ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಕ್ ಮಾಲೀಕರ ಸಂಕಷ್ಟ

ನಾಳೆಯಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತಿ ದಿನ ಪರಿಷ್ಕರಣೆ
Last Updated 14 ಜೂನ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಯುದ್ಧಕ್ಕೆ ಸನ್ನದ್ಧವಾಗಿರಿ, ಶಸ್ತ್ರಾಸ್ತ್ರಗಳನ್ನು ಆಮೇಲೆ ಕೊಡುತ್ತೇವೆ ಎನ್ನುವಂತಿದೆ ಭಾರತೀಯ ತೈಲ ನಿಗಮದ (ಐಒಸಿ) ಧೋರಣೆ.’
ದೇಶದಾದ್ಯಂತ ಇದೇ 16ರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ದಿನ ಪರಿಷ್ಕರಿಸಲು ಮುಂದಾಗಿರುವ ಐಒಸಿ ಕ್ರಮವನ್ನು ಬೆಂಗಳೂರು ಪೆಟ್ರೋಲಿಯಂ ಡೀಲರ್‌ಗಳ ಸಂಘದ ಕಾರ್ಯದರ್ಶಿ ಕೆ.ಲೋಕೇಶ್‌ ಈ ರೀತಿ ವ್ಯಾಖ್ಯಾನಿಸಿದರು.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದು ಐಒಸಿ ಹೇಳಿದೆ. ಆದರೆ, ಶ್ರೀಮಂತ ರಾಷ್ಟ್ರಗಳಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಬಂಕ್‌ಗಳು ಇವೆ. ಸ್ವಯಂಚಾಲಿತ ವ್ಯವಸ್ಥೆ ಇರುವ ಕಾರಣ ಬೆಲೆ ಪರಿಷ್ಕರಣೆ ಸುಲಭ. ಆದರೆ, ನಮ್ಮಲ್ಲಿ ಎಷ್ಟು ಬಂಕ್‌ಗಳಲ್ಲಿ ಈ ವ್ಯವಸ್ಥೆ ಇದೆ’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ 58,000 ಬಂಕ್‌ಗಳಿವೆ. ಈ ಪೈಕಿ 800 ಬಂಕ್‌ಗಳಲ್ಲಿ ಮಾತ್ರ ಸ್ವಯಂಚಾಲಿತ ವ್ಯವಸ್ಥೆ ಇದೆ. ಆದರೆ, ಅವುಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನು ಈ ವ್ಯವಸ್ಥೆ ಇಲ್ಲದೇ ಇರುವ ಬಂಕ್‌ಗಳಲ್ಲಿ ಪಂಪ್‌ಗಳಲ್ಲೇ ಪರಿಷ್ಕೃತ ಬೆಲೆಯನ್ನು ಅಳವಡಿಸಬೇಕು. ಒಂದು ಪಂಪ್‌ನಲ್ಲಿ ಬೆಲೆ ಅಳವಡಿಸಲು 3–7 ನಿಮಿಷ ಬೇಕು. ಒಂದು ಬಂಕ್‌ನಲ್ಲಿ 10 ಪಂಪ್‌ಗಳು ಇದ್ದರೆ ಒಂದು ಗಂಟೆ ಬೇಕಾಗುತ್ತದೆ’ ಎಂದು ವಿವರಿಸಿದರು.

‘ಬಂಕ್‌ಗಳ ಮಾಲೀಕರು ಅಥವಾ ವ್ಯವಸ್ಥಾಪಕರೇ ಪರಿಷ್ಕೃತ ಬೆಲೆಯನ್ನು ಕಂಪ್ಯೂಟರ್‌, ಪಂಪ್‌ಗಳಲ್ಲಿ ಅಳವಡಿಸುತ್ತಾರೆ. ಆದರೆ, ಪ್ರತಿದಿನ ಬೆಲೆ ಬದಲಾದರೆ ಅದನ್ನು ಕಂಪ್ಯೂಟರ್‌, ಪಂಪ್‌ಗಳಿಗೆ ಅಳವಡಿಸುವವರು ಯಾರು’ ಎಂದು ಅವರು ಪ್ರಶ್ನಿಸಿದರು.

‘ಕೆಲ ಬಂಕ್‌ಗಳು ರಾತ್ರಿ 10, 11, 12 ಗಂಟೆಗೆ ಮುಚ್ಚಿದರೆ, ಮತ್ತೆ ಕೆಲ ಬಂಕ್‌ಗಳು ರಾತ್ರಿಯಿಡೀ ತೆರೆದಿರುತ್ತವೆ. ರಾತ್ರಿ 10 ಗಂಟೆಗೆ ಮುಚ್ಚುವ ಬಂಕ್‌ಗಳ ಮಾಲೀಕರು ಅಥವಾ ವ್ಯವಸ್ಥಾಪಕರು 12 ಗಂಟೆವರೆಗೂ ಅಲ್ಲೇ ಕಾಲ ಕಳೆಯಬೇಕು. ಇಲ್ಲವೇ ಮನೆಗೆ ಹೋಗಿ ವಾಪಸ್‌ ಬಂದು ಪರಿಷ್ಕೃತ ಬೆಲೆಯನ್ನು ಅಳವಡಿಸಿ ಹೋಗಬೇಕು. ಮಾಲೀಕರಿಗೆ ಬೇರೆ ಕೆಲಸ ಇಲ್ಲವೇ? ವೈಯಕ್ತಿಕ ಜೀವನ ಇಲ್ಲವೇ’ ಎಂದು ಪ್ರಶ್ನಿಸಿದರು.

ಎಸ್‌ಎಂಎಸ್‌, ಡೀಲರ್‌ ಪೋರ್ಟಲ್‌ಗೆ ಮಾಹಿತಿ: ‘ಪರಿಷ್ಕೃತ ಬೆಲೆಯ ಮಾಹಿತಿಯನ್ನು ಪೆಟ್ರೋಲಿಯಂ ಡೀಲರ್‌ಗಳ ಮೊಬೈಲ್‌ಗಳಿಗೆ ಎಸ್‌ಎಂಎಸ್‌ ಕಳುಹಿಸಲಾಗುತ್ತದೆ. ಡೀಲರ್‌ ಪೋರ್ಟಲ್‌ನಲ್ಲೂ ಪ್ರಕಟಿಸಲಾಗುತ್ತದೆ. ಆದರೆ, ಎಸ್‌ಎಂಎಸ್‌ಗಳನ್ನು ರಾತ್ರಿ 9, 10 ಅಥವಾ 1.30– ಹೀಗೆ ಮನಬಂದಂತೆ ಕಳುಹಿಸಲಾಗುತ್ತದೆ. ಮೇ 1ರಂದು ಬೆಲೆ ಪರಿಷ್ಕರಣೆ ಸಂದರ್ಭದಲ್ಲಿ ರಾತ್ರಿ 1.30ಕ್ಕೆ ಎಸ್‌ಎಂಎಸ್‌ ಕಳುಹಿಸಿದ್ದರು. ನಾನು ಆ ಎಸ್‌ಎಂಎಸ್‌ಗಾಗಿ ಮೊಬೈಲ್‌ ನೋಡುತ್ತಾ ಕೂರುವಂತಾಗಿತ್ತು’ ಎಂದು ಹೇಳಿದರು.

ಪೆಟ್ರೋಲ್‌ ಬಂಕ್‌ ಮಾಲೀಕ ಆನಂದ್‌ ಮಾತನಾಡಿ, ‘ಪ್ರತಿದಿನ ಇಂಧನ ಬೆಲೆ ಪರಿಷ್ಕರಣೆ ಪದ್ಧತಿಯನ್ನು ಏಕಾಏಕಿ ಜಾರಿಗೆ ತರುವುದರಿಂದ ಬಂಕ್‌ ಮಾಲೀಕರಿಗೆ ತೊಂದರೆ ಉಂಟಾಗಲಿದೆ. ನಿತ್ಯ ಬೆಲೆಯಲ್ಲಿ ಏರಿಳಿತ ಆಗುವುದರಿಂದ ಜನರು ಬಂಕ್‌ ಸಿಬ್ಬಂದಿಯೊಂದಿಗೆ ಜಗಳ ಮಾಡುತ್ತಾರೆ. ಹೀಗಾಗಿ ಜನರಿಗೆ ಅರಿವು ಮೂಡಿಸಬೇಕು’ ಎಂದರು.

‘ನಿತ್ಯ ಬೆಲೆ ಪರಿಷ್ಕರಣೆಯಿಂದ ಡೀಲರ್‌ಗಳ ವ್ಯವಹಾರಕ್ಕೂ ಧಕ್ಕೆ ಉಂಟಾಗುತ್ತದೆ. ಇಂದು ಲೀಟರ್‌ ಪೆಟ್ರೋಲ್‌ಗೆ ₹70 ಇದ್ದು, ನಾಳೆ ₹68ಗೆ ಇಳಿಕೆಯಾದರೆ ಆಗ ಡೀಲರ್‌ಗಳಿಗೆ ನಷ್ಟ ಉಂಟಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಒಂದು ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಗ್ರಾಹಕರಿಗೆ ಅನುಕೂಲ ಕಡಿಮೆ
‘ಈಗ ಅಂತರರಾಷ್ಟ್ರೀಯ ಬೆಲೆಯ ಸರಾಸರಿ ಆಧಾರದಲ್ಲಿ ತಿಂಗಳಲ್ಲಿ ಎರಡು ಬಾರಿ ಅಂದರೆ, ಪ್ರತಿ 1 ಮತ್ತು 16ನೇ ದಿನಾಂಕದಂದು ತೈಲ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಗ್ರಾಹಕ ತಿಂಗಳಿಗೆ 30 ಲೀಟರ್‌ ಪೆಟ್ರೋಲ್‌ ಖರೀದಿಸುತ್ತಾನೆ. ಈ ತಿಂಗಳಲ್ಲಿ ದರ ₹ 2  ಹೆಚ್ಚಳ ಅಥವಾ ಇಳಿಕೆ ಆಗುತ್ತದೆ. ಈ ಸಂದರ್ಭದಲ್ಲಿ ಗ್ರಾಹಕನಿಗೆ ₹60 ಹೊರೆ ಬೀಳುತ್ತದೆ ಅಥವಾ ಉಳಿತಾಯವಾಗುತ್ತದೆ. ಆದರೆ, ಪ್ರತಿದಿನ 10–20 ಪೈಸೆ ಏರುಪೇರು ಆಗುತ್ತಿದ್ದರೆ ಅದರಿಂದ ಗ್ರಾಹಕರಿಗೆ ಅಂತಹ ಅನುಕೂಲ ಆಗುವುದಿಲ್ಲ. ಅಲ್ಲದೆ, ಗ್ರಾಹಕರೂ ಬೆಲೆಯ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ’ ಎಂದು ಲೋಕೇಶ್‌ ತಿಳಿಸಿದರು.

20–50 ಕಿ.ಮೀ. ಪ್ರಯಾಣ ಮಾಡಬೇಕು
‘ಮೈಸೂರಿನಲ್ಲಿರುವ ಡೀಲರ್‌ ನಂಜನಗೂಡು, ಗುಂಡ್ಲುಪೇಟೆಯಲ್ಲಿ ಬಂಕ್‌ ಹೊಂದಿರುತ್ತಾರೆ. ಹೋಬಳಿ ಮಟ್ಟದಲ್ಲೂ ಬಂಕ್‌ಗಳು ಇರುತ್ತವೆ. ಇವು 20–50 ಕಿ.ಮೀ. ದೂರದಲ್ಲಿ ಇರುತ್ತವೆ. ಪ್ರತಿದಿನ ಅಲ್ಲಿನ ಹೋಗಿ ಕಂಪ್ಯೂಟರ್ ಅಥವಾ ಪಂಪ್‌ಗಳಲ್ಲಿ ಪರಿಷ್ಕೃತ ಬೆಲೆಯನ್ನು ಅಳವಡಿಸಬೇಕು. ಇದು ಕಾರ್ಯಸಾಧುವೇ’ ಎಂದು ಲೋಕೇಶ್‌ ಪ್ರಶ್ನಿಸಿದರು.

ಸ್ವಯಂಚಾಲಿತ ವ್ಯವಸ್ಥೆ ಮಾಡಿ
‘ದೇಶದಾದ್ಯಂತ ಇರುವ ಬಂಕ್‌ಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಒಂದೇ ತಂತ್ರಾಂಶವನ್ನು ಅಳವಡಿಸಬೇಕು. ಅದರಲ್ಲಿ ಪರಿಷ್ಕೃತ ಬೆಲೆಯನ್ನು ನಮೂದಿಸಬೇಕು’ ಎಂದು ಲೋಕೇಶ್‌ ಒತ್ತಾಯಿಸಿದರು.

₹ 5 ಲಕ್ಷ ದಂಡ
‘ಪರಿಷ್ಕೃತ ಬೆಲೆಯನ್ನು ತಕ್ಷಣ ಅಳವಡಿಸದ ಬಂಕ್‌ಗಳಿಗೆ ₹5,000ರಿಂದ ₹5 ಲಕ್ಷ ದಂಡ, 60 ದಿನಗಳ ಪರವಾನಗಿ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಆನಂದ್‌ ಹೇಳಿದರು.

ಮುಷ್ಕರ ವಾಪಸ್
ನವದೆಹಲಿ (ಪಿಟಿಐ):
ಪ್ರತಿ ಮಧ್ಯರಾತ್ರಿ 12 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆಗೆ ವಿರೋಧಿಸಿ ಜೂನ್ 16ರಿಂದ ಕರೆ ನೀಡಿದ್ದ ಮುಷ್ಕರವನ್ನು ಪೆಟ್ರೋಲ್ ಬಂಕ್ ಮಾಲೀಕರು ವಾಪಸ್ ಪಡೆದಿದ್ದಾರೆ.

ವಹಿವಾಟು ಆರಂಭಿಸುವ ಮುನ್ನ, ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ದರ ಪರಿಷ್ಕರಿಸಲು ಇಂಧನ ಸಚಿವಾಲಯ ಒಪ್ಪಿಗೆ ಸೂಚಿಸಿದ ನಂತರ ಮುಷ್ಕರ ನಡೆಸದಿರಲು ಇಂಧನ ಕಂಪೆನಿಗಳು ಮತ್ತು ಪೆಟ್ರೋಲ್ ಬಂಕ್ ಮಾಲೀಕರ ಸಂಘಟನೆಗಳು ನಿರ್ಧರಿಸಿದವು.

‘ದೇಶದಲ್ಲಿ ಸುಮಾರು 54,000 ಪೆಟ್ರೋಲ್ ಬಂಕ್‌ಗಳಿದ್ದು, ಅವುಗಳಲ್ಲಿ ಬಹುತೇಕವು ಬೆಳಿಗ್ಗೆ 6ರಿಂದ ರಾತ್ರಿ 10ರವೆರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಪ್ರತಿ ಮಧ್ಯರಾತ್ರಿ ದರ ಪರಿಷ್ಕರಿಸಲು ಸಿಬ್ಬಂದಿ ನಿಯೋಜಿಸಲು ಮತ್ತು ಪರಿಷ್ಕರಣೆ ಪ್ರಕ್ರಿಯೆ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತದೆ. ಇದು ಹೊರೆಯಾಗುತ್ತದೆ. ಹೀಗಾಗಿ ಪ್ರತಿ ದಿನ ವಹಿವಾಟು ಆರಂಭಕ್ಕೂ ಮುನ್ನ ದರ ಪರಿಷ್ಕರಣೆಗೆ ಅವಕಾಶ ನೀಡಬೇಕು’ ಎಂದು ಸಂಘಟನೆಗಳು ಒತ್ತಾಯಿಸಿದ್ದವು. ಬುಧವಾರ ಸಂಜೆ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಘಟನೆಗಳ ಜತೆ ಸಭೆ ನಡೆಸಿ, ಅವುಗಳ ಬೇಡಿಕೆಯನ್ನು ಪರಿಗಣಿಸಿದ್ದಾರೆ.

ದರ ತಿಳಿಯಲು ತೈಲ ನಿಗಮಗಳಿಂದ ಆ್ಯಪ್
ಪ್ರತಿದಿನ ಬದಲಾಗುವ ದರವನ್ನು ಎಸ್‌ಎಂಎಸ್‌, ಜಾಲತಾಣ ಮತ್ತು ಮೊಬೈಲ್ ಆ್ಯಪ್‌ಗಳ ಮೂಲಕ ಗ್ರಾಹಕರು ಮಾಹಿತಿ ಪಡೆಯಲು ಕಂಪೆನಿಗಳು ಅವಕಾಶ ಮಾಡಿಕೊಟ್ಟಿವೆ.

ಐಒಸಿ
* ಎಸ್‌ಎಂಎಸ್
RSP<SPACE>DEALER  CODE ಎಂದು ಟೈಪಿಸಿ 92249 92249ಗೆ ಎಸ್‌ಎಂಎಸ್ ಕಳುಹಿಸಿದರೆ, ದರದ ಮಾಹಿತಿ ದೊರೆಯಲಿದೆ

* ಜಾಲತಾಣ
www.iocl.comಗೆ ಭೇಟಿ ನೀಡಿ, pump locator ಮೂಲಕ ದರ ತಿಳಿಯಬಹುದು

* ಆ್ಯಪ್
Fuel@IOC ಆ್ಯಪ್‌ನಲ್ಲಿ ಬಂಕ್‌ ಅನ್ನು ಗುರುತಿಸಿ, ದರದ ಮಾಹಿತಿ ಪಡೆಯಬಹುದು

ಬಿಪಿ
* ಎಸ್‌ಎಂಎಸ್
RSP<SPACE>DEALER  CODE ಎಂದು ಟೈಪಿಸಿ 92231 12222ಗೆ ಎಸ್‌ಎಂಎಸ್ ಕಳುಹಿಸಿದರೆ, ದರದ ಮಾಹಿತಿ ದೊರೆಯಲಿದೆ

* ಜಾಲತಾಣ
www.bharatpetroleum.inಗೆ ಭೇಟಿ ನೀಡಿ, pump locator ಮೂಲಕ ದರ ತಿಳಿಯಬಹುದು

* ಆ್ಯಪ್
SmartDrive Mobile ಆ್ಯಪ್‌ನಲ್ಲಿ ಬಂಕ್‌ ಅನ್ನು ಗುರುತಿಸಿ, ದರದ ಮಾಹಿತಿ ಪಡೆಯಬಹುದು

ಹಿಂದೂಸ್ತಾನ್ ಪೆಟ್ರೋಲಿಯಂ
* ಎಸ್‌ಎಂಎಸ್

RSP<SPACE>DEALER  CODE ಎಂದು ಟೈಪಿಸಿ 92222 01122ಗೆ ಎಸ್‌ಎಂಎಸ್ ಕಳುಹಿಸಿದರೆ, ದರದ ಮಾಹಿತಿ ದೊರೆಯಲಿದೆ.

* ಜಾಲತಾಣ
www.hindustanpetroleum.inಗೆ ಭೇಟಿ ನೀಡಿ, pump locator ಮೂಲಕ ದರ ತಿಳಿಯಬಹುದು

* ಆ್ಯಪ್
My HPCL ಆ್ಯಪ್‌ನಲ್ಲಿ ಬಂಕ್‌ ಅನ್ನು ಗುರುತಿಸಿ, ದರದ ಮಾಹಿತಿ ಪಡೆಯಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT