ಜಾಗೃತಿ ಮೂಡಿಸುವ ಮೂಲಕ ‘ವಿಶ್ವ ರಕ್ತದಾನ’ ದಿನಾಚರಣೆ

7

ಜಾಗೃತಿ ಮೂಡಿಸುವ ಮೂಲಕ ‘ವಿಶ್ವ ರಕ್ತದಾನ’ ದಿನಾಚರಣೆ

Published:
Updated:
ಜಾಗೃತಿ ಮೂಡಿಸುವ ಮೂಲಕ ‘ವಿಶ್ವ ರಕ್ತದಾನ’ ದಿನಾಚರಣೆ

ಬೆಂಗಳೂರು: ‘ರಕ್ತದಾನ ಮಾಡಿ, ಈಗಲೇ ಮಾಡಿ, ಆಗಾಗ ಮಾಡುತ್ತೀರಿ’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಜಾಥಾ ಹಾಗೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬುಧುವಾರ ನಗರದಲ್ಲಿ ವಿಶ್ವ ರಕ್ತದಾನ ದಿನಾಚರಣೆ ಆಚರಿಸಲಾಯಿತು.

ರಾಜ್ಯ ಏಡ್ಸ್ ತಡೆ ಸೊಸೈಟಿ, ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ, ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ವಿಶ್ವ ರಕ್ತದಾನಿಗಳ ದಿನಾಚರಣೆ’ ಹಮ್ಮಿಕೊಳ್ಳಲಾಗಿತ್ತು. 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನಿಸಲಾಯಿತು. ಅಲ್ಲದೆ, ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 116 ಜನರು ರಕ್ತ ನೀಡಿದರು.

‘ರಕ್ತ ನೀಡಲು ಹೆಣ್ಣುಮಕ್ಕಳು ಭಯ ಪಡುತ್ತಾರೆ. ಆದರೆ, ಈ ಬಾರಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ರಕ್ತ ನೀಡಿದರು’ ಎಂದು ರಾಜ್ಯ ಏಡ್ಸ್‌ ತಡೆ ಸೊಸೈಟಿಯ ಉಪ ನಿರ್ದೇಶಕ ಡಾ. ಕೆ.ಎಸ್‌. ಪ್ರಕಾಶ್‌ ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಅಫೆರೆಸಿಸ್ ಯಂತ್ರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮೇಯರ್‌ ಜಿ. ಪದ್ಮಾವತಿ,‘ರಕ್ತದಿಂದ ಬಿಳಿರಕ್ತಕಣಗಳನ್ನು (ಪ್ಲೇಟ್‌ಲೆಟ್ಸ್) ಬೇರ್ಪಡಿಸಲು ಅಫೆರೆಸಿಸ್ ಯಂತ್ರವನ್ನು ಅಳವಡಿಸಲಾಗಿದೆ. ಇದರ ಮೂಲಕ ರಕ್ತದಿಂದ ಕೇವಲ ಪ್ಲೇಟ್‌ಲೆಟ್ಸ್‌ಗಳನ್ನು ಪಡೆದು ಮತ್ತೆ ರಕ್ತ ದಾನಿಗಳ ದೇಹಕ್ಕೆ ವಾಪಸ್‌ ಹೋಗುತ್ತದೆ. ಇದರಿಂದ ರಕ್ತ ವ್ಯರ್ಥವಾಗುವುದು ತಪ್ಪುತ್ತದೆ’ ಎಂದು ಹೇಳಿದರು.

‘ರಕ್ತಕಣಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ₹11 ರಿಂದ ₹30 ಸಾವಿರ ಶುಲ್ಕ ವಿಧಿಸಲಾಗುತ್ತದೆ. ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಅದನ್ನು ಕಡಿಮೆ ದರಕ್ಕೆ ಒದಗಿಸಲಾಗುವುದು’ ಎಂದರು. ‘ಬಿಎಂಸಿಆರ್‌ಐನಲ್ಲಿನ ಕೆಲವು ರಸ್ತೆಗಳಿಗೆ ಮರುಡಾಂಬರೀಕರಣಗೊಳಿಸಿ ಎಂದು ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಕೋರಿದ್ದಾರೆ. ಮೇಯರ್ ಅನುದಾನದಲ್ಲಿಯೇ ಆವರಣದೊಳಗಿನ ರಸ್ತೆಗಳಿಗೆ ಡಾಂಬರೀಕರಣ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಕೆಂಪು ನಡಿಗೆ: ಕರ್ನಾಟಕ ವಿದ್ಯಾರ್ಥಿ ಕೂಟ ರಕ್ತದಾನದ ಪ್ರಯುಕ್ತ ವಿಜಯನಗರದ ಆದಿಚುಂಚನ ಗಿರಿ ಮಠದಿಂದ ದಿ ನ್ಯೂ ಕೆಂಬ್ರಿಡ್ಜ್‌ ಪ್ರೌಢಶಾಲೆ 2.2 ಕಿ.ಲೋ ಮೀಟರ್‌ ‘ಕೆಂಪು ನಡಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿವಿಧ ಶಾಲೆಯ ಸುಮಾರು 3,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ 149 ಅಡಿ ಎತ್ತರದ ಕೆಂಪು ಬಾವುಟವನ್ನು ವಿದ್ಯಾರ್ಥಿಗಳು ಹೊತ್ತುಕೊಂಡು ನಡೆದರು.

ಹೆಚ್ಚುಬಾರಿ ರಕ್ತದಾನ ಮಾಡಿದ ಟಿ.ಎ.ಬಾಲಕೃಷ್ಣ, ಎಂ.ಬಿ.ದೀಪಕ್ ಸುಮನ್, ವಿಷ್ಣು ಸೇನಾ ಸಮಿತಿ, ವೆಂಕಟೇಶ್ ಪ್ರಸಾದ್ ಅವರಿಗೆ ಪುರಸ್ಕರಿಸಲಾಯಿತು.

ರೆಡ್‌ಕ್ರಾಸ್‌ ಸಂಸ್ಥೆಯ ರಕ್ತದಾನ ಶಿಬಿರ: ಭಾರತೀಯ ರೆಡ್ ಸಂಸ್ಥೆ ಆಯೋಜಿಸಿದ್ದ ಶಿಬಿರದಲ್ಲಿ ಒಟ್ಟು 173 ಮಂದಿ ರಕ್ತದಾನ ಮಾಡಿದ್ದಾರೆ. 25ಕ್ಕಿಂತ ಹೆಚ್ಚು ಬಾರಿ ರಕ್ತ ದಾನ ಮಾಡಿದ 11 ಜನರಿಗೆ ಸನ್ಮಾನಿಸಲಾಯಿತು. ನೂರಾರು ಸೈನಿಕರು ರಕ್ತದಾನ ಮಾಡಿದರು.

63 ಬಾರಿ ರಕ್ತ ದಾನ

ದಾವಣಗೆರೆಯ ಮಹಡಿ ಶಿವಕುಮಾರ್‌ ಎಂಬುವವರು ಇಲ್ಲಿಯವರೆ 63 ಬಾರಿ ರಕ್ತದಾನ ನೀಡಿದ್ದಾರೆ. ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಇವರು 20ನೇ ವಯಸ್ಸಿನಲ್ಲಿದ್ದಾಗ ತಂಗಿಗೆ ಅಪಘಾತವಾಗಿ ಬಾರಿ ರಕ್ತಸಾವ್ರವಾಗಿತ್ತು. ಎಲ್ಲಿ ಕೇಳಿದರೂ ರಕ್ತ ದೊರೆಯದೆ, ತಾವೇ ಸಂಪೂರ್ಣ ರಕ್ತ ನೀಡಿದರು. ಆಗ ರಕ್ತದ ಮಹತ್ವ ತಿಳಿದ ಶಿವಕುಮಾರ್‌ ಯಾರೇ ರಕ್ತ ಕೇಳಿದರೂ ನೀಡುತ್ತಿದ್ದರು. ‘ಎಲ್ಲೆಡೆ ಸಂಚರಿಸಿ ರಕ್ತದಾನದ ಕುರಿತು ಜನರಲ್ಲಿ ಅರಿವು ಮೂಡಿಸಲು ನಾನು ಸಿದ್ಧನಿದ್ದೇನೆ. ಇದಕ್ಕೆ ಸರ್ಕಾರ ನೆರವು ನೀಡಬೇಕು’ ಎಂದರು.

ಶೇ 6ರಷ್ಟು ರಕ್ತ ವ್ಯರ್ಥ

‘ಶಿಬಿರಗಳನ್ನು ಆಯೋಜಿಸಿದಾಗ ನೂರಾರು ಸಂಖ್ಯೆಯಲ್ಲಿ ಜನರು ರಕ್ತ ನೀಡುತ್ತಾರೆ. ಒಬ್ಬರ ರಕ್ತ ಪರೀಕ್ಷೆಗೆ ಎರಡು ತಾಸು ಬೇಕಾಗುತ್ತದೆ. ಶಿಬಿರಗಳಲ್ಲಿ ಎಲ್ಲರನ್ನು ಪರೀಕ್ಷೆ ಮಾಡಿ ರಕ್ತ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗೆ ಸಂಗ್ರಹಿಸಿದ ರಕ್ತದಲ್ಲಿ ಎಚ್‌ಐವಿ ಸೋಂಕು ಕಂಡು ಬಂದರೆ ಅದನ್ನು ಚೆಲ್ಲಬೇಕಾಗುತ್ತದೆ. ಹೀಗೆ ಪ್ರತಿ ಬಾರಿಯೂ ಕನಿಷ್ಠ ಶೇ 6ರಷ್ಟು ರಕ್ತ ವ್ಯರ್ಥ ಇದ್ದೇ ಇರುತ್ತದೆ’ ಎಂದು ರಾಜ್ಯ ಏಡ್ಸ್‌ ತಡೆ ಸೊಸೈಟಿಯ ಉಪ ನಿರ್ದೇಶಕ ಡಾ. ಕೆ.ಎಸ್‌. ಪ್ರಕಾಶ್‌ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry