ ಗ್ರಾಫಿಕ್ಸ್, ಸಾಫ್ಟ್‌ವೇರ್‌, ಪ್ಲಾಟ್‌ಫಾರಂ, ಪ್ರೊಸೆಸ್‌ ಟೆಕ್‌, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಫೈವ್‌ ಜಿ, ಕ್ಲೌಡ್‌,  ಆಟೋಮೇಷನ್‌ ಡ್ರೈವಿಂಗ್‌,  ಫ್ಯೂಯೆಲ್‌ ಸೆಲ್‌, ಸೋಲಾರ್‌ ಸೆಲ್‌, ಚಿಪ್‌ ಡಿಸೈನಿಂಗ್‌, ಲ್ಯಾಬ್‌ ಎಕ್ವಿಪ್‌ಮೆಂಟ್‌ಗಳ  ಸಂಶೋಧನೆ, ಅಭಿವೃದ್ಧಿ ಮತ್ತು  ವಿನ್ಯಾಸ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ವಾಹನಗಳ ಅಪಘಾತದಿಂದ ಸಾವು ನೋವು ಸಂಭವಿಸುವುದನ್ನು ತಪ್ಪಿಸಬಲ್ಲ ಆಟೋಮೇಷನ್‌  ಡ್ರೈವಿಂಗ್‌ ತಂತ್ರಜ್ಞಾನ, ಮಿಥೇನ್‌ನಿಂದ ಎಲೆಕ್ಟ್ರಾನ್‌ಗಳನ್ನು  ಬೇರ್ಪಡಿಸಿ ವಿದ್ಯುತ್ ತಯಾರಿಕೆಯ ಕೋಶಗಳ  ಅಭಿವೃದ್ಧಿ ಪ್ರಮುಖ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಇಂಟೆಲ್‌ ಭಾರತದಲ್ಲಿ ಈವರೆಗೆ ₹28,000 ಕೋಟಿ ಬಂಡವಾಳ ಹೂಡಿಕೆ ಮಾಡಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇಡೀ ದೇಶಕ್ಕೆ ನಾಯಕ ಸ್ಥಾನದಲ್ಲಿದೆ. ವಿಶ್ವದ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನದ ಕ್ಲಸ್ಟರ್‌ ಬೆಂಗಳೂರು ಎಂದು ಹೇಳಿದರು.

ವಿಶ್ವದ ಎರಡನೇ ಅತಿದೊಡ್ಡ ಸಂಶೋಧನಾ ಕೇಂದ್ರವನ್ನು ಇಂಟೆಲ್‌ ಬೆಂಗಳೂರಿನಲ್ಲಿ ಸ್ಥಾಪಿಸುತ್ತಿರುವುದು ಹರ್ಷದ ಸಂಗತಿ ಎಂದೂ ಸಿದ್ದರಾಮಯ್ಯ ತಿಳಿಸಿದರು.

***

ಸರ್ಜಾಪುರ ರಸ್ತೆಯಲ್ಲಿ ಕೇಂದ್ರ

ಸರ್ಜಾಪುರ ರಿಂಗ್ ರಸ್ತೆಯಲ್ಲಿರುವ ಇಂಟೆಲ್‌ ಕ್ಯಾಂಪಸ್‌ನಲ್ಲಿ  6,22,000 ಚದರ ಅಡಿ ಜಾಗದಲ್ಲಿ ‘ಒನ್‌ ಸ್ಟೋರಿ ಹೈಟೆಕ್‌’ ಕಟ್ಟಡ ಸ್ಥಾಪನೆಗೊಳ್ಳಲಿದೆ. ಕಟ್ಟಡವು ಪರಿಸರ ಸ್ನೇಹಿಯಾಗಿರಲಿದೆ.

***

ರಾಜ್ಯದಲ್ಲಿ ಹಣ ಹೂಡಿಕೆಯಿಂದ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಆಗಲಿದೆ

ಸಿದ್ದರಾಮಯ್ಯ,  ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry