ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ ಭದ್ರತೆಗೆ ಕ್ಷಿಪ್ರ ಕಾರ್ಯಪಡೆ ಸನ್ನದ್ಧ

Last Updated 14 ಜೂನ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ‘ನಮ್ಮ ಮೆಟ್ರೊ’ ಮೊದಲ ಹಂತ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಸನ್ನದ್ಧವಾಗುತ್ತಿದ್ದಂತೆಯೇ,  ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಒದಗಿಸಲು  ಕ್ಷಿಪ್ರ ಕಾರ್ಯಾಚರಣೆ ಪಡೆಯೂ ಸಜ್ಜಾಗಿದೆ.

ಮೆಟ್ರೊ ನಿಲ್ದಾಣಗಳಿಗೆ ಹಾಗೂ ಪ್ರಯಾಣಿಕರ ಸುರಕ್ಷತೆ ಸಲುವಾಗಿಯೇ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ  ಪಡೆಯ 100 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಒಳಗೊಂಡ ಕ್ಷಿಪ್ರ ಕಾರ್ಯ ಪಡೆಯನ್ನು ರಚಿಸಲಾಗಿದೆ. ಇದರ ಒಟ್ಟು 14 ತಂಡಗಳು ಮೆಟ್ರೊ ನಿಲ್ದಾಣಗಳಿಗೆ ಭದ್ರತೆ ಒದಗಿಸಲಿವೆ. ಮೆಟ್ರೊ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಸಲುವಾಗಿಯೇ ವಿಶೇಷ ತರಬೇತಿ ನೀಡಲಾಗಿದೆ. 

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗೆ ತರಬೇತಿ ನೀಡುವ ಸಲುವಾಗಿ ಹೈದರಾಬಾದ್‌ನಲ್ಲಿ ಸ್ಥಾಪಿಸಿರುವ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿಯಲ್ಲಿ ಈ ಸಿಬ್ಬಂದಿ ಒಂದು ವರ್ಷ ತರಬೇತಿ ಪಡೆದಿದ್ದಾರೆ.  ಸಿಬ್ಬಂದಿಗೆ ಭಯೋತ್ಪಾದನೆ ನಿಗ್ರಹದ ಬಗ್ಗೆ 40 ದಿನಗಳ ತರಬೇತಿಯನ್ನೂ ನೀಡಲಾಗಿದೆ.

ಪ್ರತಿ ತಂಡದಲ್ಲೂ ಒಬ್ಬ ಎಸ್‌ಐ ಹಾಗೂ ಆರು ಮಂದಿ ಸದಸ್ಯರಿರುತ್ತಾರೆ. ಇಂತಹ ಎಂಟು ತಂಡಗಳು  ದಿನದಲ್ಲಿ ಎರಡು ಪಾಳಿಯಲ್ಲಿ  ಕಾರ್ಯನಿರ್ವಹಿಸಲಿವೆ.  ಯಾವುದೇ ತುರ್ತು ಸಂದರ್ಭವನ್ನೂ ಸಮರ್ಥವಾಗಿ ಎದುರಿಸಬಲ್ಲ ಕ್ಷಮತೆಯನ್ನು ಈ ತಂಡ ಹೊಂದಿರುತ್ತದೆ.

ತುರ್ತು ಕಾರ್ಯಾಚರಣೆ ನಡೆಸಬೇಕಾದ ಸಂದರ್ಭ ಎದುರಾದಲ್ಲಿ ಸೇನೆಯ ಲೆಫ್ಟಿನೆಂಟ್‌ ಕರ್ನಲ್‌ ದರ್ಜೆಯ ಅಥವಾ  ಬ್ರಿಗೇಡಿಯರ್‌ ದರ್ಜೆಯ ಅಧಿಕಾರಿಗಳು ಮಾರ್ಗದರ್ಶನದಲ್ಲಿ ಇವು ಕಾರ್ಯನಿರ್ವಹಿಸಲಿವೆ.

‘ದೆಹಲಿ ಮೆಟ್ರೊಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಭದ್ರತೆ ಒದಗಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ನಾವು ಇಲ್ಲಿನ ಮೆಟ್ರೊ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಲಿದ್ದೇವೆ. ಬೆಳಿಗ್ಗೆ 5 ಗಂಟೆಗೆ ಮೆಟ್ರೊ ಕಾರ್ಯಾಚರಣೆ ಆರಂಭವಾಗುವುದಕ್ಕೆ ಮುನ್ನವೇ ನಾವು ನಿಲ್ದಾಣದಲ್ಲಿರುತ್ತೇವೆ.

ರಾತ್ರಿ ಕೊನೆಯ ರೈಲು ಹೋಗುವವರೆಗೂ ಭದ್ರತೆ ಒದಗಿಸುತ್ತೇವೆ’ ಎಂದು ಕ್ಷಿಪ್ರ ಕಾರ್ಯ ಪಡೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಸ್ಯೆಗಳೂ ಇವೆ: ಈ ತಂಡದ ಸಿಬ್ಬಂದಿಗೆ ವಸತಿ ವ್ಯವಸ್ಥೆ  ಕಲ್ಪಿಸಿಲ್ಲ. ಕೆಲವೊಮ್ಮೆ ಮಧ್ಯರಾತ್ರಿಯ ನಂತರ ಮನೆ ಸೇರಬೇಕಾಗುತ್ತದೆ. ಬೆಳಿಗ್ಗೆ ಬೇಗನೇ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ಅವರಿಗಾಗಿ ಪ್ರತ್ಯೇಕ ವಾಹನ  ವ್ಯವಸ್ಥೆ ಒದಗಿಸಿಲ್ಲ.

‘ನಾವು ಸಮಸ್ಯೆಗಳನ್ನು ನಿವಾರಣೆಗಾಗಿಯೇ ಇರುವವರು. ಹಾಗಾಗಿ ಇಂತಹ ಸಣ್ಣಪುಟ್ಟ ನ್ಯೂನತೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.  ಮೆಟ್ರೊಗೆ ಭದ್ರತೆ ಒದಗಿಸುವ ಹೊಣೆಯನ್ನು ನಮಗೆ ವಹಿಸಲಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವುದಷ್ಟೇ ನಮ್ಮ ಗುರಿ. ಅಗ್ನಿಶಾಮಕ ಸೇವೆ ಮತ್ತು ತುರ್ತು ಸೇವೆ ಡಿಜಿಪಿ ನೀಲಮಣಿ ರಾಜು ಅವರು ನಮಗೆ ಅಗತ್ಯ  ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕ್ಷಿಪ್ರ ಕಾರ್ಯಪಡೆಯ ಹೊರತಾಗಿಯೂ ಪ್ರತಿಯೊಂದು ಮೆಟ್ರೊ ನಿಲ್ದಾಣದಲ್ಲೂ ತಲಾ 40 ಮಂದಿ ಖಾಸಗಿ ಭದ್ರತಾ ಸಿಬ್ಬಂದಿ (ಹೊರಗುತ್ತಿಗೆ) ಇರುತ್ತಾರೆ. ಕೆಂಪೇಗೌಡ ಇಂಟರ್‌ಚೇಂಜ್‌ ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವುದರಿಂದ ಇಲ್ಲಿ 100ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಯಾಣಿಕರ  ಹಾಗೂ ಅವರು ತಂದಿರುವ ಬ್ಯಾಗ್‌ಗಳ ತಪಾಸಣೆ ನಡೆಸುವುದು, ಅವರಿಗೆ ಅಗತ್ಯ ಮಾರ್ಗದರ್ಶನ ನೀಡುವುದು ಇವರ ಕೆಲಸ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
***
ಪ್ಲ್ಯಾಟ್‌ಫಾರ್ಮ್‌ನಲ್ಲಿ ಕಾಲಹರಣ ಮಾಡಿದರೆ ದಂಡ ವಸೂಲಿ

‘ಟಿಕೆಟ್‌ ಖರೀದಿಸಿ  ಗೇಟ್‌ ಒಳಗೆ ಪ್ರವೇಶಿಸುವ  ಪ್ರಯಾಣಿಕರು  25 ನಿಮಿಷದ ಒಳಗೆ ರೈಲು ಹತ್ತಿಕೊಂಡು ಹೋಗಬೇಕು. ಅದಕ್ಕಿಂತ ಹೆಚ್ಚು ಸಮಯ ನಿಲ್ದಾಣದಲ್ಲಿ ಉಳಿದರೆ ದಂಡ ವಸೂಲಿ ಮಾಡಲು ಅವಕಾಶ ಇದೆ. ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಮಾರ್ಗ ಬದಲಾಯಿಸುವಾಗಲೂ ಪ್ರಯಾಣಿಕರು ಅನಗತ್ಯ ಕಾಲಹರಣ ಮಾಡಬಾರದು’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

‘ಟಿಕೆಟ್‌ ಖರೀದಿಸಿದ ಪ್ರಯಾಣಿಕರು  ಪ್ಲ್ಯಾಟ್‌ಫಾರ್ಮ್‌ ಪ್ರವೇಶಿಸಿದ ಅವಧಿ ಬಿಲ್ಲೆಯಲ್ಲಿ ನಮೂದಾಗುತ್ತದೆ. ಅವರು ಟಿಕೆಟ್‌ ಪಡೆದ ನಿಲ್ದಾಣವನ್ನು ನಿರ್ದಿಷ್ಟ ಅವಧಿಯ ಒಳಗೆ ತಲುಪಬೇಕು. ಇಂಟರ್‌ಚೇಂಜ್‌ಗೆ ತಗಲುವ ಅವಧಿ ಸೇರಿಸಿ ಈ ಲೆಕ್ಕಾಚಾರ ಹಾಕಲಾಗುತ್ತದೆ. ಆ ಅವಧಿಯೊಳಗೆ ಅವರು ಆ ನಿಲ್ದಾಣವನ್ನು ತಲುಪದಿದ್ದರೆ ದಂಡ ಪಾವತಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT