ಮಕ್ಕಳಿಗೆ ಆರೋಗ್ಯದ ಕಾಳಜಿ ಮೂಡಿಸಿ

7
ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಕಾವೇರಿ ಶಿಕ್ಷಕರಿಗೆ ಸಲಹೆ

ಮಕ್ಕಳಿಗೆ ಆರೋಗ್ಯದ ಕಾಳಜಿ ಮೂಡಿಸಿ

Published:
Updated:
ಮಕ್ಕಳಿಗೆ ಆರೋಗ್ಯದ ಕಾಳಜಿ ಮೂಡಿಸಿ

ಕೋಲಾರ: ‘ಶಿಕ್ಷಕರು ಮಕ್ಕಳಲ್ಲಿ ಶಿಕ್ಷಣದ ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಸೂಚನೆ ನೀಡಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದ ಜಯನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಅತಿಸಾರ ಭೇದಿಯಿಂದ ಸಂಭವಿಸುವ ಶಿಶು ಮರಣ ಪ್ರಮಾಣ ತಗ್ಗಿಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು’ ಎಂದು ಕಿವಿಮಾತು ಹೇಳಿದರು.‘ಮಕ್ಕಳಿಗೆ ಶಿಕ್ಷಣದಷ್ಟೆ ಆರೋಗ್ಯವೂ ಮುಖ್ಯ. ಆರೋಗ್ಯವೇ ಭಾಗ್ಯ ಎಂದು ದೊಡ್ಡವರು ಹೇಳಿದ್ದಾರೆ. ಆರೋಗ್ಯವಂತ ಮಕ್ಕಳು ದೇಶದ ಅಮೂಲ್ಯ ಸಂಪತ್ತು. ಮಕ್ಕಳು ಆರೋಗ್ಯವಂತರಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಆದ ಕಾರಣ ಶಿಕ್ಷಕರು ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.1.20 ಲಕ್ಷ ಮಕ್ಕಳ ಸಾವು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ‘ದೇಶದಲ್ಲಿ ಪ್ರತಿ ವರ್ಷ 5 ವರ್ಷದೊಳಗಿನ 1.20 ಲಕ್ಷ ಮಕ್ಕಳು ಅತಿಸಾರ ಭೇದಿಯಿಂದ ಸಾಯುತ್ತಿದ್ದಾರೆ. ಜಿಲ್ಲೆಯಲ್ಲಿ 1,68,029 ಮಂದಿ ಐದು ವರ್ಷದೊಳಗಿನ ಮಕ್ಕಳನ್ನು ಗುರುತಿಸಿದ್ದು, ಆಶಾ ಕಾರ್ಯಕರ್ತೆಯರು ಅವರ ಮನೆಗೆ ಭೇಟಿ ನೀಡಿ ಒಆರ್‌ಎಸ್ ಪಟ್ಟಣ ವಿತರಿಸುತ್ತಾರೆ. ಜತೆಗೆ ಒಆರ್‌ಎಸ್‌ ಪುಡಿ ಬಳಕೆ ಸಂಬಂಧ ಪೋಷಕರಿಗೆ ಮಾಹಿತಿ ಕೊಡುತ್ತಾರೆ’ ಎಂದು ತಿಳಿಸಿದರು.‘ಜಿಲ್ಲೆಯ  ಒಟ್ಟು 1,510 ಶಾಲೆಗಳು ಮತ್ತು 928 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. 906 ಮಂದಿ ಆಶಾ ಕಾರ್ಯಕರ್ತೆಯರು, 247 ಶೂಶ್ರಷಕಿಯರು  ಹಾಗೂ 119 ವೈದ್ಯಾಧಿಕಾರಿಗಳನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ. ಸಮಸ್ಯೆಗೆ ಅವಕಾಶ ನೀಡದಂತೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಅವರು ತಿಳಿಸಿದರು.ಕೈ ತೊಳೆಯುವುದಿಲ್ಲ: ನಗರಸಭೆ ಸದಸ್ಯ ಎಸ್.ಆರ್. ಮುರಳೀಗೌಡ ಮಾತನಾಡಿ, ‘ಮಕ್ಕಳು ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ದೈಹಿಕವಾಗಿ ಸದೃಢರಾಗಿರಬಹುದು. ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸುವಾಗ ಬಹುಪಾಲು ಮಕ್ಕಳು ಸರಿಯಾಗಿ ಕೈ ತೊಳೆಯುವುದಿಲ್ಲ. ಇದರಿಂದ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶಿಕ್ಷಕರು ಈ ಬಗ್ಗೆ ಗಮನಹರಿಸಿ ಕೈ ತೊಳೆಯುವಂತೆ ಮಕ್ಕಳಿಗೆ ಮನವರಿಕೆ ಮಾಡಿ ಕೊಡಬೇಕು’ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೈ ತೊಳೆಯುವ ಬಗ್ಗೆ ಅರಿವು ಮೂಡಿಸಿ ಒಆರ್‌ಎಸ್ ಪಟ್ಟಣ ವಿತರಿಸಲಾಯಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲತಾ ಪ್ರಮೀಳಾ, ವೈದ್ಯಾಧಿಕಾರಿ ಪ್ರಸನ್ನ ಕುಮಾರ್, ಸರ್ವೇಕ್ಷಣಾಧಿಕಾರಿ ಡಾ. ಚಂದನ್, ಶಾಲೆ ಮುಖ್ಯ ಶಿಕ್ಷಕ ವೇಣುಗೋಪಾಲ್ ಪಾಲ್ಗೊಂಡಿದ್ದರು.

*

ಮಕ್ಕಳು ಭೇದಿಯಿಂದ ನಿತ್ರಾಣರಾದಾಗ ಊಟ ನೀಡಿದರೆ ಸರಿ ಹೋಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ತಾಯಂದಿರು ಹೊರ ಬಂದು ಒಆರ್ಎಸ್‌ ಕುಡಿಸಿ.

-ಬಿ.ಬಿ. ಕಾವೇರಿ,

ಜಿಲ್ಲಾ ಪಂಚಾಯಿತಿ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry