ಸಂಚಾರ ಅವಧಿ ವಿಸ್ತರಣೆಗೆ ಸಿದ್ಧತೆ

7
ಬೆಳಿಗ್ಗೆ 5ರಿಂದ ರಾತ್ರಿ 11 ಗಂಟೆವರೆಗೆ ಮೆಟ್ರೊ ಲಭ್ಯ:

ಸಂಚಾರ ಅವಧಿ ವಿಸ್ತರಣೆಗೆ ಸಿದ್ಧತೆ

Published:
Updated:
ಸಂಚಾರ ಅವಧಿ ವಿಸ್ತರಣೆಗೆ ಸಿದ್ಧತೆ

ಬೆಂಗಳೂರು: ‘ನಮ್ಮ ಮೆಟ್ರೊ’ ಮೊದಲ ಹಂತ ಉದ್ಘಾಟನೆ ಬಳಿಕ  ಪ್ರಯಾಣದ ಅವಧಿಯನ್ನು ವಿಸ್ತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಸಿದ್ಧತೆ (ಬಿಎಂಆರ್‌ಸಿಎಲ್‌) ನಡೆಸಿದೆ.

‘ಉತ್ತರ–ದಕ್ಷಿಣ ಹಾಗೂ ಪೂರ್ವ –ಪಶ್ಚಿಮ ಕಾರಿಡಾರ್‌ಗಳೆರಡರಲ್ಲೂ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಪ್ರಯಾಣಿಕರ ಸಂಚಾರಕ್ಕೆ  ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ’ ಎಂದು   ನಿಗಮದ ನಿರ್ದೇಶಕ (ರೋಲಿಂಗ್‌ ಸ್ಟಾಕ್‌, ಎಲೆಕ್ಟ್ರಿಕಲ್‌ ಸಿಗ್ನಲಿಂಗ್‌ ಮತ್ತು ಟೆಲಿಕಮ್ಯುನಿಕೇಷನ್ಸ್‌)  ಎನ್‌.ಎಂ. ಧೋಕೆ   ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ನಾಗಸಂದ್ರದಿಂದ ಸಂಪಿಗೆ ರಸ್ತೆಯವರೆಗೆ ಬೆಳಿಗ್ಗೆ 5ರಿಂದ ರಾತ್ರಿ 11ರವರೆಗೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದಾಗಲೂ  ಬೆಳಿಗ್ಗೆ 5ರಿಂದ ರಾತ್ರಿ 11 ರವರೆಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕಾಗುತ್ತದೆ’ ಎಂದರು.

ನಾಗಸಂದ್ರ– ಯಲಚೇನಹಳ್ಳಿ ನಡುವಿನ ಪ್ರಯಾಣಕ್ಕೆ ಹೆಚ್ಚೂ ಕಡಿಮೆ 45 ನಿಮಿಷ ತಗಲುತ್ತದೆ. ಹಾಗಾಗಿ ಈ ನಿಲ್ದಾಣದಲ್ಲಿ ರಾತ್ರಿ 11ಕ್ಕೆ ಹೊರಡುವ ಕೊನೆಯ ರೈಲು ಕಾರಿಡಾರ್‌ನ ಇನ್ನೊಂದು ಟರ್ಮಿನಲ್‌ ನಿಲ್ದಾಣವನ್ನು ರಾತ್ರಿ 11.45ಕ್ಕೆ ತಲುಪಲಿದೆ. 

‘ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೊ ನಿಲ್ದಾಣವು ಇದೇ 18ರಿಂದ ಇಂಟರ್‌ಚೇಂಜ್‌ ನಿಲ್ದಾಣವಾಗಿ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ. ಇಲ್ಲಿಂದ  ನಾಗಸಂದ್ರ, ಯಲಚೇನಹಳ್ಳಿ, ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿಗೆ ಕಡೆಗಳಿಗೆ  ರಾತ್ರಿಯ  ಕೊನೆಯ ರೈಲು ಏಕಕಾಲದಲ್ಲೇ ಹೊರಡಬೇಕು.

ಇಲ್ಲದಿದ್ದರೆ ಒಂದು  ಕಾರಿಡಾರ್‌ನಿಂದ ಇನ್ನೊಂದು ಕಾರಿಡಾರ್‌ಗೆ ಪ್ರಯಾಣಿಸುವವರು ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ನಿಲ್ದಾಣದ ಮೇಲ್ವಿಚಾರಕನ ಅನುಮತಿ ಇಲ್ಲದೆ ಕೊನೆಯ ರೈಲು ಹೊರಡುವಂತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ  ರಾತ್ರಿಯ ಕೊನೆಯ ರೈಲು 11 ಗಂಟೆಗೆ ಹೊರಡಲಿದೆ. ಹಾಗಾಗಿ  ಪೂರ್ವ ಪಶ್ಚಿಮ ಕಾರಿಡಾರ್‌ನಲ್ಲೂ (ಮೈಸೂರು  ರಸ್ತೆ– ಬೈಯಪ್ಪನಹಳ್ಳಿ)  ಪ್ರಯಾಣದ ಅವಧಿಯನ್ನು ರಾತ್ರಿ 11 ಗಂಟೆವರೆಗೆ  ವಿಸ್ತರಿಸಬೇಕಾಗುತ್ತದೆ. ಬಹುಶಃ ಕೆಂಪೇಗೌಡ ನಿಲ್ದಾಣದಲ್ಲಿ  ದಿನದ ಕೊನೆಯ ರೈಲುಗಳು ರಾತ್ರಿ 11.30ಕ್ಕೆ ಹೊರಡುವಂತೆ ಸಮಯವನ್ನು ಹೊಂದಿಸುವ ಪ್ರಯತ್ನ ನಡೆದಿದೆ’ ಎಂದು ಅವರು ವಿವರಿಸಿದರು. 

‘ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ನಿಗಮದ ಬಳಿ ಒಟ್ಟು 50 ರೈಲುಗಳಿವೆ (150  ಬೋಗಿಗಳು). ಎರಡೂ ಕಾರಿಡಾರ್‌ಗಳಲ್ಲಿ ದಿನವೊಂದಕ್ಕೆ ತಲಾ 18 ರೈಲುಗಳನ್ನು ಮಾತ್ರ ಸಂಚಾರಕ್ಕೆ ಬಳಸುತ್ತೇವೆ. ದುರಸ್ತಿ ಹಾಗೂ ತಪಾಸಣೆ ಸಲುವಾಗಿ ಕೆಲವು ರೈಲುಗಳನ್ನು ಡಿಪೊದಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ’ ಎಂದು ಧೋಕೆ ತಿಳಿಸಿದರು.

ಪ್ರಯಾಣಿಕರ ಮಾರ್ಗದರ್ಶನಕ್ಕೆ ಹೆಚ್ಚುವರಿ ಸಿಬ್ಬಂದಿ:  ‘ಆರಂಭದಲ್ಲಿ ಕೆಂಪೇಗೌಡ ನಿಲ್ದಾಣದಲ್ಲಿ ಮಾರ್ಗ ಬದಲಾಯಿಸುವಾಗ ಕೆಲವರು ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಒಂದು ರೈಲಿನಿಂದ ಇಳಿದು ಬೈಯಪ್ಪನಹಳ್ಳಿ ಕಡೆಯ ರೈಲು ಹತ್ತಬೇಕಾದವರು ಮೈಸೂರು ರಸ್ತೆ ಕಡೆಯ ರೈಲು ಹತ್ತುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. 

ಇಂತಹ ಗೊಂದಲ ತಪ್ಪಿಸಲು ನಿಲ್ದಾಣಗಳಲ್ಲಿ ಅಲ್ಲಲ್ಲಿ ಮಾರ್ಗಸೂಚಿ ಫಲಕ ಅಳವಡಿಸಿದ್ದೇವೆ. ಆರಂಭದ ಕೆಲವು ದಿನ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ನಿಲ್ದಾಣದಲ್ಲಿ  ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್ ಖರೋಲ ತಿಳಿಸಿದರು.

ವೀಕ್ಷಣೆಗೆ ಬಾರದ ಸಿ.ಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂಜೆ 6 ಗಂಟೆಗೆ ಕೆಂಪೇಗೌಡ ಇಂಟರ್‌ಚೇಂಜ್‌ ನಿಲ್ದಾಣವನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದರು.  ಸುದ್ದಿಗಾರರು  ಮುಖ್ಯಮಂತ್ರಿಗಾಗಿ ಸುಮಾರು ಅರ್ಧ ತಾಸು ಕಾದರು.

‘ಮುಖ್ಯಮಂತ್ರಿ  ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.  ಹಾಗಾಗಿ ಅವರ ಇಂದು ಈ ನಿಲ್ದಾಣಕ್ಕೆ ಭೇಟಿ ನೀಡುವುದಿಲ್ಲ. ಅದರ ಬದಲು ಗುರುವಾರ ಸಂಜೆ  5.30ಕ್ಕೆ ಭೇಟಿ ನೀಡಲಿದ್ದಾರೆ’ ಎಂದು ಪ್ರದೀಪ್‌ ಸಿಂಗ್‌ ಖರೋಲ ತಿಳಿಸಿದರು.

***

ಎರಡು ಮಾರ್ಗಕ್ಕೆ ಪ್ರತ್ಯೇಕ ಟಿಕೆಟ್‌ ಬೇಕಾಗಿಲ್ಲ

‘ಉತ್ತರ–ದಕ್ಷಿಣ ಕಾರಿಡಾರ್‌ನಿಂದ ಪೂರ್ವ–ಪಶ್ಚಿಮ ಕಾರಿಡಾರ್‌ಗೆ ಮಾರ್ಗ ಬದಲಾಯಿಸುವ ಪ್ರಯಾಣಿಕರು ಈ ಎರಡು ಮಾರ್ಗಗಳಿಗೆ ಪ್ರತ್ಯೇಕ ಟಿಕೆಟ್‌ ಖರೀದಿಸಬೇಕಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ಬರುವ ನಿಲ್ದಾಣಕ್ಕೆ ಟಿಕೆಟ್‌ ಖರೀದಿಸಿ ಪೂರ್ವ ಪಶ್ಚಿಮ ಕಾರಿಡಾರ್‌ನ ಮಾರ್ಗದಲ್ಲಿ ಪ್ರಯಾಣಿಸುವುದಕ್ಕೆ ಅವಕಾಶ ಇಲ್ಲ. ಈ ರೀತಿ ಮಾಡಿದರೆ ಅವರು ನಿಲ್ದಾಣದಿಂದ ಹೊರಗೆ ಹೋಗಲು ಆಗುವುದಿಲ್ಲ (ಅವರು ಟಿಕೆಟ್‌ ಬಿಲ್ಲೆಯನ್ನು ಹಾಕಿದಾಗ ಗೇಟ್‌ ತೆರೆಯುವುದಿಲ್ಲ).  ಅವರು ಪ್ರಯಾಣಕ್ಕೆ ಹೆಚ್ಚುವರಿ ಮೊತ್ತ ಪಾವತಿಸಬೇಕಾದ ಪ್ರಮೇಯ ಎದುರಾದರೆ, ಅದನ್ನು ವಸೂಲಿ ಮಾಡಿದ ನಂತರವೇ ಅವರಿಗೆ ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ನೀಡಲಾಗುತ್ತದೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry