ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!

7

ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!

Published:
Updated:
ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!

ಶಿರಾ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಸಮಯದಲ್ಲಿ ಇಲ್ಲೊಂದು ಮಾದರಿ ಶಾಲೆ ಜನಮನ ಸೆಳೆದಿದೆ. ಸುಮಾರು 22 ಕಿ.ಮೀ ದೂರದಲ್ಲಿರುವ ಈ ಸರ್ಕಾರಿ ಶಾಲೆಗೆ ಪೋಷಕರೇ ಸ್ವಂತ ವಾಹನದ ವ್ಯವಸ್ಥೆ ಮಾಡಿಕೊಂಡು, ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದಾರೆ. ತಾಲ್ಲೂಕಿನ ಸೀಗಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳನ್ನು ತನ್ನ ಕಡೆ ಸೆಳೆಯುತ್ತಿರುವುದು ಗಮನಾರ್ಹ ಸಂಗತಿ.

ಖಾಸಗಿ ಶಾಲೆಗಳ ಭರಾಟೆಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಾಗ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯೊಂದು ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ವಿಶೇಷ.

ಶಾಲೆಯಲ್ಲಿ 2014-15 ನೇ ಸಾಲಿನಲ್ಲಿ ಕೇವಲ 46 ವಿದ್ಯಾರ್ಥಿಗಳಿದ್ದರು. ಕಳೆದ ಸಾಲಿನಲ್ಲಿ 314 ಮಂದಿ ವಿದ್ಯಾರ್ಥಿಗಳು ದಾಖಲಾಗುವ ಮೂಲಕ ಎಲ್ಲರ ಗಮನ ತನ್ನ ಕಡೆ ಸೆಳೆಯಿತು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 350ಕ್ಕೆ ಏರಿಕೆಯಾಗಿದೆ.

ಆಂಧ್ರದಿಂದ ಮಕ್ಕಳು: ಈ ಶಾಲೆಗೆ ಪಕ್ಕದ ಆಂಧ್ರಪ್ರದೇಶದ ಅಲೂಡಿ ಗ್ರಾಮದಿಂದಲೂ ಮಕ್ಕಳು ಬರುತ್ತಿದ್ದಾರೆ. ಇದರ ಜತೆಗೆ 22 ಕಿ.ಮೀ ದೂರದ ಕೊಟ್ಟಿ, ಎಂಜಲಗೆರೆ ಗ್ರಾಮದ ಜತೆಗೆ ತೊಗರಗುಂಟೆ, ವೀರಾಪುರ, ಮೇಲ್ಕುಂಟೆ, ಗೊಲ್ಲಹಳ್ಳಿ, ಉದ್ದರಾಮನಹಳ್ಳಿ, ನಾದೂರು, ಪಟ್ಟನಾಯಕನಹಳ್ಳಿ, ಸಿದ್ದನಹಳ್ಳಿ, ಕ್ಯಾದಿಗುಂಟೆ, ಕರಿರಾಮನಹಳ್ಳಿ, ಹಂದಿಕುಂಟೆ, ಹುಳಿಗೆರೆ, ರಾಗಲಹಳ್ಳಿ ಮತ್ತಿತರ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ.

ಸೀಗಲಹಳ್ಳಿ ಗ್ರಾಮದ ಶಾಲೆ ಸಹ, ಎಲ್ಲ ಶಾಲೆಗಳಂತೆ ಇತ್ತು. ಆದರೆ, ಪ್ಯೂಚರ್ ಎಜುಕೇಷನ್ ಫೌಂಡೇಶನ್ ಶಾಲೆ ದತ್ತು ಪಡೆದ ನಂತರ ಶಾಲೆಯ ಚಿತ್ರಣವೇ ಬದಲಾಗಿದೆ. ಖಾಸಗಿ ಶಾಲೆಗಳಂತೆ ಎಲ್ಲ ರೀತಿಯ ಸೌಲಭ್ಯ ಇಲ್ಲಿ ದೊರೆಯುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ದುಂಬಾಲು ಬೀಳುವಂತಾಗಿದೆ.

ಶಾಲೆಯ ಹಳೆಯ ವಿದ್ಯಾರ್ಥಿ ಶಿವಲಿಂಗರಾಜು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು, ತಾನು ಓದಿ ಬೆಳೆದ ಶಾಲೆಯನ್ನು ಮಾದರಿ ಶಾಲೆ ಮಾಡಬೇಕೆನ್ನುವ ಉದ್ದೇಶದಿಂದ ಸಮಾನ ಮನಸ್ಕರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪ್ಯೂಚರ್ ಎಜುಕೇಷನ್ ಫೌಂಡೇಶನ್ ಸ್ಥಾಪಿಸಿದ್ದಾರೆ. ಆ ಮೂಲಕ ಶಾಲೆಗೆ ಮರು ಚೈತನ್ಯ ನೀಡಿದ್ದಾರೆ. ಶಾಲೆಗೆ ತಮ್ಮ ಸ್ವಂತ ಜಾಗ ಕೂಡ ನೀಡಿದ್ದಾರೆ.

ಸರ್ಕಾರದ ಅನುದಾನದ ನಿರೀಕ್ಷೆ ಮಾಡದೆ, ಗ್ರಾಮಸ್ಥರ ಸಹಕಾರದೊಂದಿಗೆ ಹೊಸದಾಗಿ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಎಲ್‌.ಕೆ.ಜಿ, ಯು.ಕೆ.ಜಿ ಆರಂಭಿಸಿ, ಉಚಿತವಾಗಿ ಇಂಗ್ಲಿಷ್‌ ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರದಿಂದ ನೇಮಕವಾಗಿರುವ ಕೇವಲ ಮೂವರು ಶಿಕ್ಷಕರಿದ್ದರೆ, ಟ್ರಸ್ ವತಿಯಿಂದ ಐವರು ಶಿಕ್ಷಕರು ಹಾಗೂ ಇಬ್ಬರು ಸಹಾಯಕರನ್ನು (ಆಯಾ) ನೇಮಿಸಿ, ಅವರಿಗೆ ವೇತನ ನೀಡುವ ಮೂಲಕ, ಗ್ರಾಮೀಣ ಪ್ರದೇಶ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಅಷ್ಟೇ ಅಲ್ಲದೆ, ತರಗತಿ ಆರಂಭಕ್ಕೆ ಮೊದಲು 15 ನಿಮಿಷ ಧ್ಯಾನ,ಆಧ್ಯಾತ್ಮಿಕ ಬೋಧನೆ ನಡೆಯುವುದು. ತ್ರಿಭಾಷಾ ಸೂತ್ರದಂತೆ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಬೋಧನೆ, ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ.

ಪ್ರೇರಣೆ: ಸೀಗಲಹಳ್ಳಿ ಶಾಲೆಯಿಂದ ಪ್ರೇರಣೆಗೊಂಡ ಹಿರಿಯೂರು ತಾಲ್ಲೂಕಿನ ಚಿಲ್ಲಹಳ್ಳಿ ಹಾಗೂ ಮಧುಗಿರಿ ತಾಲ್ಲೂಕಿನ ಇಂದಿರಾ ಗ್ರಾಮದ ಜನರು ಇಲ್ಲಿಗೆ ಭೇಟಿ ನೀಡಿ, ಶಾಲೆಯ ಪರಿಸರ ಮತ್ತು ಚಟುವಟಿಕೆ ವೀಕ್ಷಿಸಿದ್ದಾರೆ. ಇದೇ ಮಾದರಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಅಲ್ಲಿಯೂ ಶಾಲೆಗಳನ್ನು ಪ್ರಾರಂಭಿಸಿದ್ದಾರೆ.

ಗುರೂಜಿಯಾದ ಶಿಕ್ಷಕ: ಶಾಲೆಯ ಮುಖ್ಯಶಿಕ್ಷಕ ಚಿದಾನಂದ ಭಾರತಿ ಈ ಶಾಲೆಗೆ ಬಂದ ನಂತರ ಶಾಲೆಯ ಚಿತ್ರಣವೇ ಬದಲಾಯಿತು. ಪ್ರತಿನಿತ್ಯ ಸಂಜೆ ಶಿಕ್ಷಕರ ಸಭೆ ನಡೆಸಿ, ಶಾಲೆಯ ಅಭಿವೃದ್ಧಿಗೆ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ.

ಪೋಷಕರೊಂದಿಗೂ ಉತ್ತಮ ಬಾಂಧವ್ಯ ಹೊಂದುವ ಮೂಲಕ, ಶಾಲೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಈ ಭಾಗದಲ್ಲಿ ಚಿದಾನಂದ ಗುರೂಜಿ ಎಂದೇ ಅವರನ್ನು ಜನರು ಗುರುತಿಸುತ್ತಾರೆ. ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳ ತೀವ್ರ ಪೈಪೋಟಿ ನಡುವೆಯೂ ಮೂಲಕ ತನ್ನ ಬೇರು ಗಟ್ಟಿಗೊಳಿಸಿಕೊಳ್ಳುತ್ತಿರುವುದು ವಿಶೇಷ ಮತ್ತು ಅನುಕರಣೀಯ.

–ಎಚ್‌.ಸಿ.ಅನಂತರಾಮು

*

ಸಹಕಾರಿ ತತ್ವದ ಅಡಿಯಲ್ಲಿ ಎಲ್ಲರ ಸಹಕಾರದೊಂದಿಗೆ ಶಾಲೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಬಾರಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ 6 ನೇ ತರಗತಿ ಪ್ರಾರಂಭವಾಗುತ್ತಿದೆ.

-ಚಿದಾನಂದ ಭಾರತಿ, ಮುಖ್ಯಶಿಕ್ಷಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry